ETV Bharat / state

ಮೋದಿ ರೋಡ್ ಶೋಯಿಂದ ಜನರಿಗೆ ತೊಂದರೆಯಾಗಿದೆ - ಸಿದ್ದು ಬಳಿ ಸಿದ್ಧಾಂತ‌ ಕಲಿಯಬೇಕಿಲ್ಲ? : ಹೆಚ್​ಡಿಕೆ ವಾಗ್ದಾಳಿ

author img

By

Published : May 6, 2023, 2:37 PM IST

Updated : May 6, 2023, 4:23 PM IST

ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನಡೆಸಿದ ರೋಡ್ ಶೋನಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ ಎಂದು ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

kumaraswamy
ಹೆಚ್​ ಡಿ ಕುಮಾರಸ್ವಾಮಿ

ಹನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್​ ಡಿ ಕುಮಾರಸ್ವಾಮಿ

ಬೆಂಗಳೂರು/ಚಾಮರಾಜನಗರ : ಜನರಿಗೆ ತೊಂದರೆ ಕೊಟ್ಟು ಪ್ರಧಾನ ಮಂತ್ರಿ ನರೇಂದ್ರ ಮೋದಿ ರೋಡ್ ಶೋ ನಡೆಸುತ್ತಿದ್ದಾರೆ. ಮೋದಿ ರೋಡ್ ಶೋಯಿಂದ ದುಡಿಯುವ ಜನ ಬೀದಿ ಪಾಲಾಗುತ್ತಿದ್ದಾರೆ. ಯಾವ ಪುರುಷಾರ್ಥಕ್ಕೆ ಈ ರ‍್ಯಾಲಿ ಮಾಡ್ತಿದ್ದಾರೆ. ನಾಳೆ ನೀಟ್ ಪರೀಕ್ಷೆ ಬರೆಯುವ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಜೆಡಿಎಸ್ ನಾಯಕ ಹಾಗೂ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದರು.

ಜಿಲ್ಲೆಯ ಹನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮನೆ ಬಾಗಿಲು ತೆಗೆಯಬೇಡಿ, ಓಣಿಯಲ್ಲಿ ಓಡಾಡಬೇಡಿ ಅಂತಾರೆ. ಹಾಗಿದ್ದರೆ, ಈ ರೋಡ್ ಶೋ ಯಾಕೆ ಮಾಡ್ತೀರಾ?. ಯಾರೋ ಕೆಲವರನ್ನು ತುಂಬಿಕೊಂಡು ಬಂದು‌ ನಿಲ್ಲಿಸಿ ಮೋದಿ ಮೋದಿ ಎಂದು ಕೂಗಿಸಿಕೊಂಡು ಹೋಗ್ತಾರೆ. ಇದರಿಂದ ಜನರಿಗೆ ತೊಂದರೆಯೇ ಹೊರತು ಬಿಜೆಪಿಗೆ ಲಾಭ ಇಲ್ಲ" ಎಂದು ಟಾಂಗ್ ಕೊಟ್ಟರು.

ಹೆಚ್​ ಡಿ ಕುಮಾರಸ್ವಾಮಿಗೆ ಸಿದ್ಧಾಂತ ಇಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಸಿದ್ದರಾಮಯ್ಯ ಅವರಿಗೆ ಯಾವ ಸಿದ್ಧಾಂತವಿದೆ. ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿ ಕಾಂಗ್ರೆಸ್ ಅನ್ನೇ ಮುಗಿಸಿ ಎನ್ನುತ್ತಾರೆ. ಅವರ ಹೃದಯದಲ್ಲಿರುವುದನ್ನು ಹೇಳುತ್ತಾರೆ. ಆಮೇಲೆ ಇಲ್ಲ, ಇಲ್ಲ ಬಿಜೆಪಿ ಮುಗಿಸಿ ಅಂತಾರೆ. ಇದು ಅವರ ಸಿದ್ಧಾಂತ" ಎಂದು ತಿರುಗೇಟು ಕೊಟ್ಟರು.

ಇದನ್ನೂ ಓದಿ : ಮೋದಿ ರೋಡ್ ಶೋನಲ್ಲಿ ರಾರಾಜಿಸಿದ ಬಜರಂಗಿ ಧ್ವಜಗಳು : ಕೇಸರಿ ಕಾರ್ಯಕರ್ತರಿಂದ ಕಾಂಗ್ರೆಸ್​ಗೆ ಟಕ್ಕರ್

"ಸಿದ್ಧಾಂತವನ್ನು‌ ಸಿದ್ದರಾಮಯ್ಯ ಅವರಿಂದ ಕಲಿಬೇಕಾಗಿಲ್ಲ, ಅಧಿಕಾರದಲ್ಲಿದ್ದಾಗ ಲಿಂಗಾಯತರ ಬಗ್ಗೆ ಮಾತನಾಡಿ ಈಗ ಲಿಂಗಾಯತರೇ ಕ್ಷಮಿಸಿ ಎಂದು ಹೇಳುತ್ತಿದ್ದಾರೆ. ಇವರು ಜಾತ್ಯತೀತವಾದಿನಾ?, ಇವರ ಬಳಿ ಜಾತ್ಯತೀತವಾದ ಏನು ಎಂದು ಕಲಿಯಬೇಕಾ?, ಪ್ರತಿ ಸಮಾಜಕ್ಕೆ ದೇವೇಗೌಡರು ಕೊಟ್ಟ ರಾಜಕೀಯ ಶಕ್ತಿಯನ್ನು ಇವರ ಕೈಯಲ್ಲಿ ಕೊಡುವುದಕ್ಕೆ ಆಗುತ್ತದಾ?. ಐದು ವರ್ಷ ಸರ್ಕಾರ ನಡೆಸಿದ ಸಿದ್ದರಾಮಯ್ಯ ಕೊಟ್ರಾ?, ಎಲ್ಲರಿಗಿಂತ ಹೆಚ್ಚಿನ ಅಡ್ಜಸ್ಟ್‌ಮೆಂಟ್ ರಾಜಕಾರಣ ಸಿದ್ದರಾಮಯ್ಯ ಅವರದ್ದು" ಎಂದು ಸಿದ್ದು ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : ಖರ್ಗೆ, ಕುಟುಂಬಸ್ಥರ ಹತ್ಯೆ ಕುರಿತಾದ ಆಡಿಯೋ ತನಿಖೆಗೆ ಆದೇಶ : ಸಿಎಂ ಬೊಮ್ಮಾಯಿ

ಜೆಡಿಎಸ್ ಕೇವಲ 20 ರಿಂದ 25 ಸ್ಥಾನ ಗೆಲ್ಲಲಿದೆ ಎಂಬ ಸಮೀಕ್ಷೆ ಕುರಿತು ಮಾತನಾಡಿದ ಅವರು, "ರಾಜ್ಯದಲ್ಲಿ ಕಳೆದ ಎರಡು ತಿಂಗಳಿನಿಂದ ಬರುತ್ತಿರುವ ಸಮೀಕ್ಷೆಗಳು ಕೃತಕ. ರಾಷ್ಟ್ರೀಯ ಪಕ್ಷಗಳು ಹಣ ಕೊಟ್ಟು ಜನರ ಭಾವನೆಗಳನ್ನು ಕದಡುವ ಕೆಲಸ ಮಾಡ್ತಿವೆ. ಈ ಸಮೀಕ್ಷೆಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಇವು ರಾಷ್ಟ್ರೀಯ ಪಕ್ಷಗಳ ಹಣಕ್ಕೋಸ್ಕರ ಮಾಡಿರುವ ಸಮೀಕ್ಷೆಗಳು. ಈ ಸಮೀಕ್ಷೆಗಳೆಲ್ಲ ಈ ಬಾರಿ‌ ಉಲ್ಟಾ ಹೊಡೆಯುತ್ತವೆ. ಯಾವುದೇ ರಾಷ್ಟ್ರೀಯ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗಲ್ಲ‌, ಸಮೀಕ್ಷೆಗಳಲ್ಲಿ ಜೆಡಿಎಸ್‌ಗೆ ಕಡಿಮೆ ಸ್ಥಾನ ಕೊಟ್ಟಿರುವವರು ಆನಂದಪಡಲಿ" ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ : ಮೋದಿ ರೋಡ್ ಶೋ ವೇಳೆ ಟ್ರಾಫಿಕ್​ನಲ್ಲಿ ಸಿಲುಕಿದ ಆಂಬ್ಯುಲೆನ್ಸ್​ಗಳು

ಶಿವಾಜಿನಗರದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಆಕ್ಷೇಪ: ಬೆಂಗಳೂರಲ್ಲಿ ಪ್ರಚಾರ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ರೋಡ್ ಶೋ ನಡೆಸಿದರು. ಈ ವೇಳೆ ನಡುವೆ ಕೊಲೆ ಯತ್ನ ಆರೋಪ ಹೊತ್ತಿರುವ ಶಿವಾಜಿನಗರದ ಬಿಜೆಪಿ ಅಭ್ಯರ್ಥಿ ಎನ್.ಚಂದ್ರ ಪರ ಪ್ರಚಾರಕ್ಕೆ ಆಪ್, ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತು. ಈ ಕುರಿತು ಟ್ವಿಟ್ ಮಾಡಿರುವ ಆಮ್ ಆದ್ಮಿ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ಮುಕುಂದ್ ಗೌಡ, ಬಸವಣ್ಣನ ವಚನ "ಇವ ನಮ್ಮವ ಇವ ನಮ್ಮವ" ಎಂಬಂತೆ ರೌಡಿ, ಕೊಲೆಗಾರರು, ವಂಚಕರು ಮತ್ತು ಸಮಾಜ ಘಾತುಕರೂ ನಮ್ಮವರೇ ಎಂದು ತೋರಿಸಲು ಹೊರಟಿದ್ದಾರೆ. ಒಂದು ರಾಷ್ಟ್ರೀಯ ಪಕ್ಷದ ನಾಯಕನಿಗೆ, ದೇಶದ ಪ್ರಧಾನಿಗೆ ಇಂಥಾ ಗತಿ ಬರಬಾರದಿತ್ತು ಎಂದು ಟೀಕಿಸಿದ್ದಾರೆ. ಕಲಬುರಗಿ ಜಿಲ್ಲೆ ಚಿತ್ತಾಪುರ ಅಭ್ಯರ್ಥಿಯ ಕೇಸ್​​ಗಳ ದೊಡ್ಡ ಪಟ್ಟಿ ಬಿಡುಗಡೆಯಾದಾಗ ಪ್ರಧಾನಿಗಳ ಪ್ರವಾಸ ರದ್ದುಗೊಂಡಂತೆ ನಾಟಕವಾಡಿದರು. ಈಗ ಶಿವಾಜಿನಗರದ ಸರದಿ. ದೇಶದ ಪ್ರಧಾನಿಗಿರುವ ಮಾಹಿತಿ ನೀಡುವ ಮೂಲಗಳ ಕಣ್ಣು ತಪ್ಪಿಸಿ ಇವೆಲ್ಲ ನಡೆಯುತ್ತವೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

ಈ ಕುರಿತು ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಮಾತನಾಡಿ, ಬಿಜೆಪಿ ಒಂದು ನಾಟಕ ಪಕ್ಷವಾಗಿದೆ. ಸಮಾಜಘಾತಕರು ಯಾರ ಕಡೆ ಇದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಮುಂದೆ ಜನತೆ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

Last Updated : May 6, 2023, 4:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.