ETV Bharat / state

ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್​ಗೆ ಅದ್ದೂರಿ ಚಾಲನೆ: ದೀಪ ಬೆಳಗಿದ ರಾಜ್ಯಪಾಲರು, ಜನ ಮನಸೆಳೆದ ಗಂಗಾರತಿ...

author img

By ETV Bharat Karnataka Team

Published : Dec 15, 2023, 8:09 AM IST

ಮೂಡಬಿದರೆ ಆಳ್ವಾಸ್​ ಶಿಕ್ಷಣ ಸಂಸ್ಥೆಯಲ್ಲಿ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ 29ನೇ ವಿರಾಸತ್​ಗೆ ಗುರುವಾರ ಅದ್ದೂರಿಯಾಗಿ ಚಾಲನೆ ನೀಡಲಾಯಿತು.

ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್​ಗೆ ಅದ್ದೂರಿ ಚಾಲನೆ
ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್​ಗೆ ಅದ್ದೂರಿ ಚಾಲನೆ

ಮೂಡಬಿದಿರೆ (ಮಂಗಳೂರು): ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ದೇಶ, ಧರ್ಮ, ಸಂಸ್ಕೃತಿಗಳನ್ನು ಎತ್ತಿ ಹಿಡಿಯುವ ಕಾರ್ಯ ಮಾಡುತ್ತಿದೆ ಎಂದು ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್​ ಶ್ಲಾಘಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡೆಸುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ, 29ನೇ ವಿರಾಸತ್ ಅನ್ನು ಗುರುವಾರ ಸಂಜೆ ಆಳ್ವಾಸ್ ಕಾಲೇಜಿನ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ವಿರಾಸತ್ ಉದ್ಘಾಟನೆ ಬಹಳ ಖುಷಿ ನೀಡಿದೆ. ಸಂಸ್ಕಾರಯುತ ಶಿಕ್ಷಣ ನೀಡುವುದು ಆಳ್ವಾಸ್ ಸಂಸ್ಥೆಯ ಶ್ರೇಯ. ಸಾಂಸ್ಕೃತಿಕ ಶಿಕ್ಷಣವು ವ್ಯಕ್ತಿತ್ವ ವಿಕಸನಕ್ಕೆ ಸ್ಫೂರ್ತಿಯಾಗಿದೆ. ಸಂಗೀತ ಹಾಗೂ ಕಲೆ ಎಲ್ಲರಿಗೂ ಖುಷಿ ನೀಡುತ್ತದೆ ಎಂದು ಅವರು ಶ್ಲಾಘಿಸಿದರು.

ಜಗತ್ತಿನ ಪ್ರಮುಖ ಐದು ಅಭಿವೃದ್ಧಿಶೀಲ ರಾಷ್ಟ್ರಗಳು ಮಾತೃಭಾಷೆಯಲ್ಲಿ ಶಿಕ್ಷಣ ನೀಡುತ್ತಿವೆ. ಆಳ್ವಾಸ್ ಮಾತೃಭಾಷೆ ವೃದ್ಧಿಗೆ ಇನ್ನಷ್ಟು ಕೊಡುಗೆ ನೀಡಲಿ ಎಂದು ಶುಭ ಹಾರೈಸಿದರು. ಮೂರೂವರೆ ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಕ್ರೀಡಾ ತರಬೇತಿ ಮೂಲಕ ಆಳ್ವಾಸ್ ದೇಶದ ಕೀರ್ತಿ ಎತ್ತಿ ಹಿಡಿದಿದೆ. ಇಂತಹ ಪ್ರಯತ್ನಗಳಿಂದ ಒಲಿಂಪಿಕ್ ನಂತಹ ಕ್ರೀಡೆಯಲ್ಲಿ ಭಾರತ ಯಶಸ್ಸು ಸಾಧಿಸುತ್ತಿದೆ ಎಂದರು.

ಆಳ್ವಾಸ್​ ವಿರಾಸತ್ ಸಾಂಸ್ಕೃತಿಕ ಕಾರ್ಯಕ್ರಮ
ಆಳ್ವಾಸ್​ ವಿರಾಸತ್ ಸಾಂಸ್ಕೃತಿಕ ಕಾರ್ಯಕ್ರಮ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ವಿರಾಸತ್ ಜ್ಞಾನ ಜಾತ್ರೆ. ಇಲ್ಲಿ ವಿಜ್ಞಾನ ಹಾಗೂ ಜ್ಞಾನವನ್ನು ನೀಡಲಾಗುತ್ತಿದೆ. ಮೋಹನ ಆಳ್ವ ಜ್ಞಾನದ ಮಹಾಯಾಗ ಮಾಡುತ್ತಿದ್ದಾರೆ. ಬಡ ರಾಷ್ಟ್ರ ಆಗಿದ್ದ ಭಾರತ ಇಂದು ಹಿಂದಿಯ 'ಬಡಾ'(ದೊಡ್ಡ) ರಾಷ್ಟ್ರವಾಗಿ ಬೆಳೆಯುತ್ತಿದೆ. ಡಾ.ಎಂ.ಮೋಹನ ಆಳ್ವ ಅವರಂತಹ ಸಾಂಸ್ಕೃತಿಕ ನಾಯಕರಿಂದ ಇದು ಸಾಧ್ಯವಾಗಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಸಂಸ್ಕೃತಿ ಹಾಗೂ ಸಂಸ್ಕಾರ ದೊರೆಯುತ್ತಿದೆ. ಇಲ್ಲಿನ ವಿದ್ಯಾರ್ಥಿಗಳು ಅದೃಷ್ಟವಂತರು. ಆಳ್ವಾರ ಕಾರ್ಯಕ್ಕೆ ಸಹಸ್ರ ಬಾಹುಗಳ
ಶಕ್ತಿಯನ್ನು ನಾವೆಲ್ಲ ನೀಡುತ್ತೇವೆ ಎಂದು ಭರವಸೆ ನೀಡಿದರು.

ಆಳ್ವಾಸ್​ ವಿರಾಸತ್ ಸಾಂಸ್ಕೃತಿಕ ಕಾರ್ಯಕ್ರಮ
ಆಳ್ವಾಸ್​ ವಿರಾಸತ್ ಸಾಂಸ್ಕೃತಿಕ ಕಾರ್ಯಕ್ರಮ

ಅತಿಥಿಗಳನ್ನು ಸ್ವಾಗತಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್​ ಆಳ್ವ, ಹುತಾತ್ಮ ಯೋಧ ಪ್ರಾಂಜಲ್ ಹಾಗೂ ಆಳ್ವಾಸ್ ಸಂಸ್ಥೆಯ ಸಂಬಂಧವನ್ನು ಸ್ಮರಿಸಿ ಭಾವುಕರಾದರು. ಇದೇ ಸಂದರ್ಭದಲ್ಲಿ ಅನ್ವೇಷಣಾತ್ಮಕ ರೈತ, ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ಅವರ ಅಂಚೆ ಪೋಸ್ಟರ್ ಬಿಡುಗಡೆ ಮಾಡಲಾಯಿತು.

ಇದಕ್ಕೂ ಮೊದಲು 29ನೇ ವಿರಾಸತ್‌ನ ವಿಶೇಷವಾಗಿ ಸಾಂಸ್ಕೃತಿಕ ರಥವು ವೇದಘೋಷಗಳ ನಿನಾದ, ಭಜನೆಗಳು, ಪುಷ್ಪ ಪಲ್ಲಕ್ಕಿಗಳು, ಪ್ರೇಕ್ಷಕರ ಜಯ ಘೋಷ ಹಾಗೂ ಮಂಗಳವಾದ್ಯಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ನಡೆಯಿತು. ಲೋಕ ಮಾರ್ಗದರ್ಶಕರಾದ ರಾಮ - ಕೃಷ್ಣರ ಮೂರ್ತಿ ಪ್ರತಿಷ್ಠಾಪಿಸಿದ ಸಾಂಸ್ಕೃತಿಕ ರಥವನ್ನು ಎಳೆಯಲಾಯಿತು. ಪಲ್ಲಕ್ಕಿಯಲ್ಲಿ ಶಕ್ತಿ ಮತ್ತು ಭಕ್ತಿಯ ಪ್ರತೀಕವಾಗಿ ಹನುಮಂತ, ಸಂಪತ್ತಿನ ಧ್ಯೋತಕವಾದ ಮಹಾಲಕ್ಷ್ಮಿ ಹಾಗೂ ವಿದ್ಯಾಮಾತೆ ಮಹಾ ಸರಸ್ವತಿ ಮೂರ್ತಿಗಳನ್ನು ಕರೆ ತರಲಾಯಿತು.

ಆಳ್ವಾಸ್​ ವಿರಾಸತ್ ಸಾಂಸ್ಕೃತಿಕ ಕಾರ್ಯಕ್ರಮ
ಆಳ್ವಾಸ್​ ವಿರಾಸತ್ ಸಾಂಸ್ಕೃತಿಕ ಕಾರ್ಯಕ್ರಮ

ರಥಯಾತ್ರೆಯ ಮುಂಭಾಗದಲ್ಲಿ ಮೈಸೂರು, ಪಂಡರಾಪುರ ಹಾಗೂ ಮಂಗಳೂರು ಹರೇಕೃಷ್ಣ ಪಂಥದ ಭಜನಾ ತಂಡಗಳ ಭಜನೆ ಹಾಡಿನ ಮೂಲಕ ಭಕ್ತಿ ಪ್ರಭಾವಳಿ ಮೂಡಿಸಿದರು. 15 ಅರ್ಚಕರು ಮಂತ್ರ ಘೋಷ ಮಾಡಿದರು. ಕೊಂಬು, ಕಹಳೆ ನಾದ ಮೊಳಗಿದವು. ಹರಿದ್ವಾರದಿಂದ ಬಂದ ವಿಪುಲ್ ಶರ್ಮಾ ನೇತೃತ್ವದ ಗಂಗಾರತಿ ತಂಡವು ಮಂತ್ರ ಘೋಷಗಳೊಂದಿಗೆ ಆರತಿ ಬೆಳಗಿದಾಗ ಶ್ರದ್ಧೆ ಭಕ್ತಿಯ ಪ್ರಜ್ವಲನವಾಯಿತು.

ಆಳ್ವಾಸ್​ ವಿರಾಸತ್ ಸಾಂಸ್ಕೃತಿಕ ಕಾರ್ಯಕ್ರಮ
ಆಳ್ವಾಸ್​ ವಿರಾಸತ್ ಸಾಂಸ್ಕೃತಿಕ ಕಾರ್ಯಕ್ರಮ

ಕಾರ್ಯಕ್ರಮದಲ್ಲಿ ಮೂಲ್ಕಿ- ಮೂಡಬಿದಿರೆಯ ವಿಧಾನಸಭಾ ಕ್ಷೇತ್ರ ಶಾಸಕ ಉಮಾನಾಥ ಎ.ಕೋಟ್ಯಾನ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಎಂ.ಪಿ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಭಾರತ್ ಸ್ಕೌಟ್ಸ್ ಗೈಡ್ಸ್ ಕರ್ನಾಟಕ ರಾಜ್ಯ ಆಯುಕ್ತ, ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯ, ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ: ಗೋಕರ್ಣ ಮಹಾಬಲೇಶ್ವರನ ದರ್ಶನ ಪಡೆದ ರಾಜ್ಯಪಾಲರು.. ವಿಶೇಷ ಪೂಜೆ ಸಲ್ಲಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.