ETV Bharat / state

ಕೋಟೆನಾಡಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಒಂದು ಬಿಂದಿಗೆ ನೀರಿಗೂ ಪರದಾಟ!

author img

By

Published : Dec 13, 2020, 9:20 AM IST

900ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿರುವ ಈ ವೆಂಕಟೇಶ್ವರ ಬಡಾವಣೆಗೆ, ಟ್ಯಾಂಕರ್ ಮೂಲಕ ಬರುವ ನೀರು ಸಾಲುತ್ತಿಲ್ಲ. ತಮ್ಮ ಸಮಸ್ಯೆಗಳನ್ನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಆಲಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸ್ತಿದ್ದಾರೆ..

no enough  water in chitradurga district's villages
ಕುಡಿಯುವ ನೀರಿನ ಸಮಸ್ಯೆ

ಚಿತ್ರದುರ್ಗ : ಜಿಲ್ಲೆಯ ಚಳ್ಳಕೆರೆ ರಸ್ತೆಗೆ ಹೊಂದಿಕೊಂಡಿರುವ ವೆಂಕಟೇಶ್ವರ ಬಡವಾಣೆಯ ಜನರು ಪ್ರತಿದಿನ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಕಳೆದ ಒಂದೂವರೆ ತಿಂಗಳಿಂದ ನಗರಸಭೆ, ವಾರ್ಡ್ ನಂ. 32ರ ವೆಂಕಟೇಶ್ವರ ಕಾಲೋನಿಗೆ ಸರಿಯಾಗಿ ಕುಡಿಯುವ ನೀರು ನೀಡದೆ ಬಡಾವಣೆ ಜನರ ಕೆಂಗಣ್ಣಿಗೆ ಗುರಿಯಾಗಿದೆ.

ಕುಡಿಯುವ ನೀರಿನ ಸಮಸ್ಯೆ

ನಗರಸಭೆ ಅಧಿಕಾರಿಗಳು ಈ ಬಡಾವಣೆಗೆ ವಾರದಲ್ಲಿ ಎರಡು ಬಾರಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿದ್ದಾರೆ. ಒಂದು ಬಿಂದಿಗೆ ನೀರು ತರ್ಬೇಕು ಅಂದ್ರೂ ಜನ ದೊಡ್ಡ ಸಾಹಸ ಮಾಡ್ಬೇಕು.

ಅದೂ ಅಲ್ಲದೇ ಟ್ಯಾಂಕರ್ ನೀರು ಕುಡಿಯಲು ಯೋಗ್ಯವಿಲ್ಲ ಎಂದು ಇಲ್ಲಿನ ನಿವಾಸಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಡಿಯುವ ನೀರೇ ಸುಭವಾಗಿ ಸಿಗದಿರುವುದು ಇಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಒಂದು ಬಿಂದಿಗೆ ನೀರಿಗೂ ನೂಕಾಟ-ಕಿತ್ತಾಟ : ತಾಲೂಕು ಆಡಳಿತ ಕಳೆದ ಒಂದು ತಿಂಗಳಿಂದ ಈ ಬಡವಾಣೆಗೆ ಟ್ಯಾಂಕರ್ ಮೂಲಕ ನೀರು ಒದಗಿಸುತ್ತಿದ್ದಾರಂತೆ. ಆದ್ರೆ, ಟ್ಯಾಂಕರ್ ಕೂಡ ಅರ್ಧಂಬರ್ಧ ನೀರು ತುಂಬಿಕೊಂಡು ಬರ್ತಿದೆ. ಹೀಗಾಗಿ ಒಂದು ಬಿಂದಿಗೆ ನೀರು ತುಂಬಿಸಿಕೊಳ್ಳಲು ಜನ ನೂಕಾಡುವ, ಕಿತ್ತಾಡುವ ಸನ್ನಿವೇಶ ನಿರ್ಮಾಣವಾಗಿದೆ.

900ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿರುವ ಈ ವೆಂಕಟೇಶ್ವರ ಬಡಾವಣೆಗೆ, ಟ್ಯಾಂಕರ್ ಮೂಲಕ ಬರುವ ನೀರು ಸಾಲುತ್ತಿಲ್ಲ. ತಮ್ಮ ಸಮಸ್ಯೆಗಳನ್ನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಆಲಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸ್ತಿದ್ದಾರೆ.

ನಳದ ಪೈಪ್‌ಲೈನ್ ಮೂಲಕ ಬರ್ತಿದೆ ಚರಂಡಿ ನೀರು : ಈ ಬಡಾವಣೆಯಲ್ಲಿ ನಗರಸಭೆ ಕಳೆದ ಹಲವು ವರ್ಷಗಳ ಹಿಂದೆಯೇ ನಳದ ಮೂಲಕ ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಮಾಡಿದೆ. ಆದರೆ, ನಲ್ಲಿಗಳಲ್ಲಿ ಚರಂಡಿ ನೀರು ಬರ್ತಿದೆ. ಹೀಗಾಗಿ ಕುಡಿಯುವ ನೀರು ಹಾಗೂ ದಿನ ಬಳಕೆ ನೀರನ್ನು ಒಂದು ಕಿ.ಮೀ. ದೂರದಿಂದ ಹೊತ್ತು ತರಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ನೀರಿಗಾಗಿ ಮಕ್ಕಳು ಕೊಡ ಹಿಡಿದು ನಿಲ್ಲಬೇಕು : ನಗರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ‌ ಬಡಾವಣೆ ಜನರು ನೀರಿಗಾಗಿ ಪರಿತಪಿಸುತ್ತಿದ್ದಾರೆ. ನೀರಿಗಾಗಿ ಮಕ್ಕಳು ಕೂಡ ಕೈಯಲ್ಲಿ ಬಿಂದಿಗೆ ಹಿಡಿದು ಹೋರಾಟ ಮಾಡುವಂತಾಗಿದೆ.

ಬಡಾವಣೆಗೆ ಸಾಂಕ್ರಾಮಿಕ ರೋಗಗಳ ಭೀತಿ : ಟ್ಯಾಂಕರ್​ ಮೂಲಕ ಅಧಿಕಾರಿಗಳು ಒದಗಿಸುತ್ತಿರುವ ನೀರು ಕೂಡ ಶುದ್ಧವಾಗಿಲ್ಲ ಎಂಬುದು ಜನರ ದೂರು. ಹಾಗೆಯೇ ನಳದಲ್ಲಿ ಬರ್ತಿರುವ ಚರಂಡಿ ಮಿಶ್ರಿತ ನೀರನ್ನು ಬಳಕೆ ಮಾಡಿದ್ರೆ ಕಾಯಿಲೆಗಳು ಬರುವುದು ಪಕ್ಕಾ ಎಂದು ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಇತ್ತ ನಗರ ಸಭೆಯ ಕಾರ್ಪೊರೇಟರ್ ಬಡಾವಣೆ ಜನರಿಗೆ ಮೂಲಸೌಕರ್ಯ ಒದಗಿಸುವ ಕಾರ್ಯಕ್ಕೆ ಮುಂದಾಗುತ್ತಿಲ್ಲ ಎಂದು ಇಲ್ಲಿನ ಜನರು ಅಳಲು ತೋಡಿಕೊಂಡಿದ್ದಾರೆ. ಬೇಸಿಗೆ ಆರಂಭಕ್ಕೆ ಮುನ್ನವೇ ಕುಡಿಯೋ ನೀರಿಗೆ ಹಾಹಾಕಾರ ಉಂಟಾಗಿದೆ.

ಬೇಸಿಗೆ ಕಾಲದಲ್ಲಿ ನಮ್ಮ ಗತಿಯೇನು ಅಂತಾ ಬಡಾವಣೆ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳ ತಕ್ಷಣವೇ ಎಚ್ಚೆತ್ತು ‌ ಪೈಪ್​ಲೈನ್ ಸರಿ ಪಡಿಸುವ ಮೂಲಕ ಶುದ್ಧ ಕುಡಿಯುವ ನೀರು ಒದಗಿಸುವ ಕಾರ್ಯಕ್ಕೆ ಮುಂದಾಗಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.