ಬಿಹಾರದ ಪಿಸ್ತೂಲ್, ಹೊಳಲ್ಕೆರೆಯಲ್ಲಿ ಕೊಲೆ, ಇಂಡೋ-ಪಾಕ್​ ಗಡಿಯಲ್ಲಿ ಅಡಗಿದ್ದ ಚಾಲಾಕಿಗಳು.. ರೋಚಕ ಕೊಲೆ ಕಹಾನಿ.!

author img

By

Published : Aug 31, 2021, 10:06 PM IST

Updated : Aug 31, 2021, 10:41 PM IST

ಇಂಡೋ-ಪಾಕ್​ ಗಡಿಯಲ್ಲಿ ಅಡಗಿದ್ದ ಚಾಲಾಕಿಗಳು

ಕೊಲೆ ಮಾಡಿದ ಬಳಿಕ ರಾಜಸ್ಥಾನಕ್ಕೆ ತೆರಳಿದ ಆರೋಪಿಗಳು ಪಾಕಿಸ್ತಾನದ ಗಡಿಗೆ ಹೊಂದಿಕೊಂಡ ಗ್ರಾಮದಲ್ಲಿ ಅಡಗಿದ್ದರು. ಅವರನ್ನು ಬಂಧಿಸಿದ ಸ್ಥಳದಿಂದ ಪಾಕ್​ ಗಡಿ 18 ಕಿ.ಮೀ ದೂರದಲ್ಲಿತ್ತು. ಕಲ್ಯಾಣ್‌ ಸಿಂಗ್ ಕೊಲೆಯ ಪ್ರತಿಕಾರ ಹಾಗೂ ಮೂಲ್‌ಸಿಂಗ್‌ ಆಸ್ತಿ ಕಲಹದ ದೃಷ್ಟಿಯಿಂದ ತನಿಖೆ ಆರಂಭಿಸಿದೆವು. ಸುಮಾರು 25 ಪೊಲೀಸರ ತಂಡ ತನಿಖೆಯಲ್ಲಿ ತೊಡಗಿತ್ತು. ಒಂದು ತಂಡವನ್ನು ರಾಜಸ್ಥಾನಕ್ಕೆ ಕಳುಹಿಸಿಕೊಡಲಾಯಿತು. ಸ್ಥಳೀಯ ಪೊಲೀಸರ ನೆರವಿನಿಂದ ಆರೋಪಿಗಳನ್ನು ಪತ್ತೆ ಮಾಡಲು ಸಾಧ್ಯವಾಯಿತು ಎಂದು ಎಸ್ಪಿ ರಾಧಿಕಾ ತಿಳಿಸಿದರು.

ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ಬಟ್ಟೆ ವ್ಯಾಪಾರಿ ಮೂಲ್‌ಸಿಂಗ್‌ (35) ಎಂಬುವರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ ಪ್ರಕರಣವನ್ನು ಚಿತ್ರದುರ್ಗ ಪೊಲೀಸರು ಭೇದಿಸಿದ್ದಾರೆ. ಇಬ್ಬರು ಆರೋಪಿಗಳನ್ನು ಪಾಕಿಸ್ತಾನದ ಗಡಿಯಲ್ಲಿ ಬಂಧಿಸಿದ್ದಾರೆ. ವ್ಯವಹಾರದ ಉದ್ದೇಶದಿಂದ ಹುಟ್ಟಿಕೊಂಡ ಹಳೆ ದ್ವೇಷದ ಕಾರಣಕ್ಕೆ ಕೊಲೆ ನಡೆದಿದೆ ಎಂಬುದು ತನಿಖೆಯಿಂದ ದೃಢಪಟ್ಟಿದೆ.

ರಾಜಸ್ಥಾನದ ನಾಗೋರ್‌ ಜಿಲ್ಲೆಯ ದಿಡ್ವಾನ ತಾಲೂಕಿನ ನೋಸರ್‌ ಗ್ರಾಮದ ಸಂಜಿತ್‌ ಸಿಂಗ್‌ (22) ಹಾಗೂ ಈತನ ಸೋದರ ಮಾವ ಜೋಧ್‌ಪುರ್‌ ಜಿಲ್ಲೆಯ ಪೃಥ್ವಿರಾಜ್‌ ಸಿಂಗ್‌ (31) ಬಂಧಿತರು. ರಾಜಸ್ಥಾನದ ಸ್ಥಳೀಯ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಿ ಚಿತ್ರದುರ್ಗಕ್ಕೆ ಕರೆತರಲಾಗಿದೆ. ಸಂಜಿತ್‌ ಸಿಂಗ್‌ ತಂದೆ ಕಲ್ಯಾಣ್‌ಸಿಂಗ್‌ ಅವರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಮೂಲ್‌ಸಿಂಗ್‌ ಆರೋಪಿಯಾಗಿದ್ದರು. ಕೊಲೆಯಾದ ಮೂಲ್‌ಸಿಂಗ್‌ ಹಾಗೂ ಕಲ್ಯಾಣ್‌ ಸಿಂಗ್‌ ಪರಿಚಿತರು.

ಚಿತ್ರದುರ್ಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಹೇಳಿಕೆ

ಅಡಗುತಾಣದ ಸುಳಿವು ದೊರೆಯದಂತೆ ಎಚ್ಚರವಹಿಸಿದ್ದ ಆರೋಪಿಗಳು:

ಈ ಬಗ್ಗೆ ಮಾತನಾಡಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ, ಮೂಲತಃ ರಾಜಸ್ಥಾನದ ಕಲ್ಯಾಣ್‌ ಸಿಂಗ್‌ 20 ವರ್ಷದ ಹಿಂದೆ ಹೊಳಲ್ಕೆರೆ ತಾಲೂಕಿಗೆ ರಾಮಗಿರಿಗೆ ಬಂದು ನೆಲೆಸಿದ್ದರು. ಚಿನ್ನಾಭರಣ ವ್ಯಾಪಾರ ಮಾಡಿಕೊಂಡಿದ್ದ ಇವರಿಗೆ ಬೆಂಗಳೂರಿನಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮೂಲ್​ಸಿಂಗ್‌ ಪರಿಚಯವಾಗಿತ್ತು. ಐದು ವರ್ಷಗಳ ಹಿಂದೆ ಮೂಲ್‌ಸಿಂಗ್‌ ಅವರನ್ನು ರಾಮಗಿರಿಗೆ ಕರೆತಂದು ಬಟ್ಟೆ ವ್ಯಾಪಾರ ಮಾಡಲು ತನ್ನ ಕಟ್ಟಡದಲ್ಲಿದ್ದ ಮಳಿಗೆಯನ್ನು ಬಾಡಿಗೆ ನೀಡಿದ್ದರು ಎಂದು ಹೇಳಿದರು.

ಕೊಲೆ ಆರೋಪಿಗಳು ಅಡಗುತಾಣದ ಸುಳಿವು ದೊರೆಯದಂತೆ ಎಚ್ಚರವಹಿಸಿದ್ದರು. ವಾಟ್ಸ್​ಆ್ಯಪ್ ಕರೆಯ ಮೂಲಕ ಸಂಬಂಧಿಕರನ್ನು ಸಂಪರ್ಕಿಸಿ ಮಾತನಾಡುತ್ತಿದ್ದರು. ಇದರಿಂದ ನೆಟ್‌ವರ್ಕ್‌ ವಿಳಾಸ ಸಿಗುತ್ತಿತ್ತೇ ಹೊರತು ಆರೋಪಿಗಳ ನಿಖರ ಸ್ಥಳ ಪತ್ತೆಯಾಗುತ್ತಿರಲಿಲ್ಲ ಎಂದು ತಿಳಿಸಿದರು.

ವೈಷಮ್ಯ ಹುಟ್ಟಿಸಿತ್ತು ಮಳಿಗಾಗಿ ನಡೆದ ಕೊಲೆ:

ಮೂಲ್‌ಸಿಂಗ್‌ ಬಟ್ಟೆ ಅಂಗಡಿ ವ್ಯವಹಾರಕ್ಕೆ ಸಹೋದರರಾದ ಬಲ್‌ವೀರ್‌ ಸಿಂಗ್‌, ಶೇರ್‌ ಸಿಂಗ್‌ ಮತ್ತು ಗೋವರ್ಧನ ಸಿಂಗ್‌ ಜೊತೆಯಾಗಿದ್ದರು. ಕ್ಷುಲ್ಲಕ ವಿಚಾರದಲ್ಲಿ ಸ್ನೇಹ ಮುರಿದು ಬಿದ್ದ ಪರಿಣಾಮ ಮಳಿಗೆ ಖಾಲಿ ಮಾಡುವಂತೆ ಕಲ್ಯಾಣ್‌ ಸಿಂಗ್‌ ತಾಕೀತು ಮಾಡಿದ್ದರು. ಉತ್ತಮ ವ್ಯವಹಾರ ನಡೆಯುತ್ತಿದ್ದ ಮಳಿಗೆಯನ್ನು ಖಾಲಿ ಮಾಡಿದರೆ ತೊಂದರೆ ಆಗುತ್ತದೆ ಎಂದು ಭಾವಿಸಿದ ಮೂಲ್‌ಸಿಂಗ್‌ ಸಹೋದರರು, 2018ರ ನ.28ರಂದು ರಾತ್ರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು.

ಮಾವನ ಜತೆ ಸೇರಿ ಮರ್ಡರ್​ ಪ್ಲ್ಯಾನ್:

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೂಲ್‌ಸಿಂಗ್‌ ಸೇರಿ ಎಲ್ಲ ಸಹೋದರರನ್ನು ಬಂಧಿಸಿ ಜೈಲಿಗೆ ತಳ್ಳಿದ್ದರು. ಜಾಮೀನು ಮೇಲೆ ಹೊರಗೆ ಬಂದ ಮೂಲ್‌ಸಿಂಗ್‌ ಹೊಳಲ್ಕೆರೆ ಪಟ್ಟಣದಲ್ಲಿ ಪ್ರಿಯದರ್ಶಿನಿ ಟೆಕ್ಸ್‌ಟೈಲ್‌ ಎಂಬ ಬಟ್ಟೆ ಅಂಗಡಿ ತೆರೆದಿದ್ದು, ಜೀವನ ನಡೆಸುತ್ತಿದ್ದರು. ರಾಮಗಿರಿಯ ಮಳಿಗೆಯಲ್ಲಿದ್ದ ಬಟ್ಟೆಗಳನ್ನು ತೆಗೆದುಕೊಳ್ಳಲು ಅವಕಾಶ ನೀಡದಿರುವುದರಿಂದ ₹80 ಲಕ್ಷ ನಷ್ಟ ಸಂಭವಿಸಿರುವುದಾಗಿ ಕಲ್ಯಾಣ್‌ಸಿಂಗ್‌ ಕುಟುಂಬದ ವಿರುದ್ಧ ನ್ಯಾಯಾಲಯದಲ್ಲಿ ಮೂಲ್​​​ಸಿಂಗ್​​ ಸಿವಿಲ್‌ ದಾವೆ ಹೂಡಿದ್ದರು.

ಸಿವಿಲ್‌ ದಾವೆಯ ನೋಟಿಸ್‌ ಜುಲೈ 28ರಂದು ಕಲ್ಯಾಣ್‌ ಸಿಂಗ್‌ ಕುಟುಂಬ ತಲುಪಿತ್ತು. ಆ.12ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಲಾಗಿತ್ತು. ಇದು ಕಲ್ಯಾಣ್‌ಸಿಂಗ್ ಪುತ್ರ ಸಂಜಿತ್‌ ಸಿಂಗ್‌ನನ್ನು ಕೆರಳಿಸಿತ್ತು. ತರಿಕೆರೆಯಲ್ಲಿ ಚಿನ್ನಾಭರಣ ವ್ಯಾಪಾರ ಮಾಡಿಕೊಂಡಿದ್ದ ಸೋದರಮಾವ ಪೃಥ್ವಿರಾಜ್‌ ಸಿಂಗ್‌ ಜೊತೆ ಸೇರಿ ಕೊಲೆಯ ಸಂಚು ರೂಪಿಸಿದ್ದ ಸಂಜಿತ್​ ಸಿಂಗ್​.

ಆರೋಪಿಗಳ ಸುಳಿವು ನೀಡಿದ ಸಿಸಿಟಿವಿ ದೃಶ್ಯ:

ಹೊಳಲ್ಕೆರೆಯಿಂದ ದ್ವಿಚಕ್ರ ವಾಹನದಲ್ಲಿ ನೇರವಾಗಿ ಬೀರೂರು ತಲುಪಿದ್ದರು. ಸಂಬಂಧಿಕರ ಮನೆಯಲ್ಲಿ ರಾತ್ರಿ ಊಟ ಮುಗಿಸಿ ರೈಲಿನ ಮೂಲಕ ರಾಜಸ್ಥಾನಕ್ಕೆ ಮರಳಿದ್ದರು. ಕೃತ್ಯಕ್ಕೆ ಎಸಗಿದ ದ್ವಿಚಕ್ರ ವಾಹನವನ್ನು ಲಾರಿಯೊಂದಕ್ಕೆ ಹಾಕುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದು ಪೊಲೀಸರ ಅನುಮಾನವವನ್ನು ಇನ್ನಷ್ಟು ಬಲಗೊಳಿಸಿತ್ತು.

ಬಿಎಸ್​ಸಿ ವ್ಯಾಸಂಗ ಮಾಡುತ್ತಿರುವ ಸಂಜಿತ್‌ ಅತ್ಯಂತ ಚಾಣಾಕ್ಷತನದಿಂದ ಕೃತ್ಯ ಎಸಗಿದ್ದನು. ಸಾಕ್ಷ್ಯಗಳು ಲಭ್ಯವಾಗದಂತೆ ಎಚ್ಚರವಹಿಸಿದ್ದನು. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಆರೋಪಿಗಳ ಸುಳಿವು ನೀಡಿತ್ತು.

ಬಿಹಾರದಲ್ಲಿ ಪಿಸ್ತೂಲ್‌ ಖರೀದಿ:

ಬಿಹಾರದ ಗಯಾದಲ್ಲಿ ನಾಡ ಪಿಸ್ತೂಲ್‌ ಖರೀದಿ ಮಾಡಿದ ಆರೋಪಿಗಳು ನೇರವಾಗಿ ಹೊಳಲ್ಕೆರೆಗೆ ಬಂದಿದ್ದರು. ಆ.17ರಂದು ರಾತ್ರಿ ಬಟ್ಟೆ ಅಂಗಡಿ ಬಾಗಿಲು ಹಾಕುವುದಕ್ಕೂ ಮೊದಲು ದೃಷ್ಟಿ ಪೂಜೆ ಮಾಡುತ್ತಿದ್ದ ಮೂಲ್​ಸಿಂಗ್‌ ಬಳಿಗೆ ತೆರಳಿ ತಲೆಗೆ ಗುಂಡು ಹಾರಿಸಿದ್ದರು. ಒಂದೇ ಗುಂಡಿಗೆ ಕುಸಿದು ಬಿದ್ದು ಮೃತಪಟ್ಟಿದ್ದ. ಆರೋಪಿಗಳು ಕೃತ್ಯ ಎಸಗುವ ಸ್ಥಳಕ್ಕೆ ಮೊಬೈಲ್‌ ಫೋನ್‌ ತೆಗೆದುಕೊಂಡು ಹೋಗಿರಲಿಲ್ಲ ಎಂಬುದು ಗಮನಿಸಬೇಕಾದ ಅಂಶ.

ಇಂಡೋ-ಪಾಕ್​ ಗಡಿಯಲ್ಲಿ ಅಡಗಿದ್ದ ಚಾಲಾಕಿಗಳು:

ಕೊಲೆ ಮಾಡಿದ ಬಳಿಕ ರಾಜಸ್ಥಾನಕ್ಕೆ ತೆರಳಿದ ಆರೋಪಿಗಳು ಪಾಕಿಸ್ತಾನದ ಗಡಿಗೆ ಹೊಂದಿಕೊಂಡ ಗ್ರಾಮದಲ್ಲಿ ಅಡಗಿದ್ದರು. ಅವರನ್ನು ಬಂಧಿಸಿದ ಸ್ಥಳದಿಂದ ಪಾಕ್​ ಗಡಿ ಕೇವಲ 18 ಕಿ.ಮೀ ದೂರದಲ್ಲಿತ್ತು ಎಂದು ತನಿಖಾ ತಂಡದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕಲ್ಯಾಣ್‌ ಸಿಂಗ್ ಕೊಲೆಯ ಪ್ರತಿಕಾರ ಹಾಗೂ ಮೂಲ್‌ಸಿಂಗ್‌ ಆಸ್ತಿ ಕಲಹದ ದೃಷ್ಟಿಯಿಂದ ತನಿಖೆ ಆರಂಭಿಸಿದೆವು. ಸುಮಾರು 25 ಪೊಲೀಸರನ್ನೊಳಗೊಂಡ ತಂಡ ತನಿಖೆಯಲ್ಲಿ ತೊಡಗಿತ್ತು. ಒಂದು ತಂಡವನ್ನು ರಾಜಸ್ಥಾನಕ್ಕೆ ಕಳುಹಿಸಿಕೊಡಲಾಯಿತು. ಸ್ಥಳೀಯ ಪೊಲೀಸರ ನೆರವಿನಿಂದ ಆರೋಪಿಗಳನ್ನು ಪತ್ತೆ ಮಾಡಲು ಸಾಧ್ಯವಾಯಿತು ಎಂದು ಎಸ್ಪಿ ರಾಧಿಕಾ ತಿಳಿಸಿದರು.

ಓದಿ: ಡ್ರಗ್ಸ್ ದಂಧೆಕೋರರ ಜೊತೆ ಸಂಪರ್ಕ ಆರೋಪ: ರೂಪದರ್ಶಿ ಸೇರಿ ಇಬ್ಬರು ಅರೆಸ್ಟ್

Last Updated :Aug 31, 2021, 10:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.