ETV Bharat / state

ಪುಟ್ಟೀರಮ್ಮನ ಸೊಪ್ಪಿನ ಜ್ಞಾನ: 60ಕ್ಕೂ ಹೆಚ್ಚು ಬೆರಕೆ ಸೊಪ್ಪು ಗುರುತಿಸುವ ದೇಸಿ ತಜ್ಞೆ!

author img

By

Published : Mar 8, 2022, 12:30 PM IST

ಪಿಜ್ಜಾ ಬರ್ಗರ್​ ಆಹಾರವೇ ದೊಡ್ಡದು ಅಂದುಕೊಂಡಿರುವ ಈ ಕಾಲಘಟ್ಟದಲ್ಲಿ ಚಾಮರಾಜನಗರ ತಾಲೂಕಿನ ಪುಟ್ಟೀರಮ್ಮ ಎಂಬ ವೃದ್ಧೆಯೊಬ್ಬರು 60ಕ್ಕೂ ಹೆಚ್ಚು ಆರೋಗ್ಯದಾಯಕ ಬೆರಕೆ ಸೊಪ್ಪುಗಳ ಬಗ್ಗೆ, ಅವುಗಳ ಔಷಧೀಯ ಗುಣಗಳ ಬಗ್ಗೆ ಮಾಹಿತಿ ನೀಡುತ್ತಾರೆ. ದೇವರ ಜಾನಪದ ಗೀತೆಗಳಂತೆ ಸೊಪ್ಪುಗಳಿಗೂ ಹಾಡುಗಳನ್ನು ಕಟ್ಟಿ ಹಾಡುವ ಈ ವೃದ್ಧೆಯ ಬಗ್ಗೆ ಇಕ್ರಾ ಎಂಬ ಸಂಸ್ಥೆಯು "ಪುಟ್ಟೀರಮ್ಮನ ಪುರಾಣ" ಎಂಬ ಪುಸ್ತಕ ಹೊರತಂದಿದೆ.

Punyadahundi Putteeramma
ದೇಸೀ ತಜ್ಞೆ ಪುಣ್ಯದಹುಂಡಿ ಪುಟ್ಟೀರಮ್ಮ

ಚಾಮರಾಜನಗರ: ಅಬ್ಬಬ್ಬಾ ಎಂದರೇ ಈಗಿನವರು 5 ಸೊಪ್ಪುಗಳನ್ನು ಗುರುತಿಸಬಹುದು, ಗ್ರಾಮೀಣ ಭಾಗದವರಾದರೇ ಈ ಸಂಖ್ಯೆ ದ್ವಿಗುಣವಾಗಬಹುದು. ಆದರೆ, ಈ ದೇಸಿ ತಜ್ಞೆ ಬರೋಬ್ಬರಿ 60ಕ್ಕೂ ಹೆಚ್ಚು ಬೆರಕೆ ಸೊಪ್ಪನ್ನು ಗುರುತಿಸುತ್ತಾರೆ. ಅಷ್ಟೇ ಅಲ್ಲದೇ, ಯಾವ ರೋಗಕ್ಕೆ ಯಾವುದು ಮದ್ದು ಎಂಬುದೂ ಈಕೆಗೆ ಕರಗತವಾಗಿದೆ.

ಪುಣ್ಯದಹುಂಡಿ ಪುಟ್ಟೀರಮ್ಮನ ಸೊಪ್ಪಿನ ಜ್ಞಾನ

ಚಾಮರಾಜನಗರ ತಾಲೂಕಿನ ಪಣ್ಯದಹುಂಡಿ ಗ್ರಾಮದ ಪುಟ್ಟೀರಮ್ಮ ಎಂಬ ವೃದ್ಧೆ ಈಗಲೂ ಹರಳು ಹುರುಳಿದಂತೆ ಸಾಂಬಾರು ಸೊಪ್ಪಿನ ಹೆಸರುಗಳನ್ನು ಹೇಳುತ್ತಾರೆ. ರಸ್ತೆಬದಿ, ಜಮೀನಿನಲ್ಲಿ ಕಳೆಗಿಡವಾಗಿ ಪ್ರಕೃತಿದತ್ತವಾಗಿ ಬರುವ ಇವುಗಳನ್ನು ಗುರುತಿಸಿ ಬೇರೆಯವರಿಗೂ ತಮ್ಮ ಆಹಾರ ಜ್ಞಾನ ಹರಡುತ್ತಿದ್ದಾರೆ.

ಬರೀ ತೊಗರಿ ಕಾಳಲ್ಲೇ ಊಟ ಮಾಡಲಾಗದು, ಒಂದೊಂದು ದಿನ ಅವರೆಕಾಳು, ಅಲಸಂದೆ, ಹುರುಳಿ, ತಡಗುಣಿ ಎಲ್ಲವೂ ಇರುವ ಮಿಶ್ರ ಬೆಳೆಯ ಮಹತ್ವವನ್ನು ವಿವರಿಸುತ್ತಾರೆ ಈ ಪುಟ್ಟೀರಮ್ಮ. ಅದಕ್ಕೆ ತಕ್ಕಂತೆ ಮನೆಗೆ ಬೇಕಾಗುವ ಪ್ರತಿಯೊಂದು ಪದಾರ್ಥಗಳೂ ಹೊಲದಲ್ಲೇ ಸಿಗುವಂತಹ ವ್ಯವಸಾಯವನ್ನೂ ಅವರು ಮಾಡುತ್ತಾರೆ.

ಈಟಿವಿ ಭಾರತದೊಂದಿಗೆ ಮಾತನಾಡಿರುವ ಪುಟ್ಟೀರಮ್ಮ, ಈ ಬೆರಕೆಸೊಪ್ಪು ಯಾವ ಮಾರುಕಟ್ಟೆಯಲ್ಲೂ ಸಿಗುವುದಿಲ್ಲ, ಉತ್ತಮ ಮಳೆಯಾದರೇ ನಮ್ಮ ಬೇಲಿಯಲ್ಲೇ ಹತ್ತಾರು ಬಗೆಯ ಸೊಪ್ಪು ಹುಟ್ಟಿಕೊಳ್ಳುತ್ತವೆ. ಒಂದು ಸಲ ಹೊಲಕ್ಕೆ ಹೋದರೆ ನಾನು 10-15 ಜಾತಿ ಸೊಪ್ಪು ತರ್ತೀನಿ. ಈಗ ಇಲ್ಲೆ ಮನೆ ಹತ್ರ ಎದ್ದು ಹೋದ್ರೆ 8-9 ಜಾತಿ ಸೊಪ್ಪು ತರ್ತೀನಿ. ವಾರಕ್ಕೆ ಮೂರು ದಿನವಾದರೂ ಬೆರಕೆಸೊಪ್ಪು ಮಾಡ್ತೀವಿ.

ಮಾಂಸದ ಊಟದಲ್ಲಿ ಏನಿದೆ? ಗರ್ಭಿಣಿಯರಿಗೆ ಟಾನಿಕ್ ಮತ್ತು ಮಾತ್ರೆಯ ಬದಲು ವಾರಕ್ಕೆ 2-3 ಸಲ ಬೆರಕೆಸೊಪ್ಪು ಉಪಯೋಗಿಸಿದರೆ ಮಗು ಮತ್ತು ತಾಯಿ ಚೆನ್ನಾಗಿ ಆರೋಗ್ಯವಂತರಾಗಿರುತ್ತಾರೆ. ಸೊಪ್ಪಿನ ಸಾರು ಊಟ ಮಾಡಿದಾಗ ಶರೀರ ಹಗುರವಾಗಿರುತ್ತೆ, ಚೆನ್ನಾಗಿ ಹಸಿವಾಗುತ್ತೆ, ಚೆನ್ನಾಗಿ ಹೊಟ್ಟೆಯೂ ಕಳೆಯುತ್ತೆ, ಲವಲವಿಕೆಯಾಗಿ ಇರ್ತೀವಿ. ಬೇಳೆ, ಮಾಂಸ ಎಲ್ಲ ತಿಂದಾಗ ಹೊಟ್ಟೆನೋವು ಬರುತ್ತೆ, ಒಂಥರಾ ಮಂಕಾಗಿರುತ್ತೇವೆ ಎಂದು ಸೊಪ್ಪಿನ ಜ್ಞಾನ ಹೊರಹಾಕಿದರು.

ಎಷ್ಟೆಲ್ಲ ಸೊಪ್ಪು: ಗಣಿಕೆಸೊಪ್ಪು, ಪಸರೆಸೊಪ್ಪು, ಗುಳ್ಸುಂಡೆ ಸೊಪ್ಪು, ಮಳ್ಳಿ ಸೊಪ್ಪು, ಹಾಲೆ ಸೊಪ್ಪು, ಜವಣ ಸೊಪ್ಪು, ಅಣ್ಣೆ ಸೊಪ್ಪು, ಗುರುಜೆ ಸೊಪ್ಪು, ಕಲ್ಲು ಗುರುಜೆ ಸೊಪ್ಪು, ಹಿಟ್ಟಿನಕುಡಿ ಸೊಪ್ಪು, ಕರಿಕಡ್ಡಿ ಸೊಪ್ಪು, ಅಡಕ ಪುಟ್ಟ, ಕೊಟ್ಟನ ಗುರುಜೆ, ಸಾರಿನ ಸೀಗೆಕುಡಿ, ತಡಗುಣಿ ಚಿಗುರು, ನಲ್ಲಿಕುಡಿ ಚಿಗುರು, ಹೊನಗಾಲ ಸೊಪ್ಪು, ಹೊನಗೊನೆ ಸೊಪ್ಪು, ಕಾರೇಸೊಪ್ಪು, ಕನ್ನೆ ಸೊಪ್ಪು, ಕಿರುನಗಲ ಸೊಪ್ಪು, ನುಗ್ಗೆ ಸೊಪ್ಪು, ಅಗಸೆ ಸೊಪ್ಪು, ಕಿರಕೀಲೆ ಸೊಪ್ಪು, ದಂಟು ಸೊಪ್ಪು, ಬೋದಗೀರ ಸೊಪ್ಪು, ಸಪ್ಪಸೀಗೆ ಸೊಪ್ಪು, ಮುಳ್ಳುಗೀರ ಸೊಪ್ಪು, ಕೀರೆ ಸೊಪ್ಪು, ಮೆಂತೆ ಸೊಪ್ಪು, ಕುಂಬಳ ಸೊಪ್ಪು, ಪಾಲಕ ಸೊಪ್ಪು, ಬಿಳಿ ಬಗ್ಗರವಾಟ, ಕೆಂಪನ ಬಗ್ಗರವಾಟ, ಒಂದೆಲಗ ಸೊಪ್ಪು, ಕಾಡುನುಗ್ಗೆ ಸೊಪ್ಪು, ಕಾಡಂದಗ, ದ್ಯವನದ ಸೊಪ್ಪು, ಪುಂಡಿ ಸೊಪ್ಪು, ಬಸಲೆ ಸೊಪ್ಪು, ಕಳ್ಳೆ ಸೊಪ್ಪು ಹೀಗೆ ಹಲವಾರು ಈಗಿನ ಜೀವನಕ್ಕೆ ಒಗ್ಗಿಕೊಂಡಿರುವ ನಮ್ಮಂತಹವರಿಗೆ ಪರಿಚಯವೇ ಇಲ್ಲದ ಸೊಪ್ಪುಗಲ ಹೆಸರು ಈ ಪುಟ್ಟಿರಮ್ಮನ ಜ್ಞಾನದ ಬುಟ್ಟಿಯಲ್ಲಿವೆ.

ಸಿಟಿ ಮಂದಿಗಷ್ಟೇ ಅಲ್ಲ ಈಗಿನ ಹಳ್ಳಿ ಮಕ್ಕಳಿಗೂ ಕೊತ್ತಂಬರಿ, ಪಾಲಕ್, ಕರಿಬೇವು, ಮೆಂತೆ ಸೊಪ್ಪು ಬಿಟ್ಟರೇ ಬೇರೆ ಸೊಪ್ಪು ಗೊತ್ತಿಲ್ಲ. ಕಳೆನಾಶಕಗಳನ್ನು ಬಳಸುತ್ತಿರುವುದರಿಂದ ಬಹುಪಾಲು ಜಮೀನುಗಳಲ್ಲಿ ಬೆರಕೆ ಸೊಪ್ಪು ಮಾಯವಾಗಿದೆ. ಆದರೂ, ಪ್ರಕೃತಿ ದತ್ತವಾಗಿ ಬೇಲಿ, ರಸ್ತೆಬದಿಗಳಲ್ಲಿ ಈಗಲೂ ನೂರಾರು ಬಗೆಯ ಸೊಪ್ಪುಗಳು ಸಿಗುತ್ತಿವೆ. ನಾನು ಕೀಳುವಾಗ ಎಲೆ, ಚಿಗುರುನಷ್ಟೇ ಕೀಳುತ್ತೇನೆ. ಗಿಡ ನಶಿಸಿಹೋಗದೆ ಬೇರೆಯವರಿಗೂ ಅದು ದೊರಕುವಂತಾಗಲಿ ಎಂದು ಬೇರನ್ನು ಅಲ್ಲೇ ಬಿಡುತ್ತೇನೆ ಎಂದು ಹೇಳಿದರು.

ಹಾಡು ಕಟ್ತಾರೆ: ಪುಟ್ಟೀರಮ್ಮನ ಸೊಪ್ಪಿನ ಪ್ರೀತಿ ಇಷ್ಟಕ್ಕೇ ಮುಗಿಯಲ್ಲ, ದೇವರ ಜಾನಪದ ಗೀತೆಗಳಂತೆ ಸೊಪ್ಪಿನ ಬಗ್ಗೆಯೂ ಪುಟ್ಟೀರಮ್ಮ ಹಾಡು ಕಟ್ಟಿ ಹಾಡುತ್ತಾರೆ. ಸಾಮಾನ್ಯವಾಗಿ ಕಾಡುವ ಕಾಯಿಲೆಗಳಿಗೆ ಸೊಪ್ಪಿನ ಸಾರಲ್ಲೇ ಮದ್ದನ್ನು ಕಂಡುಕೊಂಡಿದ್ದಾರೆ.‌ ಈ ನೆಲದ ಅಮೂಲ್ಯ ಕೃಷಿಜ್ಞಾನವನ್ನು ಶತಮಾನಗಳಿಂದ ಸಂರಕ್ಷಿಸಿ ಜಾನಪದ ಹಾಡುಗಳಲ್ಲಿ, ಗಾದೆ ಮಾತುಗಳಲ್ಲಿ, ಸಾಂಸ್ಕೃತಿಕ ಪದ್ಧತಿಗಳಲ್ಲಿ ಅಳವಡಿಸಿ, ಯಾವ ಅಕ್ಷರಜ್ಞಾನದ ಹಂಗೂ ಇಲ್ಲದೇ ಮಹಾನ್ ಜ್ಞಾನ ಪರಂಪರೆಯನ್ನು ಮುಂದಿನ ಜನಾಂಗಗಳಿಗೆ ದಾಟಿಸುತ್ತಾ ಬಂದಿರುವ ಪುಟ್ಟೀರಮ್ಮನ ಬಗ್ಗೆ ಇಕ್ರಾ ಎಂಬ ಸಂಸ್ಥೆಯು "ಪುಟ್ಟೀರಮ್ಮನ ಪುರಾಣ" ಎಂಬ ಪುಸ್ತಕವನ್ನು ಹೊರತಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.