ಚಿತ್ರದುರ್ಗ : ಕಣ್ಣಿಗೆ ಕಾಣದ ವೈರಸ್ ಭೀತಿ ನಡುವೆಯೂ ಜಿಲ್ಲಾದ್ಯಂತ ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಲಾಯಿತು. ಕೋಟಿನಾಡಿನ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಪ್ರವಾಸಿಗರು ತಂಡೋಪ ತಂಡವಾಗಿ ಬಂದಿದ್ದರು.
ಕೋವಿಡ್ ಹಿನ್ನೆಲೆ ನಿರ್ಬಂಧವಿದ್ದ ಕಾರಣ ಬಹುತೇಕರು ಮನೆಯಲ್ಲೇ ಕೇಕ್ ಕತ್ತರಿಸಿ, ತರಹೇವಾರಿ ಭೋಜನಗಳನ್ನು ಸವಿದು ಹೊಸ ವರ್ಷವನ್ನು ಸ್ವಾಗತಿಸಿದರು. ಇನ್ನು ಕೆಲವರು ವೀರವನಿತೆ ಓಬವ್ವನ ಕೋಟೆ, ದೇವಾಲಯಗಳು, ಮುರುಘಾ ಮಠ ಸೇರಿದಂತೆ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿ ವರ್ಷದ ಮೊದಲ ದಿನವನ್ನು ಸಂಭ್ರಮಿಸಿದರು.
ಇದನ್ನೂ ಓದಿ...ಜ.3ರಂದು ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯ ವಿಶೇಷ ಕಾರ್ಯಕಾರಿಣಿ ಸಭೆ
ಪ್ರವಾಸಿಗರು ಮುಂಜಾನೆಯಿಂದಲೇ ಕೋಟೆ ವೀಕ್ಷಣೆಗೆ ಮುಗಿಬಿದ್ದದ್ದು, ಕೋಟೆಯ ಮೆರಗನ್ನು ಹೆಚ್ಚಿಸಿತು. ಲಾನ್ಡೌನ್ ಬಳಿಕ ಕೋಟೆನಾಡಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಹರಿದು ಬರುತ್ತಿರುವುದು ಪ್ರವಾಸೋದ್ಯಮಕ್ಕೆ ಆದಾಯ ಹೆಚ್ಚಿಸಿದಂತಾಗಿದೆ. ದೂರದೂರುಗಳಿಂದ ಬಂದ ಪ್ರವಾಸಿಗರು ಇತಿಹಾಸ ಸಾರುವ ಕಲ್ಲಿನ ಕೋಟೆಯಲ್ಲೇ ಕೇಕ್ ಕತ್ತರಿಸಿ ಹೊಸ ವರ್ಷ ಆಚರಿಸಿದರು.
ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸ : ಲಾಕ್ಡೌನ್ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹರಿದು ಬರುತ್ತಿರುವುದರಿಂದ ಕೋಟೆಗೆ ಹೊಸ ಕಳೆ ಬಂದಂತಾಗಿದೆ. ಯುವ ಸಮೂಹ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದ ದೃಶ್ಯ ಕಾಣಿಸುತ್ತಿದ್ದವು. ರಸ್ತೆ ಬದಿಯಲ್ಲಿ ಸಿಗುತ್ತಿದ್ದ ತಿಂಡಿ-ತಿನಿಸುಗಳ ವ್ಯಾಪಾರ ಭರ್ಜರಿಯಾಗಿತ್ತು. ವ್ಯಾಪಾರಸ್ಥರ ಮೊಗದಲ್ಲೂ ಮಂದಹಾಸ ಹೆಚ್ಚಿತ್ತು.
ಕೋತಿರಾಜ್ ಮನರಂಜನೆ : ನೂತನ ವರ್ಷದ ಮೊದಲ ದಿನವನ್ನು ಅತ್ಯಂತ ಖುಷಿಯಿಂದ ಸಂಭ್ರಮಿಸಬೇಕು ಎಂದುಕೊಂಡವರಿಗೆ ಕೋತಿರಾಜ್ ಎಂದು ಖ್ಯಾತಿ ಪಡೆದ ಜ್ಯೋತಿರಾಜ್ ಮತ್ತಷ್ಟು ಮನರಂಜಿಸಿದರು. ಕೋಟೆಯ ಬೆಟ್ಟ, ಬಂಡೆಗಳು ಹಾಗೂ ಕಂಬಗಳನ್ನು ಸರಸರನೇ ಏರಿ ಪ್ರವಾಸಿಗರನ್ನು ಆಶ್ಚರ್ಯಚಕಿತರಾಗುವಂತೆ ಮಾಡಿದರು. ಪ್ರವಾಸಿಗರೂ ಅವರ ಸಾಹಸವನ್ನು ಕಣ್ತುಂಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು.
ಕೋವಿಡ್ ನಿಯಮಗಳು ಗಾಳಿಗೆ : ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯ ಎಂದು ಸರ್ಕಾರ ಹೇಳಿತ್ತು. ಆದರೆ, ಕಲ್ಲಿನಕೋಟೆಯಲ್ಲಿ ಅದ್ಯಾವುದು ಪಾಲಿಸಿದ್ದು ಕಣ್ಣಿಗೆ ಕಾಣಲಿಲ್ಲ. ಮಾಸ್ಕ್ ಧರಿಸದೆ, ದೈಹಿಕ ಅಂತರ ಕಾಯ್ದುಕೊಳ್ಳದೇ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ತಮ್ಮದೇ ಲೋಕದಲ್ಲಿ ಪ್ರವಾಸಿಗರಿದ್ದರು. ಇದು ವೈರಸ್ ಹೆಚ್ಚಳದ ಭೀತಿಗೂ ಕಾರಣವಾಯಿತು. ಟಿಕೆಟ್ ಕೌಂಟರ್ ಮುಂದೆಯೂ ಒಬ್ಬರಿಗೊಬ್ಬರು ಅಂಟಿಕೊಂಡಂತೆ ನಿಂತುಕೊಂಡ ದೃಶ್ಯ ಸಾಮಾನ್ಯವಾಗಿತ್ತು.