ETV Bharat / state

ಕಡಬದಿಂದ ಸೆರೆ ಹಿಡಿದ 50 ವರ್ಷದ ಗಂಡು ಕಾಡಾನೆ ಬಹು ಅಂಗಾಂಗ ವೈಫಲ್ಯದಿಂದ ಸಾವು

author img

By

Published : Aug 13, 2023, 9:28 AM IST

Updated : Aug 13, 2023, 10:08 AM IST

ಕಡಬದಲ್ಲಿ ಸೆರೆ ಹಿಡಿಯಲಾಗಿದ್ದ 50 ವರ್ಷದ ಕಾಡಾನೆ ಕಾಲು ವಾತದಿಂದ ಸಾವನ್ನಪ್ಪಿದೆ.

died wild elephant
ಮೃತ ಕಾಡಾನೆ

ಕಡಬ (ದಕ್ಷಿಣ ಕನ್ನಡ): ಕಡಬ ತಾಲೂಕಿನ ಕೊಂಬಾರು ಸಮೀಪದಿಂದ ಸೆರೆ ಹಿಡಿಯಲಾಗಿದ್ದ 50 ವರ್ಷ ಪ್ರಾಯದ ಗಂಡು ಕಾಡಾನೆ ಕೊಡಗಿನ ಮತ್ತಿಗೋಡು ಆನೆ ಶಿಬಿರದಲ್ಲಿ ಬಹು ಅಂಗಾಂಗ ವೈಫಲ್ಯ ಮತ್ತು ಕಾಲಿನ ವಾತ ಕಾಯಿಲೆಯಿಂದ ಮೃತಪಟ್ಟಿದೆ.

ಕಡಬದ ರೆಂಜಿಲಾಡಿಯ ನೈಲಾ ಎಂಬಲ್ಲಿ ಕಳೆದ ಫೆಬ್ರವರಿ 20ರಂದು ಬೆಳಗ್ಗೆ ಹಾಲು ಸಂಗ್ರಹ ಕೇಂದ್ರಕ್ಕೆ ಆಗಮಿಸುತ್ತಿದ್ದ ರಂಜಿತಾ (24) ಹಾಗೂ ಅವರ ರಕ್ಷಣೆಗೆ ಆಗಮಿಸಿದ ರಮೇಶ್ ರೈ (58) ಎಂಬವರನ್ನು ಕಾಡಾನೆಗಳು ದಾಳಿ ಮಾಡಿ ಸಾಯಿಸಿದ್ದವು. ಇದರ ನಂತರದಲ್ಲಿ ಕೊಂಬಾರು ಭಾಗದ ಮಂಡೆಕರ ಎಂಬಲ್ಲಿಂದ ದಾಳಿ ಮಾಡಿದ ಆನೆ ಎಂದು ಸೆರೆ ಹಿಡಿಯಲಾಗಿದ್ದ ಗಂಡು ಕಾಡಾನೆಯನ್ನು ಕೊಡಗಿನ ಮತ್ತಿಗೋಡು ಆನೆ ಶಿಬಿರಕ್ಕೆ ಸೇರಿಸಲಾಗಿತ್ತು. ಈ ಕಾಡಾನೆ ಆಗಸ್ಟ್ 11ರ ಶುಕ್ರವಾರ ಮೃತಪಟ್ಟಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಈಟಿವಿ ಭಾರತದ ಜೊತೆಗೆ ಮಾತನಾಡಿದ ಎಸಿಎಫ್ ದಯಾನಂದ್ ಅವರು ಐವತ್ತು ವರ್ಷದ ಗಂಡು ಕಾಡಾನೆಯನ್ನು ನಮ್ಮಲ್ಲಿಗೆ ತಂದ ನಂತರದಲ್ಲಿ ಪಳಗಿಸುವ ಕಾರ್ಯ ನಡೆದಿತ್ತು. ಇದಕ್ಕೆ ಸುಬ್ರಮಣಿ ಎಂದು ಮರುನಾಮಕರಣ ಮಾಡಲಾಗಿತ್ತು. ಆನೆಯು ಸಂಪೂರ್ಣವಾಗಿ ಪಳಗಿದ ನಂತರದಲ್ಲಿ ಜುಲೈ 20ರಂದು ಕ್ರಾಲ್‌ನಿಂದ ಬಂಧನ ಮುಕ್ತಗೊಳಿಸಲಾಗಿತ್ತು.

ಮಾವುತರಾದ ಶಿವು, ಕಾವಾಡಿಗ ಚಂದ್ರ ಅವರ ಉಸ್ತುವಾರಿಯಲ್ಲಿ ಕಳೆದ 20 ದಿನಗಳಿಂದ ಇತರ ಸಾಕಾನೆಗಳ ಜೊತೆಗೆ ಸೇರಿಸಿ ತರಬೇತಿ ನೀಡಲಾಗುತ್ತಿದ್ದು, ಆದರೆ ಕಾಲಿನ ವಾತ ಇರುವ ಕಾರಣದಿಂದ ಇರಬಹುದು ಆಗಸ್ಟ್ 11ರಂದು ಇದ್ದಕ್ಕಿದ್ದ ಹಾಗೆ ಆನೆ ಸುಬ್ರಮಣಿ ಸಂಪೂರ್ಣ ಅಸ್ವಸ್ಥಗೊಂಡಿತ್ತು.

ಈ ಸಮಯದಲ್ಲಿ ಡಾ.ರಮೇಶ್, ಡಾ.ಮದನ್ ಗೋಪಾಲ್, ಡಾ.ಚೆಟ್ಟಿಯಪ್ಪ ಅವರ ನೇತೃತ್ವದಲ್ಲಿ ಚಿಕಿತ್ಸೆ ನೀಡಿದರೂ ಆನೆ ಗುಣಮುಖವಾಗದೇ ಮೃತಪಟ್ಟಿದೆ ಎಂದು ಹೇಳಿದರು. ಡಿಸಿಎಫ್ ಹರ್ಷಕುಮಾರ್, ಎಸಿಎಫ್ ದಯಾನಂದ್, ಆರ್‌ಎಫ್‌ಓ ದಿಲೀಪ್ ಕುಮಾರ್ ಅವರ ಸಮ್ಮುಖದಲ್ಲಿ ಆನೆ ಸುಬ್ರಮಣಿ ಶವ ಮಹಜರು ನಡೆಸಿ ಅಂತ್ಯ ಸಂಸ್ಕಾರ ಮಾಡಲಾಗಿದೆ.

ಇದನ್ನೂ ಓದಿ: ದಿನಸಿ ಅಂಗಡಿ ಬಾಗಿಲು ಮುರಿದು ಬಾಳೆಗೊನೆ, ಟೊಮೆಟೊ ತಿಂದ ಗಜರಾಜ - ವಿಡಿಯೋ

ವಿಶ್ವ ಆನೆ ದಿನದಂದೇ ಕಾಡಾನೆ ಸಾವು: ಚಾಮರಾಜನಗರದ ಹನೂರು ತಾಲೂಕಿನ ಗೋಪಿನಾಥಂ ಗ್ರಾಮದಲ್ಲಿ ಶನಿವಾರ(12/08/2023)ರಂದು ಅನುಮಾನಾಸ್ಪದವಾಗಿ ಮೃತಪಟ್ಟಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ವಿದ್ಯುತ್​ ಸ್ಪರ್ಶಿಸಿ ಕಾಡಾನೆ ಸಾವು: ಮೈಸೂರಿನಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ಡಿ ಬಿ.ಕುಪ್ಪೆ ಅರಣ್ಯ ವಲಯದ ಬಳಿ ಅದೇ ಗ್ರಾಮದ ಮೈಸೂರು-ಮಾನಂದವಾಡಿ ಹೆದ್ದಾರಿಯ ಪಕ್ಕದಲ್ಲಿದ್ದ ಉದಯ್ ಎಂಬುವವರು ತಮ್ಮ ಜಮೀನಿನಲ್ಲಿ ಸೋಲಾರ್ ತಂತಿ ಬೇಲಿಯನ್ನು ಅಳವಡಿಸಿದ್ದು, ಆ ಸೋಲಾರ್ ಬೇಲಿಗೆ ಅಕ್ರಮವಾಗಿ ತಮ್ಮ ಮನೆಯಿಂದ ವಿದ್ಯುತ್ ಸಂಪರ್ಕ ನೀಡಿದ್ದರು. ಈ ಸೋಲಾರ್ ಮೇಲೆ ಬೆಳೆದಿದ್ದ ಸೊಪ್ಪು ತಿನ್ನಲು ಕಾಡಾನೆ ತನ್ನ ಸೊಂಡಿಲನ್ನು ಹಾಕಿದೆ. ಇದರಿಂದ ಕೂಡಲೇ ವಿದ್ಯುತ್ ಸ್ಪರ್ಶಕ್ಕೀಡಾಗಿ 35 ವರ್ಷದ ಗಂಡಾನೆ ಸಾವನ್ನಪ್ಪಿತ್ತು.​

ಇದನ್ನೂ ಓದಿ: ಚಿಕ್ಕಮಗಳೂರು: ಅರಣ್ಯ ಸಿಬ್ಬಂದಿಯನ್ನು ಅಟ್ಟಿಸಿಕೊಂಡು ಬಂದ ಕಾಡಾನೆ

Last Updated : Aug 13, 2023, 10:08 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.