ಚಾರ್ಮಾಡಿಗೆ ಬಿಟ್ಟು ಬಂದ ನಾಲ್ಕೇ ದಿನದಲ್ಲಿ ಕೊಟ್ಟಿಗೆಹಾರಕ್ಕೆ ಕೋತಿ ರಿಟರ್ನ್..​ ಜನರಲ್ಲಿ ಮತ್ತೆ ಆತಂಕ

author img

By

Published : Sep 23, 2021, 5:57 PM IST

monkey-returns-to-kottigehara-in-mudigere

ಮೂಡಿಗೆರೆಯ ಜನರಲ್ಲಿ ಆತಂಕ ಮೂಡಿಸಿದ್ದ ಕೋತಿಯನ್ನು ಇತ್ತೀಚೆಗೆ ಸೆರೆ ಹಿಡಿದು ಚಾರ್ಮಾಡಿನ ಅರಣ್ಯದಲ್ಲಿ ಬಿಟ್ಟುಬರಲಾಗಿತ್ತು. ಆದ್ರೆ ನಾಲ್ಕು ದಿನ ಕಳೆಯುವುದರೊಳಗೆ ಇದೀಗ ಮತ್ತೆ ಕೊಟ್ಟಿಗೆಹಾರಕ್ಕೆ ಮಂಗ ಮರಳಿದೆ.

ಚಿಕ್ಕಮಗಳೂರು: ರೇಗಿಸಿದವನ ಮೇಲೆ ದಾಳಿ ಮಾಡಿದ್ದ ಕೋತಿಯನ್ನು ಸೆರೆಹಿಡಿದು 22 ಕಿ. ಮೀ ದೂರದ ದಟ್ಟ ಅರಣ್ಯಕ್ಕೆ ಬಿಡಲಾಗಿತ್ತು. ಇದೀಗ ನಾಲ್ಕೇ ದಿನಕ್ಕೆ ಗೊಬ್ಬರದ ಲಾರಿ ಏರಿ ಮತ್ತೆ ಅದೇ ಜಾಗಕ್ಕೆ ಬಂದಿರುವ ಘಟನೆ ಜಿಲ್ಲೆಯ ಮೂಡಿಗೆರೆಯಲ್ಲಿ ನಡೆದಿದೆ.

ಅರಣ್ಯಕ್ಕೆ ಬಿಟ್ಟು ಬಂದ ನಾಲ್ಕೇ ದಿನಕ್ಕೆ ಮರಳಿ ಬಂದ ಕೋತಿ

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ತುರುವೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿದ್ದ ಕೋತಿಯನ್ನು ಹಿಡಿಯಲು ಹೋದಾಗ ಅರಣ್ಯ ಇಲಾಖೆ ಸಿಬ್ಬಂದಿ ಜೊತೆ ಹೋಗಿದ್ದ ಆಟೋ ಚಾಲಕ ಕೋತಿಗೆ ರೇಗಿಸಿದ್ದ. ಇದರಿಂದ ರೊಚ್ಚಿಗೆದ್ದ ಕೋತಿ ಆತನ ಮೇಲೆ ದಾಳಿ ಮಾಡಿತ್ತಲ್ಲದೆ, ಅವನ ಕೈಕಚ್ಚಿ ಸೇಡು ತೀರಿಸಿಕೊಂಡಿತ್ತು.

ಬಳಿಕ ಅವನನ್ನು ಹುಡುಕಿಕೊಂಡು ಆಟೋ ನಿಲ್ದಾಣಕ್ಕೆ ಬಂದು ಅವನ ಆಟೋ ಟಾಪ್ ಕಿತ್ತು ಹಾಕಿತ್ತು. ಅಲ್ಲದೆ, ಅದು ಗಾಬರಿಯಿಂದ ಸ್ಥಳೀಯರ ಮೇಲೂ ದಾಳಿಗೆ ಮುಂದಾಗಿತ್ತು. ಆಗ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು 18 ಗಂಟೆ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದು ಅದನ್ನು ಚಾರ್ಮಾಡಿ ಅರಣ್ಯಕ್ಕೆ ಬಿಟ್ಟು ಬಂದಿದ್ದರು.

ಕೋತಿಯನ್ನು ಸೆರೆ ಹಿಡಿದು ನಾಲ್ಕು ದಿನ ಕಳೆಯುವುದರೊಳಗೆ ಇದೀಗ ಮತ್ತೆ ಕೊಟ್ಟಿಗೆಹಾರದಲ್ಲಿ ಎಲ್ಲಿ ಸೆರೆಯಾಗಿತ್ತೋ ಅಲ್ಲಿಗೆ ಬಂದು ಕುಳಿತಿದೆ. ಇದರಿಂದ ಸ್ಥಳೀಯರಲ್ಲಿ ಮತ್ತೆ ಆತಂಕ ಮನೆ ಮಾಡಿದೆ. ಅರಣ್ಯ ಇಲಾಖೆ ಸಿಬ್ಬಂದಿ ಮತ್ತೆ ಕೋತಿಯನ್ನು ಸೆರೆ ಹಿಡಿಯಲು ಮುಂದಾಗಿದ್ದಾರೆ.

ಓದಿ: ಕೀಟಲೆ ಮಾಡಿದ ಆಟೋ ಡ್ರೈವರ್​ನ್ನು ಅಟ್ಟಾಡಿಸಿದ ಕೋತಿ: ಮಂಗನ ಕೋಪಕ್ಕೆ ಬೆಚ್ಚಿಬಿದ್ದ ಮೂಡಿಗೆರೆ ಜನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.