ETV Bharat / state

ಎಲಿಫೆಂಟ್ ಇನ್ ಚಾರ್ಮಾಡಿ ಘಾಟ್: ಜೀವ ಭಯದಲ್ಲೇ ಬದುಕುತ್ತಿರುವ ಸಾರ್ವಜನಿಕರು

author img

By

Published : May 25, 2023, 10:31 PM IST

ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಬೆಸೆಯುವ ಚಾರ್ಮಾಡಿ ಘಾಟ್​ನಲ್ಲಿ ನಿತ್ಯ ಆನೆ ಕಾಣಿಸಿಕೊಳ್ಳುತ್ತಿದೆ.

ಎಲಿಫೆಂಟ್ ಇನ್ ಚಾರ್ಮಾಡಿಘಾಟ್
ಎಲಿಫೆಂಟ್ ಇನ್ ಚಾರ್ಮಾಡಿಘಾಟ್

ಚಾರ್ಮಾಡಿ ಘಾಟ್​ನಲ್ಲಿ ದಿನನಿತ್ಯ ಕಾಡಾನೆಗಳ ಹಾವಳಿ : ಬೇಸತ್ತ ಸಾರ್ವಜನಿಕರು

ಚಿಕ್ಕಮಗಳೂರು : ಇದು ಬದುಕಿನ ದಾರಿ. ಓದಿನ ಮಾರ್ಗ. ಜೀವ ಉಳಿಸೋ ಸಂಜೀವಿನಿಯ ಹೆದ್ದಾರಿ. ಈ ರಸ್ತೆ ಉಳಿಸಿರೋ ಜೀವಗಳಿಗೆ ಲೆಕ್ಕವೇ ಇಲ್ಲ. ನಿಸರ್ಗ ಮಾತೆಯ ಸೊಬಗನ್ನು ಸವಿಯೋಕೆ ಪ್ರಕೃತಿಯೇ ಮಾಡಿರೋ ಈ ಮಾರ್ಗ ಪ್ರಯಾಣವೇ ರಣ ರೋಚಕ. ಆದರೇ ಇದೀಗ ಈ ಮಾರ್ಗಕ್ಕೆ ಸಂಚಕಾರ ಬಂದೊದಗಿದೆ. ಇಂತಹ ಅನಿವಾರ್ಯತೆಯ ಮಾರ್ಗದಲ್ಲೀಗ ಸಾವಿನ ಸುಳಿವು ಎದ್ದು ಕಾಣುತ್ತಿದೆ.

ಹೌದು, ರಾಜ ಗಾಂಭೀರ್ಯದಿಂದ ಫೋಸ್ ಕೊಡುತ್ತಿರುವ ಗಜರಾಜ. ಮಧ್ಯರಾತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಂದೇ ರೋಡ್ ಅನ್ನೊ ಹಾಗೆ ವಾಕ್ ಮಾಡುತ್ತಿರುವ ಆನೆ. ಮರೆಯಲ್ಲಿ ನಿಂತು ಕಳ್ಳನಂತೆ ನೋಡುತ್ತಿರುವ ಆನೆ. ರಸ್ತೆ ಬದಿಯ ಕಟ್ಟೆ ದಾಟಿ ಮತ್ತೊಂದೆಡೆಗೆ ಸಾಗುತ್ತಿರುವ ಒಂಟಿ ಸಲಗ. ಹೇಳೋಕೆ ಒಂದೋ ಎರಡೋ. ಕಳೆದ 15 ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಕಾಡಾನೆ ಹಾವಳಿ ಮಿತಿ ಮೀರಿ ಹೋಗಿದೆ.

ಸುಮಾರು 22 ಕಿ.ಮೀ. ವ್ಯಾಪ್ತಿಯ ಚಾರ್ಮಾಡಿಯಲ್ಲಿ ಒಂದೇ ಆನೆ ಇದೆಯೋ ಅಥವಾ ಹಲವು ಆನೆಗಳು ಇದಿಯೋ ಗೊತ್ತಿಲ್ಲ. ಆದರೆ ಈ ಮಾರ್ಗದಲ್ಲಿ ಓಡಾಡೋ ಜನ ನಿತ್ಯ ಒಂದೊಂದು ಜಾಗದಲ್ಲಿ ಆನೆ ಕಂಡು ಆತಂಕಕ್ಕೀಡಾಗಿದ್ದಾರೆ. ಈ ಮಾರ್ಗದಲ್ಲಿ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಕಳೆದ ಎರಡು ಮೂರು ದಿನಗಳ ಹಿಂದೆ ರಸ್ತೆ ಮಧ್ಯೆ ನಿಂತಿದ್ದ ಆನೆ ಕಂಡು ಸರ್ಕಾರಿ ಬಸ್ ಅರ್ಧ ಗಂಟೆ ನಿಂತಲ್ಲೇ ನಿಂತಿತ್ತು. ಬಸ್​ ಹಿಂದೆ ಇದ್ದ ಬೈಕ್ ಕಾರು ಸವಾರರು ಕೂಡ ನಿಂತಲ್ಲೇ ನಿಂತಿದ್ದರು.

ಈ ರಸ್ತೆ ಕಿರಿದಾಗಿರುವುದರಿಂದ ವಾಹನಗಳನ್ನು ರಿವರ್ಸ್ ತೆಗೆದು ಹಿಂತಿರುಗಿ ಹೋಗೋದಕ್ಕೂ ಸಾಧ್ಯವಿಲ್ಲದಂತೆ ಆಗಿತ್ತು. ಹಾಗಾಗಿ, ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಲು ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ. ನಾಳೆ ಮತ್ತೊಂದು ಅನಾಹುತವಾದ ಬಳಿಕ ಪರಿಹಾರ ಅಂತ ಎಚ್ಚೆತ್ತುಕೊಳ್ಳುವ ಬದಲು ಆನೆಯನ್ನೇ ಸ್ಥಳಾಂತರ ಮಾಡೋದು ಒಳ್ಳೆಯದು ಎಂದು ಜನ ಆಗ್ರಹಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಸ್ಥಳಿಯರಾದ ಪವಿತ್ರ ಎಂಬುವವರು, ಚಾರ್ಮಾಡಿ ಘಾಟ್​ನ ಈ ರಸ್ತೆ ಕೇವಲ ರಸ್ತೆಯಾಗಿಲ್ಲ. ಜೀವ ಉಳಿಸೋ ಸಂಜೀವಿನಿ ಕೂಡ. ರಾಜ್ಯದ ಮೂಲೆ - ಮೂಲೆಗಳಿಂದ ನಿತ್ಯ ನೂರಾರು ರೋಗಿಗಳು ಇದೇ ಮಾರ್ಗದಲ್ಲಿ ಮಂಗಳೂರು ಮಣಿಪಾಲ್ ಆಸ್ಪತ್ರೆಗಳಿಗೆ ಹೋಗುತ್ತಾರೆ. ಹಾಗು ಶಾಲಾ ಕಾಲೇಜಿಗೆ ಓಡಾಡುವ ಮಕ್ಕಳು ಇದೇ ಮಾರ್ಗದಲ್ಲಿ ಓಡಾಡುತ್ತಾರೆ. ಮಂಗಳೂರಿಗೆ ಹಣ್ಣು ತರಕಾರಿ ಕೊಂಡೊಯ್ಯುವ ನೂರಾರು ವಾಹನಗಳು ನಿತ್ಯ ಓಡಾಡುತ್ತವೆ.

ಜೊತೆಗೆ ಆನೆ ಕಾಣಿಸಿಕೊಳ್ಳುತ್ತಿರುವುದು ಗಾಡ್ ಸೆಕ್ಷನ್ ಆಗಿರುವುದರಿಂದ ಆನೆ ದಾಳಿಗೆ ಮುಂದಾದರೆ ಟರ್ನ್ ಮಾಡಿಕೊಂಡು ವಾಪಸ್ ಬರೋದು ಕಷ್ಟಸಾಧ್ಯವಾಗಿದೆ. ಅದೃಷ್ಟವಶಾತ್ ಈವರೆಗೂ ಅಂತಹ ಯಾವುದೇ ಅಹಾಹುತ ಸಂಭವಿಸಿಲ್ಲ. ಸಂಭವಿಸೋ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಂಡು ಆನೆಯ ಸ್ಥಳಾಂತರ ಮಾಡಬೇಕು ಎಂದು ಮನವಿ ಮಾಡಿದರು.

ಬಳಿಕ ಮಾತನಾಡಿದ ಮತ್ತೊಬ್ಬ ಸ್ಥಳೀಯರಾದ ದೀಪಕ್ ದೊಡ್ಡಯ್ಯ, ಮೂಡಿಗೆರೆಯಿಂದ ಮಂಗಳೂರಿಗೆ ಹೋಗುವ ಚಾರ್ಮಾಡಿ ಘಾಟ್​ನಲ್ಲಿ ರಸ್ತೆಗೆ ಕಾಡಾನೆಗಳು ಬರುವುದಕ್ಕೆ ಆರಂಭಿಸಿವೆ. ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು, ಬೇಸಿಗೆ ರಜೆ ದಿನವಾಗಿರುವುದರಿಂದ ಅನೇಕ ಪ್ರವಾಸಿಗರು, ಹಾಗೂ ಸಾಕಷ್ಟು ಮಂದಿ ಆಸ್ಪತ್ರೆಗೆ ಈ ರಸ್ತೆ ಮೂಲಕ ಸಂಚರಿಸುತ್ತಾರೆ.

ಹೀಗಾಗಿ ಕಾಡಾನೆಗಳು ರಸ್ತೆಗೆ ಬರುವುದರಿಂದ ವಾಹನಗಳು ರಸ್ತೆಯಲ್ಲಿ ನಿಂತು ಗಂಟೆಗಟ್ಟಲೇ ಟ್ರಾಫಿಕ್​ ಜಾಮ್​ ಆಗುತ್ತಿದೆ. ಹಾಗು ಜನರು ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ಎದುರಾಗಿದೆ. ಕೂಡಲೇ ರಾಜ್ಯ ಸರ್ಕಾರ ಮತ್ತು ಅರಣ್ಯಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಕಾಡಾನೆಗಳನ್ನು ಸ್ಥಳಾಂತರ ಮಾಡಿ ಜನರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸುತ್ತೇನೆ ಎಂದರು

ಒಟ್ಟಾರೆಯಾಗಿ, ಆನೆಯನ್ನು ಕಣ್ಣಾರೆ ಕಂಡರೂ ಜನ ಸಾಮಾನ್ಯರು ಅಗತ್ಯ ಹಾಗೂ ಅನಿವಾರ್ಯತೆಯಿಂದ ಇಂದಿಗೂ ಇದೇ ಮಾರ್ಗವನ್ನು ಅವಲಂಭಿಸಿದ್ದಾರೆ. ಅದೇ ಮೂಡಿಗೆರೆಯಲ್ಲಿ ಆರೇ ತಿಂಗಳಲ್ಲಿ ನಾಲ್ಕೈದು ಜನ ಪ್ರಾಣ ಕಳೆದುಕೊಂಡಿರೋ ಬ್ಲಾಕ್ ಮಾರ್ಕ್ ಕೂಡ ಮೂಡಿಗೆರೆಗೆ ಇದೆ. ನಾಳೆ ಇನ್ನೊಂದು ಅನಾಹುತವಾದ ಬಳಿಕ ಸರ್ಕಾರ ಪರಿಹಾರ ನೀಡೋದು, ಅಧಿಕಾರಿಗಳು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡುವ ಬದಲು, ಸಂಬಂಧಪಟ್ಟ ಅಧಿಕಾರಿಗಳು ಈಗಲೇ ಸೂಕ್ತ ಕ್ರಮ ಕೈಗೊಂಡರೆ ಮುಂದಾಗೋ ಅನಾಹುತವನ್ನ ತಪ್ಪಿಸಿದಂತಾಗುತ್ತೆ.

ಇದನ್ನೂ ಓದಿ : ಆಹಾರ ಅರಸಿ ನಾಡಿಗೆ ಬಂದು ಗುಂಡೇಟಿಗೆ ಬಲಿಯಾದ 10 ತಿಂಗಳ ಗರ್ಭಿಣಿ ಕಾಡಾನೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.