ETV Bharat / state

ಕಾಂಗ್ರೆಸ್ ತನ್ನ ಉಚಿತಗಳನ್ನು ಜಾರಿಗೊಳಿಸಲು ಹಣದ ಮೂಲ ಬಹಿರಂಗಪಡಿಸಬೇಕು: ಶಾಸಕ ರಘುಪತಿ ಭಟ್

author img

By

Published : May 1, 2023, 4:08 PM IST

ಕಾಂಗ್ರೆಸ್ ಘೋಷಣೆ ಮಾಡುತ್ತಿರುವ ಗ್ಯಾರಂಟಿಗಳನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದು ಶಾಸಕ ರಘುಪತಿ ಭಟ್ ಹೇಳಿದರು.

MLA Raghupathi Bhatt
ಶಾಸಕ ರಘುಪತಿ ಭಟ್

ಪುತ್ತೂರು (ದಕ್ಷಿಣ ಕನ್ನಡ) : ಸರ್ಕಾರದ ಈಗಿನ ಖಜಾನೆಯ ಸಾಮರ್ಥ್ಯ ನೋಡಿದರೆ ಇಷ್ಟೆಲ್ಲ ಉಚಿತಗಳನ್ನು ನೀಡಲು ಸಾಧ್ಯವಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷ ತನ್ನ ಉಚಿತಗಳನ್ನು ಯಾವ ರೀತಿ ಅನುಷ್ಠಾನ ಮಾಡುತ್ತದೆ. ಮತ್ತು ಅದಕ್ಕೆ ಹಣದ ಮೂಲ ಯಾವುದು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಪುತ್ತೂರಿನಲ್ಲಿ ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಒಂದರ ಹಿಂದೆ ಒಂದರಂತೆ ಗ್ಯಾರಂಟಿಗಳನ್ನು ಘೋಷಣೆ ಮಾಡುತ್ತಿದೆ. ಇವೆಲ್ಲವೂ ಅನುಷ್ಠಾನ ಮಾಡಲು ಸಾಧ್ಯವಿಲ್ಲದೇ ಇರುವಂಥದ್ದು. ಇವು ಸುಳ್ಳಿನ ಕಂತೆಗಳು ಎಂದು ಹೇಳಿದರು. ಯಾವುದಾದರೂ ಅಭಿವೃದ್ಧಿ ಯೋಜನೆಗಳನ್ನು ಕಾಂಗ್ರೆಸ್ ಘೋಷಣೆ ಮಾಡುತ್ತಿದ್ದಲ್ಲಿ ಅದರಲ್ಲಿ ತಪ್ಪೇನೂ ಇಲ್ಲ. ಸರ್ಕಾರಕ್ಕೆ ಹಣದ ಕೊರತೆಯಿದ್ದಲ್ಲಿ ಸಾಲ ಮಾಡಬಹುದಾಗಿದೆ. ಆದರೆ ಉಚಿತಗಳನ್ನು ನೀಡಲು ಸಾಲ ಪಡೆಯುವಂತಿಲ್ಲ ಎಂದರು.

ಹೀಗಿರುವಾಗ ಕಾಂಗ್ರೆಸ್ ಪಕ್ಷ ನೀಡುತ್ತಿರುವ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಬೇಕಾದರೆ ಅಷ್ಟೊಂದು ಹಣ ಎಲ್ಲಿಂದ ತರಲಾಗುತ್ತದೆ. ಸರ್ಕಾರದ ಈಗಿನ ಖಜಾನೆಯ ಸಾಮರ್ಥ್ಯ ನೋಡಿದ್ರೆ ಇಷ್ಟೆಲ್ಲ ಉಚಿತಗಳನ್ನು ನೀಡಲು ಸಾಧ್ಯವಿಲ್ಲ. ಇಷ್ಟೆಲ್ಲ ಉಚಿತಗಳನ್ನು ಘೋಷಣೆ ಮಾಡುವ ಬದಲು ಕಾಂಗ್ರೆಸ್ ನಾಯಕರು ಕರ್ನಾಟಕವನ್ನು ಪಾಕಿಸ್ತಾನ ಇಲ್ಲವೇ ಶ್ರೀಲಂಕಾದಂತೆ ಬರ್ಬಾದ್ ಮಾಡಿ ಬಿಡುತ್ತೇವೆ ಎಂದು ಒಂದೇ ವಾಕ್ಯದಲ್ಲಿ ಹೇಳಿ ಬಿಡಲಿ ಎಂದು ರಘುಪತಿ ಭಟ್ ಹರಿಹಾಯ್ದರು.

ಪುತ್ತೂರಿನಲ್ಲಿ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರ ಸ್ಪರ್ಧೆಯ ಬಗ್ಗೆ ಮಾತನಾಡಿದ ರಘುಪತಿ ಭಟ್, ಬಿಜೆಪಿಯೇ ನೈಜ ಹಿಂದುತ್ವ ಪಕ್ಷ. ಇದು ಬಿಜೆಪಿ ಮತ್ತು ಹಿಂದುತ್ವದ ನಡುವಿನ ಸ್ಪರ್ಧೆಯಲ್ಲ. ಇಲ್ಲಿ ನಮಗೆ ಎದುರಾಳಿ ಕಾಂಗ್ರೆಸ್ ಪಕ್ಷವೇ ಆಗಿದೆ. ಹಿಂದುತ್ವದ ಪರ ಗಟ್ಟಿಯಾಗಿ ನಿಂತಿರುವ ಏಕೈಕ ಪಕ್ಷ ಬಿಜೆಪಿಯಾಗಿದೆ. ಹಿಂದುತ್ವ ಮತ್ತು ಬಿಜೆಪಿ ಒಂದಕ್ಕೊಂದು ವಿರುದ್ಧವಲ್ಲ. ಪುತ್ತಿಲ ಅವರಿಗೆ ಪಕ್ಷದ ಟಿಕೆಟ್ ಸಿಕ್ಕಿಲ್ಲ ಎಂಬ ಬೇಸರ ಇರಬಹುದು. ಬಿಜೆಪಿಯಲ್ಲಿ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಎಲ್ಲರೂ ಟಿಕೆಟ್‍ಗೆ ಅರ್ಹರೆ. ಹಾಗೆಂದು ಎಲ್ಲರಿಗೂ ಟಿಕೆಟ್ ನೀಡಲು ಸಾಧ್ಯವೇ? ಎಲ್ಲರನ್ನೂ ಎಲ್ಲ ಕಾಲದಲ್ಲಿ ಸಮಾಧಾನ ಮಾಡಲು ಸಾಧ್ಯವಿಲ್ಲ. ಪಕ್ಷೇತರ ಅಭ್ಯರ್ಥಿ ನಮಗೆ ಎದುರಾಳಿಯೇ ಅಲ್ಲ ಎಂದು ಸ್ಪಷ್ಟಪಡಿಸಿದರು.

ಕುಮ್ಕಿ ಹಕ್ಕು ಶೀಘ್ರ ವಿತರಣೆ : ರೈತರಿಗೆ ಕುಮ್ಕಿ ಹಕ್ಕು ನೀಡಲು ಬಿಜೆಪಿ ಬದ್ಧವಾಗಿದ್ದು, ಅರಣ್ಯ ಕಾಯ್ದೆ ವಿಚಾರದಲ್ಲಿ ಕೆಲವೊಂದು ತಾಂತ್ರಿಕ ಅಡಚಣೆಗಳಿರುವ ಕಾರಣ ವಿಳಂಬವಾಗಿದೆ. ಇತ್ತೀಚೆಗಷ್ಟೇ ಸಂಪುಟ ಉಪ ಸಮಿತಿ ಸಭೆ ಸೇರಿ ರೈತರಿಗೆ ಗರಿಷ್ಠ 5 ಎಕರೆಯಷ್ಟು ಕುಮ್ಕಿ ಭೂಮಿಯ ಹಕ್ಕನ್ನು 30 ವರ್ಷಗಳ ಅವಧಿಗೆ ಲೀಸ್ ಆಧಾರದಲ್ಲಿ ನೀಡುವ ಬಗ್ಗೆ ಶಿಫಾರಸು ಮಾಡಿದೆ. ಇದು ಕಾನೂನು ರೂಪ ಪಡೆಯಬೇಕಿದೆ. ಬಿಜೆಪಿ ಸರ್ಕಾರ ಬಂದರೆ ಅನುಷ್ಠಾನವಾಗಲಿದೆ ಎಂದು ರಘುಪತಿ ಭಟ್ ಹೇಳಿದರು.

ಮಾಧ್ಯಮಗೋಷ್ಟಿಯಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್, ಪಕ್ಷದ ಮುಖಂಡರಾದ ಪ್ರೇಮಲತಾ ರಾವ್, ಶ್ರೀಕಾಂತ್, ಸುರೇಶ್ ಕಣ್ಣರಾಯ ಉಪಸ್ಥಿತರಿದ್ದರು.

ಇದನ್ನೂ ಓದಿ : ಬೆಂಗಳೂರಲ್ಲಿ ನಾಳೆ ಅಮಿತ್ ಶಾ ರೋಡ್ ಶೋ: ಎಲ್ಲೆಲ್ಲಿ? ಸಂಪೂರ್ಣ ವಿವರ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.