ಚಳ್ಳಕೆರೆ (ಚಿತ್ರದುರ್ಗ) : ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರವೂ ನಡೆಯುತ್ತಿದೆ. ಈ ಬಾರಿ ಹೇಗಾದರೂ ಮಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂದು ಹೈಕಮಾಂಡ್ ಶತಪ್ರಯತ್ನವನ್ನು ಮಾಡುತ್ತಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಅವರು ಚುನಾವಣಾ ಪ್ರಚಾರವನ್ನು ಆರಂಭಿಸಿದ್ದಾರೆ. ಆದರೆ ಈ ನಡುವೆ ಬಿಜೆಪಿಗೆ ಸಣ್ಣ ಆಘಾತವೊಂದು ಎದುರಾಗಿದೆ. ಹೌದು, ಚಳ್ಳಕೆರೆ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಬಸವರಾಜ್ ಮಂಡಿಮಠ ಜೆಡಿಎಸ್ ಸೇರ್ಪಡೆಯಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಮಂಡಿಮಠ ಮಿಲ್ನಲ್ಲಿ ನಡೆದ ಬಿಜೆಪಿ ಪಕ್ಷ ತೊರೆದು ಬೆಂಬಲಿಗರೊಂದಿಗೆ ಜೆಡಿಎಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ ಯಶೋಧರ್, ಜೆಡಿಎಸ್ ಘೋಷಿತ ಅಭ್ಯರ್ಥಿ ರವೀಶ್ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ವೇಳೆ ಮಾತನಾಡಿದ ಮಾಜಿ ಶಾಸಕ ಬಸವರಾಜ್ ಮಂಡಿಮಠ ಅವರು, ರೈತರಿಗೆ ಹಾಗೂ ಜನರಿಗೆ ನೀಡಿದ ಮಾತನ್ನು ಉಳಿಸಿಕೊಂಡ ಏಕೈಕ ಮುಖ್ಯಮಂತ್ರಿ ಎಂದರೆ ಕುಮಾರಸ್ವಾಮಿ ಎಂದರು.
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಭಯಹುಟ್ಟಿಕೊಂಡಿದೆ: ಮುಖ್ಯಮಂತ್ರಿ ಅವಧಿಯಲ್ಲಿ ರೈತರ ಸಾಲಮನ್ನ. ಬಡವರಿಗೆ, ಅಶಕ್ತರಿಗೆ ಸೇರಿದಂತೆ ರೈತರಿಗೆ ಬದುಕು ಕಟ್ಟಿಕೊಳ್ಳುವುದಕ್ಕೆ ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಉತ್ತಮ ಆಡಳಿತ ನಡೆಸಿದ್ದಾರೆ. ಈಗ ಪಂಚರತ್ನ ಯಾತ್ರೆಗೆ ಜನರೇ ಸ್ವಯಂ ಪ್ರೇರಿತರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಬೆಂಬಲ ವ್ಯಕ್ತವಾಗುವುದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಭಯ ಹುಟ್ಟಿಕೊಂಡಿದೆ ಎಂದು ಹೇಳಿದರು.
ರಾಷ್ಟ್ರೀಯ ಪಕ್ಷಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದು, ಈ ಬಾರಿ ವಿಧಾನಸಭೆ ಚುನಾವಣೆಯಲ್ಲೇ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಮತ್ತೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ. ಚಳ್ಳಕೆರೆ ಕ್ಷೇತ್ರದಲ್ಲಿ ರವೀಶ್ ಕುಮಾರ್ ಶಾಸಕರಾಗಲಿದ್ದಾರೆ ಎಂದು ತಿಳಿಸಿದರು. ಜೆಡಿಎಸ್ ಅಭ್ಯರ್ಥಿ ರವೀಶ್ ಕುಮಾರ್ ಇವರನ್ನು ಗೆಲ್ಲಿಸುವುದೇ ನಮ್ಮ ಗುರಿ. ಮೊದಲು ಕುಣಿಯುವುದು ಬೇಡ. ಜೆಡಿಎಸ್ಗೆ ಸೇರ್ಪಡೆಗೊಂಡವರು ರವೀಶ್ ಕುಮಾರ್ ಗೆಲುವಿಗೆ ಶ್ರಮಿಸಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು.
ಜನತೆಯನ್ನು ಕೀಳು ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ: ಜೆಡಿಎಸ್ ಅಭ್ಯರ್ಥಿ ಎಂ ರವೀಶ್ ಕುಮಾರ್ ಮಾತನಾಡಿ, 30 ವರ್ಷಗಳಿಂದ ನೇರ ನಡೆಯಿಂದ ಸ್ವಚ್ಛ ರಾಜಕೀಯ ಮಾಡಿದ ಮಾಜಿ ಶಾಸಕ ಬಸವರಾಜ್ ಮಂಡಿಮಠ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಕ್ಷೇತ್ರದಲ್ಲಿ ಜೆಡಿಎಸ್ಗೆ ಆನೆಬಲ ಬಂದಂತಾಗಿದೆ ಎಂದರು. ಆಳುವ ಸರ್ಕಾರ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತಿ ರಾಜ್ಯದ ಜನತೆಯನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಇನ್ನೊಂದು ಕಡೆ ನೋಡುವುದಾದರೆ ಕಾಂಗ್ರೆಸ್ ಸರ್ಕಾರ ಅಧಿಕಾರದ ದುರಾಸೆಯಿಂದ ತಮ್ಮ ತಮ್ಮಲ್ಲಿ ಕಿತ್ತಾಡಿಕೊಂಡು ರಾಜ್ಯದ ಜನತೆಯನ್ನು ದಿಕ್ಕು ತಪ್ಪಿಸಿ ಜನತೆಯನ್ನು ಕೀಳು ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದರು.
ಬೀದಿ ವ್ಯಾಪಾರಸ್ಥರ ಜೀವನಾಡಿಯಾಗಿರುವ ಹೆಚ್ಡಿಕೆ: ಇಂತಹ ರಾಷ್ಟ್ರೀಯ ಪಕ್ಷಗಳು ಬೇಡವೆಂದು ರಾಜ್ಯದ ಜನತೆಯು ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷಕ್ಕೆ ಸೇರಲು ಮುಂದಾಗಿದ್ದಾರೆ. ಕುಮಾರಣ್ಣನವರ ಆಡಳಿತದಲ್ಲಿ ರಾಜ್ಯದ 80 ಲಕ್ಷ ಕೋಟಿ ರೈತರ ಸಾಲ ಮನ್ನ ಮಾಡಿದ್ದಾರೆ. ಬೀದಿ ವ್ಯಾಪಾರಸ್ಥರಿಗೆ ಅಡ್ಡಬಡ್ಡಿಗೆ ಕಡಿವಾಣ ಹಾಕಿ ಸರ್ಕಾರದಿಂದಲೇ ದಿನಕ್ಕೆ ಐದರಿಂದ ಹತ್ತು ಸಾವಿರ ರೂ ಗಳ ಸಾಲ ಕೊಟ್ಟು ಬೀದಿ ವ್ಯಾಪಾರಸ್ಥರ ಜೀವನಾಡಿಯಾಗಿದ್ದಾರೆ. ಜೆಡಿಎಸ್ ಪಕ್ಷ ಅಧಿಕಾರದಲ್ಲಿದ್ದಾಗ ನೆರೆ ಸಂತ್ರಸ್ತರಿಗೆ ಪರಿಹಾರ ಹಾಗೂ ಬಾಣಂತಿಯರಿಗೆ 6000 ಸರ್ಕಾರದಿಂದ ಧನ ಸಹಾಯ ಮಾಡಿ ರಾಜ್ಯದ ಉದ್ದಗಲಕ್ಕೂ ಅಭಿವೃದ್ಧಿಯ ಹರಿಕಾರ ಎಂದು ಬಿಂಬಿಸಿಕೊಂಡಿದ್ದಾರೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಜೆಡಿಎಸ್ ಪರ್ವ ಆರಂಭವಾಗಿದೆ. ಇದು ಮುಂದಿನ ವಿಧಾನಸಭೆ ಚುನಾವಣೆಯ ದಿಕ್ಸೂಚಿಯಾಗಲಿದೆ. ಕ್ಷೇತ್ರದಲ್ಲಿ ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿ ಎಂ. ರವೀಶ್ ಕುಮಾರ್ ಕೂದಲೆಳೆಯ ಅಂತರದಲ್ಲಿ ಸೋಲು ಕಂಡಿದ್ದರು. ಈ ಬಾರಿ ಕ್ಷೇತ್ರದಲ್ಲಿ ಸಮರ್ಥವಾಗಿ ಪಕ್ಷವನ್ನು ಸಂಘಟಿಸಿ ಚುನಾವಣೆ ನಡೆಸಿದರೆ ನಮ್ಮ ಅಭ್ಯರ್ಥಿ ಜಯಗಳಿಸುತ್ತಾರೆ ಎಂದು ತಿಳಿಸಿದರು.
ಬಿಜೆಪಿ 40, ಕಾಂಗ್ರೆಸ್ ಪಕ್ಷದ 50 % ಕಮೀಷನ್ ಹಾವಳಿಗೆ ರಾಜ್ಯದಲ್ಲಿ ಜನರು ಬೇಸತ್ತು, ಪ್ರಾದೇಶಿಕ ಪಕ್ಷದ ಕಡೆ ಮುಖಮಾಡಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಜಯಗಳಿಸಿದರೆ ಮಾಜಿ ಶಾಸಕ ಬಸವರಾಜು ಮಂಡಿಮಠ್ ಗೆದ್ದಂತೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಕೆ. ಸಿ. ನಾಗರಾಜ್, ಕವಿತನಾಯಕಿ, ನಾಗಮಣಿ, ವಿರೇಂದ್ರಪ್ಪ, ಚಂದ್ರಪ್ಪ ಶ್ರೀನಿವಾಸ್ ಚೌಳೂರು, ಮುನಿಯಣ್ಣ, ವಿ ವೈ ಪ್ರಮೋದ್, ತಿಪ್ಪೇಸ್ವಾಮಿ, ರಾಜಣ್ಣ, ಹನುಮಂತ ಆಚಾರ್ ಸೇರಿದಂತೆ ಇನ್ನೂ ಅನೇಕ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
ಓದಿ : ರಾಜ್ಯದ ಎಲ್ಲಾ 224 ಕ್ಷೇತ್ರಗಳಿಗೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಕಣಕ್ಕೆ: ಮುಖ್ಯಮಂತ್ರಿ ಚಂದ್ರು