ಚಾಮರಾಜನಗರ: ಗಡಿ ಭಾಗದ ಕಾಂಡಂಚಿನ ಹಳ್ಳಿಗಳಿಗೆ ಭೇಟಿಯಿತ್ತು ರಸ್ತೆ ಮಾಡುವ ಭರವಸೆ ನೀಡಿದ್ದ ಶಿಕ್ಷಣ ಸಚಿವರ ಮಾತು ಮಾತಾಗಿಯೇ ಉಳಿದಿದೆ. ಜಿಲ್ಲೆಯ ಪಡಿಸಲನತ್ತ ಗ್ರಾಮದಲ್ಲಿ ರಸ್ತೆ ಸಂಪರ್ಕ ಇಲ್ಲದ್ದರಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಮಹಿಳೆಯನ್ನು 13 ಕಿಮೀ ಡೋಲಿ ಹೊತ್ತು ಸಾಗಿ ಆಸ್ಪತ್ರೆಗೆ ಸೇರಿಸಿದ ಘಟನೆ ಜರುಗಿದೆ.
ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ಪಡಿಸಲನತ್ತ ಗ್ರಾಮಕ್ಕೆ ಕಚ್ಚಾ ರಸ್ತೆಯೂ ಇಲ್ಲ. ಶುಕ್ರವಾರ ಗ್ರಾಮದ ಮಹದೇವಮ್ಮ ಎಂಬ ಮಹಿಳೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಬರೋಬ್ಬರಿ 13 ಕಿಮೀ ಡೋಲಿಯಲ್ಲಿ ಹೊತ್ತು ತಮಿಳುನಾಡು- ಕರ್ನಾಟಕ ಗಡಿ ಪಾಲಾರ್ ತನಕ ಹೊತ್ತೊಯ್ದಿದ್ದಾರೆ.
ಈ ಕುರಿತು ಪಡಿಸಲನತ್ತ ಗ್ರಾಮದ ವಿ. ನಾಗರಾಜು ಮಾತನಾಡಿ, ಮಧುಮೇಹದಿಂದ ಬಳಲುತ್ತಿದ್ದ ಮಹಾದೇವಮ್ಮ ದಿಢೀರನೇ ಅಸ್ವಸ್ಥರಾಗಿದ್ದರು. ರಸ್ತೆಯೂ ಇಲ್ಲದೇ ಮೊಬೈಲ್ ನೆಟ್ವರ್ಕ್ ಇಲ್ಲದೇ ಪಡಿಪಾಟಲು ಪಟ್ಟು ಡೋಲಿ ಕಟ್ಟಿಕೊಂಡು ತಮಿಳುನಾಡಿನ ಕೊಳತ್ತೂರು ಗೌರಿಶಂಕರ ಆಸ್ಪತ್ರೆಗೆ ದಾಖಲಿಸಿದೆವು ಎಂದು ತಿಳಿಸಿದರು.
ಮಲೆಮಹದೇಶ್ವರ ಬೆಟ್ಟ ತಪ್ಪಲಿನ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಭೇಟಿಯಿತ್ತು ಕಚ್ಚಾ ರಸ್ತೆ, ಸಂಚಾರಿ ಪಡಿತರ ಅಂಗಡಿ ಮಾಡಿಕೊಡುತ್ತೇವೆಂದರು. ಆದರೆ, ಇನ್ನೂ ಅದಾಗಿಲ್ಲ. ಈಗಲೂ ಕಾಡುಪ್ರಾಣಿಗಳಂತೆ ಜೀವನ ಸಾಗಿಸುತ್ತಿದ್ದೇವೆ ಎಂದು ಅಳಲು ತೋಡಿಕೊಂಡರು.