Bihar Election Results 2025

ETV Bharat / state

ಸಾಫ್ಟ್​ವೇರ್​​ ಕೆಲಸ ಬಿಟ್ಟು, ಚಾಕೋಲೆಟ್​ ಹಿಂದೆ ಬಿದ್ದ ಮಹಿಳೆ: ಈಗ ಯಶಸ್ವಿ ಉದ್ಯಮಿ ಹೌದು..!

ಲಾಕ್‌ಡೌನ್‌ ಸಂದರ್ಭ ಸದುಪಯೋಗಪಡಿಸಿಕೊಂಡು ಉದ್ಯಮವೊಂದನ್ನು ಸ್ಥಾಪನೆ ಮಾಡಿ, ಹೇಗೆ ಯಶಸ್ವಿ ಉದ್ಯಮಿಯಾಗಿ ಪರಿವರ್ತನೆಯಾಗಬಹುದು ಎಂಬುದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಮಹಿಳೆಯೊಬ್ಬರು ಉದಾಹರಣೆಯಾಗಿದ್ದಾರೆ.

chocolate-industry-special-story-from-mangaluru
ಸಾಫ್ಟೇರ್​​ ಕೆಲಸ ಬಿಟ್ಟು, ಚಾಕೋಲೆಟ್​ ಹಿಂದೆ ಬಿದ್ದ ಮಹಿಳೆ: ಈಗ ಯಶಸ್ವಿ ಉದ್ಯಮಿ ಹೌದು..!
author img

By

Published : August 3, 2021 at 10:58 PM IST

Choose ETV Bharat

ಪುತ್ತೂರು(ದಕ್ಷಿಣ ಕನ್ನಡ): ಬೆಂಗಳೂರಿನಲ್ಲಿ ಸಾಫ್ಟ್​ವೇರ್​​ ಉದ್ಯೋಗಿಯಾಗಿ, ಕೆಲಸ, ಟ್ರಾಫಿಕ್, ಮನೆ ಕೆಲಸ ಹೀಗೆ ಫುಲ್ ಬ್ಯುಸಿ ಶೆಡ್ಯೂಲ್​​​​ನಿಂದಾಗಿ ಬೇಸತ್ತ ಮಹಿಳೆ ಇಂದು ತಾನೇ ಉದ್ಯಮ ಸ್ಥಾಪಿಸಿ, ಗ್ರಾಮೀಣ ಭಾಗದ ಮಹಿಳೆಯರಿಗೆ ಉದ್ಯೋಗ ನೀಡುವ ಹಂತಕ್ಕೆ ತಲುಪಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಟ್ಟಂಪ್ಪಾಡಿ ರೆಂಜ ನಿವಾಸಿಯಾದ ಸ್ವಾತಿ ಕಲ್ಲೆಗುಂಡಿ ತನ್ನ ಕುಟುಂಬಕ್ಕೆ ಪುಟ್ಟ ಮಗು ಬಂದಾಗ ಐಟಿ ಕಂಪನಿಗೆ ರಾಜೀನಾಮೆ ನೀಡಿ ಪುತ್ತೂರಿನ ಪತಿ ಬಾಲಸುಬ್ರಮಣ್ಯ ಮನೆಗೆ ಬಂದಿದ್ದರು. ಲಾಕ್​ಡೌನ್ ವೇಳೆ ಕೇಳೋರಿಲ್ಲದೇ ಹಾಳಾಗುತ್ತಿದ್ದ ಕೋಕೋ ನೋಡಿದಾಗ ಅವರ ಮನಸ್ಸಲ್ಲಿ ಮೂಡಿದ್ದು, ಚಾಕೋಲೆಟ್​ ತಯಾರಿಕೆಯ ಕನಸು.

ಮಾಜಿ ಸಾಫ್ಟ್​ವೇರ್ ಉದ್ಯೋಗಿ ಯಶಸ್ವಿ ಉದ್ಯಮಿಯಾದ ಕತೆ

ಚಾಕೊಲೇಟ್​ ತಯಾರಿಕೆ, ತಂತ್ರಜ್ಞಾನ, ಗುಣಮಟ್ಟ, ತಯಾರಿಸಲು ಪರವಾನಗಿ ಹೀಗೆ ಎಲ್ಲ ಮಗ್ಗುಲುಗಳ ಮಾಹಿತಿ ಕಲೆ ಹಾಕಿದರು. ಪತಿ ಬಾಲ ಸುಬ್ರಹ್ಮಣ್ಯ ಮೆಕ್ಯಾನಿಕಲ್ ಎಂಜಿನಿಯರ್ ಆಗಿರುವುದರಿಂದ ಯಂತ್ರೋಪಕರಣ, ತಂತ್ರಜ್ಞಾನದ ಹುಡುಕಾಟಕ್ಕೆ ಸಹಾಯಕವಾಯಿತು. ಬಳಿಕ, ಚಾಕೋಲೆಟ್​​ ತಯಾರಿಕೆ ಕುರಿತು ಪತಿ ಮತ್ತು ಪತ್ನಿ ಇಬ್ಬರೂ ವೃತ್ತಿಪರ ತರಬೇತಿ ಪಡೆದರು.

ತಾವು ದುಡಿದು ಉಳಿಸಿದ ಹಣವನ್ನೇ ಬಂಡವಾಳವನ್ನಾಗಿಸಿಕೊಂಡು ಯಂತ್ರೋಪಕರಣಗಳನ್ನು ಆನ್​​ಲೈನ್ ಮೂಲಕವೇ ಖರೀದಿಸಿ ಅಳವಡಿಸಿದ್ದಾರೆ. ಚಾಕೋಲೆಟ್​​ ಮಾಡೋದು ಹೇಗೆ? ಅನ್ನೋದನ್ನು ಇಂಟರ್​ನೆಟ್​ ಮೂಲಕ ತಿಳ್ಕೊಂಡ ಅವರು ತರಬೇತಿಯನ್ನು ಪಡ್ಕೊಂಡು ಉದ್ಯಮ ಸ್ಥಾಪನೆ ಮಾಡಿ, ಈಗ ಉದ್ಯೋಗದಾತರೂ ಆಗಿದ್ದಾರೆ.

ಅನುತ್ತಮ ಎಂಬ ಹೆಸರಿನ ಚಾಕೋಲೆಟ್ ತಯಾರಿಸುತ್ತಿರುವ ಸ್ವಾತಿ, ಎಲ್ಲ ಜವಾಬ್ದಾರಿಗಳನ್ನೂ ತಾವೇ ನಿರ್ವಹಿಸುತ್ತಿದ್ದಾರೆ. ಹೆಚ್ಚಾಗಿ ಆನ್​ಲೈನ್ ಮಾರುಕಟ್ಟೆಯನ್ನೇ ಅವಲಂಬಿಸಿರುವ ಸ್ವಾತಿ ಇನ್ಸ್‌ಟಾಗ್ರಾಂ, ಫೇಸ್ಪುಕ್ ಹಾಗೂ ಅಮೆಜಾನ್​​ಗಳಲ್ಲಿ ಚಾಕೋಲೆಟ್​​ಗಳನ್ನು ಮಾರುತ್ತಿದ್ದಾರೆ. ಈ ಚಾಕೋಲೆಟ್​ಗಳಿಗೆ ಯಾವುದೇ ರಾಸಾಯನಿಕ, ಸಕ್ಕರೆ ಬಳಸದೇ ಕೇವಲ ಬೆಲ್ಲವನ್ನು ಬಳಸಿಕೊಂಡು ತಯಾರಿಸಲಾಗುತ್ತದೆ ಎಂಬುದು ವಿಶೇಷ. ಭಿನ್ನ ರುಚಿಯನ್ನು ಈ ಚಾಕೋಲೆಟ್​ ಹೊಂದಿದ್ದು, ಸದ್ಯಕ್ಕೆ ತಿಂಗಳಿಗೆ 800 ಬಾರ್​ಗಳಿಗೆ ಬೇಡಿಕೆ ಬರುತ್ತಿದೆ.

ಚಾಕೋಲೆಟ್ ತಯಾರಿಸಲು ಆರಂಭಿಸಿದ ಬಳಿಕ ಸುತ್ತಮುತ್ತಲಿನ ಕೃಷಿಕರಿಗೂ ಸಾವಯವ ಕೋಕೋ ಬೆಳೆಸಲು ಸ್ವಾತಿ ಪ್ರೇರಣೆ ನೀಡುತ್ತಿದ್ದಾರೆ. ಈ ಬಾರಿಯ ಲಾಕ್‌ಡೌನ್‌ ಸಂದರ್ಭ ಸಾವಯವ ಮಾದರಿಯಲ್ಲಿ ಬೆಳೆಸಿದ ಸುತ್ತಮುತ್ತಲಿನ ಕೃಷಿಕರಿಂದ ಮಾರುಕಟ್ಟೆ ಬೆಲೆಗಿಂತ ಅಧಿಕ ಮೊತ್ತ ನೀಡಿ ಕೋಕೋ ಖರೀದಿಸಿದ್ದಾರೆ. ಪ್ರಸ್ತುತ ಸುಮಾರು 14 ಬಗೆಯ ಚಾಕೊಲೇಟ್ ಲಭ್ಯವಿದೆ. ಚಾಕೋಲೆಟ್​​ ರುಚಿ ಹೆಚ್ಚಿಸಲು ಇನ್ನಷ್ಟು ಸಂಶೋಧನೆಯಲ್ಲಿ ಸ್ವಾತಿ ಅವರು ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ಪ್ರೀತ್ಸೆ ಅಂತಾ ಕಾಡಿದ್ದ ಪಾತಕಿ, ಆಕೆ ಒಪ್ಪದಿದ್ದಾಗ ಕೊನೆಗೆ ಪ್ರಾಣವನ್ನೇ ತೆಗೆದ..