ETV Bharat / state

ಲೋಕಸಭಾ ಚುನಾವಣೆ: ಚಾಮರಾಜನಗರ ಬಿಜೆಪಿ ಟಿಕೆಟ್​ಗಾಗಿ ಆ್ಯಕ್ಟರ್, ಡಾಕ್ಟರ್, ಆಫೀಸರ್ ಪೈಪೋಟಿ

author img

By ETV Bharat Karnataka Team

Published : Sep 2, 2023, 7:57 PM IST

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಚಾಮರಾಜನಗರದ ಬಿಜೆಪಿ ಟಿಕೆಟ್​ಗಾಗಿ ಹಲವರು ಈಗಾಗಲೇ ಪೈಪೋಟಿ ನಡೆಸಿದ್ದಾರೆ.

Lok Sabha Elections
Lok Sabha Elections

ಲೋಕಸಭಾ ಚುನಾವಣೆ: ಚಾಮರಾಜನಗರ ಬಿಜೆಪಿ ಟಿಕೆಟ್​ಗಾಗಿ ಆ್ಯಕ್ಟರ್, ಡಾಕ್ಟರ್, ಆಫೀಸರ್ ಪೈಪೋಟಿ

ಚಾಮರಾಜನಗರ: ಲೋಕಸಭಾ ಚುನಾವಣೆ ಘೋಷಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಂತೆ ಬಿಜೆಪಿ ಟಿಕೆಟ್ ಪಡೆಯಲು ಪೈಪೋಟಿ ಆರಂಭವಾಗಿದೆ.‌ ಟಿಕೆಟ್ ರೇಸ್​ನಲ್ಲಿ ನಟ, ವೈದ್ಯ ಹಾಗೂ ನಿವೃತ್ತ ಐಎಎಸ್ ಅಧಿಕಾರಿಗಳು ಇರುವುದು ಗಮನ ಸೆಳೆಯುತ್ತಿದೆ.

ಕಳೆದ ಲೋಕಸಭಾ ಚುನಾವಣೆ ವೇಳೆಯು ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟು ಮನೆ ಮಾಡಿ ಓಡಾಡುತ್ತಿದ್ದ ಕೆ. ಶಿವರಾಂ, ಬಿಗ್ ಬಾಸ್ ಹಾಗೂ ನಟನೆ ಮೂಲಕ ಗುರುತಿಸಿಕೊಂಡಿರುವ ಅರ್ಜುನ್ ರಮೇಶ್, ರಾಜೀವ್ ಗಾಂಧಿ ವಿವಿಯಲ್ಲಿ ಪ್ರಾಧ್ಯಾಪಕ ಹಾಗೂ ಹಾಲಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ಅಳಿಯ ಡಾ. ಮೋಹನ್ ಕುಮಾರ್ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ.

''ಟಿ. ನರಸೀಪುರ ಪುರಸಭೆ ಸದಸ್ಯ ಆಗಿರುವ ನಾನು ಕಳೆದ 15 ವರ್ಷಗಳಿಂದ ಬಿಜೆಪಿ ಸಕ್ರಿಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಯುವಕರಿಗೆ ಆದ್ಯತೆ ನೀಡಲಿದೆ ಎಂಬ ವಿಶ್ವಾಸವಿದೆ. ಚಾಮರಾಜನಗರ ಹಿಂದುಳಿದ ಜಿಲ್ಲೆ ಅಂತಾರೆ. ಜಿಲ್ಲೆಯಲ್ಲಿ ಅಭಿವೃದ್ಧಿ ಮಾಡುವುದು ಜನಪ್ರತಿನಿಧಿಗಳ ಕರ್ತವ್ಯ. ಆ ನಿಟ್ಟಿನಲ್ಲಿ ನನ್ನದೇಯಾದ ಕೆಲವು ಯೋಜನೆಗಳಿವೆ. ಆದ್ದರಿಂದ ಈ ಬಾರಿ ಟಿಕೆಟ್ ಕೇಳಿದ್ದೇನೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಬಿಜೆಪಿ ವರಿಷ್ಠರು ಅರ್ಹರಿಗೆ ಟಿಕೆಟ್ ನೀಡಬೇಕು. ಕ್ಷೇತ್ರಕ್ಕೆ ಪ್ರವಾಸ ಮಾಡುವ ರೀತಿಯಲ್ಲಿ ಬರುವ ನಾಯಕರಿಗೆ ಮನ್ನಣೆ ನೀಡಬಾರದು. ಪ್ರಧಾನಿ ಮೋದಿ ಮತ್ತೊಮ್ಮೆ ಗೆಲುವಿನ ನಗೆ ಬರಬೇಕೆಂದರೆ ಅರ್ಹರಿಗೆ ಟಿಕೆಟ್ ನೀಡಬೇಕು'' ಎಂದು ನಟ ಅರ್ಜುನ್ ರಮೇಶ್ ಮನವಿ ಮಾಡಿದ್ದಾರೆ.

ಸಂಘ ಪರಿವಾರದ ಜೊತೆಯಲ್ಲಿ ಸಂಸದರ ಅಳಿಯ: ಹಾಲಿ ಸಂಸದ ವಿ‌ ಶ್ರೀನಿವಾಸಪ್ರಸಾದ್ ಅಳಿಯ ಆಗಿರುವ ವೈದ್ಯ ಡಾ. ಮೋಹನ್ ಕುಮಾರ್ ಸದ್ದಿಲ್ಲದೇ ಜಿಲ್ಲೆಯ ಬಿಜೆಪಿ ಮುಖಂಡರ ವಿಶ್ವಾಸ ಗಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಚಾಮರಾಜನಗರದಲ್ಲಿ ತಮ್ಮ ಕಚೇರಿಯನ್ನು ತೆರೆದಿರುವ ಡಾ. ಮೋಹನ್ ಕುಮಾರ್ ಸಂಘ ಪರಿವಾರದ ಜೊತೆ ಉತ್ತಮ ವಿಶ್ವಾಸ ಹೊಂದಿದ್ದಾರೆ.

''ಕಳೆದ ಬಾರಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಈ ಬಾರಿಯೂ ಟಿಕೆಟ್​ ಆಕಾಂಕ್ಷಿಯಾಗಿದ್ದೇನೆ. ಟಿಕೆಟ್​ ಸಿಗುವವರೆಗೂ ನಾನು ಯಾವಾಗಲೂ ಬಿಜೆಪಿ ಟಿಕೆಟ್ ಆಕಾಂಕ್ಷಿ'' ಎಂದು ಮೋಹನ್ ಕುಮಾರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಂಘ ಪರಿವಾರ ಹಾಗೂ ಸಂಸದರ ಅಳಿಯರಾಗಿರುವ ಕಾರಣಕ್ಕೆ ಟಿಕೆಟ್ ಲಾಬಿ ಇವರದ್ದು ಜೋರಾಗಿದೆ.

ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತುತ್ತಿತುವ ನಿವೃತ್ತ ಅಧಿಕಾರಿ: ಕಳೆದ ಚುನಾವಣೆಯಿಂದಲೂ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಲು ಹಾತೊರೆಯುತ್ತಿರುವ ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಂ, ಈ ಬಾರಿ ಟಿಕೆಟ್ ಪಡೆಯಲೇಬೇಕೆಂಬ ಹಠಕ್ಕೆ ಬಿದ್ದಿದ್ದಾರೆ‌‌. ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕ್ಷೇತ್ರದಲ್ಲಿ ಶಿವರಾಂ‌ ಸುತ್ತುತ್ತಿದ್ದು ಈಗಾಗಲೇ 8 ವಿಧಾನಸಭಾ ಕ್ಷೇತ್ರದಲ್ಲೂ ಮುಖಂಡರುಗಳನ್ನು ಭೇಟಿಯಾಗಿದ್ದಾರೆ. ಈ ಬಾರಿ ಟಿಕೆಟ್ ಸಿಗುವ ಭರವಸೆ ಇದೆ. ಜೊತೆಗೂ ನಾನೇ ಗೆಲ್ಲುತ್ತೇನೆ ಎಂದು ವಿಶ್ವಾಸವನ್ನು ಹೊರಹಾಕಿದ್ದಾರೆ. ಇನ್ನು, ಕೋಟೆ ಎಂ. ಶಿವಣ್ಣ ಕೂಡ ಟಿಕೆಟ್ ಆಕಾಂಕ್ಷಿ ಆಗಿದ್ದು, ಬಿಜೆಪಿ ಆಂತರಿಕ ಸರ್ವೇಯನ್ನು ಮಾಡಿಸುತ್ತಿದೆ. ಲೋಕಸಭೆ ಚುನಾವಣೆಯ ಕಾವು ಈಗಿಂದಲೇ ಹೆಚ್ಚಾಗುತ್ತಿದೆ.

ಇದನ್ನೂ ಓದಿ: ಚಾಮರಾಜನಗರ ಲೋಕಸಭಾ ಕ್ಷೇತ್ರ: ಸ್ಥಳೀಯ ಬಿಜೆಪಿ ಮುಖಂಡರನ್ನು ಭೇಟಿ ಮಾಡಿದ ಕೆ.ಶಿವರಾಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.