ETV Bharat / state

ಚಿಕ್ಕಮಗಳೂರು: ಆನೆ ನಿಗ್ರಹ ಪಡೆಯ ಸದಸ್ಯನೇ ಕಾಡಾನೆ ದಾಳಿಗೆ ಬಲಿ

author img

By ETV Bharat Karnataka Team

Published : Nov 22, 2023, 7:45 PM IST

Elephant attack in Chikkamagaluru: ಕಳೆದ ಎರಡು ತಿಂಗಳುಗಳಲ್ಲಿ ಕಾರ್ತಿಕ್​ ಗೌಡ ಸೇರಿ ಕಾಡಾನೆ ದಾಳಿ ಮೂವರು ಬಲಿಯಾಗಿದ್ದಾರೆ.

died Karthik Gowda
ಕಾಡಾನೆ ದಾಳಿಗೆ ಬಲಿಯಾದ ಕಾರ್ತಿಕ್ ಗೌಡ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ನಿರಂತರವಾಗಿ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದೆ. ಈ ಹಾವಳಿ ಹಾಗೂ ದಾಳಿಗೆ ಕಳೆದ ಎರಡು ತಿಂಗಳಲ್ಲಿ ಮೂರನೇ ಬಲಿಯಾಗಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆಯೊಂದು ಆನೆ ನಿಗ್ರಹ ಪಡೆಯ ಸದಸ್ಯನನ್ನೇ ಬಲಿ ತೆಗೆದುಕೊಂಡಿರುವ ಘಟನೆ ನಡೆದಿದೆ. ಇದರೊಂದಿಗೆ ಎರಡು ತಿಂಗಳಲ್ಲಿ ಮೂರು ಜನ ಕಾಡಾನೆ ದಾಳಿಯಿಂದ ಸಾವನ್ನಪ್ಪಿದ್ದಾರೆ.

ಕಳೆದ 20 ದಿನಗಳಲ್ಲಿ ಕಾಡಾನೆ ದಾಳಿಗೆ ಇಬ್ಬರು ಸಾವನಪ್ಪಿದ್ದು, ಈ ಬಾರಿ ಆನೆ ನಿಗ್ರಹ ಪಡೆಯ ಸದಸ್ಯನೇ ಆನೆ ದಾಳಿಗೆ ಬಲಿಯಾಗಿರುವುದು ಈ ಭಾಗದಲ್ಲಿ ಆತಂಕಕ್ಕೆ ಕಾರಣವಾಗಿದೆ. ಮೂಡಿಗೆರೆ ತಾಲೂಕಿನ ಬೈರಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೂಡಿಗೆರೆ ತಾಲೂಕಿನ ಗೌಡಹಳ್ಳಿ ನಿವಾಸಿ ಕಾರ್ತಿಕ್ ಗೌಡ (26) ಮೃತ ವ್ಯಕ್ತಿ.

ಸರ್ಕಾರ ರಚಿಸಿದ್ದ ಆನೆ ನಿಗ್ರಹ ಪಡೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ತಿಕ್, ಬೈರಾಪುರದಲ್ಲಿ ಆನೆ ಓಡಿಸುವಾಗ ಆನೆ ದಾಳಿಗೆ ತುತ್ತಾಗಿದ್ದಾರೆ. ಒಂದೂವರೆ ತಿಂಗಳ ಹಿಂದೆ ಆಲ್ದೂರು ಸಮೀಪ ಚಿನ್ನಿ, 20 ದಿನಗಳ ಹಿಂದೆ ಆಲ್ದೂರಿನಲ್ಲಿ ಮೀನಾ ಎಂಬುವರು ಸಾವನ್ನಪ್ಪಿದ್ದು, ಅರಣ್ಯ ಇಲಾಖೆ ವಿರುದ್ಧ ಜನರ ಆಕ್ರೋಶ ಮುಂದುವರಿದಿದೆ. ಕಾಡಾನೆ ಸೆರೆ ಕಾರ್ಯಾಚರಣೆ ಬೆನ್ನಲ್ಲೇ ಈ ಘಟನೆ ನಡೆದಿರುವುದು ಜನರ ನಿದ್ದೆಗೆಡಿಸಿದೆ. ಈ ಘಟನೆಯಿಂದ ಸುತ್ತಮುತ್ತ ಹಳ್ಳಿಯ ಗ್ರಾಮಸ್ಥರಿಂದ ಆಕ್ರೋಶ ವ್ಯಕ್ತವಾಗಿದೆ.

ಹಲವು ವರ್ಷಗಳಿಂದ ಈ ಭಾಗದಲ್ಲಿ ನಿರಂತರವಾಗಿ ಕಾಡಾನೆ ದಾಳಿ ಹಾಗೂ ಹಾವಳಿ ಮುಂದುವರೆದಿದ್ದು, ಹಲವಾರು ಬಾರಿ ಕಾಫಿ ಬೆಳೆಗಾರರು ಹಾಗೂ ರೈತರು ಅರಣ್ಯ ಇಲಾಖೆಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಆದರೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಅರಣ್ಯ ಇಲಾಖೆ ಸಿಬ್ಬಂದ ಆನೆ ಓಡಿಸುವ ಕೆಲಸ ಮಾಡುತ್ತಿದ್ದರೂ, ಯಾವುದೇ ಫಲ ನೀಡಿಲ್ಲ.

ಕಾಡಾನೆ ದಾಳಿಗೆ ಮಹಿಳೆ ಸಾವು: ಕಾಫಿ ತೋಟಕ್ಕೆ ಕೆಲಸಕ್ಕೆ ಹೋಗುವ ವೇಳೆ ಮಹಿಳೆ ಮೇಲೆ ಕಾಡಾನೆ ದಾಳಿ ಮಾಡಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಸಾವನ್ನಪ್ಪಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಸಮೀಪ ಹೆಡದಾಳು ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು. ಸಾವನ್ನಪ್ಪಿದ್ದ ಮಹಿಳೆಯನ್ನು 45 ವರ್ಷದ ಮೀನಾ ಎಂದು ಗುರುತಿಸಲಾಗಿತ್ತು.

ಈ ಘಟನೆಯಿಂದ ಆಕ್ರೋಶಗೊಂಡಿದ್ದ ಗ್ರಾಮಸ್ಥರು ಶೃಂಗೇರಿ ಹಾಗೂ ಚಿಕ್ಕಮಗಳೂರು ರಾಜ್ಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದ್ದರು. ಆ ವೇಳೆ ಸ್ಥಳಕ್ಕೆ ಆಗಮಿಸಿದ್ದ, ಡಿಎಫ್​ಓ ಹಾಗೂ ಶಾಸಕಿ ನಯನ ಮೋಟಮ್ಮ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದರು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದರು. ಆಗ ಫೋನ್​ ಮೂಲಕ ಗ್ರಾಮಸ್ಥರ ಜೊತೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅವರು ಕಾಡಾನೆಗಳಿಂದ ಆಗುತ್ತಿರುವ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದು, ಸಿಎಂ ಸೂಚನೆ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿಯೇ ಮೃತ ಮಹಿಳೆಯ ಕುಟುಂಬಕ್ಕೆ 15 ಲಕ್ಷ ರೂಪಾಯಿಯ ಚೆಕ್​ ನೀಡಿದ್ದರು.

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಮಹಿಳೆ ಸಾವು: ಮೃತಳ ಕುಟುಂಬಕ್ಕೆ ₹15 ಲಕ್ಷ ಪರಿಹಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.