ETV Bharat / state

ಇಂಡಿಯಾ ಮಲಗುತ್ತಿದೆ, ಭಾರತ ಏಳುತ್ತಿದೆ : ಆರ್​ಎಸ್​ಎಸ್​​ ಜೇಷ್ಠ ಪ್ರಚಾರಕ್ ಸು ರಾಮಣ್ಣ

author img

By ETV Bharat Karnataka Team

Published : Oct 8, 2023, 6:17 PM IST

ನಮ್ಮ ರಾಷ್ಟ್ರೀಯತೆಯ ಕಲ್ಪನೆಯಿಂದ ಜಗತ್ತಿಗೆ ಕಲ್ಯಾಣವಾಗುತ್ತಿದೆ. ವಸುಧೈವ ಕುಟುಂಬಕಂ ಎಂಬುದು ನಮ್ಮ ದೇಶದ ಅರಿವಿನ ಗಂಗೋತ್ರಿ. ಬೆಂಕಿ ಆರಿಸಿ, ದೀಪ ಉರಿಸುವುದೇ ಭಾರತ. ಅಮೃತ ಕಾಲವನ್ನು ನಾವು ನಿರ್ಮಾಣ ಮಾಡುತ್ತಿದ್ದೇವೆ. ಇಂಡಿಯಾ ಮಲಗುತ್ತಿದೆ, ಭಾರತ ಏಳುತ್ತಿದೆ ಎಂದು ಆರ್​ಎಸ್​ಎಸ್​ ​​ಜೇಷ್ಠ ಪ್ರಚಾರಕ್ ಸು ರಾಮಣ್ಣ ಹೇಳಿದ್ದಾರೆ.

hindu-shourya-sangama-sabhe-at-putturu-rss-pracharak-su-ramanna-statement
ಇಂಡಿಯಾ ಮಲಗುತ್ತಿದೆ, ಭಾರತ ಏಳುತ್ತಿದೆ : ಆರ್​ಎಸ್​ಎಸ್​​ ಜೇಷ್ಠ ಪ್ರಚಾರಕ್ ಸು ರಾಮಣ್ಣ

ಪುತ್ತೂರು (ದಕ್ಷಿಣಕನ್ನಡ) : ಅರವತ್ತರ ಮೇಲೆ ಅರಳು ಮರುಳು ಅಲ್ಲ. ಅದು ಸಂಘಟನೆಯ ಪಾಲಿಗೆ ಮರಳಿ ಅರಳುವುದು ಎಂದಾಗುತ್ತದೆ. ಆರ್​ಎಸ್​ಎಸ್​, ವಿಶ್ವ ಹಿಂದೂ ಪರಿಷತ್​ ಸಂಘಟನೆಗಳು ಅರಳುತ್ತಲೇ ಇವೆ. ನಮ್ಮ ವಿಶ್ವಾಸ, ನಂಬಿಕೆಗೆ ಮುಪ್ಪು ಬರುವುದಿಲ್ಲ. ರಾಷ್ಟ್ರೀಯತೆಯ ಧ್ಯೇಯವೇ ಇದಕ್ಕೆ ಕಾರಣ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜೇಷ್ಠ ಪ್ರಚಾರಕ್​ ಸು. ರಾಮಣ್ಣ ಹೇಳಿದರು.

ವಿಶ್ವ ಹಿಂದೂ ಪರಿಷತ್ ಸ್ಥಾಪನೆಯಾಗಿ 60ನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ದೇಶಾದ್ಯಂತ ಹಮ್ಮಿಕೊಂಡಿರುವ ಶೌರ್ಯ ಜಾಗರಣಾ ರಥಯಾತ್ರೆಯು ಪುತ್ತೂರಿಗೆ ಆಗಮಿಸಿತು. ಇಲ್ಲಿನ ಕಿಲ್ಲೆ ಮೈದಾನದಲ್ಲಿ ನಡೆದ ಬೃಹತ್ ಹಿಂದೂ ಶೌರ್ಯ ಸಂಗಮ ಕಾರ್ಯಕ್ರಮದಲ್ಲಿ ಸು. ರಾಮಣ್ಣ ದಿಕ್ಸೂಚಿ ಭಾಷಣ ಮಾಡಿದರು.

ಬಜರಂಗದಳ ಯಾಕಾಗಿ, ಎದ್ದರೆ ಹನುಮಂತ, ಬಿದ್ದರೆ ಕುಂಭಕರ್ಣ. ನಮ್ಮ ವ್ಯಕ್ತಿತ್ವದಲ್ಲಿ ಆಂಜನೇಯನ ಶೌರ್ಯ, ಶೀಲ ಇರಬೇಕು. ಶೀಲವಿಲ್ಲದ ಕಾರ್ಯ ವಿನಾಶಕಾರಿ. ಶೀಲ ಇರುವ ಕಾರ್ಯ ಕಲ್ಯಾಣಕಾರಿ. ಇದಕ್ಕೆ ಉದಾಹರಣೆ ಹನುಮಂತ. ದೇಶದ ತರುಣರು ಶೀಲರು, ಶೌರ್ಯರು ಆಗಬೇಕು. ಅದಕ್ಕಾಗಿ ಬಜರಂಗದಳ ಆರಂಭಗೊಂಡಿದೆ ಎಂದು ಹೇಳಿದರು.

ಹನುಮಂತ ಅಧಿಕಾರಕ್ಕಾಗಿ ಹಪಾಹಪಿಸಿಲ್ಲ. ಹನುಮಂತ ರಾಜಕಾರಣಕ್ಕೆ ಬಲಿಯಾಗಿಲ್ಲ. ಶ್ರೀರಾಮನ ಕಾರ್ಯ ಎಂದರೆ ಅದು ರಾಷ್ಟ್ರದ ಕಾರ್ಯ. ಅದು ವ್ಯಕ್ತಿ ಪೂಜೆ ಆಗಿರಲಿಲ್ಲ, ತತ್ವ ಪೂಜೆ ಆಗಿತ್ತು. ಶ್ರೀರಾಮ ರಾಷ್ಟ್ರೀಯ ರಾಜಕಾರಣದ ಮೂರ್ತ ರೂಪ. ಶ್ರೀರಾಮ ರಾಷ್ಟ್ರ ಪುರುಷ. ಅಯೋಧ್ಯೆಯಲ್ಲಿನ ರಾಮ ಮಂದಿರ ರಾಷ್ಟ್ರ ಮಂದಿರ. ಬಹು ಸಂಖ್ಯಾತ, ಅಲ್ಪಸಂಖ್ಯಾತ ಎಂದು ದೇಶವನ್ನು ಹಾಳು ಮಾಡಿದವರು ಕಾಂಗ್ರೆಸ್ ನವರು. ರಾಷ್ಟ್ರೀಯತೆಗಾಗಿ ಅಧಿಕಾರ ನಡೆಸಿದವರು ವಲ್ಲಭಭಾಯ್ ಪಟೇಲ್. ಭಾರತ ಒಕ್ಕೂಟ ಒಂದು ಅಲ್ಲ. ಅದು ಅಖಂಡ ಭಾರತ ಎಂದು ಪ್ರತಿಪಾದಿಸಿದರು. ರಾಷ್ಟ್ರ ರಾಜಕಾರಣದ ಮೂಲ ರೂಪ ರಾಷ್ಟ್ರೀಯತೆಯೇ ಆಗಬೇಕು. ರಾಷ್ಟ್ರೀಯತೆಯ ರಾಜಕಾರಣದ ಪೂಜೆ ಆಗಬೇಕು. ರಾಮ, ಕೃಷ್ಣರು ಅದನ್ನೇ ಕಲಿಸಿಕೊಟ್ಟಿದ್ದಾರೆ. ಕಲಿಯುಗದಲ್ಲಿ ಅದು ನಮ್ಮ ಸಂಕಲ್ಪ. ಆರ್​ಎಸ್​ಎಸ್​ ಆರಂಭವಾಗಿರುವುದು ರಾಷ್ಟ್ರೀಯತೆಯ ಆರಾಧನೆಗಾಗಿಯೇ ಎಂದರು.

ನಮ್ಮ ರಾಷ್ಟ್ರೀಯತೆಯ ಕಲ್ಪನೆಯಿಂದ ಜಗತ್ತಿಗೆ ಕಲ್ಯಾಣವಾಗುತ್ತಿದೆ. ವಸುಧೈವ ಕುಟುಂಬಕಂ ಎಂಬುದು ನಮ್ಮ ದೇಶದ ಅರಿವಿನ ಗಂಗೋತ್ರಿ. ಬೆಂಕಿ ಆರಿಸಿ, ದೀಪ ಉರಿಸುವುದೇ ಭಾರತ. ಅಮೃತ ಕಾಲವನ್ನು ನಾವು ನಿರ್ಮಾಣ ಮಾಡುತ್ತಿದ್ದೇವೆ. ಇಂಡಿಯಾ ಮಲಗುತ್ತಿದೆ, ಭಾರತ ಏಳುತ್ತಿದೆ ಎಂದು ಹೇಳಿದರು.

ವಿಹಿಂಪ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಯು. ಪೂವಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶೌರ್ಯ ಜಾಗರಣ ರಥಯಾತ್ರೆಯ ಸ್ವಾಗತ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಬೊಟ್ಯಾಡಿ, ಬಜರಂಗದಳ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳೀಕೃಷ್ಣ ಹಸಂತಡ್ಕ, ಶೌರ್ಯ ಜಾಗರಣ ರಥಯಾತ್ರೆ ಕಾರ್ಯದರ್ಶಿ ವಿರೂಪಾಕ್ಷ ಭಟ್ ಮಚ್ಚಿಮಲೆ, ಗ್ರಾಮಾಂತರ ಪ್ರಖಂಡ ಸಂಯೋಜಕ ವಿಶಾಖ್ ಸಸಿಹಿತ್ಲು, ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾಧ್ಯಕ್ಷ ಕೃಷ್ಣಪ್ರಸನ್ನ, ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಸಹ ಸಂಯೋಜಕ ಲತೇಶ್ ಗುಂಡ್ಯ, ಪುತ್ತೂರು ನಗರ ಪ್ರಖಂಡ ಸಂಯೋಜಕ ಜಯಂತ್ ಕುಂಜೂರುಪಂಜ, ಉಪ್ಪಿನಂಗಡಿ ಪ್ರಖಂಡ ಸಂಯೋಜಕ ಸಂತೋಷ್, ಬೆಳ್ತಂಗಡಿ ಪ್ರಖಂಡ ಸಂಯೋಜಕ ಸಂತೋಷ್ ಅತ್ತಾಜೆ, ಸಂಚಾಲಕ ಕೃಷ್ಣ ಪ್ರಸಾದ್ ಬೆಟ್ಟ, ಕಿರಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ : ಹೂವಿನ ಮಂಟಪದಲ್ಲಿ ವೀರಾಜಮಾನಳಾದ ಶಾಂತಿಕಾ ಪರಮೇಶ್ವರಿ: ಅದ್ಬುತ ದೃಶ್ಯದ ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.