ETV Bharat / state

ಚಿತ್ರದುರ್ಗ: ಬಿಸಿಯೂಟ ಸೇವಿಸಿ 60 ಮಕ್ಕಳಿಗೆ ವಾಂತಿ-ಭೇದಿ, ಆಸ್ಪತ್ರೆಗೆ ದಾಖಲು

author img

By ETV Bharat Karnataka Team

Published : Dec 28, 2023, 9:14 AM IST

Updated : Dec 28, 2023, 12:49 PM IST

mid day meals: ಬಿಸಿಯೂಟ ಸೇವಿಸಿ 60 ವಿದ್ಯಾರ್ಥಿಗಳು ಅಸ್ವಸ್ಥಕ್ಕೀಡಾದ ಘಟನೆ ಚಿತ್ರದುರ್ಗದ ಬೀರಾವರದಲ್ಲಿ ನಡೆದಿದೆ.

ಬಿಸಿಯೂಟ ಸೇವಿಸಿ 60 ಮಕ್ಕಳಿಗೆ ವಾಂತಿ-ಭೇದಿ
ಬಿಸಿಯೂಟ ಸೇವಿಸಿ 60 ಮಕ್ಕಳಿಗೆ ವಾಂತಿ-ಭೇದಿ

ಚಿತ್ರದುರ್ಗ: ತಾಲೂಕಿನ ಬೀರಾವರ ಗ್ರಾಮದಲ್ಲಿ ಬಿಸಿಯೂಟ ಸೇವಿಸಿದ ನಂತರ ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಬುಧವಾರ ನಡೆದಿದೆ. ತಕ್ಷಣವೇ ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಯಾವುದೇ ಅನಾಹುತ ನಡೆದಿಲ್ಲ ಎಂದು ತಿಳಿದುಬಂದಿದೆ.

ಬೀರಾವರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂದಿನಂತೆ ನಿನ್ನೆಯೂ ಬಿಸಿಯೂಟ ತಯಾರಿಸಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಬಡಿಸಲಾಗಿತ್ತು. ಬಳಿಕ ಅಡುಗೆಯಲ್ಲಿ ಏನೋ ಹೆಚ್ಚು ಕಡಿಮೆಯಾಗಿ 60 ವಿದ್ಯಾರ್ಥಿಗಳು ಶಾಲೆಯಲ್ಲೇ ಅಸ್ವಸ್ಥರಾದ ಪರಿಣಾಮ ಆತಂಕ ಉಂಟಾಯಿತು. ತಕ್ಷಣವೇ ಎಲ್ಲ ಮಕ್ಕಳನ್ನು ಶಿಕ್ಷಕರು ಜಿಲ್ಲಾಸ್ಪತ್ರೆಗೆ ರವಾನಿಸಿದರು.

ಶಾಲೆಯಲ್ಲಿ ನೀಡಿದ ಬಿಸಿಯೂಟ ಸೇವನೆ ಮಾಡಿದ ಬಳಿಕ ವಿದ್ಯಾರ್ಥಿಗಳಿಗೆ ವಾಂತಿ, ಭೇದಿ ಶುರುವಾಗಿದೆ. ಅಸ್ವಸ್ಥ ವಿದ್ಯಾರ್ಥಿಗಳು ಸದ್ಯ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಡುಗೆಯಲ್ಲಿ ಏನಾದರೂ ವ್ಯತ್ಯಾಸವಾಗಿದೆಯಾ ಎಂಬುದು ಗೊತ್ತಿಲ್ಲ ಎಂದು ಪೋಷಕರೊಬ್ಬರು ಹೇಳಿದ್ದಾರೆ.

ಮಕ್ಕಳ ಆರೋಗ್ಯ ಸ್ಥಿರವಾಗಿದ್ದು, ಪ್ರತ್ಯೇಕ ವಾರ್ಡ್‌ಗಳಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಕಲುಷಿತ ಆಹಾರ ಸೇವನೆಯಿಂದ ವಾಂತಿ-ಭೇದಿ ಕಾಣಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇಂದೇ ಎಲ್ಲರನ್ನೂ ಡಿಸ್ಚಾರ್ಜ್​ ಮಾಡಲಾಗುವುದು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಶಾಲೆಯಲ್ಲಿ ಮಧ್ಯಾಹ್ನ 12.45ಕ್ಕೆ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡಲಾಗಿದೆ. ಊಟ ಸೇವಿಸಿದ ಒಂದೂವರೆ ಗಂಟೆಯ ಬಳಿಕ ನಾಲ್ವರು ವಿದ್ಯಾರ್ಥಿಗಳಲ್ಲಿ ವಾಂತಿ- ಭೇದಿ ಕಾಣಿಸಿಕೊಂಡಿದೆ. ಬಳಿಕ ಮತ್ತೆ ಕೆಲವು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದರಿಂದ ಆಂಬ್ಯುಲೆನ್ಸ್‌ ಮೂಲಕ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿದೆ. ಶಾಲೆ ಮುಗಿಸಿ ಮನೆಗೆ ಮರಳಿದ ಬಳಿಕ ಮತ್ತಷ್ಟು ವಿದ್ಯಾರ್ಥಿಗಳಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು.

ಬೀದರ್ ಘಟನೆ: ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವನೆ ಮಾಡಿದ್ದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದ ಘಟನೆ ಬೀದರ್ ಜಿಲ್ಲೆಯ ಹುಮನಾಬಾದ್​ ತಾಲೂಕಿನ ನಿಂಬೂರ್ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಈಚೆಗೆ ನಡೆದಿತ್ತು. ಊಟ ಮಾಡಿದ್ದರಿಂದ ಹೊಟ್ಟೆ ನೋವು, ವಾಂತಿ- ಭೇದಿ ಕಾಣಿಸಿಕೊಂಡ ಮಕ್ಕಳನ್ನು ಪಟ್ಟಣದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.

ಮೊದಲು ಕೆಲವೇ ವಿದ್ಯಾರ್ಥಿಗಳಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ನಂತರ ಮನೆಗೆ ತೆರಳಿದ ಬಳಿಕ ಉಳಿದ ವಿದ್ಯಾರ್ಥಿಗಳಲ್ಲಿಯೂ ವಾಂತಿ ಭೇದಿ ಶುರುವಾಗಿತ್ತು. ಆತಂಕಕ್ಕೀಡಾದ ಪೋಷಕರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದರು. ವಿಷಯ ತಿಳಿದ ಶಾ‌ಸಕ ಡಾ.ಸಿದ್ದಲಿಂಗಪ್ಪ ಪಾಟೀಲ್​, ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ್​ ಪಾಟೀಲ್​, ಭೀಮರಾವ್​ ಪಾಟೀಲ್​ ಭೇಟಿ ನೀಡಿ ‌ವೈದ್ಯರೊಂದಿಗೆ ಚರ್ಚಿಸಿ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದರು.

ಇದನ್ನೂ ಓದಿ: ಸರ್ಕಾರಿ ಬಸ್​ ಅಪಘಾತದಲ್ಲಿ ಮೃತಪಟ್ಟವರಿಗೆ ₹10 ಲಕ್ಷ: ಪರಿಹಾರ ಮೊತ್ತ ಹೆಚ್ಚಿಸಿದ ಕೆಎಸ್​ಆರ್​ಟಿಸಿ

Last Updated :Dec 28, 2023, 12:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.