ETV Bharat / state

ಮಳಲಿ ಮಸೀದಿ ವಿವಾದ: ಮಂದಿರ ನಿರ್ಮಾಣಕ್ಕೆ ಗಣಯಾಗ

author img

By

Published : Mar 16, 2023, 12:54 PM IST

ಮಳಲಿ ಮಸೀದಿ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ತಾಂಬೂಲ ಪ್ರಶ್ನಾಚಿಂತನೆಯಲ್ಲಿ ವರ್ಷದೊಳಗೆ ಗಣಯಾಗ ಮಾಡುವಂತೆ ಕಂಡುಬಂದಿತ್ತು. ಅದರಂತೆ ಗಣಯಾಗ ಮಾಡಲಾಗಿದೆ.

ಮಳಲಿ ಮಸೀದಿ ವಿವಾದ ಮಂದಿರ ನಿರ್ಮಾಣಕ್ಕೆ ಗಣಯಾಗ
ಮಳಲಿ ಮಸೀದಿ ವಿವಾದ ಮಂದಿರ ನಿರ್ಮಾಣಕ್ಕೆ ಗಣಯಾಗ

ಗಣಯಾಗ ಬಗ್ಗೆ ಶಾಸಕ ವೈ ಭರತ್​ ಪ್ರತಿಕ್ರಿಯೆ

ಮಂಗಳೂರು: ನಗರದ ಹೊರವಲಯದ ಗಂಜಿಮಠ ಬಳಿಯ ಮಳಲಿ ಮಸೀದಿ ವಿವಾದ ಪ್ರಕರಣದ ಹಿನ್ನೆಲೆಯಲ್ಲಿ ತಾಂಬೂಲ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಸಂಘಟನೆಗಳು ಮಂದಿರ ನಿರ್ಮಾಣಕ್ಕೆ ಗಣಯಾಗ ನಡೆಸಿದೆ ಎಂದು ಶಾಸಕ ವೈ.ಭರತ್ ಶೆಟ್ಟಿ ತಿಳಿಸಿದರು.

ಈ ಕುರಿತು ನಗರದಲ್ಲಿ ಶಾಸಕ ವೈ.ಭರತ್​ ಶೆಟ್ಟಿ ಮಾತನಾಡಿ, "ಮಳಲಿಯ ರಾಮಾಂಜನೇಯ ಭಜನಾ ಮಂದಿರದಲ್ಲಿ ಲೋಕಕಲ್ಯಾಣಕ್ಕಾಗಿ ವಿಶ್ವಹಿಂದೂ ಪರಿಷತ್​ ಮತ್ತು ಭಜರಂಗದಳದ ನೇತೃತ್ವದಲ್ಲಿ ಗಣಯಾಗ ಮಾಡಲಾಗಿದೆ. ಈ ಹಿಂದೆ ನಡೆದ ತಾಂಬೂಲ ಪ್ರಶ್ನಾಚಿಂತನೆಯ ವೇಳೆ ಗಣಯಾಗ ಮಾಡಬೇಕು ಎಂದು ಕಂಡು ಬಂದಿದ್ದು ಮುಂದುವರೆದ ಭಾಗವಾಗಿ ಗಣಯಾಗ ಮಾಡಲಾಗಿದೆ" ಎಂದು ಹೇಳಿದರು.

ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ಪೂಜೆ ನಡೆದಿದೆ. ಕಳೆದ ವರ್ಷ ಜುಮ್ಮಾ ಮಸೀದಿಯ ನವೀಕರಣ ಕಾಮಗಾರಿ ವೇಳೆ ಹಿಂದೂ ದೇವಾಲಯ ಶೈಲಿಯ ಕುರುಹು ಪತ್ತೆಯಾಗಿತ್ತು. ಈ ಸಂದರ್ಭದಲ್ಲಿ ಹಿಂದೂ ಸಂಘಟನೆಗಳು ಮಧ್ಯಪ್ರವೇಶಿಸಿದ ಹಿನ್ನೆಲೆಯಲ್ಲಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಹಿಂದೂ ಸಂಘಟನೆಗಳಿಂದ ಮಳಲಿ ಮಸೀದಿ ಸಮೀಪದ ರಾಮಾಂಜನೇಯ ಭಜನಾ ಮಂದಿರದಲ್ಲಿ 2022ರ ಮೇ ತಿಂಗಳಲ್ಲಿ ತಾಂಬೂಲ ಪ್ರಶ್ನಾ ಚಿಂತನೆಯನ್ನು ನೆರವೇರಿಸಲಾಗಿತ್ತು.

ತಾಂಬೂಲ ಪ್ರಶ್ನೆಯಲ್ಲಿ ಪುರಾತನ ಕಾಲದಲ್ಲಿ ಈ ಸ್ಥಳದಲ್ಲಿ ಗುರು‌ಮಠ ಇದ್ದ ಬಗ್ಗೆ ಗೋಚರವಾಗಿತ್ತು. ಅಲ್ಲದೇ ಶಿವ, ದೇವಿ ಸಾನಿಧ್ಯವೂ ಇತ್ತು ಎಂಬುದು ತಿಳಿದುಬಂದಿತ್ತು. ಹಿಂದಿನ ಕಾಲದಲ್ಲಿ ನಡೆದ ವಿವಾದ (ವೈಷ್ಣವ ಮತ್ತು ಶೈವ) ದಿಂದ ಇದು ನಾಶವಾಗಿದೆ. ಆ ಸಂದರ್ಭದಲ್ಲಿ ಅಲ್ಲಿ ಆರಾಧನೆ ಮಾಡುತ್ತಿದ್ದವರು ಅಲ್ಲಿಂದ ಸ್ಥಳಾಂತರ ಮಾಡಿದ್ದಾರೆ. ಆದರೆ ಪೂರ್ತಿಯಾಗಿ ಇಲ್ಲಿಂದ ಸಾನಿಧ್ಯ ಹೋಗಿಲ್ಲ. ಈ ಸಂಗತಿ ಗೋಚರಕ್ಕೆ ಬಂದಿದೆ. ಇದನ್ನು ಎಲ್ಲರೂ ಒಟ್ಟಾಗಿ ಸೇರಿ ಸೌಹಾರ್ದಯುತವಾಗಿ ಜೀರ್ಣೋದ್ಧಾರ ಮಾಡಬೇಕು. ದೇವಾಲಯದ ಎಲ್ಲಾ ವಿಚಾರಗಳು ತಿಳಿಯಲು ಅಷ್ಟಮಂಗಲ ಇಡಬೇಕು. ಇದಕ್ಕಾಗಿ ವರ್ಷದೊಳಗೆ ಗಣಪತಿ ಹವನ, ಪೊಳಲಿಯಲ್ಲಿ ಪ್ರಾರ್ಥನೆ, ನಾರಾಯಣ ಸ್ವಾಮಿ ಮಠದಲ್ಲಿ ಪ್ರಾರ್ಥನೆ ಸೇವೆ ಮತ್ತು ವೃತ ಮಾಡಿದ ಬಳಿಕ ಅಷ್ಟಮಂಗಲ ನಡೆಸುವಂತೆ ತಾಂಬೂಲ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಿತ್ತು.

ಅದರಂತೆ, ಮಾರ್ಚ್ 14ರಂದು ಈ ಗಣಯಾಗ ನಡೆದಿದೆ. ಈ ಗಣಯಾಗದಲ್ಲಿ ಮಂಗಳೂರು ಉತ್ತರ ಶಾಸಕ ಡಾ‌.ವೈ.ಭರತ್ ಶೆಟ್ಟಿ, ವಿಶ್ವ ಹಿಂದೂ ಪರಿಷತ್​ ಮುಖಂಡ ಶರಣ್ ಪಂಪ್​ವೆಲ್​ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು. ತಾಂಬೂಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಈ ಗಣಯಾಗಕ್ಕೆ ಮಳಲಿ ಮಸೀದಿ ಪ್ರದೇಶದ ಮಣ್ಣನ್ನು ಸಮರ್ಪಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಈ ಗಣಯಾಗ ನಡೆಸುವ ವೇಳೆ ಗೌಪ್ಯತೆ ಕಾಪಾಡುವ ಹಿನ್ನೆಲೆಯಲ್ಲಿ ಹೆಚ್ಚು ಪ್ರಚಾರ ಮಾಡಲಾಗಿಲ್ಲ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಮಳಲಿ ಮಸೀದಿಯಲ್ಲಿ ಗುರುಮಠ, ಶಿವ, ದೇವಿ ಸಾನಿಧ್ಯ ಗೋಚರ; ಅಷ್ಟಮಂಗಲ ನಡೆಸಲು ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.