ETV Bharat / state

ಮಂಗಳೂರು-ಬೆಂಗಳೂರು ರಾ.ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ; ಸಂಚಾರಕ್ಕೆ ಅಡಚಣೆ

author img

By

Published : Feb 2, 2021, 8:55 AM IST

ಸೂರಿಕುಮೇರುವಿನಲ್ಲಿ ಇಂದು ಮುಂಜಾನೆ ಅನಿಲ ಟ್ಯಾಂಕರ್​ ಉರುಳಿ ಬಿದ್ದು, ಆ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.

Mangalore

ಬಂಟ್ವಾಳ(ದ.ಕ): ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸೂರಿಕುಮೇರು ಮಸೀದಿ ಮುಂಭಾಗ ಮುಂಜಾನೆ 4 ಗಂಟೆಯ ಸುಮಾರಿಗೆ ಗ್ಯಾಸ್ ಟ್ಯಾಂಕರ್ ರಸ್ತೆ ಮಧ್ಯದಲ್ಲೇ ಉರುಳಿಬಿದ್ದಿದೆ. ಪರಿಣಾಮ, ಸ್ಥಳದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ

ಟ್ಯಾಂಕರ್​ನಿಂದ ಗ್ಯಾಸ್ ಸೋರಿಕೆ ಆಗದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಮುಂಜಾಗ್ರತಾ ಕ್ರಮವಾಗಿ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿದೆ. ಈಗಾಗಲೇ ತಾಂತ್ರಿಕ ತಂಡ ಸ್ಥಳಕ್ಕೆ ಆಗಮಿಸಿದ್ದು, ಮುಂಜಾಗ್ರತೆ ಕ್ರಮ ಕೈಗೊಳ್ಳುವುದರ ಜೊತೆಗೆ ಸುರಕ್ಷಿತವಾಗಿ ಟ್ಯಾಂಕರ್ ಅನ್ನು ಲಿಫ್ಟ್ ಮಾಡುವ ಕಾರ್ಯ ಪ್ರಗತಿಯಲ್ಲಿದೆ.

ವಿಟ್ಲ ಪೊಲೀಸ್ ಎಸ್.ಐ. ವಿನೋದ್ ರೆಡ್ಡಿ, ಬಂಟ್ವಾಳ ಟ್ರಾಫಿಕ್ ಎಸ್ಸೈ ರಾಜೇಶ್ ಕೆ.ವಿ. ಮತ್ತು ವಿಟ್ಲ, ಬಂಟ್ವಾಳ ಟ್ರಾಫಿಕ್ ಠಾಣೆಯ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದು ಬದಲಿ ರಸ್ತೆಯ ಸೂಚನೆಗಳನ್ನು ನೀಡುತ್ತಿದ್ದಾರೆ.

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿಯಿಂದ ಕಲ್ಲಡ್ಕ ಭಾಗದಲ್ಲಿ ಎಲ್ಲಾ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಮಂಗಳೂರು ಕಡೆಯಿಂದ ಬರುವ ವಾಹನವನ್ನು ಕಲ್ಲಡ್ಕ, ವಿಟ್ಲ ರಸ್ತೆ ಮೂಲಕ ಸಂಚರಿಸಿದರೆ, ಬೆಂಗಳೂರು, ಉಪ್ಪಿನಂಗಡಿ ಕಡೆಯಿಂದ ಬರುವ ವಾಹನಗಳನ್ನು ಮಾಣಿ, ಬುಡೋಳಿ, ಕಬಕ ಮೂಲಕ ಬದಲಿ ರಸ್ತೆಯ ವ್ಯವಸ್ಥೆ ಮಾಡಲಾಗಿದೆ.

ವಿವಿಧ ಭಾಗದಲ್ಲಿ ಬುಡೋಳಿ ಯೂತ್ ಫೆಡರೇಶನ್, ಸೂರಿಕುಮೇರು ಬದ್ರಿಯಾ ಯಂಗ್ ಮೆನ್ಸ್ ಸದಸ್ಯರು, ಸಾರ್ವಜನಿಕರು ವಾಹನ ಸಂಚಾರವನ್ನು ನಿಯಂತ್ರಿಸುತ್ತಿದ್ದಾರೆ. ಮಸೀದಿ ಧ್ವನಿವರ್ಧಕದ ಮೂಲಕ ಸುತ್ತಮುತ್ತಲಿನ ಭಾಗದ ಮನೆಗಳಲ್ಲಿ ಬೆಂಕಿ ಬಳಸದಂತೆ ಸೂಚನೆ ನೀಡಲಾಗಿದೆ.

ಹಿಂದಿನ ಘಟನೆ ನೆನಪಿಸಿತ್ತು..

ಪೆರ್ನೆಯಲ್ಲಿ ಕೆಲ ವರ್ಷಗಳ ಹಿಂದೆ ಅನಿಲ ಟ್ಯಾಂಕರ್ ಅಪಘಾತದಲ್ಲಿ ಜೀವಹಾನಿ ಸಂಭವಿಸಿದ್ದರೆ, 2016ರಲ್ಲಿ ಸೂರಿಕುಮೇರುವಿನಲ್ಲಿ ಟ್ಯಾಂಕರ್ ಮಗುಚಿ ದಿನವಿಡೀ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಸ್ಥಳೀಯರ ಆತಂಕ

ಇಂತಹ ಘಟನೆಗಳು ಮರುಕಳಿಸುತ್ತಿದ್ದು, ಯಾವುದೇ ಸೂಚನೆ ಪಾಲನೆ ಆಗ್ತಿಲ್ಲ. ಹೆದ್ದಾರಿ ಅಪಘಾತ ಸಂಭವಿಸಿದ ವೇಳೆ ಅಂದಿನ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಆದೇಶ ಹೊರಡಿಸಿ, ಗ್ಯಾಸ್ ಟ್ಯಾಂಕರ್ ರಾತ್ರಿ ಸಾಗುವ ವಿಚಾರದ ಕುರಿತು ಸೂಚನೆಗಳನ್ನು ಹೊರಡಿಸಿದ್ದರು. ಆದರೆ ನಿರಾತಂಕವಾಗಿ ಮಂಗಳೂರು -ಬೆಂಗಳೂರು ಹೆದ್ದಾರಿಯಲ್ಲಿ ಭಾರಿ ಗಾತ್ರದ ಅನಿಲ ಟ್ಯಾಂಕರುಗಳು ಸಾಗುತ್ತಿದ್ದು, ಸಮೀಪದ ಮನೆಯವರಿಗೆ ನಿತ್ಯ ಆತಂಕಕ್ಕೆ ಕಾರಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.