ETV Bharat / state

ಜಮೀರ್ ಅಹ್ಮದ್​ಗೆ ರಸ್ತೆಯಲ್ಲಿ ಓಡಾಡಲು ಬಿಟ್ಟಿದ್ದೇ ನಮ್ಮ ಅಪರಾಧ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

author img

By ETV Bharat Karnataka Team

Published : Nov 22, 2023, 5:01 PM IST

Updated : Nov 22, 2023, 6:19 PM IST

ಮುಖ್ಯಮಂತ್ರಿ ತಕ್ಷಣವೇ ಜಮೀರ್ ಅಹ್ಮದ್ ಅವರ ರಾಜೀನಾಮೆ ತೆಗೆದುಕೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಒತ್ತಾಯಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

ಮಂಗಳೂರು : ಸಚಿವ ಜಮೀರ್ ಅಹ್ಮದ್​ಗೆ ರಸ್ತೆಯಲ್ಲಿ ಓಡಾಡಲು ಬಿಟ್ಟಿದ್ದೇ ನಮ್ಮ ಅಪರಾಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಹೇಳಿದ್ದಾರೆ. ಮಂಗಳೂರಿನಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸಭಾಧ್ಯಕ್ಷರ ಸ್ಥಾನಕ್ಕೆ ನಾವು ಶಾಸಕರು ಗೌರವ ಕೊಡುವುದು ಪ್ರಜಾಪ್ರಭುತ್ವಕ್ಕೆ ಗೌರವ ನೀಡಲು. ಸಂವಿಧಾನಕ್ಕೆ, ಆ ಸ್ಥಾನಕ್ಕೆ ಗೌರವ ನೀಡುತ್ತೇವೆ. ಆ ಸ್ಥಾನದಲ್ಲಿ ಕುಳಿತ ವ್ಯಕ್ತಿಗೆ ಜಾತಿ, ಧರ್ಮದ ಬಣ್ಣ ನೀಡುವ ಪ್ರಯತ್ನವನ್ನು ಜಮೀರ್ ಅಹ್ಮದ್ ಖಾನ್ ನಿಂದ ಆಗಿದೆ. ಇದು ತಲೆತಗ್ಗಿಸುವ ಕೆಲಸ. ಇಷ್ಟೊತ್ತಿಗೆ ಜಮೀರ್ ಅಹ್ಮದ್ ರಾಜೀನಾಮೆಯನ್ನು ಮುಖ್ಯಮಂತ್ರಿ ಪಡೆದುಕೊಳ್ಳಬೇಕಿತ್ತು. ಮುಂದಿನ ಅಧಿವೇಶನದಲ್ಲಿ ಜಮೀರ್ ಅಹ್ಮದ್ ಯಾವ ರೀತಿ ಪಾಲ್ಗೊಳ್ಳುತ್ತಾರೆ ಎಂಬುದನ್ನು ನೋಡ್ತೇವೆ. ಮುಖ್ಯಮಂತ್ರಿ ತಕ್ಷಣವೇ ಜಮೀರ್ ಅಹ್ಮದ್ ರಾಜೀನಾಮೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಕಳೆದ ಹಲವಾರು ತಿಂಗಳುಗಳಿಂದ ಬಿಜೆಪಿಗೆ ರಾಜ್ಯಾಧ್ಯಕ್ಷರ ನೇಮಕ ಆಗಿರಲಿಲ್ಲ. ವಿಪಕ್ಷ ನಾಯಕ ಆಯ್ಕೆ ಆಗಿರಲಿಲ್ಲ. ಪೈಪೋಟಿ, ಭಿನ್ನಾಭಿಪ್ರಾಯ ಇದೆ ಎಂದು ಚರ್ಚೆ ಆಗಿತ್ತು. ಕಾಂಗ್ರೆಸ್ ಮುಖಂಡರು ಟೀಕೆ ಮಾಡುತ್ತಿದ್ದರು. ಆದರೆ ಇದೀಗ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಪ್ರಧಾನಿ ಮೋದಿ ಅವರು ನನಗೆ ಜವಾಬ್ದಾರಿ ನೀಡಿದ್ದಾರೆ ಎಂದು ತಿಳಿಸಿದರು.

ಮೋದಿ ನಾಯಕತ್ವವನ್ನು ಜಗತ್ತೇ ಕೊಂಡಾಡುತ್ತಿದೆ. ಒಂದು ದಿನ ರಜೆ ಪಡೆಯದೆ ಕೆಲಸ ಮಾಡಿದ ಧೀಮಂತ ನಾಯಕ ಅವರು. ರಾಜ್ಯದಲ್ಲಿ ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಒಳ್ಳೆಯ ಕಾರ್ಯಕ್ರಮ ‌ಕೊಟ್ಟರೂ ಸಹ ನಮ್ಮನ್ನು ಟೀಕೆ ಮಾಡಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದರೆ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಹೊಸ ಸರ್ಕಾರ ಬಂದ ಐದಾರು ತಿಂಗಳಲ್ಲಿ ಜನಪ್ರಿಯತೆ ಕಳೆದುಕೊಂಡಿದ್ದು ಇದೇ ಮೊದಲು ಎಂದು ವಿಜಜೇಂದ್ರ ಟೀಕಿಸಿದರು.

ರಾಜ್ಯ ಸರ್ಕಾರದ ಐದಾರು ತಿಂಗಳ ಕಾರ್ಯವೈಖರಿ ಬಡ ವಿರೋಧಿ, ದಲಿತರ, ರೈತ ವಿರೋಧಿ ಸರ್ಕಾರ ಎಂದು ಸಾಬೀತು ಮಾಡಿದೆ. ಮತ ಕೊಟ್ಟವರು ಮತ ಕೊಟ್ಟ ತಪ್ಪಿಗೆ ತಮ್ಮನ್ನು ತಾವು ಪ್ರಶ್ನೆ ಮಾಡಿಕೊಳ್ಳುತ್ತಿದ್ದಾರೆ. ಬರದ ಸಂದರ್ಭದಲ್ಲಿ ನಿರ್ವಹಣೆ ಮಾಡಲು ಸರ್ಕಾರ ವಿಫಲವಾಗಿದೆ. ಆದರೆ ಈ ಬಗ್ಗೆ ಕಾಂಗ್ರೆಸ್ ಸಭೆ ನಡೆಸದೆ ಮುಂದಿನ ಲೋಕಸಭಾ ಚುನಾವಣೆ ಮತ್ತು ನಿಗಮ ಮಂಡಳಿ ನೇಮಕದ ಬಗ್ಗೆ ಚರ್ಚೆ ಮಾಡುತ್ತಿದೆ ಎಂದು ಆರೋಪಿಸಿದರು.

ಬಿಎಸ್​ವೈ ಸರ್ಕಾರ ರೈತರಿಗೆ 7 ತಾಸು ವಿದ್ಯುತ್ ಅನ್ನು ಯಶಸ್ವಿಯಾಗಿ ನೀಡಿತ್ತು. ಬೇಸಿಗೆಯಲ್ಲಿ ವಿದ್ಯುತ್ ಕೊರತೆಯಾಗದಂತೆ ಹೊರರಾಜ್ಯದಿಂದ ಖರೀದಿ ಮಾಡಿತ್ತು. ಇದೀಗ ರೈತರು ಪರದಾಡುತ್ತಿದ್ದಾರೆ. ವಿದ್ಯುತ್ ‌ಕಣ್ಣಾಮುಚ್ಚಾಲೆಯಾಡುತ್ತಿದೆ. ರೋಮ್ ಹೊತ್ತಿ ಉರಿಯುತ್ತಿದ್ದಾಗ ದೊರೆ ಪಿಟೀಲು ಬಾರಿಸುತ್ತಿದ್ದ ಎಂಬ ಪರಿಸ್ಥಿತಿ ಇದೆ. ಇದು ರೈತರಿಗೆ ಸರ್ಕಾರದ ಅವಮಾನವಾಗಿದೆ ಎಂದು ಹೇಳಿದರು.

ನಮ್ಮ ‌ಗುರಿ ಮುಂದಿನ ಲೋಕಸಭಾ ಚುನಾವಣೆ. ಈ ಚುನಾವಣೆಯಲ್ಲಿ 28 ಲೋಕಸಭಾ ಸ್ಥಾನ ಗೆಲ್ಲುವ ಮೂಲಕ ನರೇಂದ್ರ ಮೋದಿ ಅವರನ್ನು 3ನೇ ಬಾರಿಗೆ ಪ್ರಧಾನಮಂತ್ರಿಯಾಗಿ ಕೂರಿಸುತ್ತೇವೆ. ಅರುಣ್ ಪುತ್ತಿಲ ವಿಚಾರದಲ್ಲಿ ನಮ್ಮೆಲ್ಲ ಹಿರಿಯರ ಮಾರ್ಗದರ್ಶನ ಪಡೆದು ಸರಿಪಡಿಸುವ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ವಿಜಯೇಂದ್ರ ಹೇಳಿದರು.

ಲಕ್ಷ್ಮಣ್ ಸವದಿಯನ್ನು ಕರೆದೇ ಇಲ್ಲ : ಬಿಜೆಪಿ ಬಿಟ್ಟವರನ್ನು ವಾಪಸ್​ ಕರೆಸಿಕೊಳ್ಳುವ ವಿಚಾರದಲ್ಲಿ ಮಾತನಾಡಿದ ಅವರು, ಹಿಂದೆ ಏನಾಗಿದೆ ಎಂಬುದಕ್ಕಿಂತ ಇವತ್ತಿನಿಂದ ಯಾರೂ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವುದಿಲ್ಲ ಎಂದು ಹೇಳುತ್ತೇನೆ. ಲಕ್ಷ್ಮಣ ಸವದಿ ಬರುವುದಿಲ್ಲ ಎನ್ನಲು ಅವರನ್ನು ನಾವು ಕರೆದೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಜಾತಿ ಗಣತಿ ವರದಿಗೆ ಬಿಜೆಪಿ ವಿರೋಧವಿಲ್ಲ. ಹಿಂದಿನ ಅವಧಿಯಲ್ಲಿ ಸಿಎಂಗೆ ತಮ್ಮ ಅಧಿಕಾರದ ಅವಧಿಯಲ್ಲಿ ಸ್ಪಷ್ಟ ನಿಲುವು ತೆಗೆದುಕೊಳ್ಳಲು ಯಾಕೆ ಸಾಧ್ಯವಾಗಿಲ್ಲ. ಈಗ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಆ ವಿಚಾರವನ್ನು ಪ್ರಸ್ತಾಪ ಮಾಡುತ್ತಿದ್ದಾರೆ. ಕಾಂತರಾಜು ವರದಿಯಲ್ಲಿ ಸಂಪೂರ್ಣ ‌ಮಾಹಿತಿ ತೆಗೆದುಕೊಂಡಿಲ್ಲ. ಕೆಲವು ಒಳಜಾತಿಗಳನ್ನು ಪಕ್ಕಕ್ಕಿಟ್ಟು ವರದಿ ನೀಡಲಾಗಿದೆ. ಜಾತಿ ಗಣತಿಯನ್ನು ರಾಜಕೀಯ ದುರುದ್ದೇಶಕ್ಕೆ ಉಪಯೋಗಿಸಬಾರದು. ರಾಜಕೀಯ ದುರುಪಯೋಗ ಪಡಿಸಲು ಬಿಜೆಪಿ ಅವಕಾಶ ಕೊಡುವುದಿಲ್ಲ ಎಂದು ಬಿ ವೈ ವಿಜಯೇಂದ್ರ ಹೇಳಿದರು.

ಇದನ್ನೂ ಓದಿ: ಜಮೀರ್ ಹೇಳಿಕೆ ಖಂಡನೀಯ, ಇಂಥ ತಪ್ಪಾಗದಂತೆ ಎಚ್ಚರಿಕೆ ವಹಿಸಲಿ: ವಿಜಯೇಂದ್ರ

Last Updated : Nov 22, 2023, 6:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.