ಮಂಗಳೂರು: ಯುವತಿಯೊಬ್ಬಳು ಬಚ್ಚಲು ಮನೆಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಟ್ವಾಳ ನಿವಾಸಿ ಜಗದೀಪ್ ಆಚಾರ್ಯ (32) ಬಂಧಿತ ಯುವಕ. ಈತನನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ನೀಡಿದೆ.
ನಿನ್ನೆ ರಾತ್ರಿ ಯುವತಿ ಎಂದಿನಂತೆ ತಮ್ಮ ಹಂಚಿನ ಮನೆಯೊಳಗಿರುವ ಬಚ್ಚಲು ಕೋಣೆಯಲ್ಲಿ ಸ್ನಾನ ಮಾಡುತ್ತಿರುವಾಗ ಯಾರೋ ಅಪರಿಚಿತ ವ್ಯಕ್ತಿಯೋರ್ವ ಹೊರಗಡೆಯಿಂದ ಗೋಡೆಯ ಸೆರೆಯ ಮದ್ಯೆ ತನ್ನ ಮೊಬೈಲ್ ಮೂಲಕ ವಿಡಿಯೋ ಮಾಡುತ್ತಿರುವುದನ್ನು ಯುವತಿ ಗಮನಿಸಿದ್ದಳು. ಯುವತಿ ಸ್ನಾನ ಮಾಡುತ್ತಿರುವುದನ್ನು ಸೆರೆ ಹಿಡಿಯುವುದನ್ನು ಗಮನಿಸಿದ ಆಕೆ ತಕ್ಷಣ ಕಿರುಚಿದ್ದಾಳೆ. ಆಗ ಆ ವ್ಯಕ್ತಿಯು ಅಲ್ಲಿಂದ ಓಡಿಹೋಗಿದ್ದನು. ಬಳಿಕ ಯುವತಿಯ ಕಿರುಚಾಟ ಕೇಳಿ ತಾಯಿ ಹಾಗೂ ಅಕ್ಕಪಕ್ಕದ ಮನೆಯವರು ಬಂದು ಓಡಿ ಹೋದ ಅಪರಿಚಿತ ವ್ಯಕ್ತಿಯ ಹುಡುಕಾಟ ಮಾಡಿದಾಗ ಈ ವ್ಯಕ್ತಿಯು ಕಂಡು ಬಂದಿರಲಿಲ್ಲ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಬಂಧನ: ನಗರದ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಯುವಕನೋರ್ವನ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾದ ಕುಖ್ಯಾತ ಆರೋಪಿಯನ್ನು ಮಂಗಳೂರು ನಗರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದ ನಮೀರ್ ಹಂಝ ಯಾನೆ ಸಮೀರ್ ಹಂಝ ಯಾನೆ ದಾಸ್ (39) ಬಂಧಿತ ಆರೋಪಿ.
ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನೆತ್ತಿಲಪದವು ಎಂಬಲ್ಲಿ ಆಗಸ್ಟ್12 ರಂದು ಮನ್ಸೂರ್ ಎಂಬವವರ ಜೊತೆ ಮನೆ ಬಾಡಿಗೆ ವಿಚಾರದಲ್ಲಿ ಆರೋಪಿ ನಮೀರ್ ಹಂಸ ಎಂಬಾತನು ಗಲಾಟೆ ಮಾಡಿಕೊಂಡು ಏಕಾಎಕಿ ತನ್ನಲ್ಲಿದ್ದ ತಲವಾರಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿ ನಮೀರ್ ಹಂಝನು ಕೃತ್ಯ ನಡೆಸಿದ ನಂತರ ತಲೆಮರೆಸಿಕೊಂಡಿದ್ದನು. ಆತನ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ ಕೊಣಾಜೆ ಪೊಲೀಸ್ ಠಾಣೆಗೆ ಹಸ್ತಾಂತರ ಮಾಡಿದ್ದಾರೆ.
ಆರೋಪಿ ನಮೀರ್ ಹಂಝ ಎಂಬಾತನು ಈ ಹಿಂದೆ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಇಲ್ಯಾಸ್ ಕೊಲೆ ಪ್ರಕರಣ, ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮೂರು ಕೊಲೆ ಯತ್ನ ಪ್ರಕರಣಗಳು, ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಲ್ಲೆ, ಅಪಹರಣ, ಕೊಲೆ ಯತ್ನ ಪ್ರಕರಣ ಹೀಗೆ ಒಟ್ಟು 10 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಪಿ ಎ ಹೆಗಡೆ, ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್ ಎಂ, ಪಿಎಸ್ಐ ರಾಜೇಂದ್ರ ಬಿ ಹಾಗೂ ಸಿಸಿಬಿ ಸಿಬ್ಬಂದಿಯವರು ಪಾಲ್ಗೊಂಡಿದ್ದರು.
ಇದನ್ನೂ ಓದಿ: ತವರು ಸೇರಿದ ಪತ್ನಿ ಮನೆಗೆ ಗಂಡನಿಂದ ವಾಮಾಚಾರ; ಆರೋಪಿ ಬಂಧನ