ETV Bharat / state

ಚಾಮರಾಜನಗರ: ಗಡಿ ಗ್ರಾಮಗಳಲ್ಲಿ ಕೊರೊನಾ ಮುನ್ನೆಚ್ಚರಿಕೆ; ಆರೋಗ್ಯ ಇಲಾಖೆಯಿಂದ ಮನೆ-ಮನೆ ಸರ್ವೇ

author img

By ETV Bharat Karnataka Team

Published : Dec 20, 2023, 6:20 PM IST

ಕೊರೊನಾ ರೂಪಾಂತರಿ ಹರಡುವುದಕ್ಕೆ ಕಡಿವಾಣ ಹಾಕಲು ಗುಂಡ್ಲುಪೇಟೆ ಗಡಿಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮನೆಗಳಿಗೆ ತೆರಳಿ ಸರ್ವೆ ಕಾರ್ಯ ನಡೆಸುತ್ತಿದ್ದಾರೆ.

ಗಡಿಯಲ್ಲಿ ಕೊರೊನಾ ಹೈ ಅಲರ್ಟ್
ಗಡಿಯಲ್ಲಿ ಕೊರೊನಾ ಹೈ ಅಲರ್ಟ್

ಚಾಮರಾಜನಗರ: ಕೇರಳದಲ್ಲಿ ಕೊರೊನಾ ರೂಪಾಂತರಿ ಹೆಚ್ಚುತ್ತಿದ್ದು, ಗುಂಡ್ಲುಪೇಟೆ ತಾಲೂಕಿನ ಗಡಿಗ್ರಾಮಗಳಲ್ಲಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಿದೆ. ಗುಂಡ್ಲುಪೇಟೆ ತಾಲೂಕಿನ ಮದ್ದೂರು ಕಾಲೊನಿ, ಕಗ್ಗಳದಹುಂಡಿ ಗ್ರಾಮಗಳಿಗೆ ಇಂದು ಇಲಾಖೆ ಸಿಬ್ಬಂದಿ ತೆರಳಿ ಮನೆ-ಮನೆಗಳಿಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ. ನೆಗಡಿ, ಕೆಮ್ಮು, ಜ್ವರದಿಂದ ಬಳಲುತ್ತಿರುವವರಿಗೆ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ. ಕೇರಳದಿಂದ ಬಂದವರಿಗೆ ಸ್ವಯಂ ಕ್ವಾರಂಟೈನ್ ಆಗಲು ಸೂಚನೆ ನೀಡಲಾಗುತ್ತಿದೆ.

ಶಬರಿಮಲೆಯಿಂದ ಯಾರಾದರೂ ಹಿಂತಿರುಗಿದ್ದಾರಾ ಎಂಬುದರ ಬಗ್ಗೆಯೂ ಇಲಾಖೆ ಮಾಹಿತಿ ಕಲೆ ಹಾಕುತ್ತಿದೆ. ಗಡಿಭಾಗವಾದ ಮೂಲೆಹೊಳೆ ಚೆಕ್ ಪೋಸ್ಟ್​ನಲ್ಲಿಯೂ ಎಚ್ಚರ ವಹಿಸಿರುವ ಇಲಾಖೆ ಇಂದಿನಿಂದ ವಾಹನ ತಪಾಸಣೆ ಕೈಗೊಂಡಿದೆ. ಜ್ವರ, ಶೀತದಿಂದ ಬಳಲುವ ಕೇರಳದವರನ್ನು ವಾಪಸ್ ಕಳುಹಿಸಲಾಗುತ್ತಿದೆ. ಶಬರಿಮಲೆಯಿಂದ ಹಿಂತಿರುಗುವ ಕನ್ನಡಿಗರ ಮೇಲೆ ನಿಗಾ ಇಡಲಾಗುತ್ತಿದೆ. ಅವರ ಸಂಪೂರ್ಣ ವಿವರ ತೆಗೆದುಕೊಂಡು ಕೆಲವರಿಗೆ ಜ್ವರ ತಪಾಸಣೆ ಮಾಡಲಾಗುತ್ತಿದೆ.

ಮತ್ತೊಂದೆಡೆ, ರಾಜ್ಯದಲ್ಲೂ ಕೋವಿಡ್ 19 ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ಹಾಗೂ 60 ವರ್ಷದ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮಾಸ್ಕ್ ಧರಿಸುವುದೂ ಸೇರಿದಂತೆ ಹಲವಾರು ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಹೊರಡಿಸಿದೆ. ಕ್ರಿಸ್​ಮಸ್ ಹಾಗೂ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಜನದಟ್ಟಣೆಯಿಂದಾಗಿ ಕೊರೊನಾ ಹೆಚ್ಚಳವಾಗುವ ಸಂಭವವಿದೆ. ಹಾಗಾಗಿ, ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಕೋವಿಡ್ ರಾಜ್ಯ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿರುವ ಈ ಕೆಳಗಿನ ಅಂಶಗಳನ್ನು ಸಾರ್ವಜನಿಕರು ಪಾಲಿಸುವಂತೆ ಸಲಹೆ ನೀಡಲಾಗಿದೆ.

  • ಎಲ್ಲ ಹಿರಿಯ ನಾಗರಿಕರು (60 ವರ್ಷ ಹಾಗೂ ಮೇಲ್ಪಟ್ಟವರು), ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು (ವಿಶೇಷವಾಗಿ ಕಿಡ್ನಿ, ಹೃದಯ, ಲಿವರ್ ಸಮಸ್ಯೆಗಳು), ಗರ್ಭಿಣಿಯರು, ಎದೆ ಹಾಲುಣಿಸುವ ತಾಯಂದಿರು, ಹೊರಾಂಗಣ ಪ್ರದೇಶಗಳಿಗೆ ತೆರಳಿದಾಗ ಮಾಸ್ಕ್ ಧರಿಸಬೇಕು. ಅಗತ್ಯ ಗಾಳಿ, ಬೆಳಕಿನ ವ್ಯವಸ್ಥೆಯಿಲ್ಲದ ಮತ್ತು ಹೆಚ್ಚು ಜನಸಂದಣಿಯಿರುವ ಪ್ರದೇಶಗಳಿಗೆ ತೆರಳದಿರುವುದು ಸೂಕ್ತವಾಗಿದೆ.
  • ಜ್ವರ, ಕೆಮ್ಮು, ನೆಗಡಿ, ಇತ್ಯಾದಿ ಉಸಿರಾಟದ ಸೋಂಕಿನ ಲಕ್ಷಣಗಳನ್ನು ಹೊಂದಿದವರು ತಕ್ಷಣವೇ ಅಗತ್ಯ ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಮೂಗು ಹಾಗೂ ಬಾಯಿ ಮುಚ್ಚುವಂತೆ ಮಾಸ್ಕ್ ಧರಿಸುವುದು, ಅಗತ್ಯ ಗಾಳಿ - ಬೆಳಕಿನ ವ್ಯವಸ್ಥೆಯಿಲ್ಲದ ಮತ್ತು ಹೆಚ್ಚು ಜನಸಂದಣಿಯಿರುವ ಪ್ರದೇಶಗಳಿಗೆ ಭೇಟಿ ನೀಡದಿರುವುದು ಸೂಕ್ತವಾಗಿದೆ.
  • ಉತ್ತಮ ವೈಯಕ್ತಿಕ ಸ್ವಚ್ಛತೆ, ಆಗಾಗ್ಗೆ ಕೈಗಳನ್ನು ಸೋಪು ಹಾಗೂ ನೀರಿನಿಂದ ತೊಳೆದುಕೊಳ್ಳುವುದು, ಇತ್ಯಾದಿಗಳ ಪಾಲನೆ ಅಗತ್ಯ.
  • ಆರೋಗ್ಯ ಸಮಸ್ಯೆಗಳು ಕಂಡುಬಂದಲ್ಲಿ ಮನೆಯಲ್ಲಿರುವುದು ಸೂಕ್ತ. ಇತರ ವ್ಯಕ್ತಿಗಳೊಂದಿಗೆ, ವಿಶೇಷವಾಗಿ ಹಿರಿಯ ನಾಗರೀಕರು/ದುರ್ಬಲರನ್ನು (vulnerable) ಅವಶ್ಯವಿದ್ದಲ್ಲಿ ಮಾತ್ರವೇ ಭೇಟಿ ಮಾಡುವುದು. ಆರೋಗ್ಯ ಸಮಸ್ಯೆಗಳನ್ನು ಹೊಂದಿದವರು ಜನಸಂದಣಿಯ ಪ್ರದೇಶಗಳಿಗೆ ಭೇಟಿ ನೀಡಬೇಕಾದ ಸಂದರ್ಭದಲ್ಲಿ ಮಾಸ್ಕ್ ಧರಿಸುವಂತೆ ಸಲಹೆ ನೀಡಲಾಗಿದೆ.
  • ಅಂತರರಾಷ್ಟ್ರೀಯ ಪ್ರಯಾಣದ ಸಂದರ್ಭದಲ್ಲಿ ಎಚ್ಚರಿಕೆಯಿಂದಿದ್ದು, ವಿಮಾನ ನಿಲ್ದಾಣದಲ್ಲಿ ಹಾಗೂ ವಿಮಾನದೊಳಗೆ ಮಾಸ್ಕ್ ಧರಿಸುವುದು, ಹೆಚ್ಚಿನ ಗಾಳಿ-ಬೆಳಕು ಇಲ್ಲದ ಮತ್ತು ಜನದಟ್ಟಣೆ ಇರುವ ಸ್ಥಳಗಳಿಗೆ ತೆರಳದಿರುವುದೂ ಸೇರಿದಂತೆ, ಇತರ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದು ಸೂಕ್ತ.

ಇದನ್ನೂ ಓದಿ: ಕೊರೊನಾ ಸೋಂಕು ತಗುಲಿದ್ದ ವೃದ್ಧ ಸಾವು: ಟೆಸ್ಟಿಂಗ್ ಹೆಚ್ಚಳಕ್ಕೆ ಸೂಚನೆ ಕೊಟ್ಟ ಆರೋಗ್ಯ ಸಚಿವರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.