ETV Bharat / state

'ಹೇಳಿಕೆ ನೀಡುವವರ ವಿರುದ್ಧ ಶಿಸ್ತು ಕ್ರಮ': ಬಿಜೆಪಿ ಮುಖಂಡರಿಗೆ ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ

author img

By

Published : Jun 27, 2023, 4:10 PM IST

ಯಾರೂ ಯಾವುದೇ ಹೇಳಿಕೆ ನೀಡಬಾರದು. ಪಕ್ಷದ ಶಿಸ್ತಿನ ಪ್ರಕಾರವೇ ಕೆಲಸ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ತಾಕೀತು ಮಾಡಿದ್ದಾರೆ.

disciplinary-action-will-be-taken-against-who-make-statements-says-nalin-kumar-kateel
ಹೇಳಿಕೆ ನೀಡುವವರ ವಿರುದ್ಧ ಶಿಸ್ತು ಕ್ರಮ ಕೈ ಗೊಳ್ಳಲಾಗುತ್ತದೆ : ಬಿಜೆಪಿ ನಾಯಕರಿಗೆ ಕಟೀಲ್ ಎಚ್ಚರಿಕೆ

ಬಿಜೆಪಿ ನಾಯಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ

ಮಂಗಳೂರು : ಯಾರೂ ಯಾವುದೇ ಹೇಳಿಕೆಗಳ‌ನ್ನು ನೀಡಬಾರದು. ಪಾರ್ಟಿಯ ಶಿಸ್ತು ಅನುಶಾಸನ ಪ್ರಕಾರವೇ ಎಲ್ಲರೂ ಕೆಲಸ ಮಾಡಬೇಕು. ಯಾರಾದರೂ ಹೇಳಿಕೆ ಕೊಟ್ಟರೆ ಶಿಸ್ತುಕ್ರಮ ಕೈಗೊಳ್ಳುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿ ನಾಯಕತ್ವದ ಬಗ್ಗೆ ಪಕ್ಷದೊಳಗೆ ಅಪಸ್ವರ ವಿಚಾರದ ಬಗ್ಗೆ ಇಂದು ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಬಿಜೆಪಿ ರಾಜ್ಯದಲ್ಲಿ ಸೋತ ಬಳಿಕ ರಾಜ್ಯ ಪ್ರವಾಸ ಕೈಗೊಂಡಿದ್ದೇನೆ. ಎಲ್ಲೂ ಗಲಾಟೆಗಳು ಆಗಿಲ್ಲ. ಎಲ್ಲ ಕಾರ್ಯಕರ್ತರು ಲೋಕಸಭಾ ಚುನಾವಣೆಗೆ ತಯಾರಿ ಮಾಡುತ್ತಿದ್ದಾರೆ. ಆದರೂ ಕೆಲವರು ಹೇಳಿಕೆಗಳನ್ನು ಕೊಡುತ್ತಿದ್ದಾರೆ.‌ ನಿನ್ನೆಯೇ ಈ ಬಗ್ಗೆ ಎಲ್ಲ ಹಿರಿಯರಲ್ಲಿ ಮಾತನಾಡಿದ್ದೇನೆ. ಇವತ್ತಿನಿಂದ ಯಾರೂ ಯಾವ ಹೇಳಿಕೆಗಳನ್ನು ಕೊಡಬಾರದು. ಪಾರ್ಟಿಯ ಶಿಸ್ತು ಅನುಶಾಸನ ಪ್ರಕಾರವೇ ಕೆಲಸ ಮಾಡಬೇಕು. ಹೇಳಿಕೆ ಕೊಟ್ಟವರಿಗೆ ನೋಟಿಸ್ ನೀಡುವ ಕೆಲಸ ಮಾಡಿದ್ದೇನೆ ಎಂದರು.

ಮಾತಿನ ಮೇಲೆ ಹಿಡಿತವಿರಲಿ. ಹೇಳಿಕೆ ಕೊಡುವ ಎಲ್ಲರಿಗೂ ನೋಟಿಸ್ ನೀಡಲಾಗುತ್ತದೆ. ಮತ್ತೆ ಪಾರ್ಟಿ ಕಟ್ಟಿ ಲೋಕಸಭಾ ಚುನಾವಣೆಗಾಗಿ ಕೆಲಸ ಮಾಡಬೇಕು. ಮುಂದಿನ ಲೋಕಸಭಾ ಚುನಾವಣೆ ಗೆಲ್ಲುವುದೇ ಗುರಿಯಾಗಬೇಕು. ಈಗಾಗಲೇ ಬೂತ್ ಗಟ್ಟಿ ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ಕಾರ್ಯಕರ್ತರೊಡನೆ ಸಂವಾದ ಮಾಡಿದ್ದಾರೆ. ನಮ್ಮ ಜವಾಬ್ದಾರಿ ಜಾಸ್ತಿ ಇದೆ‌. ಕಾರ್ಯಕರ್ತರು ಬಹಳ ಉತ್ಸಾಹ ಮತ್ತು ಪ್ರೇರಣೆಯಿಂದ ಲೋಕಸಭಾ ಚುನಾವಣೆಗೆ ತಯಾರಿ ಮಾಡುತ್ತಿದ್ದಾರೆ. ಆದ್ದರಿಂದ ಎಲ್ಲ ನಾಯಕರು ಮಾತಿನ ಮೇಲೆ ಹಿಡಿತ ಇಟ್ಟುಕೊಂಡು ಮಾತಾಡಬೇಕು ಎಂದು ಹೇಳಿದರು.

ಗೋ ಹತ್ಯೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು : ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾಯ್ದೆ ಹಿಂಪಡೆಯುವ ವಿಚಾರವಾಗಿ ಮಾತನಾಡಿದ ಅವರು, ಗೋವುಗಳ ರಕ್ಷಣೆಗಾಗಿ ಬಿಜೆಪಿ ಕಾನೂನು ತಂದಿದೆ. ಆದ್ದರಿಂದ ಕಾನೂನು ಜಾರಿಯಲ್ಲಿರುವಾಗ ಗೋಕಳ್ಳರ ಮತ್ತು ಗೋಹತ್ಯೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ದೇಶದಲ್ಲಿ ಗೋ ಸಂಸ್ಕೃತಿ ಇದೆ. ಕೃಷಿ, ಜೀವನ, ಆರಾಧನೆ ಎಲ್ಲದಕ್ಕೂ ಗೋವು ಮುಖ್ಯವಾಗಿದೆ. ಗೋ ಸಂಸ್ಕೃತಿ ಆರಾಧನೆಯ ಪ್ರತೀಕ. ಗೋ ರಕ್ಷಣೆಗಾಗಿ ಬಿಜೆಪಿ ಗೋ ಹತ್ಯೆ ನಿಷೇಧ ಕಾನೂನು ಜಾರಿ ಮಾಡಿದೆ. ಗೋ ಸಂರಕ್ಷಣೆ ಮಾಡುವ ಜವಾಬ್ದಾರಿ ಇದೆ. ಮಹಾತ್ಮಾ ಗಾಂಧಿಯೂ ಗೋ ಸಂರಕ್ಷಣೆ ಆಗಬೇಕೆಂದು ಹೇಳಿದ್ದರು.‌ ಆ ನಿಟ್ಟಿನಲ್ಲಿ ಗೋ ಸಂರಕ್ಷಣೆಗಾಗಿ ಕಾನೂನು ತಂದಿದ್ದೇವೆ. ಆದರೆ ಕೆಲವು ಆಚರಣೆ ವೇಳೆ ಗೋಹತ್ಯೆಗಳಾಗುತ್ತಿದೆ‌. ಯಾವುದೇ ಸಂದರ್ಭದಲ್ಲಿ ಗೋ ಹತ್ಯೆ ಆಗಬಾರದು ಎಂದು ನಾವು ಕಾನೂನು ತಂದಿದ್ದು ಎಂದು ಹೇಳಿದರು.

ಈ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಹೊಸ ಸರಕಾರ ಬಂದ ಮೇಲೆ ಗೋ ಹತ್ಯೆಗಳು ಜಾಸ್ತಿಯಾಗುತ್ತಿವೆ. ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಜನರ ಆಶಯಗಳಿಗೆ ಸರ್ಕಾರ ಗೌರವ ನೀಡಬೇಕು ಎಂದು ನಳಿನ್ ಕುಮಾರ್ ಕಟೀಲು ಆಗ್ರಹಿಸಿದರು.

ಇದನ್ನೂ ಓದಿ : ನಮ್ಮ ಸರ್ಕಾರದ ತಪ್ಪು ನಿರ್ಧಾರಗಳಿಂದ ನಾವು ಸೋತಿದ್ದು: ಶಾಸಕ ಎಂ ಪಿ ರೇಣುಕಾಚಾರ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.