ETV Bharat / state

ಧರ್ಮ ನಿಂದಿಸಿದ ಅರಣ್ಯಾಧಿಕಾರಿ ಬಂಧಿಸಲು ಆಗ್ರಹ: ಠಾಣೆಯೆದುರು ಭಜನೆ ಮೂಲಕ ಪ್ರತಿಭಟನೆ

author img

By

Published : Dec 29, 2022, 10:27 PM IST

ಸಾಮಾಜಿಕ ಜಾಲತಾಣದಲ್ಲಿ ಧರ್ಮನಿಂದನೆ ಮಾಡಿದ ಅರಣ್ಯ ಅಧಿಕಾರಿಯನ್ನು ದೂರು ನೀಡಿದರೂ ಬಂಧಿಸದ ಕಾರಣಕ್ಕೆ ಹಿಂದೂ ಸಂಘಟನೆ ಕಾರ್ಯಕರ್ತರು ಪುತ್ತೂರಿನಲ್ಲಿ ಪ್ರತಿಭಟನೆ ನಡೆಸಿದರು.

bajarangadal protest in-front of the police station in puttur
ಅರಣ್ಯಾಧಿಕಾರಿಯನ್ನು ಬಂಧಿಸುವಂತೆ ಆಗ್ರಹ: ಪೊಲೀಸ್ ಠಾಣೆ ಎದುರು ಭಜನೆ ಮೂಲಕ ಪ್ರತಿಭಟನೆ

ಪುತ್ತೂರು: ಹಿಂದೂ ಧರ್ಮದ ಪಾರಂಪರಿಕ ನಂಬಿಕೆ ಭಜನೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಪದಗಳನ್ನು ಬಳಸಿ ಧರ್ಮನಿಂದನೆ ಮಾಡಿದ ಆರೋಪ ಹೊತ್ತಿರುವ ಕಡಬ ವಲಯ ಅರಣ್ಯ ಇಲಾಖೆ ಅಧಿಕಾರಿ ಸಂಜೀವ ಪೂಜಾರಿ ಮೇಲೆ ದೂರು ದಾಖಲಿಸಿದರೂ ಪೊಲೀಸರು ಬಂಧಿಸಲಿಲ್ಲ ಎಂದು ವಿಹಿಂಪ, ಬಜರಂಗದಳ ಸಂಘಟನೆಗಳು ಗುರುವಾರ ನಗರ ಪೊಲೀಸ್ ಠಾಣೆ ಎದುರು ಭಜನೆ ಮೂಲಕ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಬೆಳಗ್ಗೆ ಠಾಣೆಯೆದುರು ಜಮಾಯಿಸಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು ನಗರ ಠಾಣೆಯ ಮೆಟ್ಟಿಲಿನ ಎದುರು ಕುಳಿತು ಭಜನೆ ಮೂಲಕ ಸಂಜೀವ ಪೂಜಾರಿಯವರನ್ನು ಬಂಧಿಸುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಜರಂಗದಳ ದಕ್ಷಿಣ ಪ್ರಾಂತ್ಯ ಸಹ ಸಂಯೋಜಕ ಮುರಳೀಕೃಷ್ಣ ಹಸಂತಡ್ಕ, ಓರ್ವ ಸರ್ಕಾರಿ ಅಧಿಕಾರಿ ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಭಜಕರ ಕುರಿತು ಧರ್ಮನಿಂದನೆ ಮಾಡಿದ್ದು, ಈ ಕುರಿತು ನಗರ ಠಾಣೆಗೆ ಈಗಾಗಲೇ ಬಂಧಿಸುವಂತೆ ದೂರು ನೀಡಲಾಗಿದೆ.

ಅಲ್ಲದೇ ಅರಣ್ಯ ಇಲಾಖೆಗೆ ಕೆಲಸದಿಂದ ಅಮಾನತು ಮಾಡುವಂತೆ ಒತ್ತಾಯಿಸಲಾಗಿದೆ. ಆದರೆ ಬಂಧನಕ್ಕೆ ಮೀನಮೇಷ ಎಣಿಸುತ್ತಿದ್ದಾರೆ. ಧಾರ್ಮಿಕ ನಂಬಿಕೆಗೆ ವಿರುದ್ಧ ನಮ್ಮ ಹೋರಾಟವಾಗಿದ್ದು, ತಪ್ಪಿತಸ್ಥರಿಗೆ ಕಾನೂನು ನೆಲೆಯಲ್ಲಿ ಸೂಕ್ತ ಶಿಕ್ಷೆ ಆಗಬೇಕು. ಶೀಘ್ರ ಬಂಧನವಾಗದಿದ್ದರೆ ಸಾವಿರಾರು ಹಿಂದೂ ಕಾರ್ಯಕರ್ತರನ್ನು ಸೇರಿಸಿ ರಸ್ತೆಯಲ್ಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಹಿಂದೂ ಸಂಘಟನೆಯ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಓರ್ವ ಸರಕಾರಿ ಅಧಿಕಾರಿ ಈ ರೀತಿ ಹಿಂದೂ ಧಾರ್ಮಿಕ ನಂಬಿಕೆ ಭಜನೆ ಕುರಿತು ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದನ್ನು ಹಿಂದೂ ಸಮಾಜ ಒಕ್ಕೊರಲಿನಿಂದ ಖಂಡಿಸುತ್ತದೆ. ತಕ್ಷಣ ಆತನನ್ನು ಬಂಧಿಸಿ ಸೂಕ್ತ ಕಾನೂನಿನಡಿ ಶಿಕ್ಷೆಗೊಳಪಡಿಸಬೇಕು ಎಂದರು.

ಬಳಿಕ ಸಂಜೀವ ಪೂಜಾರಿ ಬಂಧನ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಅವಹೇಳನಕಾರಿ ತುಣುಕುಗಳನ್ನೊಳಗೊಂಡ ವಿಚಾರ ಪತ್ರಕ್ಕೆ ಸಹಿ ಹಾಕಿದ ಮನವಿಯನ್ನು ನಗರ ಠಾಣಾ ಇನ್‍ಸ್ಪೆಕ್ಟರ್ ಸುನಿಲ್ ಕುಮಾರ್ ಅವರಿಗೆ ನೀಡಿದರು. ಪ್ರತಿಭಟನೆಯಲ್ಲಿ ಸಂಘಟನೆಯ ಡಾ.ಕೃಷ್ಣಪ್ರಸನ್ನ, ಕೃಷ್ಣಪ್ರಸಾದ್ ಬೆಟ್ಟ, ಜನಾರ್ದನ ಬೆಟ್ಟ, ಸತೀಶ್ ಬಿ.ಎಸ್., ಶ್ರೀಧರ ತೆಂಕಿಲ, ಸುನಿಲ್ ಕುಮಾರ್, ಸೀತಾರಾಮ ಮಾಣಿ, ವಿಶಾಖ್, ಧನ್ಯಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

ಇದನ್ನೂ ಓದಿ: ಮಂಗಳೂರು.. ಈ ವರ್ಷ ದ್ವೇಷಕ್ಕಾಗಿ ನಡೆದವಾ ನಾಲ್ಕು ಕೊಲೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.