ಚಾಮರಾಜನಗರ : ಇಡೀ ಸಮಾಜದ ಶಾಂತಿ ಕದಡುವ, ಬೆಂಕಿ ಹಚ್ಚುವ ಕೆಲಸವನ್ನು ಬಿಜೆಪಿ ಮಾಡ್ತಾ ಇದೆ. ಈ ಬೆಂಕಿಗೆ ಕಾಂಗ್ರೆಸ್ ಪಕ್ಷವು ಪೆಟ್ರೋಲ್ ಸುರಿತಾ ಇದೆ. ಎರಡೂ ರಾಷ್ಟ್ರೀಯ ಪಕ್ಷಗಳಿಂದ ಕೋಮುದಳ್ಳುರಿ ಉಂಟಾಗುತ್ತಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹನೂರಿನಲ್ಲಿ ಆಯೋಜಿಸಿರುವ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಎರಡೂ ರಾಷ್ಟ್ರೀಯ ಪಕ್ಷಗಳಿಂದ ಕೋಮುದಳ್ಳುರಿ ಉಂಟಾಗುತ್ತಿದೆ. ಇವರು ಸರ್ವಜನಾಂಗದ ಶಾಂತಿ ತೋಟವನ್ನು ಹಾಳು ಮಾಡ್ತಾ ಇದ್ದಾರೆ. ಆದರೆ, ಜೆಡಿಎಸ್ ಪಕ್ಷವು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸಲು ಶ್ರಮಿಸುತ್ತಿದೆ. ನಮಗೆ ಜನರ ಕಲ್ಯಾಣ ಮುಖ್ಯ ಎಂದರು.
ಸ್ವತಂತ್ರ ಬಂದು 75 ವರ್ಷ ಕಳೆದರೂ ರಾಜ್ಯದಲ್ಲಿ ನೀರಾವರಿ ಯೋಜನೆ ಪೂರ್ಣಗೊಂಡಿಲ್ಲ. ಇಂದು ಜನರ ಕಲ್ಯಾಣಕ್ಕಾಗಿ ಜನತಾ ಜಲಧಾರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನನಗೆ ಸಂಪೂರ್ಣ ಬಹುಮತದ ಸರ್ಕಾರವನ್ನು ಈ ಬಾರಿ ಕೊಡಿ, ನಾನು ಸವಾಲು ಹಾಕ್ತೇನೆ ಎಲ್ಲಾ ನೀರಾವರಿ ಯೋಜನೆಗಳನ್ನು ಜಾರಿಗೊಳಿಸ್ತೀನಿ ಎಂದು ಹೇಳಿದರು.
ಸಿದ್ದರಾಮಯ್ಯ ಅಲ್ಲ ಸುಳ್ಳಿನರಾಮಯ್ಯ : ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅಲ್ಲ, ಅವರು ಸುಳ್ಳಿನರಾಮಯ್ಯ. ಕೋಮುವಾದಿ ಪಕ್ಷ ದೂರವಿಡಬೇಕು ಎನ್ನುವ ಕಾಂಗ್ರೆಸ್ ಪಕ್ಷದ ಅಸಲಿ ಬಣ್ಣ ಬಯಲಾಗಿದೆ. ಬಿಜೆಪಿ ಆಪರೇಷನ್ ಕಮಲಕ್ಕೆ ಸುಳ್ಳಿನರಾಮಯ್ಯ ಎಷ್ಟು ದುಡ್ಡು ಪಡೆದಿದ್ದಾರೆ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಧಾರವಾಡ ಕಲ್ಲಂಗಡಿ ತೆರವು ಕೇಸ್ಗೆ ಟ್ವಿಸ್ಟ್: ದೂರು ನೀಡಿದ್ದ ವ್ಯಕ್ತಿ ವಿರುದ್ಧ ಪ್ರತಿದೂರು
ಸುಳ್ಳಿನರಾಮಯ್ಯ ಮಾತಿನಲ್ಲೊಂದು ಮನಸ್ಸಿನೊಳಗೊಂದು ಎನ್ನೋದು ಜನರಿಗೆ ಗೊತ್ತಾಗಿದೆ. ಕಾಂಗ್ರೆಸ್ ಪಕ್ಷದ ಸಭೆಯ ಉಸ್ತುವಾರಿ ಕಾರ್ಯದರ್ಶಿ ಮುಂದೆ ಇದೇ ಸುಳ್ಳುರಾಮಯ್ಯ ಮಾತನಾಡ್ತಾ, ಈ ದೇಶದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ಉಳಿಯಬೇಕಾದ್ರೆ ಕಾಂಗ್ರೆಸ್ ಪಕ್ಷವನ್ನು ಬುಡಸಮೇತ ಕಿತ್ತೊಗೆಯಬೇಕು ಎಂದು ಹೇಳಿದ್ದಾರೆ. ಇದರಲ್ಲೇ ಗೊತ್ತಾಗಲ್ವಾ ಸುಳ್ಳುರಾಮಯ್ಯ ಮನಸ್ಸಿನಲ್ಲಿ ಬಿಜೆಪಿ ಬೇರೂರಿದೆ ಎಂದು ಲೇವಡಿಯಾಡಿದರು.