ETV Bharat / state

ಆರ್​ಎಸ್ಎಸ್ ಪ್ರಮುಖ ಕಲ್ಲಡ್ಕ ಪ್ರಭಾಕರ ಭಟ್ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ: ಪೊಲೀಸರಿಗೆ ದೂರು

author img

By

Published : Aug 1, 2023, 9:27 PM IST

ಡಾ ಕಲ್ಲಡ್ಕ ಪ್ರಭಾಕರ್ ಭಟ್​ ಹೆಸರಲ್ಲಿ ನಕಲಿ ಫೇಸ್​ಬುಕ್ ಖಾತೆ ತೆರೆದು ಆಕ್ಷೇಪಾರ್ಹ ಬರಹಗಳನ್ನು ಬರೆದು ಸಮಾಜದಲ್ಲಿ ಅಶಾಂತಿ ಹಬ್ಬಲು ಪ್ರಯತ್ನಿಸಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ.

ಡಾ ಕಲ್ಲಡ್ಕ ಪ್ರಭಾಕರ ಭಟ್
ಡಾ ಕಲ್ಲಡ್ಕ ಪ್ರಭಾಕರ ಭಟ್

ಬಂಟ್ವಾಳ (ದಕ್ಷಿಣ ಕನ್ನಡ): ಆರ್​ಎಸ್ಎಸ್ ಪ್ರಮುಖ ಕಲ್ಲಡ್ಕ ಡಾ ಪ್ರಭಾಕರ್ ಭಟ್ ಹೆಸರಿನಲ್ಲಿ ನಕಲಿ ಫೇಸ್​ಬುಕ್ ಖಾತೆ ತೆರೆದು ಆಕ್ಷೇಪಾರ್ಹ ಬರಹಗಳನ್ನು ಬರೆದು ಸಮಾಜದಲ್ಲಿ ಅಶಾಂತಿ ಹಬ್ಬಲು ಕೆಲವು ಕಿಡಿಗೇಡಿಗಳು ಪ್ರಯತ್ನಿಸುತ್ತಿದ್ದು, ಇವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಮಂಗಳೂರು ಸೈಬರ್ ಕ್ರೈಮ್ ಪೊಲೀಸ್​ ಠಾಣೆಯಲ್ಲಿ ದೂರು ನೀಡಲಾಗಿದೆ.

ಆರ್​ಎಸ್ಎಸ್​ ಪ್ರಮುಖರಾಗಿರುವ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕ, ಪುತ್ತೂರು ವಿವೇಕಾನಂದ ವಿದ್ಯಾವರ್ದಕ ಸಂಘದ ಅಧ್ಯಕ್ಷರಾಗಿರುವ ಪ್ರಭಾಕರ್ ಭಟ್ ಅವರ ಹೆಸರಿನಲ್ಲಿ ನಕಲಿ ಫೇಸ್​ಬುಕ್​ ಖಾತೆಯನ್ನು ತೆರೆಯಲಾಗಿದ್ದು, ಡಾ. ಭಟ್ ಅವರ ಫೇಸ್​ಬುಕ್ ಖಾತೆಯಾಗಲಿ, ಅಥವಾ ಇನ್ನಿತರ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಖಾತೆಯನ್ನು ಹೊಂದಿರುವುದಿಲ್ಲ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಈ ಖಾತೆಯ ಮೂಲಕ ಸಮಾಜದಲ್ಲಿ ಅಶಾಂತಿ ಹಬ್ಬಿಸುವ ಪ್ರಯತ್ನ ಮತ್ತು ಹೆಸರನ್ನು ಕೆಡಿಸುವ ಕೆಲಸ ಮಾಡಲಾಗುತ್ತಿದ್ದು, ಈ ಬಗ್ಗೆ ಪೊಲೀಸರು ಸೂಕ್ತವಾದ ತನಿಖೆ ನಡೆಸುವಂತೆ ಮತ್ತು ಅವರ ಮೇಲೆ ಕಾನೂನು ಕ್ರಮವನ್ನು ಕೈಗೊಂಡು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಪುನರಾವರ್ತನೆ ಆಗದಂತೆ ಪೊಲೀಸರು ನಿಗಾ ವಹಿಸುವಂತೆಯೂ ಅವರು ತಿಳಿಸಿದ್ದಾರೆ.

ಪೊಲೀಸರಿಗೆ ದೂರು
ಪೊಲೀಸರಿಗೆ ದೂರು

ಮಂಗಳೂರು ಪೊಲೀಸ್ ಆಯುಕ್ತರ ಹೆಸರಿನಲ್ಲಿ ನಕಲಿ ಫೇಸ್​ಬುಕ್ ಖಾತೆ : ಇನ್ನೊಂದೆಡೆ ನಗರ ಪೊಲೀಸ್ ಆಯುಕ್ತರ ಹೆಸರಿನಲ್ಲಿ ನಕಲಿ ಫೇಸ್​ಬುಕ್ ಖಾತೆ ತೆರೆದಿರುವ ಕಿಡಿಗೇಡಿಗಳು, ಅದರಿಂದ (ಏಪ್ರಿಲ್ 26-2021) ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತಿದ್ದರು. ಈ ಕುರಿತು ಎಚ್ಚರದಿಂದ ಇರುವಂತೆ ಸ್ವತಃ ಪೊಲೀಸ್ ಆಯುಕ್ತ ಶಶಿಕುಮಾರ್ ತಮ್ಮ ಅಧಿಕೃತ ಫೇಸ್​ಬುಕ್ ಖಾತೆ ಮೂಲಕ ಮನವಿ ಮಾಡಿದ್ದರು.

ನಾವು ನಮ್ಮ ಅಧಿಕೃತ ಫೇಸ್​ಬುಕ್​ ಖಾತೆಗೆ ಅಪ್ಲೋಡ್ ಮಾಡಿರುವ ಫೋಟೋ ಮತ್ತು ವಿವರಗಳನ್ನು ಬಳಸಿಕೊಂಡು ನಕಲಿ ಖಾತೆ ತೆರೆಯಲಾಗಿತ್ತು. ಅದರಿಂದ ಹಲವು ಜನರಿಗೆ ಫ್ರೆಂಡ್ ರಿಕ್ವೆಸ್ಟ್ ಕೂಡ ಹೋಗಿದೆ. ಆದ್ದರಿಂದ ಎಲ್ಲರೂ ಈ ಬಗ್ಗೆ ಎಚ್ಚರದಿಂದ ಇರಿ ಎಂದು ಪೊಲೀಸ್​ ಆಯುಕ್ತರು ಹೇಳಿದ್ದರು. ನಕಲಿ ಖಾತೆ ಮೂಲಕ ಹಣ ಕಳಿಸಲು ಹೇಳಬಹುದು. ಆ ಬಗ್ಗೆ ಎಲ್ಲರೂ ಜಾಗರೂಕರಾಗಿ ಎಂದು ಸೂಚಿಸಿದ್ದರು. ಪೊಲೀಸ್ ಆಯುಕ್ತರ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಯಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು.

ಪೊಲೀಸರಿಗೆ ದೂರು
ಪೊಲೀಸರಿಗೆ ದೂರು

ಉಡುಪಿ ಡಿಸಿ ಹೆಸರಿನಲ್ಲಿ 3ನೇ ಬಾರಿ ನಕಲಿ ಫೇಸ್​​ಬುಕ್ ಖಾತೆ: ಇನ್ನೊಂದೆಡೆ ಜಿಲ್ಲಾಧಿಕಾರಿ ಹೆಸರಿನಲ್ಲಿ ಮೂರನೇ ಬಾರಿ ನಕಲಿ ಫೇಸ್​​ಬುಕ್ ಖಾತೆ ತೆರೆಯಲಾಗಿದ್ದು, ಉಡುಪಿ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಜೂನ್​ 4-2021) ದಾಖಲಾಗಿತ್ತು.

ಈ ಹಿಂದೆ ಎರಡು ಬಾರಿ ಡಿಸಿ ಉಡುಪಿ ಎಂಬ ಹೆಸರಿನಲ್ಲಿ ನಕಲಿ ಫೇಸ್​​ಬುಕ್ ಖಾತೆ ತೆರೆದು, ಹಣಕ್ಕಾಗಿ ಬೇಡಿಕೆ ಇಡಲಾಗಿತ್ತು. ಮೇ 31 ರಂದು ಮೂರನೇ ಬಾರಿ ನಕಲಿ ಫೇಸ್​​ಬುಕ್ ಖಾತೆ ತೆರೆದು, ಅದರಲ್ಲಿ ಪ್ರೊಫೈಲ್ ಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರ ಭಾವಚಿತ್ರವನ್ನು ದುರ್ಬಳಕೆ ಮಾಡಲಾಗಿತ್ತು.

ಇದನ್ನೂ ಓದಿ: ಉಡುಪಿ ಡಿಸಿ ಹೆಸರಿನಲ್ಲಿ 3ನೇ ಬಾರಿ ನಕಲಿ ಫೇಸ್​​ಬುಕ್ ಖಾತೆ, ಹಣಕ್ಕೆ ಬೇಡಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.