ETV Bharat / state

ದಕ್ಷಿಣ ಕನ್ನಡ: ಚಲಿಸುತ್ತಿದ್ದ ಕಾರು, ಅಂಗಡಿ ಮೇಲೆ ಬಿದ್ದ ಬೃಹತ್‌ ಗಾತ್ರದ ಮರ; ಹಲವರಿಗೆ ಗಂಭೀರ ಗಾಯ

author img

By ETV Bharat Karnataka Team

Published : Jan 8, 2024, 6:49 PM IST

Updated : Jan 8, 2024, 7:14 PM IST

Etv Bharata-large-tree-falls-down-on-a-car-and-road-side-shop-in-dakshina-kannada
ದಕ್ಷಿಣ ಕನ್ನಡ: ಚಲಿಸುತ್ತಿದ್ದ ಕಾರು, ಅಂಗಡಿ ಮೇಲೆ ಬಿದ್ದ ಬೃಹತ್‌ ಗಾತ್ರದ ಮರ; ಹಲವರಿಗೆ ಗಂಭೀರ ಗಾಯ

ಚಲಿಸುತ್ತಿದ್ದ ಟಾಟಾ ಸುಮೋ ಹಾಗೂ ಅಂಗಡಿಯೊಂದರ ಮೇಲೆ ಬೃಹತ್ ಗಾತ್ರದ ಮರ ಬಿದ್ದಿರುವ ಘಟನೆ ಕುಕ್ಕೆ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೈಕಂಬದಲ್ಲಿ ನಡೆದಿದೆ. ಟೊಳ್ಳಾಗಿರುವ ಮರಗಳ ತೆರವಿಗೆ ಒತ್ತಾಯ ಕೇಳಿಬಂದಿದೆ.

ಕಾರು, ಅಂಗಡಿ ಮೇಲೆ ಬಿದ್ದ ಬೃಹತ್‌ ಗಾತ್ರದ ಮರ

ಮಂಗಳೂರು (ದಕ್ಷಿಣ ಕನ್ನಡ): ಚಲಿಸುತ್ತಿದ್ದ ಟಾಟಾ ಸುಮೋ ಹಾಗೂ ಅಂಗಡಿಯೊಂದರ ಮೇಲೆ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಹಲವರು ಗಾಯಗೊಂಡ ಘಟನೆ ಕುಕ್ಕೆ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೈಕಂಬದಲ್ಲಿ ನಡೆದಿದೆ.

ಪ್ರವಾಸಿಗರನ್ನು ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಿಟ್ಟು ವಾಪಸ್​ ಆಗುತ್ತಿದ್ದ ಟಾಟಾ ಸುಮೋ ಹಾಗೂ ಅಂಗಡಿಯ ಮೇಲೆ ಮರ ಬಿದ್ದಿದೆ. ಘಟನೆಯಲ್ಲಿ ಎರಡಕ್ಕೂ ಹೆಚ್ಚು ಮಂದಿಗೆ ಗಾಯಗಳಗಿದ್ದು, ಕಾರಿನಲ್ಲಿದ್ದ ಮೂಜೂರು ನಿವಾಸಿ ಶೇಖರ್​ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಅಂಗಡಿ ಸಂಪೂರ್ಣ ಜಖಂಗೊಂಡಿದೆ. ಗಾಯಾಳುಗಳನ್ನು ಆಸ್ಪತ್ರಗೆ ದಾಖಲಿಸಲಾಗಿದೆ.

ಲೋಕೋಪಯೋಗಿ ಇಲಾಖೆ ರಸ್ತೆ ಅಗಲೀಕರಣ ಮಾಡುತ್ತಿದ್ದು, ಈ ವೇಳೆ ರಸ್ತೆ ಬದಿಯಲ್ಲಿನ ಟೊಳ್ಳಾಗಿರುವ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಅನುಮತಿ ನೀಡದಿರುವುದೇ ಇಂತಹ ದುರಂತಗಳ ಪದೇ ಪದೆ ಮರುಕಳಿಸಲು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಟೊಳ್ಳಾಗಿರುವ ಮರಗಳ ತೆರವಿಗೆ ಅರಣ್ಯ ಇಲಾಖೆ ಆದೇಶಿಸಬೇಕು: ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಸುಬ್ರಹ್ಮಣ್ಯ ಲೋಕೋಪಯೋಗಿ ಇಲಾಖೆ ಅಧಿಕಾರಿ ಪ್ರಮೋದ್, "ನಾವು ಇಂತಹ ಟೊಳ್ಳಾಗಿರುವ ಮರಗಳ ತೆರವಿಗೆ ಅರಣ್ಯ ಇಲಾಖೆಗೆ ಹಲವಾರು ಬಾರಿ ಮನವಿಗಳನ್ನು ನೀಡಿದ್ದೇವೆ. ಆದರೆ ನಮಗೆ ಮರ ತೆರವಿಗೆ ಅನುಮತಿ ದೊರೆಯುತ್ತಿಲ್ಲ. ರಸ್ತೆ ಬದಿಯಿಂದ ಸುಮಾರು ಒಂಬತ್ತು ಮೀಟರ್‌ಗಳಷ್ಟು ದೂರದಲ್ಲಾದರೂ ಮರಗಳು ಇದ್ದರೆ, ಯಾವುದೇ ತೊಂದರೆ ಇಲ್ಲ. ಆದರೆ ಈ ಕಡೆಗಳಲ್ಲಿ ರಸ್ತೆ ಪಕ್ಕದಲ್ಲೇ ಮರಗಳಿವೆ. ಅರಣ್ಯ ಇಲಾಖೆ ಟೊಳ್ಳಾಗಿರುವ ಮರಗಳ ತೆರವಿಗೆ ಆದೇಶ ನೀಡಿದರೆ ಇಂತಹ ಘಟನೆಗಳು ಮರುಕಳಿಸಲ್ಲ" ಎಂದು ಹೇಳಿದರು.

ಸುಬ್ರಹ್ಮಣ್ಯ ವಲಯ ಅರಣ್ಯ ಅಧಿಕಾರಿ ವಿಮಲ್ ಮಾತನಾಡಿ, "ಲೋಕೋಪಯೋಗಿ ಇಲಾಖೆ ತೆರವಿಗೆ ಸೂಚಿಸಿದ ಬಹುತೇಕ ಮರಗಳನ್ನು ತೆರವು ಮಾಡಲಾಗಿದೆ. ರಸ್ತೆ ಅಗಲೀಕರಣದ ಬಳಿಕ ಕೆಲ ಮರಗಳು ರಸ್ತೆ ಬದಿಗೆ ಬಂದಿವೆ, ಇದನ್ನು ಅಪಾಯಕಾರಿ ಮರ ಅಂತ ಪರಿಗಣಿಸಲು ಸಾಧ್ಯವಿಲ್ಲ. ಅದು ಅಡಚಣೆ ಮರಗಳ ಪಟ್ಟಿಗೆ ಬರುತ್ತದೆ. ಆದರೂ ಹಲವು ಕಡೆಗಳಲ್ಲಿ ಅಪಾಯಕಾರಿ ಮರಗಳು ಗಮನಕ್ಕೆ ಬಂದಿವೆ. ಆಯಾ ಪ್ರದೇಶದ ಪಂಚಾಯಿತಿಗಳೂ ಇಂತಹ ಮರಗಳ ತೆರವಿಗೆ ಮನವಿ ನೀಡಬೇಕಾಗಿದೆ. ರಸ್ತೆ ಬದಿಯ ಕೆಲ ಮರಗಳನ್ನು ತೆರವುಗೊಳಿಸಲು ಇಲಾಖೆಯ ಉನ್ನತ ಅಧಿಕಾರಿಗಳ ಅನುಮತಿಗೆ ಪತ್ರ ಬರೆಯಲಾಗಿದೆ. ಅವರು ಅನುಮತಿ ನೀಡಿದರೆ ಕೂಡಲೇ ತೆರವಿಗೆ ಕ್ರಮ ಕೈಗೊಳ್ಳಲಾಗುವುದು" ಎಂದು ಹೇಳಿದರು.

ಇದನ್ನೂ ಓದಿ: ಚಿಕ್ಕಮಗಳೂರು: ಅಯ್ಯಪ್ಪ ಭಕ್ತರಿದ್ದ ಬಸ್​ ಪಲ್ಟಿ, 15 ಜನರಿಗೆ ಗಾಯ

Last Updated :Jan 8, 2024, 7:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.