ETV Bharat / state

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಅವ್ಯವಹಾರ ನಡೆದಿಲ್ಲ: ಆಡಳಿತ ಮಂಡಳಿ

author img

By

Published : Apr 29, 2021, 6:39 AM IST

Updated : Apr 29, 2021, 12:09 PM IST

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಲೆಕ್ಕ ಪರಿಶೋಧನೆ ನಡೆದಿಲ್ಲ ಎಂಬುದಾಗಿ ಆರೋಪಿಸಿರುವುದು ಸತ್ಯಕ್ಕೆ ದೂರವಾದ ಮಾತು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

kukke-temple
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಅಕ್ರಮ, 5 ವರ್ಷಗಳ ಲೆಕ್ಕ ತಪಾಸಣೆ ನಡೆದಿಲ್ಲ, ಕೋಟಿ ಕೋಟಿ ಆದಾಯವಿದ್ದೂ ಲೆಕ್ಕವೂ ಇಲ್ಲ, ಪತ್ರನೂ ಇಲ್ಲ, ದೇವಾಲಯದಲ್ಲಿ ಗೋಲ್‌ಮಾಲ್ ಆಗಿದೆಯಾ? ಎಂಬಿತ್ಯಾದಿ ಶೀರ್ಷಿಕೆಯಡಿಯಲ್ಲಿ ಮುಖ್ಯಮಂತ್ರಿಗಳಿಗೆ ದೂರು ಎಂಬ ವರದಿ ಮಾಧ್ಯಮಗಳಲ್ಲಿ ಪ್ರಕಟವಾದ ಬೆನ್ನಲ್ಲೇ ದೇವಳದ ಆಡಳಿತ ಮಂಡಳಿ ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡಿದೆ.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಮತ್ತು ಕಾರ್ಯನಿರ್ವಹಣಾಧಿಕಾರಿ ಡಾ. ನಿಂಗಯ್ಯ ಹೇಳಿಕೆ ನೀಡಿದ್ದು, ಕ್ಷೇತ್ರದಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಎಲ್ಲವೂ ನಿಯಮದಂತೆ ನಡೆಯುತ್ತಿದ್ದು ಯಾವುದೇ ತನಿಖೆಗೆ ಸಿದ್ದ ಎಂದು ಹೇಳಿದರು.

ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟನೆ

2012-13 ರಿಂದ 2014-15ನೇ ಸಾಲಿನವರೆಗಿನ ಲೆಕ್ಕ ತಪಾಸಣೆಯನ್ನು ಜಂಟಿ ನಿರ್ದೇಶಕರು, ಸ್ಥಳೀಯ ಲೆಕ್ಕ ಪರಿಶೋಧನ ವರ್ತುಲ ಮಂಗಳೂರು ಇವರು ನಡೆಸಿದ್ದಾರೆ. ಸರ್ಕಾರದ ಆದೇಶದಂತೆ ದ.ಕ ಜಿಲ್ಲಾಧಿಕಾರಿಯವರು ಅಧಿಸೂಚಿತ ಸಂಸ್ಥೆಗಳ ಲೆಕ್ಕ ತಪಾಸಣೆ ನಡೆಸಲು ಪ್ಯಾನಲ್ ರಚಿಸಿ ಸಹಾಯಕ ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ, ಮಂಗಳೂರು ಇವರ ಮೂಲಕ ಈ ದೇವಳದ ಲೆಕ್ಕ ಪರಿಶೋಧನೆಗೆ ಕಾರ್ಯಾದೇಶ ನೀಡಿದೆ. ಆ ಪ್ರಕಾರ ಮೋಹನ್‌ಕುಮಾರ್ ಎಂ. & ಅಸೋಸಿಯೇಟ್ಸ್, ಚಾರ್ಟೆಡ್ ಅಕೌಂಟೆಂಟ್ ಬೆಂಗಳೂರು ಇವರಿಂದ 2015-16 ನೇ ಸಾಲಿನಿಂದ 2018-19 ನೇ ಸಾಲಿನವರೆಗಿನ ಅವಧಿಯ ಲೆಕ್ಕ ತಪಾಸಣೆ ನಡೆಸಿ ವರದಿ ಸಲ್ಲಿಸಿರುತ್ತಾರೆ. ಪ್ರಸ್ತುತ 2019-20 ಮತ್ತು 2020-21 ನೇ ಸಾಲಿನ ಅವಧಿಯ ಲೆಕ್ಕ ಪರಿಶೋಧನೆ ಮಾತ್ರ ಬಾಕಿ ಇರುವುದಾಗಿದೆ ತಿಳಿಸಿದರು.

ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ 5 ವರ್ಷದಿಂದ ಲೆಕ್ಕ ಪರಿಶೋಧನೆಯೇ ನಡೆದಿಲ್ಲ: ಸಿಎಂಗೆ ದೂರು

ದೇವಳದ ಬಾಬ್ತು 2015-16ರಿಂದ ಬಾಕಿ ಇರುವ ಲೆಕ್ಕ ಪರಿಶೋಧನೆಯನ್ನು ಮಾಡುವ ಕುರಿತಾಗಿ ಜಿಲ್ಲಾಧಿಕಾರಿ, ಜಂಟಿ ನಿರ್ದೇಶಕರು, ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲ, ಮಂಗಳೂರು ಇವರಿಗೆ ದಿನಾಂಕ 30-06-2020 ರಲ್ಲಿ ಮತ್ತು ದೇಗುಲದಿಂದ ಜಂಟಿ ನಿರ್ದೇಶಕರು, ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲ, ಮಂಗಳೂರು ಇವರಿಗೆ ದಿನಾಂಕ 12-08-2020 ರಲ್ಲಿ, ಧಾರ್ಮಿಕ ದತ್ತಿ ಆಯುಕ್ತರು ಪ್ರಧಾನ ನಿರ್ದೇಶಕರು ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆ, ಬೆಂಗಳೂರು ಇವರಿಗೆ ದಿನಾಂಕ 03-11-2020 ರಲ್ಲಿ ಲೆಕ್ಕ ಪರಿಶೋಧನೆ ನಡೆಸಿಕೊಡುವಂತೆ ಸಂಬಂಧಪಟ್ಟ ಇಲಾಖೆಯನ್ನೂ ಕೋರಲಾಗಿದೆ. ದೇವಳದ ಆದಾಯ ವಿವರಕ್ಕೆ ಸಂಬಂಧಿಸಿದಂತೆ, ಆದಾಯ ತೆರಿಗೆ ಇಲಾಖೆಗೆ ರಿಟರ್ನ್ ಫೈಲ್ ಮಾಡುವ ಬಗ್ಗೆ ಸರ್ಕಾರದ ನಿರ್ದೇಶನದಂತೆ, ಚಾರ್ಟಡ್ ಅಕೌಂಟೆಂಟ್‌ರವರಿಂದ 2019-20 ನೇ ಅವಧಿಯವರೆಗೆ ಲೆಕ್ಕ ಪರಿಶೋಧನೆಯನ್ನು ಸಹ ದೇವಳದಿಂದ ನಡೆಸಲಾಗಿದೆ.

ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಲೆಕ್ಕ ಪರಿಶೋಧನೆ ನಡೆದಿಲ್ಲ ಎಂಬುದಾಗಿ ಆರೋಪಿಸಿರುವುದು ಸತ್ಯಕ್ಕೆ ದೂರವಾದ ಮಾತು. ದೇವಳಕ್ಕೆ ಭಕ್ತಾದಿಗಳಿಂದ ಬರುವಂತಹ ಯಾವುದೇ ವಿಧದ ಕಾಣಿಕೆ, ಹುಂಡಿ ಕಾಣಿಕೆ, ದೇಣಿಗೆಗಳಾಗಲಿ, ವಸ್ತು ರೂಪದ ಆದಾಯಗಳಾಗಲಿ ಇತ್ಯಾದಿ ಪ್ರತಿಯೊಂದು ಆದಾಯದ ಮೂಲಕ್ಕೂ ದೇವಳದಲ್ಲಿ ದಾಖಲೆ ಪತ್ರಗಳು, ಸ್ವೀಕೃತಿ ರಶೀದಿಗಳು ಇರುತ್ತದೆ. ಅಲ್ಲದೇ, ದೇವಳಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಿ ಬಗ್ಗೆ ಸರ್ಕಾರದ ಖರೀದಿ ನಿಯಮಗಳಿಗೆ ಅನುಸಾರವಾಗಿ ಕೆಪಿಟಿಟಿ ಕಾಯ್ದೆಯನ್ವಯ ಕೊಟೇಶನ್ / ಟೆಂಡರ್ / ಇ-ಪ್ರೊಕ್ಯೂರ್‌ಮೆಂಟ್ ಮೂಲಕವೇ ನಡೆಯುವುದಾಗಿದೆ. ಅಲ್ಲದೇ ಕಾಮಗಾರಿಗಳು ಕೂಡಾ ಕೆಪಿಟಿಟಿ ಕಾಯ್ದೆಯನ್ವಯ ಟೆಂಡರ್ / ಇ-ಪ್ರೊಕ್ಯೂರ್‌ಮೆಂಟ್ ಮೂಲಕವೇ ನಡೆಸಲ್ಪಡುತ್ತಿರುವುದಾಗಿದೆ ಎಂದರು.

ಮಾಸ್ಟರ್‌ಪ್ಲಾನ್ ಯೋಜನೆಯ ಕಾಮಗಾರಿಗಳು ಸರ್ಕಾರದ ಆದೇಶದ ಪ್ರಕಾರ ಲೋಕೋಪಯೋಗಿ ಇಲಾಖೆಯ ವತಿಯಿಂದ ನಡೆಸುವುದಾಗಿದೆ. ದೇವಳದ ಆಡಳಿತ ವತಿಯಿಂದ ಖರೀದಿ ಅಥವಾ ಕಾಮಗಾರಿಗಳಿಗೆ ಸಂಬಂಧಿಸಿ ಎಲ್ಲಾ ಪ್ರಸ್ತಾವನೆಗಳು ಕೂಡಾ ದೇವಳದ ಆಡಳಿತಾಧಿಕಾರಿ / ವ್ಯವಸ್ಥಾಪನಾ ಸಮಿತಿ / ಜಿಲ್ಲಾಧಿಕಾರಿ / ಧಾರ್ಮಿಕ ದತ್ತಿ ಆಯುಕ್ತರು ಮತ್ತು ಸರಕಾರದ ಹಂತದಲ್ಲಿ ಮಂಜೂರಾತಿಗೊಂಡು ಎಲ್ಲಾ ವ್ಯವಹಾರಗಳು ನಡೆಯುವುದಾಗಿದೆ. ಈ ಎಲ್ಲಾ ಪ್ರಕ್ರಿಯೆಗಳು ಸಹ ತೀರಾ ಪಾರದರ್ಶಕವಾಗಿ ನಡೆಯುತ್ತಿದೆ. ಇಲಾಖೆ ಅಥವಾ ಸರ್ಕಾರದ ವತಿಯಿಂದ ಯಾವುದೇ ಹಂತದಲ್ಲಿ ತಪಾಸಣೆ ಅಥವಾ ತನಿಖೆ ನಡೆಸುವುದಾದಲ್ಲಿ ಸಂಪೂರ್ಣ ದಾಖಲೆಗಳು ಲಭ್ಯವಿದೆ. ಪ್ರಸ್ತುತ ಮುಖ್ಯಮಂತ್ರಿಗೆ ಸದ್ರಿ ಅರ್ಜಿದಾರ ಶ್ರೀಹರಿ ವತ್ಸ ನೀಡಿರುವ ದೂರು ಆಧಾರ ರಹಿತ ಮತ್ತು ಸಂಪೂರ್ಣವಾಗಿ ಸತ್ಯಕ್ಕೆ ದೂರವಾದ ವಿಚಾರವಾಗಿದೆ ಎಂದು ಅವರು ಹೇಳಿದ್ದಾರೆ.

Last Updated : Apr 29, 2021, 12:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.