ETV Bharat / state

ಬೊಮ್ಮಾಯಿ ಕನಸಿನ ಭದ್ರಾ ಮೇಲ್ದಂಡೆ ಯೋಜನೆ ಆಮೆಗತಿ.. ಈ ಪ್ರಾಜೆಕ್ಟ್‌ಗೆ ವೇಗ ನೀಡುವರೇ ಸಿಎಂ!?

author img

By

Published : Jan 5, 2022, 4:02 PM IST

ಇದು ಪೂರ್ಣಗೊಳ್ಳದಿರೋದ್ರಿಂದ ಮಧ್ಯ ಕರ್ನಾಟಕ ರೈತರ ಅಸಮಾಧಾನಕ್ಕೂ ಕಾರಣವಾಗಿದೆ. ಭದ್ರಾ ಮೇಲ್ದಂಡೆ ಯೋಜನೆ ಕೇವಲ ಸಭೆ-ಸಮಾರಂಭ, ಅಧಿಕಾರಿಗಳ ಸಭೆಗಳಿಗೆ ಮಾತ್ರ ಸೀಮಿತವಾಗಿದೆ ಎಂದು ರೈತರು ಅಸಮಾಧಾನ ಹೊರ ಹಾಕಿದ್ದಾರೆ..

Minister-Govinda-karajola
ಸಚಿವ ಗೋವಿಂದ ಕಾರಜೋಳ

ಚಿತ್ರದುರ್ಗ : ನೀರು ಕೃಷಿಗೆ, ಕೈಗಾರಿಕೆ ಜತೆಗೆ ಕುಡಿಯೋಕೆ ಕೂಡ ಬೇಕೇ ಬೇಕು. ಇಂತಹದೊಂದು ಬಹುದೊಡ್ಡ ಮಹತ್ವಾಕಾಂಕ್ಷೆಯ ಉದ್ದೇಶ ಇಟ್ಟುಕೊಂಡು ಜನ್ಮತಳೆದಿದ್ದೇ ಭದ್ರಾ ಮೇಲ್ದಂಡೆ ಯೋಜನೆ. 2008ರ ಅಂದಿನ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಬೃಹತ್‌ ನೀರಾವರಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರೇ ಇಂದಿನ ಹಾಲಿ ಮುಖ್ಯಮಂತ್ರಿಗಳು.

ಆದರೆ, ತಾವು ಜಲಸಂಪನ್ಮೂಲ ಸಚಿವರಾಗಿದ್ದಾಗ ಆರಂಭಿಸಿದ್ದ ಅದೇ ಭದ್ರಾ ಮೇಲ್ದಂಡೆ ಯೋಜನೆ ಕಳೆದ 14 ವರ್ಷಗಳಿಂದ ಕುಂಟುತ್ತಾ, ತೆವಳುತ್ತಾ, ಬೇಕೋ ಬೇಡವೋ ಎನ್ನುವ ರೀತಿ ಸಾಗುತ್ತಿದೆ. ಈ ನಡುವೆ ಕರ್ನಾಟಕದ ನೀರಾವರಿ ಯೋಜನೆಗೆ ಆಂಧ್ರಪ್ರದೇಶ ಕಿರಿಕ್ ಮಾಡುತ್ತಿದೆ. ಇದರಿಂದ ರಾಜ್ಯ ಸರ್ಕಾರ ಎಚ್ಚೆತ್ತಿದೆ.

ಚಿತ್ರದುರ್ಗದ ಭದ್ರಾ ಮೇಲ್ದಂಡೆ ಯೋಜನೆ ಕಚೇರಿಯಲ್ಲಿ ಜಿಲ್ಲಾ ಸಂಸದರು ಹಾಗೂ ನೀರಾವರಿ ಸಚಿವ ಗೋವಿಂದ ಕಾರಜೋಳ ನೇತೃತ್ವದಲ್ಲಿ ಸಭೆ ನಡೆಸಿ ಶೀಘ್ರವೇ ಕೇಂದ್ರ ಮಂತ್ರಿಗಳೊಂದಿಗೆ ಮತ್ತೊಂದು ಸಭೆ ನಡೆಸಿ, ನಾಡಿನ ಮೊಟ್ಟ ಮೊದಲ ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆ ಪುರಸ್ಕಾರ ಒದಗಿಸುವುದಾಗಿ ನೀರಾವರಿ ಸಚಿವರು ಭರವಸೆ ನೀಡಿದ್ದಾರೆ.

ಇನ್ನು ಈ ಕರ್ನಾಟಕದ ಬೃಹತ್ ನೀರಾವರಿ ಯೋಜನೆ, ಚುನಾವಣೆ ಹೊತ್ತಲ್ಲಿ ರಾಜಕಾರಣಿಗಳ ಬೇಳೆ ಬೇಯಿಸಿಕೊಳ್ಳುವ ಯೋಜನೆ ಆಗುತ್ತಿದೆ ಅನ್ನುವ ಸಂಶಯ ಮೂಡುತ್ತಿದೆ. ಸಾವಿರಾರು ಕೋಟಿ ವೆಚ್ಚ ಮಾಡಿದರೂ ಕೇವಲ ಶೇ.40ರಷ್ಟು ಮಾತ್ರ ಯೋಜನೆಯ ಕಾಮಗಾರಿ ಮುಗಿದಿದೆ.

ಇದು ಪೂರ್ಣಗೊಳ್ಳದಿರೋದ್ರಿಂದ ಮಧ್ಯ ಕರ್ನಾಟಕ ರೈತರ ಅಸಮಾಧಾನಕ್ಕೂ ಕಾರಣವಾಗಿದೆ. ಭದ್ರಾ ಮೇಲ್ದಂಡೆ ಯೋಜನೆ ಕೇವಲ ಸಭೆ-ಸಮಾರಂಭ, ಅಧಿಕಾರಿಗಳ ಸಭೆಗಳಿಗೆ ಮಾತ್ರ ಸೀಮಿತವಾಗಿದೆ ಎಂದು ರೈತರು ಅಸಮಾಧಾನ ಹೊರ ಹಾಕಿದ್ದಾರೆ.

ಈ ನಡುವೆ ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ಆಂಧ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ನಮ್ಮ ಜಾಗ, ಇದು ನನ್ನ ಜಿಲ್ಲೆ, ನೀರು ಕೇಳೋಕೆ ಅವರ್ಯಾರು? ಎಂದು ಅಸಮಾಧಾನ ಆಕ್ರೋಶ ಹೊರ ಹಾಕಿದ್ದಾರೆ.

ಇದರ ಜೊತೆಗೆ ಬೃಹತ್ ನೀರಾವರಿ ಯೋಜನೆಗೆ ಅಂಕಿತ ಹಾಕಿದ್ದ ಸಿಎಂ ಬಸವರಾಜ ಬೊಮ್ಮಾಯಿ ಈ ನೀರಾವರಿ ಯೋಜನೆ ಪೂರ್ಣಗೊಳಿಸಿ ಮಧ್ಯ ಕರ್ನಾಟಕದ ರೈತರ ಪಾಲಿಗೆ ಸಕ್ಕರೆ ಆಗಲಿ, ಇಲ್ಲದಿದ್ದರೆ ಅನ್ನದಾತರ ಶಾಪಕ್ಕೆ ಗುರಿಯಾಗಲಿ ಅಂತಾ ರೈತರು ಕಿಡಿಕಾರುತ್ತಿದ್ದಾರೆ.

ಕಳೆದ ಒಂದೂವರೆ ದಶಕಗಳಿಂದ ನಾಡಿನ ಹೆಮ್ಮೆಯ ನೀರಾವರಿ ಯೋಜನೆ ಬಗ್ಗೆ ಕನಸು ಕಾಣುತ್ತಿದ್ದ ರೈತರಿಗೆ ಯೋಜನೆ ರೂಪಿಸಿದ ನೀರಾವರಿ ಸಚಿವರೇ ಇದೀಗ ನಾಡಿನ ಮುಖ್ಯಮಂತ್ರಿ ಆಗಿದ್ದಾರೆ. ಇನ್ನಾದರೂ ದಶಕದ ಸಮಸ್ಯೆಗೆ ಪರಿಹಾರ ದೊರಕುತ್ತದೆಯೋ ಇಲ್ವೋ ನೋಡಬೇಕು.

ಓದಿ: ಚಿಕ್ಕಮಗಳೂರು: ಬಜರಂಗದಳ ಕಾರ್ಯಕರ್ತರು ವಶಕ್ಕೆ.. ಸ್ಥಳದಲ್ಲಿ ಬಿಗುವಿನ ವಾತಾವರಣ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.