ETV Bharat / state

ಚಿಕ್ಕಮಗಳೂರಿನಲ್ಲಿ ಗಾಳಿಸಹಿತ ಭಾರಿ ಮಳೆ; ಮನೆಗಳಿಗೆ ಹಾನಿ, ಮರ ಬಿದ್ದು ವ್ಯಕ್ತಿಗೆ ಗಾಯ

author img

By

Published : Jul 23, 2023, 8:52 AM IST

ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಮರ ಬಿದ್ದು ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ.

rain
ಮರ ಬಿದ್ದು ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ, ಕುಸಿದ ಮನೆ ಮುಂದೆ ಮಾಲೀಕರು

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗ ಹಾಗೂ ವಿವಿಧ ತಾಲೂಕುಗಳಲ್ಲಿ ಕಳೆದ ಎರಡು ದಿನದಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಮೈಮೇಲೆ ಮರ ಬಿದ್ದು ಕಳಸ ತಾಲೂಕಿನ ಸಂಪಿಖಾನ್ ಗ್ರಾಮದ ಶಂಕರ ಗೌಡ (42) ಎಂಬವರು ಗಾಯಗೊಂಡಿದ್ದಾರೆ.

ಜಾನುವಾರುಗಳಿಗೆ ಹುಲ್ಲು ಕೊಯ್ಯುವಾಗ ಶಂಕರ ಗೌಡರ ಮೈಮೇಲೆ ಮರ ಬಿದ್ದಿದೆ. ಸುದ್ದಿ ತಿಳಿದು ಸ್ಥಳೀಯರು ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದರು. ಮರ ಬಿದ್ದ ರಭಸಕ್ಕೆ ಎದೆ, ಒಂದು ಕಾಲಿಗೆ ಗಂಭೀರ ಸ್ವರೂಪದ ಗಾಯವಾಗಿದೆ. ಗಾಯಾಳುವನ್ನು ಆಂಬ್ಯುಲೆನ್ಸ್​ ಮೂಲಕ ಕಳಸ ಆಸ್ಪತ್ರೆಗೆ ಸ್ಥಳೀಯರು ದಾಖಲು ಮಾಡಿದ್ದಾರೆ. ಪ್ರಾಥಮಿಕ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನಿಸಲಾಗಿದೆ. ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇನ್ನು, ಮಳೆಯಿಂದ ಜಿಲ್ಲೆಯ ವಿವಿಧೆಡೆ ಮನೆಗಳು ಕುಸಿದ ಘಟನೆಗಳು ವರದಿಯಾಗಿವೆ. ತರೀಕೆರೆ ತಾಲೂಕಿನ ಸೀತಾಪುರ ಕಾವಲ್​​ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಬಿದ್ದಿದೆ. ಗ್ರಾಮದ ಅನಿಯಮ್ಮ ನಟೇಶ್ ಎಂಬವರಿಗೆ ಸೇರಿದ ಮನೆ ಕುಸಿದು ಬಿದ್ದಿದ್ದು ಹಲವು ವಸ್ತುಗಳಿಗೆ ಹಾನಿಯಾಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪಂಚಾಯತಿ ಅಭಿವೃದ್ಧಿ ಅಧಿಕಾರಿ ರವಿ ನಾಯ್ಕ್, ಗ್ರಾಮ ಲೆಕ್ಕಾಧಿಕಾರಿ ಪ್ರದೀಪ್ ಆಗಮಿಸಿ ಮನೆ ಪರಿಶೀಲನೆ ನಡೆಸಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯ ವೀರಮಣಿ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಪರಿಹಾರದ ಭರವಸೆ ನೀಡಿದ್ದಾರೆ. ಹೊಸಪೇಟೆ ಸಮೀಪದ‌ ಶಿವಪುರ ಗ್ರಾಮದ ರಾಜೇಂದ್ರ ಎಂಬವರಿಗೆ ಸೇರಿದ ಮನೆ ಕುಸಿದಿದ್ದು, ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಬೆಳ್ತಂಗಡಿಯಲ್ಲಿ ಮನೆಗಳಿಗೆ ಹಾನಿ, ನದಿಗಳ ನೀರಿನ‌ ಮಟ್ಟ ಏರಿಕೆ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಾದ್ಯಂತ ಎಡೆಬಿಡದೆ ಭಾರಿ ಮಳೆಯಾಗುತ್ತಿದೆ. ಹಲವು ಕಡೆಗಳಲ್ಲಿ ಮನೆಗಳಿಗೆ ಹಾನಿ ಸಂಭವಿಸಿದೆ.‌ ಕಲ್ಮಂಜ ಗ್ರಾಮದ ಪಜಿರಡ್ಕ ಎಸ್‌ಸಿ ಕಾಲೊನಿಯಲ್ಲಿ ಮನೆಯೊಂದರ ಮೇಲೆ ವಿದ್ಯುತ್ ಕಂಬ ಉರುಳಿ ಬಿದ್ದು ಹಾನಿಯುಂಟಾಗಿದೆ. ಪಡಂಗಡಿ ಗ್ರಾಮದ ಬಾಬು ಹಾಗೂ ಕಲ್ಯಾಣಿ ಎಂಬವರ ಕೊಟ್ಟಿಗೆಗೆ ಗಾಳಿಯಿಂದ ಹಾನಿಯಾಗಿದೆ.

ಬೆಳ್ತಂಗಡಿಯಲ್ಲಿ ಮಳೆಯ ಅವಾಂತರಗಳು
ಬೆಳ್ತಂಗಡಿಯಲ್ಲಿ ಮಳೆಯ ಅವಾಂತರಗಳು

ಮಾಲಾಡಿ ಗ್ರಾಮದ ಮುಂಡಾಡಿ ಜನತಾ ಕಾಲೊನಿಯ ಶಕುಂತಳಾ ಎಂಬವರ ಮನೆಯ ಗೋಡೆ ಕುಸಿದಿದೆ. ವೇಣೂರು ಗ್ರಾಮದ ಮೈಮುನ ಎಂಬವರ ಮನೆಗೆ ಮರ ಬಿದ್ದಿದೆ. ಸೋಣಂದೂರು ಗ್ರಾಮದ ಸಬರಬೈಲು ಅಣ್ಣಿ ಮೂಲ್ಯರ ಶೌಚಾಲಯದ ಗೋಡೆ ಕುಸಿದುಬಿದ್ದಿದೆ. ಮಿತ್ತಬಾಗಿಲು ಗ್ರಾಮದ ಅಬೂಬಕ್ಕರ್ ಮನೆಯ ಮೇಲ್ಚಾವಣಿ ಗಾಳಿ, ಮಳೆಗೆ ಕುಸಿದು ಬಿದ್ದು ಹಾನಿಯಾಗಿದೆ.

ಭಾರಿ ಮಳೆಯಿಂದಾಗಿ ನೇತ್ರಾವತಿ ಸೇರಿದಂತೆ ತಾಲೂಕಿನಲ್ಲಿ ಹರಿಯುವ ವಿವಿಧ ನದಿಗಳಲ್ಲಿ ನೀರಿನ ಮಟ್ಟ ಏರಿಕೆ ಕಂಡಿದೆ.‌ ಕಳೆದ ಕೆಲವು ವರ್ಷಗಳ ಹಿಂದೆ ತಾಲೂಕಿನಲ್ಲಿ ಭಾರಿ ಮಳೆಗೆ ಭೂಕುಸಿತ ಉಂಟಾಗಿ ನೆರೆಯಿಂದಾಗಿ ದೊಡ್ಡ ಅನಾಹುತ ಸಂಭವಿಸಿತ್ತು. ಚಾರ್ಮಾಡಿ ಘಾಟ್ ಪ್ರದೇಶ ಸೇರಿದಂತೆ ವಿವಿಧೆಡೆ ಸತತವಾಗಿ ಮಳೆಯಾಗುತಿದ್ದು, ರಾತ್ರಿ ವೇಳೆಯೂ ಮಳೆ ಜೋರಾದರೆ ನೆರೆ ಅಥವಾ ಭೂಕುಸಿತ ಭಯದ ಆತಂಕ ಜನರಲ್ಲಿ ಮೂಡಿದೆ.

ಇದನ್ನೂ ಓದಿ: ಉಕ್ಕಿ ಹರಿದ ದೂಧ್​ ಗಂಗಾ, ಕೃಷ್ಣಾ, 16 ಸೇತುವೆಗಳು ಜಲಾವೃತ: ಬಂಗಾಲಿ ಬಾಬಾ ದರ್ಗಾಕ್ಕೂ ಜಲ ದಿಗ್ಭಂಧನ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.