ETV Bharat / state

ಪುತ್ತೂರಿನಲ್ಲಿ ಪೊಲೀಸ್​​ ದೌರ್ಜನ್ಯ ಪ್ರಕರಣ: ಇದು ಕಾಂಗ್ರೆಸ್​ ಕಿತಾಪತಿ- ಕಲ್ಲಡ್ಕ ಪ್ರಭಾಕರ ಭಟ್

author img

By

Published : May 19, 2023, 10:42 AM IST

ಆರ್​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರು ಹಲ್ಲೆಗೊಳಗಾದ ಕಾರ್ಯಕರ್ತರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

kalladka prabhakar  bhat
ಕಲ್ಲಡ್ಕ ಪ್ರಭಾಕರ ಭಟ್

ಹಲ್ಲೆಗೊಳಗಾದ ಕಾರ್ಯಕರ್ತರನ್ನ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಕಲ್ಲಡ್ಕ ಪ್ರಭಾಕರ ಭಟ್

ಪುತ್ತೂರು (ದಕ್ಷಿಣ ಕನ್ನಡ): ಪುತ್ತೂರಿನಲ್ಲಿ ಬಿಜೆಪಿ ಹಾಗೂ ಹಿಂದು ಕಾರ್ಯಕರ್ತರ ಮೇಲೆ ಪೊಲೀಸ್ ದೌರ್ಜನ್ಯ ಪ್ರಕರಣ ನೂರಕ್ಕೆ ನೂರು ಕಾಂಗ್ರೆಸ್ ಮಾಡಿದ ಕಿತಾಪತಿ ಎಂದು ಆರ್​ಎಸ್​ಎಸ್​ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್ ಆರೋಪಿಸಿದರು. ಪೊಲೀಸರಿಂದ ಹಲ್ಲೆಗೊಳಗಾಗಿ ಗಾಯಗೊಂಡು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾದ ಕಾರ್ಯಕರ್ತರನ್ನು ಗುರುವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿರುವುದು ನೂರಕ್ಕೆ ನೂರು ಇದು ಕಾಂಗ್ರೆಸ್​ ಪಕ್ಷದವರ ಕಿತಾಪತಿ. ಸರ್ಕಾರ ಬದಲಾದ ತಕ್ಷಣ ಏನು ಬೇಕಾದರೂ ಮಾಡಬಹುದಾ ಎಂದು ಪ್ರಶ್ನಿಸಿದರು. ಕಾರ್ಯಕರ್ತರಿಂದ ಸಣ್ಣ ಪುಟ್ಟ ವ್ಯತ್ಯಾಸವಾಗುತ್ತದೆ. ಹಾಗೆಂದು ಅದು ಅಕ್ಷಮ್ಯ ಅಪರಾಧವಲ್ಲ. ಹಲ್ಲೆ ಮಾಡಿದ ಡಿವೈಎಸ್​​ಪಿಯನ್ನು ಅಮಾನತು ಮಾಡಬೇಕು. ಈ ಪ್ರಕರಣವನ್ನು ನಾವು ಹೀಗೇ ಬಿಡುವುದಿಲ್ಲ. ಇದರ ಹಿಂದಿನ ಶಕ್ತಿ ಯಾರೆಂದು ತಿಳಿಯಬೇಕು. ಈ ರೀತಿ ಹಿಂಸಿಸಲು ಯಾರ ಒತ್ತಡ ಇತ್ತೆಂದು ಪೊಲೀಸರು ಬಹಿರಂಗ ಪಡಿಸಬೇಕು" ಎಂದು ಆಗ್ರಹಿಸಿದರು.

ಕಾರ್ಯಕರ್ತರು ಅಸಮಾಧಾನಗೊಂಡಾಗ, ಹಿಡಿ, ಬಡಿಯೆಂದು ನಾವು ಇವತ್ತಿನವರೆಗೆ ಯಾರಿಗೂ ಹೇಳಿಲ್ಲ. ರಾಜ್ಯದಲ್ಲಿ ಸರ್ಕಾರ ಬದಲಾಗುತ್ತಿದ್ದಂತೆ ಹೀಗಾಗುವುದು ಒಳ್ಳೆಯ ಲಕ್ಷಣವಲ್ಲ ಎಂದು ಕಲಡ್ಕ ಪ್ರಭಾಕರ್ ಭಟ್ ಹೇಳಿದರು. ಈ ಸಂದರ್ಭದಲ್ಲಿ ಕಿಶೋರ್ ಬೊಟ್ಯಾಡಿ, ಮುರಳಿಕೃಷ್ಣ ಹಸಂತಡ್ಕ ಹಾಗೂ ಬಿಜೆಪಿಯ ಹಲವು ಮಂದಿ ಜತೆಗಿದ್ದರು.

ಏನಿದು ಘಟನೆ?: ಚುನಾವಣಾ ಫಲಿತಾಂಶದ ಬಳಿಕ ಪುತ್ತೂರು ಬಸ್ ನಿಲ್ದಾಣ ಸಮೀಪದ ಅರಣ್ಯ ಇಲಾಖೆಯ ಆವರಣ ಗೋಡೆ ಬಳಿ ಫ್ಲೆಕ್ಸ್‌ ಕಾಣಿಸಿಕೊಂಡಿತ್ತು. ಪುತ್ತೂರಿನಲ್ಲಿ 'ಬಿಜೆಪಿಯ ಸೋಲಿಗೆ ಕಾರಣಕರ್ತರಾದ ನಿಮಗೆ ಶ್ರದ್ಧಾಂಜಲಿ' ಎಂಬ ಒಕ್ಕಣೆ ಬರೆದು ನಳಿನ್ ಕುಮಾರ್ ಕಟೀಲ್ ಮತ್ತು ಸದಾನಂದ ಗೌಡರ ಚಿತ್ರಗಳನ್ನು ಅವಮಾನಿಸಲಾಗಿತ್ತು. ಇದರ ಬೆನ್ನಲ್ಲೇ ಮಾಜಿ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತ್ತು.

ಪುತ್ತೂರು ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹ‌ರ್ ಅವರು ವಿವಾದಾಸ್ಪದ ಬ್ಯಾನರ್ ತೆರವು ಮಾಡಿ ದೂರು ನೀಡಿದ್ದರು. ಬಿಜೆಪಿ ನಿಯೋಗ ಕೂಡ ಪೊಲೀಸ್ ದೂರು ನೀಡಿತ್ತು. ಇದಾದ ಬಳಿಕ ಪೊಲೀಸರು ನರಿಮೊಗರು ಗ್ರಾಮದ ನಿವಾಸಿಗಳಾದ ವಿಶ್ವನಾಥ್, ಮಾಧವ, ಅಭಿ ಯಾನೆ ಅವಿನಾಶ್, ಶಿವರಾಮ್, ಚೈತ್ರೀಶ್, ಈಶ್ವರ, ನಿಶಾಂತ್, ದೀಕ್ಷಿತ್, ಗುರುಪ್ರಸಾದ್ ಎಂಬವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.

ಬಂಧನದ ಸುದ್ದಿ ತಿಳಿಯುತ್ತಲೇ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು ಡಿವೈಎಸ್​ಪಿ ಕಚೇರಿಗೆ ಸೋಮವಾರ ರಾತ್ರಿ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದರಲ್ಲದೆ, ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದರು. ಇದಾದ ಬಳಿಕ ವಶದಲ್ಲಿದ್ದ ಆರೋಪಿಗಳನ್ನು ಬಿಡುಗಡೆ ಮಾಡಲಾಗಿತ್ತು. ಆರೋಪಿಗಳನ್ನು ಬಿಡುಗಡೆ ಮಾಡಿದ ಬಳಿಕ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಫೋಟೋ ವೈರಲ್ ಮಾಡಲಾಗಿತ್ತು.

ಇದನ್ನೂ ಓದಿ: ಕಟೀಲ್, ಡಿವಿಎಸ್ ಭಾವಚಿತ್ರಕ್ಕೆ ಅವಮಾನ: ಆರೋಪಿಗಳ ಮೇಲೆ ಪೊಲೀಸ್ ದೌರ್ಜನ್ಯದ ಸತ್ಯಾಸತ್ಯತೆ ಪರಿಶೀಲನೆ- ಎಸ್​ಪಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.