ETV Bharat / state

ಪತ್ನಿಯ ನೆನಪಿಗೆ ಡಾ.ಮೋಹನ್ ಆಳ್ವರಿಂದ ಶೋಭಾವನ ನಿರ್ಮಾಣ; ಔಷಧೀಯ ಗಿಡಗಳ ರಕ್ಷಣೆ, ಅಧ್ಯಯನಕ್ಕೆ ಅನುಕೂಲ

author img

By ETV Bharat Karnataka Team

Published : Nov 5, 2023, 9:44 AM IST

Updated : Nov 6, 2023, 5:09 PM IST

Dr.Mohan Alva's Shobhavana: ಡಾ.ಮೋಹನ್ ಆಳ್ವ ಅವರು ನಿರ್ಮಾಣ ಮಾಡಿರುವ ಶೋಭಾವನ ಔಷಧೀಯ ಗಿಡಗಳನ್ನು ರಕ್ಷಿಸುವ ಜೊತೆಗೆ ಆಯುರ್ವೇದ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗಿದೆ. ಮತ್ತೊಂದೆಡೆ ಪರಿಸರ ರಕ್ಷಣೆಗೆ ದೊಡ್ಡ ಕೊಡುಗೆ ನೀಡಿದೆ.

ಶೋಭ ವನ
ಶೋಭ ವನ

ಡಾ.ಮೋಹನ್ ಆಳ್ವ ಅವರು ನಿರ್ಮಾಣ ಮಾಡಿರುವ ಶೋಭಾವನ

ಮಂಗಳೂರು(ದಕ್ಷಿಣ ಕನ್ನಡ): ಪತ್ನಿಯ ಮೇಲಿನ ಅಗಾಧ ಪ್ರೀತಿ ಮತ್ತು ಆಕೆಯ ಸ್ಮರಣಾರ್ಥ ಷಹಜಾಹನ್ ತಾಜ್‌ಮಹಲ್ ಕಟ್ಟಿದ್ದು ಇತಿಹಾಸ. ಇದೇ ರೀತಿ ಪ್ರೀತಿಯ ಪತ್ನಿಯ ನೆನಪಿಗಾಗಿ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಮೋಹನ್ ಆಳ್ವ ಅವರು ಔಷಧೀಯ ಗಿಡಗಳ ಕಾಡನ್ನೇ ಕಟ್ಟಿದ್ದಾರೆ.

ಶೋಭಾವನದಲ್ಲಿ ಕಂಡು ಬರುವ ಔಷಧೀಯ ಗಿಡ
ಶೋಭಾವನದಲ್ಲಿ ಕಂಡು ಬರುವ ಔಷಧೀಯ ಗಿಡ

ಡಾ.ಮೋಹನ್ ಆಳ್ವರ ಪತ್ನಿ ಶೋಭಾ ಅವರು ಗತಿಸಿದ ಬಳಿಕ ಅವರ ನೆನಪಿಗಾಗಿ ಮೂಡಬಿದಿರೆಯ ಮಿಜಾರ್​ನಲ್ಲಿ ಸುಮಾರು 5 ಎಕರೆ ಜಾಗದಲ್ಲಿ 1998-99ರಲ್ಲಿ ಶೋಭಾವನ ನಿರ್ಮಿಸಲಾಗಿದೆ. ಸುಂದರ ವನದ ಒಳಹೊಕ್ಕರೆ ಹಸಿರ ಸಿರಿಗಳು ಕಣ್ಮನ ಸೆಳೆಯುತ್ತವೆ. ಇಲ್ಲಿ ಕೇವಲ ಮರಗಿಡಗಳು ಮಾತ್ರವಲ್ಲ, ಇಲ್ಲಿರುವುದೆಲ್ಲವೂ ಔಷಧೀಯ ಗಿಡಮರಗಳು ಎಂಬುದು ಗಮನಾರ್ಹ.

ಬೆಂಕಿ ತಗುಲಿದರೆ ಚಿಕಿತ್ಸೆಗೆ ಬಳಸುವ ಪುತ್ರಂಜೀವ, ತಲೆನೋವು ಕಾಣಿಸಿಕೊಂಡರೆ ಅದಕ್ಕೆ ಬಳಸುವ ರಕ್ತ ಚಂದನ, ವಾತ, ಕಫಗಳ ಚಿಕಿತ್ಸೆಗೆ ಬಳಸುವ ನೀಲಗಿರಿ, ರಕ್ತ ಹೀನತೆ ಚಿಕಿತ್ಸೆಗೆ ಬೇಕಿರುವ ಅಗ್ನಿಮಂಥ, ಕುಷ್ಠರೋಗ ಚಿಕಿತ್ಸೆಗೆ ಬಳಸುವ ನಾಗಕೇಸರ, ಸಂಧಿವಾತಕ್ಕೆ ಬಳಸುವ ಸುರಪುನ್ನಾಗ, ಎಣ್ಣೆ ಹೊನ್ನೆ, ಹಲ್ಲಿನ ನೋವಿನ ಚಿಕಿತ್ಸೆಗೆ ಬಳಸುವ ರೆಂಜೆ, ಅಸ್ತಮಕ್ಕೆ ಬಳಸುವ ತಾರೆ, ಜಾಂಡೀಸ್​ಗೆ ಬಳಸುವ ಅಳಲೆ, ಡಯಾಬಿಟಿಸ್​ಗೆ ಬಳಸುವ ನೇರಳೆ, ವಿಷ ತೆಗೆಯಲು ಬಳಸುವ ಕದಂಬ ಮೊದಲಾದ ಅಪರೂಪದ ಸಸ್ಯಲೋಕವನ್ನು ಇಲ್ಲಿ ನೋಡಬಹುದು.

ಶೋಭಾವನದಲ್ಲಿ ಕಂಡು ಬರುವ ಔಷಧೀಯ ಗಿಡ
ಶೋಭಾವನದಲ್ಲಿ ಕಂಡು ಬರುವ ಔಷಧೀಯ ಗಿಡ

ಶೋಭವನದಲ್ಲಿ 1,200 ವಿವಿಧ ಪಂಗಡಗಳ ಮರಗಿಡಗಳಿವೆ. ರುದ್ರಾಕ್ಷಿ, ಕಾಡು ರುದ್ರಾಕ್ಷಿ, ಬದ್ರಾಕ್ಷಿ, ತ್ರಿಫಲ, ನಾಗಕೇಸರ, ಜ್ಯೋತಿಷ್ಪತಿ, ಅಂಕೋಲೆ, ಸುರುಗಿ, ಪುತ್ರಂಜೀವ, ಬಳ್ಳತಾಕ, ಸಮುದ್ರಫಲ, ಕದಂಬ, ನಾಗರಿಂಗ, ಪುಷ್ಪ ಅರ್ಜುನ ಹೀಗೆ ಪಶ್ಚಿಮ ಘಟ್ಟದಲ್ಲಿರುವ ಗಿಡಮರಗಳಿವೆ. ಈ ಶೋಭಾವನವನ್ನು ಪಶ್ಚಿಮ ಘಟ್ಟದ ಗಿಡಮರಗಳಂತೆ ಬೆಳೆಸಲಾಗಿದೆ.

ರಾಶಿವನ, ನವಗ್ರಹ ವನ, ಗಣೇಶ ಪೂಜಾ ವನ, ಪಂಚಭೂತ ವನ, ಸತ್ಯನಾರಾಯಣ ಪೂಜಾವನ, ಅಷ್ಟದಿಕ್ಪಾಲಕ ವನ, ಕದಂಬ ವನ, ಶನಿಪೂಜಾ ವನ, ಭೂತಾರಾಧನೆಯ ವನಗಳನ್ನು ವಾಸ್ತುಬದ್ದವಾಗಿ ಮಾಡಲಾಗಿದೆ. ಈ ವನಗಳನ್ನು ಪುರಾತನ ಕಾಲದಲ್ಲಿ ಋಷಿ ಮುನಿಗಳು, ಪುರಾಣ ಪುರುಷರು ಮಂಡಿಸಿದ ಸಿದ್ಧಾಂತದ ರೀತಿಯಲ್ಲಿಯೇ ನಿರ್ಮಿಸಲಾಗಿದೆ.

ಶೋಭಾವನದಲ್ಲಿ ಕಂಡು ಬರುವ ಔಷಧೀಯ ಗಿಡ
ಶೋಭಾವನದಲ್ಲಿ ಕಂಡು ಬರುವ ಔಷಧೀಯ ಗಿಡ

ಉದಾಹರಣೆಗೆ, ಸತ್ಯನಾರಾಯಣ ಪೂಜೆಗೆ ಬಳಸುವ ವಿವಿಧ ಬಗೆಯ ಹೂವುಗಳನ್ನು ಸತ್ಯನಾರಾಯಣ ಪೂಜಾ ವನದಲ್ಲಿ ಕ್ರಮಬದ್ದವಾಗಿ ಬೆಳೆಸಲಾಗುತ್ತಿದೆ. ಅಷ್ಟದಿಕ್ಪಾಲಕ ವನದಲ್ಲಿ ವಾಸ್ತುಪ್ರಕಾರ ಗಿಡಮರಗಳನ್ನು ನೆಡಲಾಗಿದೆ. ಈ ವನದಲ್ಲಿ ಯಾವುದೇ ರಾಸಾಯನಿಕಗಳನ್ನು ಬಳಸುವುದಿಲ್ಲ. ಗೋಮೂತ್ರ, ಸಗಣಿ ಮತ್ತು ಕಹಿ ಬೇವಿನ ಹಿಂಡಿ ಮಾತ್ರ ಉಪಯೋಗಿಸಲಾಗುತ್ತಿದೆ. ಇದರಿಂದ ಗಿಡಮರಗಳು ಸಂಭಾವ್ಯ ರೋಗಗಳಿಂದ ಪಾರಾಗುತ್ತವೆ.

ಈ ಬಗ್ಗೆ ಮಾತನಾಡಿದ ಶೋಭಾವನ ಮೇಲ್ವಿಚಾರಕ ಮುತ್ತಪ್ಪ, "ಶೋಭಾವನ ಹರ್ಬಲ್ ಗಾರ್ಡನ್ ಎಂಬುದು ಔಷಧೀಯ ಸಸ್ಯವನ. ಡಾ.ಮೋಹನ್ ಆಳ್ವ ಅವರ ಪತ್ನಿ 1998ರಲ್ಲಿ ನಿಧನ ಹೊಂದಿದ್ದು, ಅವರ ನೆನಪಿಗಾಗಿ ಇದನ್ನು ನಿರ್ಮಾಣ ಮಾಡಿದ್ದಾರೆ. ಪಶ್ಚಿಮ ಘಟ್ಟದಲ್ಲಿರುವ ಸಸ್ಯ ಸಂಪತ್ತನ್ನು ಇಲ್ಲಿ ಬೆಳೆಸಲಾಗಿದೆ. ಸಸ್ಯ, ಬಳ್ಳಿಗಳಿಲ್ಲಿದೆ. ವಿಶೇಷವಾಗಿ, ಆಧ್ಯಾತ್ಮಿಕ ವನಗಳನ್ನು ನಿರ್ಮಾಣ ಮಾಡಲಾಗಿದೆ. ಇಂತಹ ವನಗಳು ಬೇರೆ ಕಡೆ ನೋಡಲು ಸಿಗುವುದೇ ವಿರಳ. ಇದನ್ನು ನೋಡಲು ಬೇರೆ ಬೇರೆ ಪ್ರದೇಶಗಳಿಂದ ಆಯುರ್ವೇದ ಕಲಿಯುವ ಮಕ್ಕಳು ಬರುತ್ತಾರೆ. ಎಲ್ಲವೂ ಉಚಿತವಾಗಿ ಅಧ್ಯಯನ ಮಾಡುವ ವ್ಯವಸ್ಥೆ. ಈಗಿನ ಜನರಿಗೆ ನಮ್ಮ ಮೂಲ ಸಂಸ್ಕೃತಿಯನ್ನು ತೋರಿಸಲು ಡಾ.ಮೋಹನ್ ಆಳ್ವರು ವ್ಯವಸ್ಥೆ ಮಾಡಿದ್ದಾರೆ" ಎಂದರು.

ಶೋಭಾವನದಲ್ಲಿ ಕಂಡು ಬರುವ ಔಷಧೀಯ ಗಿಡ
ಶೋಭಾವನದಲ್ಲಿ ಕಂಡು ಬರುವ ಔಷಧೀಯ ಗಿಡ

ಶೋಭಾವನದಲ್ಲಿ ಪಕ್ಷಿ ವನವಿದೆ. ಇದರಲ್ಲಿ 160 ಪಂಗಡಗಳ ಗಿಡಗಳಿವೆ. 40 ಜಾತಿಯ ಪಕ್ಷಿಗಳು ವಾಸ ಮಾಡುತ್ತಿವೆ. ಚಿಟ್ಟೆವನದಲ್ಲಿ 60 ಜಾತಿಯ ಗಿಡಗಳಿದ್ದು 30 ಜಾತಿಯ ಚಿಟ್ಟೆಗಳಿವೆ.

ಇದನ್ನೂ ಓದಿ: 7 ವರ್ಷಗಳಿಂದ ನಿರಂತರ ಪರಿಸರ ಪೂಜೆ: 350ಕ್ಕೂ ಹೆಚ್ಚು ಸಸಿ ನೆಟ್ಟು ಮಕ್ಕಳಂತೆ ಪೋಷಿಸುವ ಹಾವೇರಿಯ ಪರಿಸರಪ್ರೇಮಿ

Last Updated : Nov 6, 2023, 5:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.