ETV Bharat / state

ಚಿತ್ರದುರ್ಗ: ನಾಯಿ ಕಡಿತದಿಂದ ಬಾಲಕ ಸಾವು

author img

By ETV Bharat Karnataka Team

Published : Dec 18, 2023, 6:55 PM IST

Updated : Dec 18, 2023, 7:51 PM IST

Boy dies due to dog bite in Chitradurga
Boy dies due to dog bite in Chitradurga

ಬೀದಿ ನಾಯಿ ಕಡಿತದಿಂದ ಬಾಲಕನೊಬ್ಬ ಮೃತಪಟ್ಟ ಘಟನೆ ಕೋಟೆನಾಡಿನಲ್ಲಿ ನಡೆದಿದೆ.

ನಾಯಿ ಕಡಿತದಿಂದ ಬಾಲಕ ಸಾವು; ಪೋಷಕರ ಆಕ್ರಂದನ

ಚಿತ್ರದುರ್ಗ: ಕೋಟೆನಾಡಿನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಾಯಿ ಕಡಿತದಿಂದ ಬಾಲಕನೊಬ್ಬ ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ. ಮೆದೇಹಳ್ಳಿಯ ತರುಣ್ (10) ಮೃತ ಬಾಲಕ. 15 ದಿನಗಳ ಹಿಂದೆ ತರುಣ್ ಸೇರಿದಂತೆ ಹಲವರ ಮೇಲೆ ನಾಯಿಯೊಂದು ದಾಳಿ ನಡೆಸಿತ್ತು. ಗಾಯಗೊಂಡಿದ್ದ ಬಾಲಕನನ್ನು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಎಂದು ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ತರುಣ್ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿರುವುದಾಗಿ ಪೋಷಕರು ಅಳಲು ತೋಡಿಕೊಂಡಿದ್ದಾರೆ. ಎದೆ ಎತ್ತರಕ್ಕೆ ಬೆಳೆದ ಬಾಲಕನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಚಿತ್ರದುರ್ಗ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಬೀದಿನಾಯಿಗಳ ಹಾವಳಿ ದಿನೇ ದಿನೆ ಹೆಚ್ಚಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳ ಇತ್ತ ಗಮನ ಕೊಡಬೇಕು. ನಾಯಿಗಳ ಹಾವಳಿಯನ್ನು ನಿಯಂತ್ರಣ ಮಾಡಬೇಕು. ಸ್ವಲ್ಪ ಕೈ ಎತ್ತಿದರೆ ಸಾಕು ಹುಲಿ, ಚಿರತೆಯಂತೆ ಮನುಷ್ಯರ ಮೇಲೆಯೇ ಎಗರುತ್ತವೆ. ಬೀದಿಯಲ್ಲಿ ಓಡಾವುದೇ ದುಸ್ತರವಾಗಿದೆ. ಇತ್ತೀಚೆಗೆ ಐವರಿಗೆ ನಾಯಿಯೊಂದು ಕಚ್ಚಿದ್ದು ಅದರಲ್ಲಿ ಬಾಲಕನೊಬ್ಬ ಮೃತಪಟ್ಟಿದ್ದಾನೆ. ಮೃತ ಬಾಲಕನ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು ಎಂದು ಮೆದೇಹಳ್ಳಿಯ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಜ್ಜಪ್ಪ ಒತ್ತಾಯಿಸಿದ್ದಾರೆ.

ಮೃತ ತರುಣ್ ನನ್ನ ತಮ್ಮ. ಅಂದು ತರುಣ್ ಹಾಗೂ ನನ್ನ ಮಗ ಸೇರಿದಂತೆ ಹಲವರಿಗೆ ನಾಯಿ ಕಚ್ಚಿತ್ತು. ಅದು ಬೀದಿನಾಯಿ ಅಲ್ಲ. ಬೇರೆ ಎಲ್ಲಿಂದಲೋ ಬಂದಿದೆ. ಕಚ್ಚಿದ ತಕ್ಷಣ ಆ ನಾಯಿಯನ್ನು ಸಾಯಿಸಲಾಯಿತು. ತರುಣನನ್ನು ಉಳಿಸಿಕೊಳ್ಳಲು ಬಹಳ ಶ್ರಮಪಟ್ಟೆವು. ಆದರೆ, ಮೈತುಂಬಾ ಕಚ್ಚಿದ್ದರಿಂದ ಆಗಲಿಲ್ಲ. ನನ್ನ ತಮ್ಮ ಬಾರದ ಲೋಕಕ್ಕೆ ಹೋದ. ಘಟನೆಯಿಂದ ಹೊರ ಬರಲಾಗುತ್ತಿಲ್ಲ. ಯಾವ ಮಕ್ಕಳಿಗೂ ಈ ರೀತಿ ಆಗಬಾರದು. ಮುಂಜಾಗ್ರತೆ ಹಿನ್ನೆಲೆ ನನ್ನ ಮಗನಿಗೂ ಚುಚ್ಚುಮದ್ದು ಹಾಕಿಸಲಾಗಿದೆ. ಬೀದಿ ನಾಯಿಗಳ ಕಾಟ ತಪ್ಪಬೇಕು ಎಂದು ಮೃತ ಬಾಲಕನ ಅಕ್ಕ ಕಣ್ಣೀರು ಹಾಕಿದರು. ಸ್ಥಳೀಯರು ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವಿಜಯಪುರದಲ್ಲಿ ಅಪ್ರಾಪ್ತರ ಮೇಲೆ ಬೀದಿ ನಾಯಿ ದಾಳಿ: ಮೂವರಿಗೆ ಗಾಯ

ಬೀದಿ ನಾಯಿಗಳ ಹಾವಳಿ ಪ್ರಕರಣಗಳು ಹೆಚ್ಚಾಗಿದ್ದು, ಇತ್ತೀಚೆಗಷ್ಟೇ ವಿಜಯಪುರದಲ್ಲಿ ಮೂವರು ಅಪ್ರಾಪ್ತರ‌ ಮೇಲೆ ನಾಯಿಯೊಂದು ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ನಡೆದಿತ್ತು. ಮನೆಯಿಂದ ಹೊರ ಬಂದಿದ್ದ ಮೂವರು ಮಕ್ಕಳ ಮೇಲೆ ನಾಯಿ ಏಕಾಏಕಿ ದಾಳಿ ನಡೆಸಿದೆ. ಗಾಯಾಳು ಮಕ್ಕಳನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ದಾಳಿ ನಡೆಸಿದ ನಾಯಿಯನ್ನು ಬಳಿಕ ಸೆರೆ ಹಿಡಿಯಲಾಗಿತ್ತು. ಅದಕ್ಕೂ ಮುನ್ನ ದೊಡ್ಡಬಳ್ಳಾಪುರದಲ್ಲಿಯೂ ಇಂತಹದ್ದೇ ಘಟನೆ ನಡೆದಿತ್ತು. ಬಯಲಲ್ಲಿ ಆಟವಾಡುತ್ತಿದ್ದ 4 ವರ್ಷದ ಬಾಲಕಿಯ ಮೇಲೆ ಬೀದಿನಾಯಿ ದಾಳಿ ಮಾಡಿದ್ದು, ದೃಷ್ಟವಶಾತ್ ಸಂಬಂಧಿಕರು ಅದೇ ಸಮಯಕ್ಕೆ ಅಲ್ಲಿಗೆ ಬಂದಿದ್ದು, ಬಾಲಕಿಯನ್ನು ರಕ್ಷಿಸಿದ್ದರು.

Last Updated :Dec 18, 2023, 7:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.