ETV Bharat / state

ಚಿಕ್ಕಮಗಳೂರು: ಹುಲಿ ಉಗುರು ಮಾದರಿ ಪೆಂಡೆಂಟ್​ ಧರಿಸಿದ್ದ ಇಬ್ಬರು ಅರ್ಚಕರಿಗೆ 14 ದಿನ ನ್ಯಾಯಾಂಗ ಬಂಧನ

author img

By ETV Bharat Karnataka Team

Published : Oct 26, 2023, 3:15 PM IST

Updated : Oct 26, 2023, 10:24 PM IST

ರಾಜ್ಯದೆಲ್ಲೆಡೆ ಒಂದಾದ ಮೇಲೊಂದು ಹುಲಿ ಉಗುರು ಮಾದರಿ ಪೆಂಡೆಂಟ್ ಧರಿಸಿ ಸಿಕ್ಕಿಬಿದ್ದವರ​ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಹುಲಿ ಉಗುರು ಮಾದರಿ ಪೆಂಡೆಂಟ್​ ಪ್ರಕರಣ
ಹುಲಿ ಉಗುರು ಮಾದರಿ ಪೆಂಡೆಂಟ್​ ಪ್ರಕರಣ

ಚಿಕ್ಕಮಗಳೂರು : ಹುಲಿ ಉಗುರಿನಿಂದ ಡಾಲರ್ ಮಾಡಿ ಕತ್ತಿಗೆ ಹಾಕಿಕೊಂಡಿದ್ದ ಆರೋಪದ ಮೇಲೆ ದೇವಸ್ಥಾನದ ಇಬ್ಬರು ಅರ್ಚಕರನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ತಾಲ್ಲೂಕಿನ ಖಾಂಡ್ಯದಲ್ಲಿ ನಡೆದಿದೆ. ಬಂಧಿತರಿಗೆ ಚಿಕ್ಕಮಗಳೂರು ಜೆಎಂಎಫ್‌ಸಿ ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

ಬಾಳೆಹೊನ್ನೂರು ಸಮೀಪದ ಖಾಂಡ್ಯಾದ ಪ್ರಸಿದ್ಧ ಮಾರ್ಕಂಡೇಶ್ವರ ಸ್ವಾಮಿ ದೇವಾಲಯದ ಅರ್ಚಕರಾದ ಕೃಷ್ಣಾನಂದ ಹೊಳ್ಳ ಹಾಗೂ ನಾಗೇಂದ್ರ ಜೋಯಿಸ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಮೂರು ಹುಲಿ ಉಗುರು ವಶಕ್ಕೆ ಪಡೆಯಲಾಗಿದೆ. ಇಬ್ಬರನ್ನು ಬಾಳೆಹೊನ್ನೂರು ಅರಣ್ಯ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ನ್ಯಾಯಮೂರ್ತಿ ಹರೀಶ್ ಅವರು ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳನ್ನು ಬಂಧನ ಮಾಡಿದ್ದಾರೆ. ಇವರಲ್ಲಿ ಕೃಷ್ಣಾನಂದ ಹೊಳ್ಳಗೆ ನ್ಯಾಯಾಲಯ ಮುಂದಿನ ನವೆಂಬರ್​​ 6 ರವರೆಗೂ ನ್ಯಾಯಾಂಗ ಬಂಧನ ವಿಧಿಸಿದ್ದು, ಮತ್ತೊಬ್ಬ ಅರ್ಚಕ ನಾಗೇಂದ್ರ ಜೋಯಿಸ್​ಗೆ ಆರೋಗ್ಯ ಸಮಸ್ಯೆ ಹಿನ್ನೆಲೆ ಆಸ್ಪತ್ರೆಗೆ ಶಿಫಾರಸು ಮಾಡಲಾಗಿದೆ. ಇಬ್ಬರು ಅರ್ಚಕರ ವಿರುದ್ಧ ಬಾಳೆಹೊನ್ನೂರು ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚೆಗೆ ಇಬ್ಬರ ಬಂಧನ: ಕಳೆದ ಕೆಲ ದಿನಗಳ ಹಿಂದೆ ಹುಲಿ ಉಗುರು ಧರಿಸಿದ್ದ ಆರೋಪದಡಿ ಮೂಡಿಗೆರೆ ತಾಲೂಕಿನ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದರು. ತಾಲೂಕಿನ ಬಿ. ಹೊಸಳ್ಳಿಯ ಕುಂಡ್ರ ನಿವಾಸಿ ಸತೀಶ್ ಮತ್ತು ಹುಲ್ಲೇಮನೆ ಕುಂದೂರು ನಿವಾಸಿ ರಂಜಿತ್ ಎಂಬಾತನನ್ನು ಬಂಧಿಸಲಾಗಿತ್ತು. ಹುಲಿ ಉಗುರು ಧರಿಸಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಮೂಡಿಗೆರೆ ಕಡೆಯಿಂದ ಚಿಕ್ಕಮಗಳೂರಿಗೆ ಪ್ರಯಾಣಿಸುತ್ತಿದ್ದ ಸತೀಶ್‌ನನ್ನು ಮತ್ತಾವರ ಅರಣ್ಯ ಮಾಹಿತಿ ಕೇಂದ್ರದ ಬಳಿ ತಡೆದು ಬಂಧಿಸಿದ್ದರು.

ಸತೀಶ್ ಕುತ್ತಿಗೆಗೆ ಧರಿಸಿದ್ದ ಬೆಳ್ಳಿ ಸರದಲ್ಲಿ ಹುಲಿ ಉಗುರು ಇರುವುದು ಪತ್ತೆಯಾಗಿತ್ತು. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಹುಲಿ ಉಗುರನ್ನು ತನಗೆ ಮೂಡಿಗೆರೆ ತಾಲೂಕಿನ ಹುಲ್ಲೇಮನೆ ಕುಂದೂರು ನಿವಾಸಿ ರಂಜಿತ್ ಕೊಟ್ಟಿದ್ದು ಎಂದು ಮಾಹಿತಿ ನೀಡಿದ್ದ. ನಂತರ ರಂಜಿತ್‌ನನ್ನು ಹುಲ್ಲೇಮನೆಯ ನಿವಾಸದಲ್ಲಿ ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಸದ್ಯ ಹುಲಿ ಉಗುರು ಹೊಂದಿರುವ ವ್ಯಕ್ತಿಗಳಲ್ಲಿ ನಡುಕ ಪ್ರಾರಂಭವಾಗಿದೆ.

ಇದೇ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಕನ್ನಡ ಬಿಗ್​ಬಾಸ್ 10 ರ ಸ್ಪರ್ಧಿ ವರ್ತೂರು ಸಂತೋಷ್ ಬಂಧನವಾಗಿತ್ತು. ಈ ಬೆನ್ನಲ್ಲೇ ಹುಲಿ ಉಗುರು ಧರಿಸಿದ ಆರೋಪದಡಿ ನಟ ಜಗ್ಗೇಶ್, ನಟ ತೂಗುದೀಪ್ ದರ್ಶನ್, ಬಿದನಗೆರೆಯ ಶನೇಶ್ವರ ದೇವಾಲಯದ ಅರ್ಚಕ ಧನಂಜಯ್ ಗುರೂಜಿ, ಜೆಡಿಎಸ್​ ಯುವ ನಾಯಕ ನಿಖಿಲ್​ ಕುಮಾರಸ್ವಾಮಿ ಸೇರಿದಂತೆ ಹಲವರ ವಿರುದ್ಧ ಅರಣ್ಯಾಧಿಕಾರಿಗಳಿಗೆ ದೂರು ನೀಡಲಾಗಿತ್ತು. ಸೋಷಿಯಲ್ ಮೀಡಿಯಾಗಳಲ್ಲಿ ಸೆಲೆಬ್ರಿಟಿಗಳ ಫೋಟೋ ವೈರಲ್ ಆಗುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದಾರೆ.

ಇದನ್ನೂ ಓದಿ : ಹುಲಿ ಉಗುರು ಮಾದರಿ ಪೆಂಡೆಂಟ್‌ ಪ್ರಕರಣ: ತಲೆತಗ್ಗಿಸುವ ಯಾವ ಕೆಲಸವನ್ನೂ ಮಾಡಿಲ್ಲ, ಮಾಡುವುದೂ ಇಲ್ಲ ಎಂದ ನಟ ಜಗ್ಗೇಶ್

Last Updated : Oct 26, 2023, 10:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.