ETV Bharat / state

ಚಾಮರಾಜನಗರನಕ್ಕೆ ಇನ್ನೆರಡು ದಿನದಲ್ಲಿ ವಿಶೇಷ ಪ್ಯಾಕೇಜ್​: ಸಿಎಂ ಬೊಮ್ಮಾಯಿ

author img

By

Published : Mar 18, 2023, 12:53 PM IST

ಈ ಕಾರ್ಯಕ್ರಮದಲ್ಲಿ ಸಚಿವ ಸೋಮಣ್ಣ ಹಾಗೂ ಬಿಎಸ್​ವೈ ನಡುವಿನ ಮುನಿಸಿಗೆ ತೆರೆ ಎಳೆಯಲಾಗುತ್ತದೆ ಎನ್ನಲಾಗುತ್ತಿದ್ದ ಮಾತು ಸುಳ್ಳಾಗಿದೆ.

Bommayi in Male Mahadeshwar statue inauguration programme
ಮಲೆ ಮಹದೇಶ್ವರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಬಸವರಾಜ ಬೊಮ್ಮಾಯಿ

ಚಾಮರಾಜನಗರ: ಅಸಂಖ್ಯಾತ ಭಕ್ತರ ಪಾಲಿನ ದೈವ ‘ಮಾಯ್ಕರ ಮಾದಪ್ಪ’ನ ನೆಲದಲ್ಲಿ ಮುಗಿಲೆತ್ತರದಲ್ಲಿರುವ 108 ಅಡಿ ಪ್ರತಿಮೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಇಂದು ಲೋಕಾರ್ಪಣೆ ಮಾಡಿದರು. ಜೊತೆಗೆ ಪ್ರಾಧಿಕಾರದ ವತಿಯಿಂದ ನಿರ್ಮಾಣಗೊಂಡಿರುವ ಬೆಳ್ಳಿರಥವೂ ಲೋಕಾರ್ಪಣೆ ಮಾಡಲಾಯಿತು.

silver chariot
ಬೆಳ್ಳಿ ರಥ

ಇದಕ್ಕೂ ಮುನ್ನ ಮಲೆ ಮಹದೇಶ್ಚರ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜನಗರ ಜಿಲ್ಲೆಗೆ ಇನ್ನೆರಡು ದಿನದಲ್ಲಿ ವಿಶೇಷ ಪ್ಯಾಕೇಜ್ ಘೊಷಣೆ ಮಾಡಲಾಗುವುದು ಎಂದು ಘೋಷಿಸಿದ ಅವರು, ಜಿಲ್ಲಾಧಿಕಾರಿ ವರದಿ ಕೊಟ್ಟಿದ್ದು, ಇನ್ನೆರೆಡು ದಿನದಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗುವುದು. ತಿಂಗಳಲ್ಲಿ ಎರಡನೇ ಬಾರಿಗೆ ನಾನು ಮಲೆ ಮಹದೇಶ್ವರ ಬೆಟ್ಟಕ್ಕೆ ಬಂದಿದ್ದು, ದೇವರ ಆಶೀರ್ವಾದ, ಕೃಪೆ ಎಲ್ಲರ ಮೇಲೆ ಇದೆ ಎಂದರು.

ಎನ್​ಎಚ್​ಎಂ ಗುತ್ತಿಗೆ ನೌಕರರ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಅಧಿಕಾರಿಗಳಿಗೆ ಈಗಾಗಾಲೇ ತಿಳಿಸಿದ್ದೇನೆ, ಅವರಿಗೇನು ಸಹಾಯ ಮಾಡಲಾಗುವುದೋ ಅದನ್ನು ಮಾಡುತ್ತೇನೆ ಎಂದು ತಿಳಿಸಿದರು. ಮೈಸೂರು ಎಕ್ಸ್​ಪ್ರೆಸ್ ವೇ ಇಡೀ ದೇಶವೆ ಹೆಮ್ಮೆ ಪಡಬೇಕಾದ ಕಾಮಗಾರಿ, ಇಡೀ ದೇಶವೇ ಮೈಸೂರಿಗೆ ಕನೆಕ್ಟ್ ಆಗಲಿದ್ದು, ಇಂಥ ಮಹತ್ವದ ಕೆಲಸಗಳಿಗೆ ಪ್ರಧಾನಿ ಮೋದಿ ಅವರನ್ನು ಕರೆಸದೇ ಬೇರೆ ಯಾವುದಕ್ಕೆ ಕರೆಸಬೇಕು? ಮೊದಲ ಮಳೆ ಬಂದ ಬಳಿಕ ಸಣ್ಣಪುಟ್ಟ ಸಮಸ್ಯೆ ಆಗಲಿದ್ದು, ಶೀಘ್ರವೇ ಎಲ್ಲ ಸಮಸ್ಯೆ ನಿವಾರಣೆ ಆಗಲಿದೆ ಎಂದು ವಿಪಕ್ಷಗಳ ಟೀಕೆಗೆ ಬೊಮ್ಮಾಯಿ ತಿರುಗೇಟು ಕೊಟ್ಟರು.

Male Mahadeshwar statue inauguration
ಮಲೆ ಮಹದೇಶ್ವರ ಪ್ರತಿಮೆ ಲೋಕಾರ್ಪಣೆ

ಮಾದಪ್ಪನ ಬೆಳ್ಳಿ ರಥ ಲೋಕಾರ್ಪಣೆ- ಬಿಎಸ್​ವೈ ಗೈರು, ಫಲಿಸದ ಬಿಜೆಪಿ ಒಗ್ಗಟ್ಟಿನ ಶೋ: ಪ್ರಸಿದ್ಧ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ಚರ ಬೆಟ್ಟದ ದೇವಾಲಯದಲ್ಲಿ ಇಂದು ಬೆಳ್ಳಿ ರಥ ಲೋಕಾರ್ಪಣೆ ಮಾಡಲಾಯಿತು. ಪ್ರಾಧಿಕಾರದ ವತಿಯಿಂದ ನಿರ್ಮಾಣ ಮಾಡಲಾಗಿರುವ ಬೆಳ್ಳಿ ರಥ ಇದಾಗಿದ್ದು, ಚಿನ್ನದ ರಥ ಈಗಾಗಲೇ ಶ್ರೀ ಕ್ಷೇತ್ರದಲ್ಲಿದ್ದು ಮೂರೂವರೇ ಕೋಟಿ ರೂ. ವೆಚ್ಚದಲ್ಲಿ 560 ಕೆಜಿ ಬೆಳ್ಳಿಯಿಂದ ಈ ರಥ ನಿರ್ಮಾಣ ಮಾಡಲಾಗಿದೆ.

ಯಡಿಯೂರಪ್ಪ ಗೈರು: ಇನ್ನು, ಮಲೆಮಹದೇಶ್ವರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮ ಬಿಜೆಪಿ ಒಗ್ಗಟ್ಟಿನ ಶೋ ಆಗಲಿದೆ ಎಂಬುದು ಸುಳ್ಳಾಗಿ ಕೇವಲ ಸಿಎಂ, ಸೋಮಣ್ಣ ಸಮ್ಮಿಲನದ ಕಾರ್ಯಕ್ರಮವಾಯಿತು. ಬಿಎಸ್​ವೈ ಹಾಗೂ ಸೋಮಣ್ಣ ನಡುವೆ ಇದೆ ಎನ್ನಲಾದ ಮುಸುಕಿನ ಗುದ್ದಾಟ ಮಾದಪ್ಪನ ಬೆಟ್ಟದಲ್ಲಿ ಮುಕ್ತಾಯಗೊಳ್ಳುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ, ಪೂರ್ವ ನಿಗದಿಯಂತೆ ಕಾರ್ಯಕ್ರಮಕ್ಕೆ ಯಡಿಯೂರಪ್ಪ ಗೈರಾಗಿದ್ದಾರೆ. ಚಿಕ್ಕಮಗಳೂರಿನಲ್ಲಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಬೇಕಿದ್ದರಿಂದ ಇಂದಿನ ಕಾರ್ಯಕ್ರಮಕ್ಕೆ ಬಿಎಸ್​ವೈ ಗೈರಾಗಿದ್ದಾರೆ ಎಂದು ಸಿಎಂ ಬೊಮ್ಮಾಯಿ ಸಮಜಾಯಿಷಿ ಕೊಟ್ಟಿದ್ದಾರೆ.

108 ಅಡಿ ಎತ್ತರವಿರುವ ಮಲೆ ಮಹದೇಶ್ವರನ ಪ್ರತಿಮೆಯನ್ನು ₹20 ಕೋಟಿ ವೆಚ್ಚದಲ್ಲಿ ಯೋಜನೆಯಲ್ಲಿ ನಿರ್ಮಾಣ ಮಾಡಲಾಗಿದೆ. ಸದ್ಯ, ಪ್ರತಿಮೆ ನಿರ್ಮಾಣ ಮಾತ್ರ ಪೂರ್ಣಗೊಂಡು, ಲೋಕಾರ್ಪಣೆಯಾಗಿದೆ. ಮುಂದಿನ ದಿನಗಳಲ್ಲಿ ಮಹದೇಶ್ವರಸ್ವಾಮಿ ಜೀವನ ಚರಿತ್ರೆ ಸಾರುವ ಮ್ಯೂಸಿಯಂ, ಪ್ರತಿಮೆಯ ಸ್ಥಳದಲ್ಲಿ ಬಯಲು ರಂಗಮಂದಿರ, ಗಿಡಮೂಲಿಕಾ ವನಗಳ ಅಭಿವೃದ್ಧಿ ಸೇರಿದಂತೆ ಇತರ ಕಾಮಗಾರಿಗಳು ನಡೆಯಲಿವೆ.

ಇದನ್ನೂ ಓದಿ: ಬಿಎಸ್​​​​ವೈ- ಸೋಮಣ್ಣ ಮುನಿಸು ಶಮನಕ್ಕೆ ಮಾದಪ್ಪನ ಬೆಟ್ಟದಲ್ಲಿ ವೇದಿಕೆ ಸಿದ್ಧ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.