ETV Bharat / state

ವಿಶೇಷ ಮಕ್ಕಳಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಪುತ್ತೂರಿನ ದಂಪತಿ

author img

By

Published : Dec 24, 2021, 9:11 AM IST

ಪ್ರತಿ ದಿನವೂ ಮಕ್ಕಳಿಗೆ ದೈನಂದಿನ ಚಟುವಟಿಕೆಗಳನ್ನು ತಾವೇ ಮಾಡಿಕೊಳ್ಳುವ ತರಬೇತಿ ನೀಡಲಾಗುತ್ತಿದೆ. ಬಳಿಕ ಮಕ್ಕಳಿಗೆ ಯೋಗ ಹಾಗೂ ವ್ಯಾಯಾಮವನ್ನು ಹೇಳಿಕೊಡಲಾಗುತ್ತಿದೆ. ಎಲ್ಲಾ ಮಕ್ಕಳಂತೆ ಶಿಕ್ಷಣ ಪಡೆಯಬೇಕು ಎನ್ನುವ ಕಾರಣಕ್ಕೆ ಇರುವ ವ್ಯವಸ್ಥೆಯಲ್ಲಿಯೇ ಮಕ್ಕಳಿಗೆ ಶಿಕ್ಷಣದ ಜೊತೆಗೆ ಕಂಪ್ಯೂಟರ್ ಜ್ಞಾನವನ್ನೂ ಇಲ್ಲಿ ನೀಡಲಾಗುತ್ತಿದೆ..

Mentally Challenged children
ಪುತ್ತೂರಿನ ಪ್ರಜ್ಞಾ ಆಶ್ರಮ

ಪುತ್ತೂರು : ಬುದ್ಧಿಮಾಂದ್ಯ ಸಹೋದರನನ್ನು ಕಳೆದುಕೊಂಡ ಯುವಕನೋರ್ವ ತನ್ನ ಜೀವಿತಾವಧಿಯನ್ನು ವಿಶೇಷ ಮಕ್ಕಳ ಪಾಲನೆ-ಪೋಷಣೆಗಾಗಿ ಮುಡಿಪಾಗಿಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಕಂಡು ಬಂದಿದೆ.

ಎಲ್ಲವೂ ಸರಿಯಿದ್ದವರನ್ನೇ ನೋಡಿಕೊಳ್ಳಲು ಜನ ಹಿಂದು-ಮುಂದು ನೋಡುವ ಈ ಕಾಲದಲ್ಲಿ ಸರಿ-ತಪ್ಪು ತಿಳಿಯದ ಬುದ್ಧಿಮಾಂದ್ಯರನ್ನು ಸಮಾಜ ಹಾಗೂ ಸ್ವಂತ ಜನರೇ ತಾತ್ಸಾರ ಭಾವದಿಂದ ನೋಡುವುದು ಸಾಮಾನ್ಯವಾಗಿದೆ. ವಿಶೇಷ ಮಕ್ಕಳನ್ನು ನೋಡಿಕೊಳ್ಳಲು ಸಾಧ್ಯವಿಲ್ಲದೆ ಬೀದಿಗೆ ತಳ್ಳುವ ಪ್ರಕ್ರಿಯೆಯೂ ಸಾಮಾನ್ಯವಾಗಿ ನಡೆಯುತ್ತಿರುತ್ತದೆ.

ಇಂತಹ ಮಕ್ಕಳಿಗೆ ಜೀವನ ಶಿಕ್ಷಣವನ್ನು ನೀಡಿ, ಸಮಾಜದ ಮುಖ್ಯವಾಣಿಗೆ ತರುವ ಪ್ರಾಮಾಣಿಕ ಪ್ರಯತ್ನವೊಂದನ್ನು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಯುವಕನೋರ್ವ ಕಳೆದ ಐದು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ.

ವಿಶೇಷ ಚೇತನ ಮಕ್ಕಳನ್ನು ನೋಡಿಕೊಳ್ಳುತ್ತಿರುವ ದಂಪತಿ

ಅಣ್ಣಪ್ಪನವರ ಕಾರ್ಯಕ್ಕೆ ಮೆಚ್ಚುಗೆ : ಅಣ್ಣಪ್ಪ ಎಂಬುವರು ಬುದ್ಧಿಮಾಂದ್ಯ ಮಕ್ಕಳನ್ನು ಹಾಗೂ ಹಿರಿಯರನ್ನು ಸಾಕಿ-ಸಲಹುವ ಜವಾಬ್ದಾರಿಯನ್ನು ಹೊತ್ತಿದ್ದಾರೆ. ದಿನದ ಇಪ್ಪತ್ತನಾಲ್ಕು ಗಂಟೆಯೂ ಈ ವಿಶೇಷ ಚೇತನರ ಜೊತೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಮನೆ ಮಂದಿಯ ಜೊತೆಗೆ ಜನರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಈ ಬುದ್ಧಿಮಾಂದ್ಯರಿಗೆ ಆಶ್ರಯ ನೀಡಿ, ಅವರ ಪಾಲಿಗೆ ಹೊಸ ಸಂತಸ ಕೊಡುವಲ್ಲಿ ಈ ಯುವಕನ ಕೊಡುಗೆ ಅಪಾರ. ಕಳೆದ ಐದು ವರ್ಷಗಳಿಂದ ಬುದ್ಧಿಮಾಂದ್ಯ ಮಕ್ಕಳು ಹಾಗೂ ಹಿರಿಯರನ್ನು ಸಾಕಿ-ಸಲಹುತ್ತಿರುವ ಇವರ ಅಸಾಧಾರಣ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ಕೇಳಿ ಬರುತ್ತಿದೆ.

Mentally Challenged children
ಪುತ್ತೂರಿನ ಪ್ರಜ್ಞಾ ಆಶ್ರಮ

ವಿಶೇಷ ಚೇತನ ಮಕ್ಕಳಿಗೆ ಕಂಪ್ಯೂಟರ್ ಜ್ಞಾನ : ಸದ್ಯಕ್ಕೆ 14 ವಿಶೇಷ ಮಕ್ಕಳನ್ನು ನೋಡಿಕೊಳ್ಳುತ್ತಿರುವ ಅಣ್ಣಪ್ಪನವರ ಸೇವೆಗೆ ಪತ್ನಿಯೂ ನೆರವಾಗುತ್ತಿದ್ದಾರೆ. ಹುಟ್ಟಿನಿಂದಲೇ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಮಕ್ಕಳು, ಅಣ್ಣಪ್ಪ ಅವರ ಬಳಿ ಸೇರಿದ ಬಳಿಕ ತಮ್ಮ ನಡವಳಿಕೆಯಲ್ಲಿ ಹೆಚ್ಚಿನ ಬದಲಾವಣೆ ಕಂಡುಕೊಳ್ಳುತ್ತಿದ್ದಾರೆ.

ಪ್ರತಿ ದಿನವೂ ಮಕ್ಕಳಿಗೆ ದೈನಂದಿನ ಚಟುವಟಿಕೆಗಳನ್ನು ತಾವೇ ಮಾಡಿಕೊಳ್ಳುವ ತರಬೇತಿ ನೀಡಲಾಗುತ್ತಿದೆ. ಬಳಿಕ ಮಕ್ಕಳಿಗೆ ಯೋಗ ಹಾಗೂ ವ್ಯಾಯಾಮವನ್ನು ಹೇಳಿಕೊಡಲಾಗುತ್ತಿದೆ. ಎಲ್ಲಾ ಮಕ್ಕಳಂತೆ ಶಿಕ್ಷಣ ಪಡೆಯಬೇಕು ಎನ್ನುವ ಕಾರಣಕ್ಕೆ ಇರುವ ವ್ಯವಸ್ಥೆಯಲ್ಲಿಯೇ ಮಕ್ಕಳಿಗೆ ಶಿಕ್ಷಣದ ಜೊತೆಗೆ ಕಂಪ್ಯೂಟರ್ ಜ್ಞಾನವನ್ನೂ ಇಲ್ಲಿ ನೀಡಲಾಗುತ್ತಿದೆ.

ಪುತ್ತೂರಿನ ಬಲಮುರಿ ಗಣಪತಿ ದೇವಸ್ಥಾನದ ಬಳಿ ಬಾಡಿಗೆ ಮನೆಯೊಂದರಲ್ಲಿ ಈ ಮಕ್ಕಳನ್ನು ಸಲಹುತ್ತಿದ್ದ ಅಣ್ಣಪ್ಪನವರ ಸೇವೆ ಪರಿಗಣಿಸಿ ಪುತ್ತೂರು ಶಾಸಕರು ಬೀರಮಲೆ ಗುಡ್ಡದಲ್ಲಿ ಮಕ್ಕಳನ್ನು ಸಾಕಲು ಬೇಕಾದ ವ್ಯವಸ್ಥೆ ಮಾಡಿದ್ದಾರೆ. ಈ ಹಿಂದೆ ದೂರದರ್ಶನ ಕೇಂದ್ರವಾಗಿದ್ದ ಕಟ್ಟಡದಲ್ಲಿ ಆಶ್ರಮಕ್ಕೆ ಬೇಕಾದ ವ್ಯವಸ್ಥೆಗಳನ್ನು ಕಲ್ಪಿಸಿದ್ದು, ಸಂಘ-ಸಂಸ್ಥೆಗಳೂ ಅಣ್ಣಪ್ಪನವರ ಈ ಕಾರ್ಯದಲ್ಲಿ ಕೈ ಜೋಡಿಸಿವೆ.

ತಡೆ ಬೇಲಿ ನಿರ್ಮಾಣಕ್ಕೆ ಮನವಿ : ಬೀರಮಲೆ ಬೆಟ್ಟದಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಈ ಆಶ್ರಮವನ್ನು ನಡೆಸಲಾಗುತ್ತಿದೆ. ದಾನಿಗಳು ಎಲ್ಲಾ ರೀತಿಯ ಸಹಾಯ ಮಾಡುತ್ತಿದ್ದಾರೆ. ತಮ್ಮ ಎರಡು ಮುದ್ದು ಮಕ್ಕಳ ಜೊತೆಗೆ ವಿಶೇಷ ಮಕ್ಕಳನ್ನೂ ಮಕ್ಕಳಂತೆ ಸಾಕುತ್ತಿರುವ ಅಣ್ಣಪ್ಪ ದಂಪತಿ ತಮ್ಮನ್ನು ರಾತ್ರಿ-ಹಗಲು ಮಕ್ಕಳಿಗಾಗಿಯೇ ಮುಡಿಪಾಗಿಟ್ಟಿದ್ದಾರೆ. ವಿಶೇಷ ಮಕ್ಕಳ ಲಾಲನೆ-ಪಾಲನೆಗೆ ವಿಶೇಷ ಕಾಳಜಿಯ ಅಗತ್ಯವಿದೆ.

ಈಗಿರುವ ಕಟ್ಟಡದ ಸುತ್ತ ಸರಿಯಾದ ತಡೆಬೇಲಿ ಇಲ್ಲದ ಕಾರಣ ಮಕ್ಕಳು ರಸ್ತೆ ಪಕ್ಕ ಹೋಗುತ್ತಿದ್ದಾರೆ. ಉತ್ತಮ ತಡೆ ಬೇಲಿಯ ವ್ಯವಸ್ಥೆಗಾಗಿ ದಂಪತಿ ದಾನಿಗಳ ಸಹಕಾರ ಕೋರುತ್ತಿದ್ದಾರೆ. ಮಕ್ಕಳ ಆರೋಗ್ಯದಲ್ಲಿ ಯಾವ ಸಂದರ್ಭದಲ್ಲೂ ಏರುಪೇರಾಗುವ ಸಾಧ್ಯತೆಯಿದೆ.

ಈ ಸಂದರ್ಭದಲ್ಲಿ ಮಕ್ಕಳನ್ನು ಆಸ್ಪತ್ರೆಗೆ ಸಾಗಿಸಲು ಒಂದು ವಾಹನದ ಅನಿವಾರ್ಯತೆಯೂ ಇದೆ. ಅಲ್ಲದೆ ಸ್ವಂತ ಕಟ್ಟಡವೊಂದಿದ್ದಲ್ಲಿ ವಿಶೇಷ ಮಕ್ಕಳಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಮಾಡಬಹುದಿತ್ತು ಎನ್ನುವ ಅಭಿಲಾಷೆಯನ್ನೂ ಈ ದಂಪತಿ ವ್ಯಕ್ತಪಡಿಸಿದ್ದಾರೆ. ಎಲ್ಲವೂ ಸರಿಯಿರುವ ಮಕ್ಕಳನ್ನೇ ಸರಿಯಾಗಿ ನೋಡಿಕೊಳ್ಳಲಾಗದ ಪೋಷಕರಿರುವ ಈ ಕಾಲದಲ್ಲಿ ಈ ವಿಶೇಷ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಿರುವ ಅಣ್ಣಪ್ಪ ದಂಪತಿ ಕಾರ್ಯ ಶ್ಲಾಘನೀಯ. ಸರ್ಕಾರ ಇಂತಹ ವ್ಯಕ್ತಿಗಳನ್ನು ಗುರುತಿಸಿ, ಅವರಿಗೆ ಬೇಕಾದ ವ್ಯವಸ್ಥೆಗಳನ್ನು ಕಲ್ಪಿಸುವತ್ತ ಚಿತ್ತ ಹರಿಸಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.