ETV Bharat / state

ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆ ಸೆರೆ; ಗ್ರಾಮಸ್ಥರು ಹೇಳಿದ್ದೇನು?

author img

By ETV Bharat Karnataka Team

Published : Nov 16, 2023, 3:44 PM IST

ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆ ಸೆರೆ
ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆ ಸೆರೆ

ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆಯೊಂದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆಹಿಡಿದಿದ್ದಾರೆ.

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಬಸನಿ ಎಂಬಲ್ಲಿ ಕಾಡಾನೆಯೊಂದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆಹಿಡಿದಿದ್ದಾರೆ. ಅರವಳಿಕೆ ನೀಡಿದ ಬಳಿಕ ಸುಮಾರು 8 ಕಿ.ಮೀನಷ್ಟು ದೂರ ಸಾಗಿದ ಒಂಟಿ ಸಲಗ ಸಾರಗೋಡು ಸಮೀಪ ಅರಣ್ಯದಲ್ಲಿ ಪ್ರಜ್ಞೆತಪ್ಪಿ ಬಿದ್ದಿತ್ತು. ಅಭಿಮನ್ಯು ನೇತೃತ್ವದ ಸಾಕಾನೆಗಳ ನೆರವಿನಿಂದ ಸೆರೆಯಾದ ಇದನ್ನು ಲಾರಿಗೆ ಹತ್ತಿಸಿ ಸಕ್ರೇಬೈಲ್ ಆನೆ ಶಿಬಿರದ ಕಡೆ ಕೊಂಡೊಯ್ಯಲಾಗಿದೆ.

ಚಿಕ್ಕಮಗಳೂರು ಜಿಲ್ಲೆ ಆಲ್ದೂರು ಸಮೀಪ ನವೆಂಬರ್ 8ರಂದು ಕಾರ್ಮಿಕ ಮಹಿಳೆಯೋರ್ವರನ್ನು ಆನೆ ತುಳಿದು ಕೊಂದಿತ್ತು. ಮಹಿಳೆಯನ್ನು ಕೊಂದ ದಿನವೇ ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದರು. ಅವರ ಸೂಚನೆಯ ಮೇರೆಗೆ ಆನೆಯನ್ನು ಸೆರೆಹಿಡಿದು ಬೇರೆಡೆಗೆ ಸಾಗಿಸಲು ಯೋಜನೆ ರೂಪಿಸಲಾಗಿತ್ತು. ಅಲ್ಲದೇ ಮಹಿಳೆಯನ್ನು ಕೊಂದ ಆನೆ ಮಲೆನಾಡು ಭಾಗದಲ್ಲೂ ಹಲವಾರು ಜನರ ಮೇಲೆ ದಾಳಿ ನಡೆಸಿತ್ತು.

ಆನೆ ಸೆರೆ ಜತೆಗೆ ಆಲ್ದೂರು ಸುತ್ತಮುತ್ತ ಸಂಚರಿಸುತ್ತಿರುವ ಭುವನೇಶ್ವರಿ ತಂಡದ ಏಳು ಆನೆಗಳನ್ನು ಕಾಡಿಗಟ್ಟಲು ಒಟ್ಟು 9ಸಾಕಾನೆಗಳನ್ನು ಕರೆತರಲಾಗಿತ್ತು. ಒಂಟಿ ಸಲಗದ ಪತ್ತೆಗೆ 5 ದಿನಗಳ ಕಾಲ ಸತತ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಕಾರ್ಯಾಚರಣೆ ವೇಳೆ ಆನೆ ಮಾತ್ರ ಪತ್ತೆಯಾಗಿರಲಿಲ್ಲ. ಪ್ರಾಣ ಹಾನಿ ಉಂಟು ಮಾಡುತ್ತಿದ್ದ ಒಂಟಿ ಸಲಗವನ್ನು ಹಿಡಿಯಲು ಕಾರ್ಯಾಚರಣೆ ನಡೆಸುತ್ತಿರುವಾಗ ಕುಂದೂರು ಭಾಗದ ಕಾಡಿನಲ್ಲಿ ಅನೇಕ ಆನೆಗಳು ಪತ್ತೆಯಾಗಿದ್ದವು. ಅದರಲ್ಲಿ ಕಾಡಾನೆಯೊಂದನ್ನು ಈಗ ಸೆರೆಹಿಡಿಯಲಾಗಿದೆ. ಸೆರೆಯಾಗಿರುವ ಆನೆಯೂ ಸಹ ಕುಂದೂರು ಸಾರಗೋಡು ಭಾಗದಲ್ಲಿ ರೈತರಿಗೆ ಉಪಟಳ ನೀಡುತ್ತಿತ್ತು.

ಆದರೆ ಸೆರೆ ಹಿಡಿದಿರುವ ಆನೆ ಕಾರ್ಮಿಕ ಮಹಿಳೆಯನ್ನು ಸಾಯಿಸಿರುವ ಆನೆಯಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮೊನ್ನೆ ಆಲ್ದೂರು ಸಮೀಪ ಮಹಿಳೆಯನ್ನು ಸಾಯಿಸಿದ್ದ ಆನೆಯ ಬೆನ್ನಿನ ಭಾಗದಲ್ಲಿ ದಪ್ಪದ ಗಂಟು ಇತ್ತು. ಅದರ ದಂತಗಳು ಚಿಕ್ಕದಾಗಿದ್ದವು, ಈಗ ಸೆರೆಯಾಗಿರುವ ಆನೆಯ ದಂತಗಳು ತುಂಬಾ ಉದ್ದವಾಗಿವೆ. ಹಾಗಾಗಿ ಈಗ ಹಿಡಿದಿರುವ ಆನೆ ಮನುಷ್ಯರನ್ನು ಕೊಂದಿಲ್ಲ ಎಂದು ಹೇಳುತ್ತಿದ್ದಾರೆ.

ಈ ಹಿನ್ನೆಲೆ ಹಂತಕ ಆನೆಯನ್ನು ಸೆರೆಹಿಡಿಯಲು ಕಾರ್ಯಾಚರಣೆ ಮುಂದುವರೆದಿದೆ. ಸದ್ಯ ಸೆರೆಯಾದ ಆನೆ ರೈತರ ಕೃಷಿ ಜಮೀನಿಗೆ ನುಗ್ಗಿ ಬೆಳೆ ನಾಶ ಮಾಡಿರುವುದು ಎಂದು ಪತ್ತೆಹಚ್ಚಲಾಗಿದೆ. ಒಂದು ದಿನದ ವಿಶ್ರಾಂತಿ ನಂತರ ಮತ್ತಾವರ ಭಾಗದಲ್ಲಿರುವ ಭುವನೇಶ್ವರಿ ತಂಡದ ಏಳು ಆನೆಗಳನ್ನು ಕಾಡಿಗಟ್ಟುವ ಮತ್ತು ಮಹಿಳೆ ಸಾವಿಗೆ ಕಾರಣವಾಗಿರುವ ಒಂಟಿ ಸಲಗವನ್ನು ಸೆರೆಹಿಡಿಯುವ ಕಾರ್ಯಾಚರಣೆ ಮುಂದುವರಿಯುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಂತಕ ಆನೆಯ ಸುಳಿವು ಸಿಕ್ಕರೆ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕೆಂದು ಕೂಡ ಕೋರಿದ್ದಾರೆ.

ಇದನ್ನೂ ಓದಿ: ಕೊಡಗು: ತಾಯಿ ಮಡಿಲು ಸೇರಿದ ಮರಿಯಾನೆ- ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.