ರಸ್ತೆ ಇಲ್ಲದೇ ರೋಗಿಯನ್ನು ಜೋಳಿಗೆಯಲ್ಲಿ ಹೊತ್ತೊಯ್ದ ಗ್ರಾಮಸ್ಥರು, ಹಳ್ಳಿಗರ ಗೋಳು ಕೇಳೋರು ಯಾರು?

author img

By

Published : Oct 13, 2021, 7:40 PM IST

ರಸ್ತೆ ಇಲ್ಲದೆ ರೋಗಿಯನ್ನು ಜೋಳಿಗೆಯಲ್ಲಿ ಹೊತ್ತೊಯ್ದ ಗ್ರಾಮಸ್ಥರು

ಮುಖ್ಯವಾಗಿ ರೋಗಿಗಳನ್ನು, ಹಿರಿಯ ನಾಗರಿಕರನ್ನು ಕರೆದೊಯ್ಯಲು ರಸ್ತೆಗಳೇ ಇಲ್ಲ. ಇದಕ್ಕೆ ಸ್ಪಷ್ಟ ನಿದರ್ಶನವಾಗಿ ಕಾಣಿಸಿದೆ ಕಳಸ ತಾಲೂಕು ವ್ಯಾಪ್ತಿಯ ಕಳಕೋಡು ಗ್ರಾಮದ ಈಚಲುಹೊಳೆ ಎಂಬ ಹಾಡಿ. ನಿನ್ನೆಯಷ್ಟೇ ಓರ್ವ ಅನಾರೋಗ್ಯ ಮಹಿಳೆಯನ್ನು ಇದೇ ರೀತಿ ಕಟ್ಟಿ ಹೊತ್ತೊಯ್ದಿರುವ ದೃಶ್ಯಾವಳಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದ್ದು, ಇಲ್ಲಿನ ಜನರ ದುಃಸ್ಥಿತಿಯನ್ನು ಕಂಡು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಜನರು ಹಿಡಿಶಾಪ ಹಾಕ ತೊಡಗಿದ್ದಾರೆ.

ಚಿಕ್ಕಮಗಳೂರು: ಜಿಲ್ಲೆಯ ಒಳಹೊಕ್ಕರೆ ಜನರ ಬದುಕಿನ ನೈಜ ಸ್ಥಿತಿ ಏನೆಂದು ತಿಳಿಯುತ್ತದೆ. ಇಲ್ಲಿನ ಗುಡ್ಡಗಾಡುಗಳ ನಡುವೆ ಎಷ್ಟೋ ಕುಗ್ರಾಮಗಳಲ್ಲಿ, ಹಾಡಿಗಳಲ್ಲಿ ಜನರು ನಾಗರಿಕ ಸೌಲಭ್ಯಗಳಿಂದ ವಂಚಿತರಾಗಿ ನರಕ ಸದೃಶ ಬದುಕು ಸಾಗಿಸುತ್ತಿದ್ದಾರೆ.

ಮುಖ್ಯವಾಗಿ ರೋಗಿಗಳನ್ನು, ಹಿರಿಯ ನಾಗರಿಕರನ್ನು ಕರೆದೊಯ್ಯಲು ರಸ್ತೆಗಳೇ ಇಲ್ಲ. ಇದಕ್ಕೆ ಸ್ಪಷ್ಟ ನಿದರ್ಶನವಾಗಿ ಕಾಣಿಸಿದೇ ಕಳಸ ತಾಲೂಕು ವ್ಯಾಪ್ತಿಯ ಕಳಕೋಡು ಗ್ರಾಮದ ಈಚಲು ಹೊಳೆ ಎಂಬ ಹಾಡಿ.

ರಸ್ತೆ ಇಲ್ಲದೆ ರೋಗಿಯನ್ನು ಜೋಳಿಗೆಯಲ್ಲಿ ಹೊತ್ತೊಯ್ದ ಗ್ರಾಮಸ್ಥರು

ಇಲ್ಲಿ ಯಾರಾದರೂ ಅನಾರೋಗ್ಯಕ್ಕೀಡಾದರೆ ಅವರನ್ನು ಆಸ್ಪತ್ರೆಗೆ ಹೊತ್ತುಕೊಂಡೇ ಸಾಗಬೇಕಾಗಿದೆ. ಮರದ ಕಂಬಕ್ಕೆ ಜೋಳಿಗೆ ರೀತಿಯಾಗಿ ಬಟ್ಟೆ, ಸೀರೆಗಳನ್ನು ಕಟ್ಟಿ ಅದರೊಳಗೆ ರೋಗಿಯನ್ನು ಮಲಗಿಸಿ ಇಬ್ಬರು ಹೆಗಲು ಕೊಟ್ಟು ಹೊತ್ತೊಯ್ಯುವಂತಹ ಕರುಣಾಜನಕ ದೃಶ್ಯಗಳಿಗೆ ಇದು ಸಾಕ್ಷಿಯಾಗಿದೆ.

ನಿನ್ನೆಯಷ್ಟೇ ಓರ್ವ ಅನಾರೋಗ್ಯ ಮಹಿಳೆಯನ್ನು ಇದೇ ರೀತಿ ಕಟ್ಟಿ ಹೊತ್ತೊಯ್ದಿರುವ ದೃಶ್ಯಾವಳಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದ್ದು, ಇಲ್ಲಿನ ಜನರ ದುಃಸ್ಥಿತಿಯನ್ನು ಕಂಡು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಜನರು ಹಿಡಿಶಾಪ ಹಾಕತೊಡಗಿದ್ದಾರೆ.

ಈಚಲು ಹೊಳೆ ಹಾಡಿ ಕಳಸ ತಾಲೂಕು ಕೇಂದ್ರದಿಂದ 16 ಕಿ.ಮೀ ದೂರದಲ್ಲಿದೆ. ಕಳಕೋಡು ಗ್ರಾಮದವರೆಗೆ ರಸ್ತೆ ಇದೆಯಾದರೂ ಭಾರಿ ಮಳೆಯಿಂದಾಗಿ ಇತ್ತೀಚೆಗೆ ಈ ರಸ್ತೆಯೂ ಹಾಳಾಗಿದೆ. ಕಳಕೋಡು ಗ್ರಾಮದಿಂದ 4 ಕಿ.ಮೀ ದೂರದಲ್ಲಿರುವ ಈಚಲು ಹೊಳೆ ಎಂಬ ಹಾಡಿಗೆ ಸೂಕ್ತ ರಸ್ತೆ ಸೌಲಭ್ಯವಿಲ್ಲದ ಪರಿಣಾಮ ಇಲ್ಲಿನ ನಿವಾಸಿಗಳು ಕಾಡಿನ ಮಧ್ಯೆ ಭದ್ರಾ ನದಿಯ ತೀರದಲ್ಲಿ ಕಡಿದಾದ ಕಚ್ಚಾ ದಾರಿಯಲ್ಲಿ ಕಲ್ಲುಮುಳ್ಳುಗಳನ್ನು ದಾಟಿಕೊಂಡು ಸಂಚರಿಸಬೇಕಾದ ದುಃಸ್ಥಿತಿಯಿದೆ.

ಈಚಲುಹೊಳೆ ಹಾಡಿಯಲ್ಲಿ ಸುಮಾರು 13 ಮನೆಗಳಿವೆ. ಬಹುತೇಕ ಜನರು ಆದಿವಾಸಿ ಸಮುದಾಯದವರು. ಸುಮಾರು 60ಕ್ಕೂ ಹೆಚ್ಚು ಜನಸಂಖ್ಯೆಯಿದೆ. ಶಾಲಾ - ಕಾಲೇಜು ವಿದ್ಯಾರ್ಥಿಗಳು ಹಾಗೂ ಅಗತ್ಯ ಕೆಲಸಕ್ಕಾಗಿ ಜನರು ಕಳಸ ಪಟ್ಟಣಕ್ಕೆ ಬರಬೇಕಾಗಿದೆ.

ಕಳಕೋಡು ಗ್ರಾಮದಿಂದ ಈಚಲುಹೊಳೆಗೆ ಸೂಕ್ತ ರಸ್ತೆ ನಿರ್ಮಿಸಿಕೊಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಾಡಿಯ ಜನರು ಹಲವಾರು ಬಾರಿ ಮನವಿ ಮಾಡಿದ್ದಾರೆ. ಆದರೆ, ರಸ್ತೆ ನಿರ್ಮಾಣದ ಜಾಗ ಅರಣ್ಯ ಇಲಾಖೆಗೆ ಸೇರಿದೆ ಎನ್ನುವ ನೆಪದಲ್ಲಿ ರಸ್ತೆ ನಿರ್ಮಾಣದ ಕಾರ್ಯ ಇನ್ನೂ ಆಗಿಲ್ಲ.

ಕೊಚ್ಚಿಹೋದ ರಾಜ್ಯ ಹೆದ್ದಾರಿಯ ಕಿರು ಸೇತುವೆ:

ಕೊಚ್ಚಿಹೋದ ರಾಜ್ಯ ಹೆದ್ದಾರಿಯ ಕಿರು ಸೇತುವೆ

ಕಳೆದ ನಾಲ್ಕೈದು ದಿನಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ರಾಜ್ಯ ಹೆದ್ದಾರಿಯ ಕಿರು ಸೇತುವೆ ಕುಸಿದಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಮಹಲ್ಗೋಡು ಸಮೀಪ ಈ ಘಟನೆ ನಡೆದಿದೆ.

ನಿನ್ನೆ ಸುರಿದ ಭಾರೀ ಮಳೆಯಿಂದ ಮಹಲ್ಗೋಡು ಸೇತುವೆ ಮೇಲೆ ಧಾರಾಕಾರವಾಗಿ ನೀರು ಹರಿದ ಪರಿಣಾಮ ರಸ್ತೆಗೆ ನಿರ್ಮಿಸಿದ್ದ ಕಿರು ಸೇತುವೆ ಕುಸಿತಗೊಂಡಿದೆ. ರಾಜ್ಯ ಹೆದ್ದಾರಿಯ ಕಿರು ಸೇತುವೆ ಕುಸಿದ ಕಾರಣ ಬಾಳೆ ಹೊನ್ನೂರು - ಕಳಸ - ಹೊರನಾಡು-ಮಂಗಳೂರು - ಕುದುರೆಮುಖ ಸಂಚಾರ ಸ್ಥಗಿತಗೊಂಡಿದೆ. ಸೇತುವೆ ರಸ್ತೆಯ ಎರಡೂ ಬದಿಗೂ ಬ್ಯಾರಿಕೇಡ್ ಹಾಕಿರುವ ಪೊಲೀಸರು ಬೈಕ್ ಸಂಚಾರಕ್ಕೆ ಮಾತ್ರ ಅನುವು ಮಾಡಿಕೊಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.