ETV Bharat / state

ಪ್ರಕೃತಿಯ ವಿಸ್ಮಯ: ಮೂಡಿಗೆರೆಯಲ್ಲಿ ಅಲುಗಾಡಿತಾ 400 ವರ್ಷದ ಇತಿಹಾಸವಿರುವ ಹುತ್ತ!?

author img

By

Published : Nov 7, 2022, 4:12 PM IST

Updated : Nov 7, 2022, 6:36 PM IST

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಉಣ್ಣಕ್ಕಿ ಉತ್ಸವದಲ್ಲಿ ಹುತ್ತವೊಂದು ಅಲುಗಾಡಿದೆ ಎನ್ನಲಾಗ್ತಿದೆ. ಇದರಿಂದ ಭಕ್ತರು ಮೂಕವಿಸ್ಮಿತರಾಗಿದ್ದಾರೆ.

ಮೂಡಿಗೆರೆಯಲ್ಲಿ ಅಲುಗಾಡಿದ 400 ವರ್ಷದ ಹುತ್ತ
ಮೂಡಿಗೆರೆಯಲ್ಲಿ ಅಲುಗಾಡಿದ 400 ವರ್ಷದ ಹುತ್ತ

ಚಿಕ್ಕಮಗಳೂರು: ಪ್ರಕೃತಿಯ ವೈಚಿತ್ರ್ಯವೇ ಹಾಗೆ. ಇಲ್ಲಿನ ಅದೆಷ್ಟೋ ಸತ್ಯಗಳಿಗೆ ಕಾರಣ ಹುಡುಕ ಹೊರಟ್ರೆ ಸೋಲು ಕಟ್ಟಿಟ್ಟ ಬುತ್ತಿ. ಭೂಗರ್ಭದ ಒಡಲಾಳದಲ್ಲಿ ಅಡಗಿರೋ ಒಂದೊಂದು ಸತ್ಯ ಹೊರಬಂದಾಗಲೂ ದೇವರಿರೋದು ಸತ್ಯ ಅನ್ಸುತ್ತೆ ಅನ್ನೋದು ಭಕ್ತರ ನಂಬಿಕೆಯಾಗಿದೆ.

ಏನಿದು ವಿಸ್ಮಯ? ಆ ಹುತ್ತಕ್ಕೆ ಸೂರಿಲ್ಲ. ತಡೆಗೋಡೆಗಳೂ ಇಲ್ಲ. ಆದ್ರು ಮಳೆ-ಗಾಳಿಗೆ ಒಂದಿಂಚು ಕರಗಿಲ್ಲ. ಹುತ್ತದ ಸುತ್ತಲೂ ಕಲ್ಲು-ಸಿಮೆಂಟ್‍ಗಳಿಂದ ಬಂದೋಬಸ್ತ್ ಮಾಡಿದ್ರು ಕೂಡ ದೀಪಾವಳಿ ಅಮಾವಾಸ್ಯೆಯ ನಂತರದ ಮಕ್ಕಳ ಹುಣ್ಣೆಮೆಯ ದಿನ ಮಹಾಮಂಗಳಾರತಿ ವೇಳೆ ಇಲ್ಲಿ ನಡೆಯೋ ವೈಚಿತ್ರ್ಯವನ್ನು ಕಂಡ್ರೆ ಎಂತಹ ನಾಸ್ತಿಕರೂ ಕೂಡ ಆಸ್ತಿಕರಾಗ್ತಾರೆ ಅಂತಾರೆ ಸ್ಥಳೀಯರು.

ಮೂಡಿಗೆರೆಯಲ್ಲಿ ಅಲುಗಾಡಿತೆ 400 ವರ್ಷದ ಹುತ್ತ!?

ಹೌದು, ದನ ಕಾಯೋ ಹುಡುಗರು ಕಟ್ಟಿದ ಮಣ್ಣಿನ ಗೂಡು ಇಂದು ಸಾವಿರಾರು ಭಕ್ತರ ಇಷ್ಟ ದೈವವಾಗಿದೆ. ಈ ಆಚರಣೆಗೆ 400 ವರ್ಷಗಳ ಇತಿಹಾಸವಿದೆಯಂತೆ. ಪ್ರತಿ ವರ್ಷ ದೀಪಾವಳಿ ಅಮಾವಾಸ್ಯೆಯ ನಂತರದ ಮಕ್ಕಳ ಹುಣ್ಣೆಮೆಯಂದು ನಡೆಯೋ ಉತ್ಸವದಲ್ಲಿ ಮಹಾಮಂಗಳಾರತಿ ವೇಳೆ ಈ ಹುತ್ತ 10 ರಿಂದ 15 ಡಿಗ್ರಿ ಅಂತರದಲ್ಲಿ ಅಲುಗಾಡುತ್ತೆ ಅನ್ನೋದು ಭಕ್ತರ ನಂಬಿಕೆ.

ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಉಣ್ಣಕ್ಕಿ ಉತ್ಸವ. ಈ ಹುತ್ತ ಬರೀ ಮಣ್ಣಿನ ಗೂಡಲ್ಲ. ದೈವಿಶಕ್ತಿಯ ಗುಡಿ. 400 ವರ್ಷಗಳ ಹಿಂದೆ, ಚಿಕ್ಕದಿದ್ದ ಗೂಡು ಇಂದು 16 ಅಡಿಗೂ ಎತ್ತರ ಬೆಳೆದಿದೆ. ಈ ಹುತ್ತಕ್ಕೆ ಸೂರಿಲ್ಲ. ಮಳೆ-ಗಾಳಿಗೆ ಕರಗಿಲ್ಲ. ವರ್ಷಪೂರ್ತಿ ಮಣ್ಣಿನ ಗೊಂಬೆಯಂತೆ ನಿಂತ ಹುತ್ತ ವರ್ಷಕ್ಕೊಮ್ಮೆ ಭಕ್ತರನ್ನು ಮೂಕವಿಸ್ಮಿತರನ್ನಾಗಿಸುತ್ತೆ. ಈ ಪವಾಡವನ್ನು ನೋಡಲೆಂದು ಬಂದವರು ನಾಗಪ್ಪನ ಭಕ್ತರಾಗಿ ಪ್ರತಿ ಭೇಟಿ ನೀಡುತ್ತಿದ್ದಾರೆ.

ಕರುವಿನ ಮೇಲೆ ಮಂಡಕ್ಕಿ ಅರ್ಪಣೆ: ಉತ್ಸವದಂದು ಯಾವುದೇ ಗಾಯವಾಗದ ಕರುವಿನ ಕಿವಿಯನ್ನು ಕತ್ತರಿಸಿ ದೇವರ ಕರುವೆಂದು ಕಾಡಿಗೆ ಬಿಡ್ತಾರೆ. ಇದರಿಂದ ಊರಿನ ದನಕರುಗಳು ಆರೋಗ್ಯದಿಂದಿದ್ದು, ಯಾವುದೇ ಅನಾಹುತಗಳು ನಡೆಯೋದಿಲ್ಲ ಅನ್ನೋದು ನಂಬಿಕೆ. ದನ ಕಾಯೋ ಹುಡುಗರು ಕಟ್ಟಿದ ಹುತ್ತವಾದ್ದರಿಂದ ಕರುವನ್ನು ಕಾಡಿಗೆ ಹೊಡೆಯುವ ಆಚರಣೆ ಬೆಳೆದು ಬಂದಿದೆ. ಉತ್ಸವದ ದಿನ ಕರುವನ್ನು ಹುತ್ತಕ್ಕೆ ಸುತ್ತಿಸುವ ವೇಳೆ ಕರುವಿನ ಮೇಲೆ ಮಂಡಕ್ಕಿ ಹಾಕ್ತೇವೆಂದು ಹರಕೆ ಕಟ್ಟಿಕೊಂಡ್ರೆ ಎಂತಹ ಕಷ್ಟವೂ ಕಳೆಯುತ್ತಂತೆ.

ನಾಗಪ್ಪನ ಮಾಯೆಗೆ ಬೆರಗಾದ ಭಕ್ತರು: ಪ್ರತಿವರ್ಷ ದೀಪಾವಳಿಯ ನಂತರದ ಮಕ್ಕಳ ಹುಣ್ಣಿಮೆಯಂದು ಈ ಉತ್ಸವ ನಡೆಯಲಿದೆ. ಚರ್ಮರೋಗ, ಮಕ್ಕಳಾಗದವರು, ದನಕರು ಸಾಯ್ತಿದ್ರೆ ಅಥವಾ ಆರೋಗ್ಯ ಹದಗೆಟ್ತಿದ್ರೆ ಇಲ್ಲಿಗೆ ಹರಕೆ ಕಟ್ಟಿದ್ರೆ ಸಾಕು, ವರ್ಷದೊಳಗೆ ಆ ಹರಕೆ ಈಡೇರೋದ್ರಿಂದ ಸುತ್ತಮುತ್ತಲಿನ ಜಿಲ್ಲೆಯ ಜನರು ಈ ನಾಗಪ್ಪನ ಮಾಯೆಗೆ ಬೆರಗಾಗಿದ್ದಾರಂತೆ.

ಆಸ್ತಿಕ ಹಾಗೂ ನಾಸ್ತಿಕರಲ್ಲಿ ಹಲವು ವಾದ: ಒಟ್ಟಾರೆಯಾಗಿ ತರ್ಕಕ್ಕೆ ನಿಲುಕದ ಈ ಗ್ರಾಮದ ಉತ್ಸವ ಇಂದಿಗೂ ಪ್ರಶ್ನಾತೀತ. ಹುತ್ತ ಅಲುಗಾಡೋದ್ರ ಹಿಂದೆ ವೈಜ್ಞಾನಿಕ ಕಾರಣವಿದ್ಯೋ ಅಥವಾ ದೈವಿಶಕ್ತಿಯ ಪ್ರಭಾವವಿದ್ಯೋ ಅನ್ನೋದು ಇಂದಿಗೂ ನಿಗೂಢ. ದನಕಾಯೋ ಹುಡುಗರ ಭಕ್ತಿಯ ಹಿಂದಿರೋ ಈ ಹುತ್ತ ಅಲುಗಾಡುತ್ತ ಪವಾಡವನ್ನೇ ಸೃಷ್ಟಿಸಿದೆ ಎಂಬ ಮಾತುಗಳು ಒಂದೆಡೆ ಕೇಳಿಬಂದ್ರೆ, ಹುತ್ತ ಅಲುಗಾಡುವುದರ ಬಗ್ಗೆ ಆಸ್ತಿಕ ಹಾಗೂ ನಾಸ್ತಿಕರಲ್ಲಿ ಹಲವು ವಾದಗಳಿವೆ. ಆದರೆ, ನೋಡುಗರ ಕಣ್ಮುಂದೆ ನಡೆಯೋ ದೃಶ್ಯ ಅವರವರ ಭಕ್ತಿ ಭಾವಕ್ಕನುಸಾರವಾಗಿರುತ್ತೆ.

ಓದಿ: ಚಿಕ್ಕಮಗಳೂರು: ಉಣ್ಣಕ್ಕಿ ಉತ್ಸವದಲ್ಲಿ ಅಲುಗಾಡಿದ ಹುತ್ತ

Last Updated : Nov 7, 2022, 6:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.