ETV Bharat / state

ನಾಳೆ ಮಂಗಳೂರಿಗೆ ಅಮಿತ್​ ಶಾ; ಕೇಂದ್ರ ಗೃಹ ಸಚಿವರ ರೋಡ್​ ಶೋ ರದ್ದು, ಕೋರ್​ ಕಮಿಟಿ ಸಭೆ ಮಾತ್ರ

author img

By

Published : Feb 10, 2023, 8:02 AM IST

Updated : Feb 10, 2023, 8:45 AM IST

ವಿಧಾನಸಭೆ ಚುನಾವಣೆಗೆ ಸಿದ್ಧತೆ - ನಾಳೆ ಮತ್ತೆ ರಾಜ್ಯಕ್ಕೆ ಆಗಮಿಸಲಿರುವ ಕೇಂದ್ರ ಗೃಹ ಸಚಿವರು - ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಬೇಕಿದ್ದ ಶಾ ರೋಡ್​ ಶೋ ರದ್ದು

amith sha
ಅಮಿತ್ ​ಶಾ

ಐವನ್ ಡಿಸೋಜ, ಕಾಂಗ್ರೆಸ್ ಮುಖಂಡ

ಮಂಗಳೂರು(ದಕ್ಷಿಣ ಕನ್ನಡ) : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಫೆ. 11 ರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದ ವೇಳೆ ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ರೋಡ್ ಶೋ ವನ್ನು ರದ್ದುಪಡಿಸಲಾಗಿದೆ. ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಅವರು, ಅಮಿತ್ ಶಾ ಅವರು ಪುತ್ತೂರಿನಿಂದ ಮಂಗಳೂರಿಗೆ ಬರುವ ಕಾರ್ಯಕ್ರಮದಲ್ಲಿ ಅರ್ಧ ಗಂಟೆ ವಿಳಂಬವಾಗಲಿದೆ. ಕತ್ತಲೆಯಾಗುವ ಕಾರಣ ಭದ್ರತಾ ದೃಷ್ಟಿಯಿಂದ ರೋಡ್ ಶೋ ರದ್ದುಪಡಿಸಲಾಗಿದೆ ಎಂದರು.

ಅಲ್ಲದೆ ಅಮಿತ್ ಶಾ ಏರ್​ಪೋರ್ಟ್ ನಿಂದ ಬಂದು ಕೆಂಜಾರು ಎಂಬಲ್ಲಿ ಕಾರ್ಯಕರ್ತರಿಗೆ ಕಾಣಿಸಿಕೊಂಡು ಕೋರ್ ಕಮಿಟಿ ಮೀಟಿಂಗ್ ಗೆ ತೆರಳಲಿದ್ದಾರೆ. ಕೆಂಜಾರಿನಲ್ಲಿರುವ ಶ್ರೀದೇವಿ ಕಾಲೇಜಿನಲ್ಲಿ ಕೋರ್ ಕಮಿಟಿ ಸಭೆ ನಡೆಯಲಿದೆ. ಇದರಲ್ಲಿ ಆರು ಜಿಲ್ಲೆಗಳ ಬಿಜೆಪಿ ಮುಖಂಡರುಗಳು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ಫೆಬ್ರವರಿ 11 ರಂದು ಕೇರಳದ ಕಣ್ಣೂರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಈಶ್ವರಮಂಗಲಕ್ಕೆ ಆಗಮಿಸಲಿರುವ ಅಮಿತ್ ಶಾ ಅವರು 3.15 ಕ್ಕೆ ಹನುಮಗಿರಿ ಪಂಚಮುಖಿ ಆಂಜನೇಯ ಕ್ಷೇತ್ರದ ಪಕ್ಕದಲ್ಲೇ ಧರ್ಮಶ್ರೀ ಪ್ರತಿಷ್ಠಾನದ ವತಿಯಿಂದ ನಿರ್ಮಿಸಲಾದ ಭಾರತ ಮಾತಾ ಮಂದಿರ ಲೋಕಾರ್ಪಣೆ ಮಾಡಲಿದ್ದಾರೆ. ಹೆಲಿಕಾಪ್ಟರ್ ನಲ್ಲಿ ಈಶ್ವರಮಂಗಲದಿಂದ ಪುತ್ತೂರಿಗೆ 3.40 ಕ್ಕೆ ಬರುವ ಅವರು ಪುತ್ತೂರಿನಲ್ಲಿ ಕ್ಯಾಂಪ್ಕೋದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಅಲ್ಲಿಂದ ಕ್ಯಾಂಪ್ಕೋ ಫ್ಯಾಕ್ಟರಿ ವೀಕ್ಷಿಸಿ ಹೆಲಿಕಾಪ್ಟರ್ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಜೆ 6 ಗಂಟೆಗೆ ತಲುಪಲಿದ್ದಾರೆ. ಸಂಜೆ 6 ಗಂಟೆಯ ಬಳಿಕ ಮಂಗಳೂರಿನ ಕೆಂಜಾರಿನಲ್ಲಿ ಕಾರ್ಯಕರ್ತರನ್ನು ಭೇಟಿಯಾಗಿ ಕೋರ್ ಕಮಿಟಿ ಸಭೆ ನಡೆಸಲಿದ್ದಾರೆ. ಸಭೆ ಮುಗಿಸಿ ರಾತ್ರಿ 8. 20 ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಲಿದ್ದಾರೆ.

ಕೊರಗಜ್ಜ ದೈವದ ಕೋಲ: ಅಮಿತ್ ಶಾ ಅವರ ರೋಡ್ ಶೋ ರದ್ದಿಗೆ ಅಂದು ನಡೆಯುವ ಕೊರಗಜ್ಜನ ಕೋಲ ಕಾರಣ ಎಂಬ ವಿಚಾರವು ಕೇಳಿ ಬರುತ್ತಿದೆ. ರೋಡ್ ಶೋ ನಡೆಯಬೇಕಿದ್ದ ಪದವಿನಂಗಡಿ ಬಳಿ ಅಂದು ಕೊರಗಜ್ಜ ದೈವದ ಕೋಲ ಇದೆ. ರೋಡ್ ಶೋ ಕಾರಣದಿಂದ ಭದ್ರತೆಯ ಹಿತದೃಷ್ಟಿಯಿಂದ ಕೋಲ ನಡೆಸಲು ಸಮಸ್ಯೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಅಮಿತ್ ಶಾ ಅವರ ರೋಡ್ ಶೋ ರದ್ದು ಪಡಿಸಲಾಗಿದೆ ಎಂಬ ಮಾತುಗಳು ಹರಿದಾಡುತ್ತಿವೆ.

ಶಾ ರೋಡ್ ಶೋ ಬದಲು ಜನರ ಸಮಸ್ಯೆ ಬಗೆಹರಿಸಲಿ: ದೇಶದ ಗೃಹ ಸಚಿವ ಅಮಿತ್ ಶಾ ಅವರು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿ ಮಂಗಳೂರಿನಲ್ಲಿ ರೋಡ್ ಶೋ ಮಾಡುವ ಬದಲು ಜನರ ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನಹರಿಸಲಿ ಎಂದು ಕಾಂಗ್ರೆಸ್ ಮುಖಂಡ ಐವನ್ ಡಿಸೋಜ ಹೇಳಿದರು.
ಮಂಗಳೂರಿನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಪ್ರಜಾಧ್ವನಿ ಯಾತ್ರೆಗೆ ಜನತೆಯ ಬೆಂಬಲ ಕಂಡು ಬಿಜೆಪಿಗರಿಗೆ ದಿಗ್ಬ್ರಮೆಯಾಗಿದೆ. ಆದ್ದರಿಂದ ರಾಜ್ಯಕ್ಕೆ ಪದೇ ಪದೇ ಪ್ರಧಾನಿ ಮೋದಿಯವರು ಹಾಗೂ ಸಚಿವರನ್ನು ಕರೆಸಿಕೊಳ್ಳುತ್ತಿದ್ದಾರೆ ಎಂದು ಟೀಕಿದರು.

ಅಮಿತ್ ಶಾ ಫೆ.11ರಂದು(ನಾಳೆ) ದ.ಕ. ಜಿಲ್ಲಾ ಪ್ರವಾಸದಲ್ಲಿ ಮಂಗಳೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ. ಆದರೆ ಅದಕ್ಕಿಂತ ಮೊದಲು ಬಿಜೆಪಿ ನಾಯಕರು ನಮ್ಮ ಜಿಲ್ಲೆಯ ರಸ್ತೆಯ ಸ್ಥಿತಿಗತಿಗಳನ್ನು ಅವರಿಗೆ ತೋರಿಸಲಿ. ರಾಷ್ಟ್ರದ ಗೃಹ ಸಚಿವರು ಜಿಲ್ಲೆಗೆ ಬರುವಾಗ ಅಲ್ಲಿನ ಅಭಿವೃದ್ಧಿಯ ಬಗ್ಗೆ ಏನು ಹೇಳುತ್ತಾರೆ ಎಂಬುದು ಮುಖ್ಯವೇ ಹೊರತು, ರೋಡ್ ಶೋ ಅಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಟಾರ್ಗೆಟ್‌ ಬೆಂಗಳೂರು: 28 ಕ್ಷೇತ್ರಕ್ಕೂ ಪ್ರಭಾರಿಗಳ ನೇಮಿಸಿದ ಕೇಸರಿ ಪಡೆ

Last Updated : Feb 10, 2023, 8:45 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.