ETV Bharat / state

ರೈಸ್​ ಪುಲ್ಲಿಂಗ್ ದಂಧೆ : ಸ್ಯಾಂಡಲ್​ವುಡ್ ನಟ ಸೇರಿ ಚಾಲಾಕಿ ಗ್ಯಾಂಗ್ ಅಂದರ್​

author img

By

Published : May 29, 2021, 8:05 PM IST

ವಂಶಿಕೃಷ್ಣ ನೀಡಿರುವ ದೂರಿನ ಅನ್ವಯ ನಟ ಶಂಕರ್, ಶ್ರೀಪತಿ, ಶ್ರೀಹರಿ ಎಂಬುವರನ್ನ ಬಂಧಿಸಿದ್ದಾರೆ. ಅಲ್ಲದೆ ಅರ್ಚನಾ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಹಲವು ದಾಖಲೆಗಳನ್ನ ವಶಕ್ಕೆ ಪಡೆದಿದ್ದಾರೆ..

ಸ್ಯಾಂಡಲ್​ವುಡ್ ನಟ ಸೇರಿ ಚಾಲಾಕಿ ಗ್ಯಾಂಗ್ ಅಂದರ್​
ಸ್ಯಾಂಡಲ್​ವುಡ್ ನಟ ಸೇರಿ ಚಾಲಾಕಿ ಗ್ಯಾಂಗ್ ಅಂದರ್​

ಚಿಕ್ಕಬಳ್ಳಾಪುರ : ರೈಸ್ ಪುಲ್ಲಿಂಗ್ ದಂಧೆಯ ಮೂಲಕ ಜನರಿಂದ ಕೋಟಿ ಕೋಟಿ ಹಣ ಪೀಕಿ ಮೋಸ ಮಾಡುತ್ತಿದ್ದ ಜಾಲವನ್ನ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಿಕ್ಕಬಳ್ಳಾಪುರ ನಗರದ 17ನೇ ವಾರ್ಡ್ ನಿವಾಸಿ ಅರ್ಚನಾ ಎಂಬಾಕೆ ಈ ಜಾಲದ ಪ್ರಮುಖ ಆರೋಪಿಯಾಗಿದ್ದು, ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಆದರೆ, ಅರ್ಚನಾ ಕೊರೊನಾದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರಿಗಾಗಿ ಶೋಧಕಾರ್ಯ ಮುಂದುವರಿದಿದೆ.

ಏನಿದು ಪ್ರಕರಣ? : ರಿಯಲ್​ ಎಸ್ಟೇಟ್​ ವ್ಯವಹಾರ ಮಾಡಿಕೊಂಡಿದ್ದ ಅರ್ಚನಾಗೆ ಹೈದರಾಬಾದ್ ಮೂಲದ ಉದ್ಯಮಿ ವಂಶಿಕೃಷ್ಣ ಎಂಬುವರ ಪರಿಚಯವಾಗಿತ್ತು.

ಇವರು ಕಟ್ಟಡ ನಿರ್ಮಾಣ ಮಾಡುವವರಾಗಿದ್ದು, ಅರ್ಚನಾ ಬಳಿ ಹಣಕ್ಕಾಗಿ ಕೇಳಿಕೊಂಡಿದ್ದರು. ಇದನ್ನೇ ಕಾಯುತ್ತಿದ್ದ ಅರ್ಚನಾ, ನಾನು ರೈಸ್ ಪುಲ್ಲಿಂಗ್ ಕಾರ್ಯ ಮಾಡುವಳಾಗಿದ್ದು, ಹಲವು ವಸ್ತುಗಳನ್ನು ವಿದೇಶಕ್ಕೆ ಕಳುಹಿಸಿದ್ದೇನೆ. ಅದರಿಂದ 6 ಲಕ್ಷ 35 ಸಾವಿರ ಕೋಟಿ ರೂಪಾಯಿ ನನಗೆ ಬರೆಬೇಕಿದೆ ಎಂದು ಆತನನ್ನ ನಂಬಿಸಿದ್ದಾಳೆ.

ರೈಸ್​ ಪುಲ್ಲಿಂಗ್ ದಂಧೆ ಬೇಧಿಸಿದ ಪೊಲೀಸರು

ಈ ಹಣ ನೇರವಾಗಿ ಆರ್​ಬಿಐ ಖಾತೆಗೆ ಬರಲಿದ್ದು, ಅವರಿಗೆ 24 ಕೋಟಿಯಷ್ಟು ತೆರಿಗೆ ಮೊತ್ತ ಪಾವತಿಸಿ ಉಳಿದ ಹಣ ಪಡೆಯಬೇಕಿದೆ. ಇದರಿಂದ ಬಂದ ಹಣದಲ್ಲಿ ನಿಮಗೆ ₹10 ಕೋಟಿ ಹೂಡಿಕೆ ಮಾಡುತ್ತೇನೆ.

ಇದಕ್ಕಾಗಿ ಮುಂಗಡ ಹಣ ನೀಡಬೇಕು ಎಂದು ಉದ್ಯಮಿಗೆ ಕತೆ ಕಟ್ಟಿದ್ದಾರೆ. ಇದಕ್ಕಾಗಿ ಆರ್​​ಬಿಐ ಹೆಸರಲ್ಲಿ ನಕಲಿ ದಾಖಲೆಗಳ ಸೃಷ್ಟಿಸಿದ್ದಾರೆ. ಅಲ್ಲದೆ ₹2. 2 ಕೋಟಿ ಹಣ ನೀಡಿದ್ದಾರೆ.

ಇದಾದ ಬಳಿಕ ವಂಚನೆಗೊಳಗಾದ ವಂಶಿಕೃಷ್ಣ ಕರೆ ಮಾಡಿ ಹಣ ಮರಳಿ ನೀಡುವಂತೆ ಕೇಳಿಕೊಂಡಿದ್ದಾನೆ. ಆದರೆ, ಅರ್ಚನಾ ಹಣ ನೀಡಲು ನಿರಾಕರಿಸಿದ್ದು, ಹಣ ಕೇಳಿದರೆ ಸ್ಯಾಂಡಲ್​ವುಡ್ ನಟ ಶಂಕರ್ ಎಂಬಾತನಿಂದ ಬೆದರಿಕೆ ಹಾಕಿಸಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಶಂಕರ್ ಎಂಬಾತ ಸ್ಯಾಂಡಲ್​​ವುಡ್​​​ನ ಹಲವು ಚಿತ್ರಗಳಲ್ಲಿ ನಾಯಕನಟನಾಗಿ ಕಾಣಿಸಿಕೊಂಡಿದ್ದಾನೆ. ಪೊಲೀಸರ ಪ್ರಕಾರ ಪ್ರಕರಣದಲ್ಲಿ ಈತ ಅರ್ಚನಾ ಎಂಬಾಕೆಗೆ ಸಹಾಯ ಮಾಡುತ್ತಿದ್ದ. ಹಣ ನೀಡುವಂತೆ ಕೇಳುತ್ತಿದ್ದವರಿಗೆ ಈತ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.

rice-pulling-scam-gang-arrested-along-with-sandalwood-actor
ಆರೋಪಿ ಸ್ಯಾಂಡಲ್​ವುಡ್ ನಟ

ವಂಶಿಕೃಷ್ಣ ನೀಡಿರುವ ದೂರಿನ ಅನ್ವಯ ನಟ ಶಂಕರ್, ಶ್ರೀಪತಿ, ಶ್ರೀಹರಿ ಎಂಬುವರನ್ನ ಬಂಧಿಸಿದ್ದಾರೆ. ಅಲ್ಲದೆ ಅರ್ಚನಾ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಹಲವು ದಾಖಲೆಗಳನ್ನ ವಶಕ್ಕೆ ಪಡೆದಿದ್ದಾರೆ.

ಇವರಷ್ಟೇ ಅಲ್ಲದೆ, ಇನ್ನೂ ಎಷ್ಟು ಮಂದಿ ಬಳಿ ಹಣ ಪಡೆದಿದ್ದಾರೆ ಎಂಬುದನ್ನು ತನಿಖೆಯಲ್ಲಿ ಪತ್ತೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.