ETV Bharat / state

ರೋಗಿಯನ್ನು ಜೋಳಿಗೆಯಲ್ಲಿ ಕಟ್ಟಿ ಆಸ್ಪತ್ರೆಗೆ ಒಯ್ಯುವ ಗ್ರಾಮಸ್ಥರು.. ಇದು ಹೀನಾರಿ ಗ್ರಾಮದ ನರಕಯಾತನೆ

author img

By ETV Bharat Karnataka Team

Published : Nov 2, 2023, 9:32 PM IST

Updated : Nov 2, 2023, 10:50 PM IST

ಫೋನ್ ರಿಂಗಣಿಸಿದರೆ ಮನೆ ಬಾಗಿಲಿಗೆ ಆಂಬ್ಯುಲೆನ್ಸ್ ಬಂದು ನಿಲ್ಲುವ ಕಾಲ ಇದು. ಆದರೆ ಕಲ್ಲು-ಮುಳ್ಳನ್ನು ಲೆಕ್ಕಿಸದೇ ಬೆಟ್ಟಹಳ್ಳ - ಗುಡ್ಡವೇರಿ ಅನಾರೋಗ್ಯ ಪೀಡಿತ ವ್ಯಕ್ತಿಯನ್ನೂ ಜೋಳಿಗೆಯಲ್ಲಿ ಆಸ್ಪತ್ರೆಗೆ ಸಾಗಿಸುವ ಗಂಭೀರ ಸ್ಥಿತಿ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹೀನಾರಿ ಗ್ರಾಮದಲ್ಲಿ ಇದೆ..

Villagers carry the patient in a sack to the hospital
ರೋಗಿಯನ್ನು ಜೋಳಿಗೆಯಲ್ಲಿ ಕಟ್ಟಿ ಆಸ್ಪತ್ರೆಗೆ ಒಯ್ಯುವ ಗ್ರಾಮಸ್ಥರು

ರೋಗಿಯನ್ನು ಜೋಳಿಗೆಯಲ್ಲಿ ಕಟ್ಟಿ ಆಸ್ಪತ್ರೆಗೆ ಒಯ್ಯುವ ಗ್ರಾಮಸ್ಥರು.. ಇದು ಹೀನಾರಿ ಗ್ರಾಮದ ನರಕಯಾತನೆ

ಚಿಕ್ಕಮಗಳೂರು:ಕಾಫಿನಾಡು ಮಲೆನಾಡು ಭಾಗದಲ್ಲಿ ಇಂದಿಗೂ ಜೋಳಿಗೆ ಪದ್ಧತಿ ಇನ್ನೂ ಜೀವಂತವಾಗಿದೆ. ಕರ್ನಾಟಕ ಸುವರ್ಣ ಮಹೋತ್ಸವದ ಆಚರಣೆ ಸಂಭ್ರಮದಲ್ಲಿದ್ದರೆ ಹಳ್ಳಿಗರು ಓಡಾಡೋಕು ರಸ್ತೆ ಇಲ್ಲದೇ ರೋಗಿಗಳನ್ನು ಜೋಳಿಗೆಯಲ್ಲಿ ಆಸ್ಪತ್ರೆಗೆ ಹೊತ್ಕೊಂಡು ಹೋಗುವ ದುಸ್ತರ ಬದುಕನ್ನು ಇನ್ನೂ ಸಾಗಿಸುತ್ತಿದ್ದಾರೆ.

ಜಿಕ್ಕಮಗಳೂರು ಜಿಲ್ಲೆಯ ಕಾಫಿನಾಡು ಕಾಡಂಚಿನ ಕುಗ್ರಾಮಗಳ ಜನರ ಬದುಕು ನಿಜಕ್ಕೂ ಘನಘೋರ. ಫೋನ್ ರಿಂಗಣಿಸಿದರೆ ಮನೆ ಬಾಗಿಲಿಗೆ ಆಂಬ್ಯುಲೆನ್ಸ್​ ಬಂದು ನಿಲ್ಲುವ ಈ ಕಾಲದಲ್ಲಿ ಜೋಳಿಗೆಯಲ್ಲಿ ರೋಗಿಗಳನ್ನು ಹೊತ್ಕೊಂಡು ಹೋಗ್ತಿರೋ ಆ ನತದೃಷ್ಟ ಹಳ್ಳಿಯೊಂದು ಇದೆ.

ಹೌದು.. ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲು ಜೋಳಿಗೆ ಮೊರೆ ಹೋಗುವ ಮಲೆನಾಡಿಗರ ನರಳಾಟ ಮುಂದುವರಿದಿದೆ. ಬೆಟ್ಟ-ಗುಡ್ಡ, ಕಲ್ಲು-ಮುಳ್ಳನ್ನು ಲೆಕ್ಕಿಸದೇ ಹಳ್ಳ-ಗುಡ್ಡವೇರಿ ಗ್ರಾಮಸ್ಥರು ಜೋಳಿಗೆ ಹೊತ್ತುಕೊಂಡು ಸಾಗಿಸುವ ಸ್ಥಿತಿ ಮನ ಕಲಕುವ ಘಟನೆಗೆ ಸಾಕ್ಷಿಯಾಗಿದೆ.

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹೀನಾರಿ ಗ್ರಾಮ. ಕಳಸ ತಾಲೂಕಿನಲ್ಲಿ ಈ ಆಧುನಿಕ ಕಾಲದಲ್ಲಿಯೂ ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಜೋಳಿಗೆ ಮೂಲಕ ಆಸ್ಪತ್ರೆಗೆ ಸಾಗಿಸುವುದು ಇನ್ನೂ ಜಾರಿಯಲ್ಲಿದೆ. ಅದಕ್ಕೆ ಕಾರಣ ನಮ್ಮ ವ್ಯವಸ್ಥೆ. ಇಲ್ಲಿನ 36 ಕುಟುಂಬಗಳ ಬದುಕಿನ ಬವಣೆಯನ್ನು ಕೇಳೋರೇ ಇಲ್ಲ.. ಇಲ್ಲಿ ಎಲ್ಲವೂ ನಿತ್ಯ ನರಕಮಯ.

ಸೂಕ್ತ ರಸ್ತೆ, ಮೂಲ ಸೌಕರ್ಯಗಳಿಲ್ಲದೇ ಪರದಾಡುವ ಗ್ರಾಮದ ಜನ ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಜೋಳಿಗೆಯಲ್ಲಿ ಹೊತ್ತೊಯ್ಯುತ್ತಿರುವ ದೃಶ್ಯ ನಿಜಕ್ಕೂ ಮನ ಕಲಕುವಂತಿದೆ. ಹೇಗಾದರೂ ಮಾಡಿ ವ್ಯಕ್ತಿಯ ಜೀವ ಉಳಿಸಬೇಕು ಅನ್ನೋದು ಹಳ್ಳಿಗರ ಛಲ. ಮತ್ತೊಂದೆಡೆ ಜೋಳಿಗೆಯಲ್ಲಿ ನರಳಾಡುತ್ತಿರುವ ವ್ಯಕ್ತಿಯ ನರಳಾಟ ಯಾವ ಶತ್ರುವಿಗೂ ಬೇಡದಂತಾಗಿದೆ. ಇಲ್ಲಿನ ಜನ ಸ್ವಾಮಿ ರಸ್ತೆ ನಿರ್ಮಾಣ ಮಾಡಿಕೊಡಿ ಅಂತ ಹತ್ತಾರು ಬಾರಿ ಸರ್ಕಾರ, ಜನ ಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮನವಿ ಪತ್ರಗಳ ಸ್ಥಿತಿ ನೀರಲ್ಲಿ ಅಸ್ತಿ ಬಿಟ್ಟಂತಾಗಿದ್ದು, ಜನರ ಕಣ್ಣೀರಿಗೆ ಬೆಲೆ ಇಲ್ಲದಂತಾಗಿದೆ.

ಕಲ್ಲು-ಮುಳ್ಳುಗಳ ಮಧ್ಯೆ ರಸ್ತೆ ಹುಡುಕಬೇಕು: ಕೇವಲ ಒಂದೂವರೆ ಕಿ.ಮೀ. ದೂರದ ರಸ್ತೆ ದಾಟಲೂ ಯಾವುದೇ ವ್ಯವಸ್ಥೆ ಇಲ್ಲ. ಅದು ಕಾಫಿ ತೋಟ, ಕಾಡುಮೇಡಿನ ದಾರಿ. ಸರ್ಕಾರದ ರಸ್ತೆ ಇದೆ. ಆದರೆ ಗ್ರಾಮದಿಂದ 16 ಕಿ.ಮೀ. ದೂರದಲ್ಲಿದೆ. ಆ ರಸ್ತೆ ದೇವರಿಗೆ ಪ್ರೀತಿ. ಅಲ್ಲಿ ಕಲ್ಲು-ಮುಳ್ಳುಗಳ ಮಧ್ಯೆ ರಸ್ತೆಯನ್ನೇ ಹುಡುಕಬೇಕು.

ಇನ್ನು ಈ ಗ್ರಾಮಕ್ಕೆ ವಾಹನಗಳು ಬರಬೇಕು ಅಂದ್ರೆ 1500 - 2000 ಹಣ ಕೊಡಬೇಕು. ನಿತ್ಯ 300-400 ದುಡಿಯೋ ಜನ 2000 ಎಲ್ಲಿಂದ ತರ್ತಾರೆ?. ಇದರಿಂದ ಬೇಸತ್ತ ಗ್ರಾಮಸ್ಥರು ಜೋಳಿಗೆ ಹೊತ್ತು ಕಿಲೋ ಮೀಟರ್ ಗಟ್ಟಲೆ ಸುತ್ತಾಡಿ ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸ್ತಿದ್ದಾರೆ. ಇದು ಒಂದು ಕಡೆಯಾದ್ರೆ, ಮತ್ತೊಂದೆಡೆ ಮಳೆಗಾಲದಲ್ಲಂತೂ ಈ ಜನರ ಜೀವನ ನಿಜಕ್ಕೂ ನರಕಮಯ. ಚುನಾವಣೆ ವೇಳೆ ಬಣ್ಣದ ಮಾತುಗಳನ್ನು ಆಡುವ ಜನನಾಯಕರು ಮತ್ತೆ ಇತ್ತ ಮುಖ ಮಾಡಿಲ್ಲ.ಜನರ ಕೂಗು ಅರಣ್ಯರೋದನವಾಗಿದೆ ಅಂತ ಗ್ರಾಮಸ್ಥ ರವಿ ಅಳಲು ತೋಡಿಕೊಂಡಿದ್ದಾರೆ.

ಮೂಲಸೌಕರ್ಯಗಳಿಗೆ ನಿತ್ಯ ಪರದಾಟ:ಹೀನಾರಿ ಗ್ರಾಮದಲ್ಲಿ ನಾಲ್ವತ್ತು ಮನೆಗಳಿದ್ದು, ರಸ್ತೆ ಸಂಪರ್ಕವಿಲ್ಲ. ನಾಲ್ಕೈದು ಕಿ ಮೀ ವರೆಗೆ ಗ್ರಾಮಸ್ಥರು ನಡೆದುಕೊಂಡು ಹೋಗಿ ಮನೆಗೆ ರೇಷನ್ ತರಬೇಕು. ಕುಡಿಯುವ ನೀರಿನ ಸಮಸ್ಯೆ ಬಹಷ್ಟಿದೆ. ಎರಡ್ಮೂರು ಕಿ ಮೀ ದೂರ ಹೋಗಿ ಬೆಟ್ಟ ಗುಡ್ಡ ಹತ್ತಿ ಇಳಿದು ಹೊತ್ತು ನೀರು ತರುವ ತನಕ ಮಹಿಳೆಯರು ಸ್ಥಿತಿ ಹೇಳತೀರದು. ಏನಾದರೂ ಆರೋಗ್ಯದಲ್ಲಿ ಏರುಪೇರಾದರೆ ದೇವರೇ ಗತಿ.. ಜೋಳಿಗೆ ಮೂಲಕ ಆಸ್ಪತ್ರೆಗೆ ಹೋಗಬೇಕು ಎನ್ನುತ್ತಾರೆ ಗ್ರಾಮಸ್ಥೆ ಗಿರಜಾ..

ಚುನಾವಣೆ ಬಂತಂದ್ರೆ ನೀವು ಬೇಕು, ನಿಮ್ಮ ವೋಟು ಬೇಕು ಅಂತ ದುಂಬಾಲು ಬೀಳುವ ರಾಜಕಾರಣಿಗಳು ಹಳ್ಳಿಗರ ಸಂಕಷ್ಟಕ್ಕೆ ಮಾತ್ರ ನೆರವಾಗಲ್ಲ. ಕಾಫಿನಾಡಿನಲ್ಲಿ ಈ ಜೋಳಿಗೆ ಜೀವನಕ್ಕೆ ಕಡಿವಾಣ ಬೀಳಬೇಕಿದೆ.

ಇದನ್ನೂಓದಿ:'ಬರ ಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ': ಕೇಂದ್ರದ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ

Last Updated : Nov 2, 2023, 10:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.