ETV Bharat / state

ಲಾಕ್​ಡೌನ್ ಸಮಯದಲ್ಲಿ ವಾಚ್ ರಿಪೇರಿ ಕಲಿತ ಶಿಕ್ಷಕ, ಇವರ ಬತ್ತಳಿಕೆಯಲ್ಲಿರುವ HMT ವಾಚ್​​ಗಳೆಷ್ಟು ಗೊತ್ತಾ..?

author img

By

Published : May 20, 2021, 8:06 PM IST

ಈಗ ಒಂದೂವರೆ ವರ್ಷದ ಹಿಂದೆ ಮೈಸೂರಿನ ಪೆಟ್ಟಿ ಅಂಗಡಿಯೊಂದರಲ್ಲಿ ಎಚ್ಎಂಟಿ ವಾಚ್ ಖರೀದಿಸಿದೆ. ಬಳಿಕ, ಹವ್ಯಾಸವಾಗಿ 400 ವಾಚ್​ಗಳು ನನ್ನ ಬಳಿಯಿದ್ದು, ಸುಮಾರು 45-50 ವರ್ಷಗಳ ಹಳೇ ವಾಚ್ ಗಳೇ ಹೆಚ್ಚಿವೆ ಎಂದು ಈಟಿವಿ ಭಾರತಕ್ಕೆ ಪೊನ್ನಾಚಿ ಮಹಾದೇವಸ್ವಾಮಿ ತಿಳಿಸಿದರು.

chamrajnagar teacher
ಲಾಕ್​ಡೌನ್ ಸಮಯದಲ್ಲಿ ವಾಚ್ ರಿಪೇರಿ ಕಲಿತ ಶಿಕ್ಷಕ

ಚಾಮರಾಜನಗರ: ಮೊಬೈಲ್​ನಲ್ಲಿ ಟೈಂ ನೋಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿರುವುದರಿಂದ ವಾಚ್ ಕಟ್ಟುವರ ಸಂಖ್ಯೆ ಕಡಿಮೆಯೇ ಆಗಿದೆ. ಆದರೆ, ಇಲ್ಲೋರ್ವ ಶಿಕ್ಷಕ ಕಳೆದ ಒಂದು ವರ್ಷದಿಂದ ನೂರಾರು ಕೈಗಡಿಯಾರ ಸಂಗ್ರಹಿಸಿರುವುದಷ್ಟೇ ಅಲ್ಲದೇ ಈ ಲಾಕ್​ಡೌನ್ ನಲ್ಲಿ ರಿಪೇರಿ ಕೆಲಸವನ್ನು ಕಲಿತುಕೊಂಡಿದ್ದಾರೆ.

ಲಾಕ್​ಡೌನ್ ಸಮಯದಲ್ಲಿ ವಾಚ್ ರಿಪೇರಿ ಕಲಿತ ಶಿಕ್ಷಕ

ಸಾಹಿತಿಯೂ ಆಗಿರುವ ಹನೂರು ತಾಲೂಕಿನ ಪೊನ್ನಾಚಿ ಮಹಾದೇವಸ್ವಾಮಿ ಅವರು ಯಳಂದೂರಿನಲ್ಲಿ ಬಿಆರ್​ಪಿ ಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ವೈಭವವಾಗಿ ಮೆರೆದು ಮರೆಯಾಗಿರುವ HMT ವಾಚ್ ಗಳ ಸಂಗ್ರಹದಲ್ಲಿ ತೊಡಗಿ ಶೋರೂಂಗಳು, ಗುಜರಿ, ಆನ್​ಲೈನ್ ನಲ್ಲೂ ತಡಕಾಡಿ ಬರೋಬ್ಬರಿ 400ಕ್ಕೂ ಹೆಚ್ಚು ವಾಚ್ ಸಂಗ್ರಹಿಸಿದ್ದಾರೆ. ಇದರಲ್ಲಿ 80 ಬಗೆಯ ಪುರುಷ ಹಾಗೂ ಮಹಿಳೆಯರ ವಾಚ್ ಇವೆ.

ತಾನು SSLC ಪಾಸ್ ಆದರೆ ಎಚ್ಎಂಟಿ ವಾಚ್ ಕೊಡಿಸುತ್ತೇನೆಂದು ತಂದೆ ಹೇಳಿದ್ದರು. ಆದರೆ, ತಾನು ಅಂದು ಫೇಲ್​​ ಆಗಿ ವಾಚ್ ನಿಂದ ವಂಚಿತನಾಗಿದ್ದೆ. ಈಗ ಒಂದೂವರೆ ವರ್ಷದ ಹಿಂದೆ ಮೈಸೂರಿನ ಪೆಟ್ಟಿ ಅಂಗಡಿಯೊಂದರಲ್ಲಿ ಎಚ್ಎಂಟಿ ವಾಚ್ ಖರೀದಿಸಿದೆ. ಬಳಿಕ, ಹವ್ಯಾಸವಾಗಿ 400 ವಾಚ್ ಗಳು ನನ್ನ ಬಳಿಯಿದ್ದು, ಸುಮಾರು 45-50 ವರ್ಷಗಳ ಹಳೇ ವಾಚ್ ಗಳೇ ಹೆಚ್ಚಿವೆ ಎಂದು ಈಟಿವಿ ಭಾರತಕ್ಕೆ ಪೊನ್ನಾಚಿ ಮಹಾದೇವಸ್ವಾಮಿ ತಿಳಿಸಿದರು.

ಯಾವ್ಯಾವ ವಾಚ್​​ಗಳಿವೆ...?

ಎಚ್ಎಂಟಿ ಜನಪ್ರಿಯ ವಾಚ್ ಗಳಾದ ಜನತಾ, ಕೊಹಿನೂರ್, ಕಾಂಚನ್, ಪೈಲಟ್, ಚಾಣಕ್ಯ ಸೇರಿದಂತೆ ವಿಜಯ್, ಸೋನಾ, ರಜತ್, ಕಲ್ಯಾಣ್, ಸೌರಭ್, ಆಶ್ರಯ, ಸೂರ್ಯ, ಆಕಾಶ್, ಜವಾನ್, ಗಗನ್, ರೋಹಿತ್, ಚೇತನ್, ಹೀರಾ, ಪವನ್, ಜಯಂತ್, ತಾರೀಖ್, ಅಭಿಷೇಕ್, ಸಂದೀಪ್, ಅವಿನಾಶ್, ಸೂರಜ್, ಉತ್ತಮ್, ಕ್ರಾಂತಿ, ಹೇಮಂತ್, ಚಿನಾರ್, ಅಜಿತ್, ಶ್ರೇಯಸ್, ಅರ್ಜುನ್, ತ್ರಿಶೂಲ್, ವಿವೇಕ್ ಇವೆ. ಮಹಿಳೆಯರ ವಾಚ್ ಗಳಾದ ಕಾವೇರಿ, ಗೋದಾವರಿ, ತಾರಾ, ದೀಪ್ತಿ, ಕಪಿಲಾ, ಶಾಲಿನಿ, ಸ್ನೇಹ, ಪ್ರಿಯ, ಸಿಂಧು, ಗಂಗಾ, ಅಮೂಲ್ಯ ಸೇರಿದಂತೆ 80 ಬಗೆಯ 400ಕ್ಕೂ ಹೆಚ್ಚು ಎಚ್ಎಂಟಿ ವಾಚ್ ಗಳು ಇವರ ಬಳಿ ಇದೆ.

ಸರ್ವೀಸ್ ಚಾರ್ಚ್ ಹೆಚ್ಚೆಂದು ಸ್ಚತಃ ರಿಪೇರಿ:

chamrajnagar teacher
ಲಾಕ್​ಡೌನ್ ಸಮಯದಲ್ಲಿ ವಾಚ್ ರಿಪೇರಿ ಕಲಿತ ಶಿಕ್ಷಕ

ಇನ್ನು, ಇವರ ಬಳಿಯ ಎಚ್ಎಂಟಿ ವಾಚ್ ಗಳು ಕೆಟ್ಟು ಹೋದರೇ, ಬೆಲ್ಟ್-ಚೈನ್ ಹಾಕಬೇಕಿದ್ದರೇ ವಾಚ್ ಗಿಂತ ಸರ್ವೀಸ್ ಚಾರ್ಜ್ ಹೆಚ್ಚಾಗುತ್ತಿದ್ದರಿಂದ ಈ ಲಾಕ್​ಡೌನ್ ಅವಧಿಯಲ್ಲಿ ತನ್ನ ಇಬ್ಬರು ಸ್ನೇಹಿತರು ಮತ್ತು ಯೂಟ್ಯೂಬ್ ಮೂಲಕ ವಾಚ್ ರಿಪೇರಿ ಕಲಿತುಕೊಂಡಿದ್ದಾರೆ. ಬೇಕಾಗುವ ಸಾಧನ-ಸಲಕರಣೆಗಳನ್ನು ಕೊಂಡು ತಂದು ಈಗ ತಮ್ಮೆಲ್ಲಾ ಎಚ್ಎಂಟಿ ವಾಚ್ ಗಳ ರಿಪೇರಿಯನ್ನು ತಾವೇ ಮಾಡಿಕೊಳ್ಳುತ್ತಿದ್ದಾರೆ.

ಧೂಳು, ತುಕ್ಕು ಹಿಡಿಯದಂತೆ, ಗಡಿಯಾರದ ಮುಳ್ಳುಗಳು, ಕೀಯನ್ನು ಬದಲಾಯಿಸುವುದನ್ನು ಮಾಡುತ್ತಿದ್ದು, ತನಗೆ ಲಾಕ್​ಡೌನ್ ಅವಧಿ ವರವಾಗಿ ಪರಿಣಮಿಸಿತು. ಕಳೆದ ಲಾಕ್​ಡೌನ್ ಅವಧಿಯಲ್ಲಿ ವಾಚ್ ಸಂಗ್ರಹಿಸಿದರೇ, ಈ ಬಾರಿ ವಾಚ್ ರಿಪೇರಿ ಕಲಿತುಕೊಂಡೆ ಎಂದು ನಕ್ಕು ನುಡಿಯುತ್ತಾರೆ ಪೊನ್ನಾಚಿ ಮಹಾದೇವಸ್ವಾಮಿ.

ಸಾಹಿತ್ಯ ವಲಯದಲ್ಲೂ ಹೆಸರು:

ಪೊನ್ನಾಚಿ ಮಹಾದೇವಸ್ವಾಮಿ ಸಾಹಿತ್ಯ ವಲಯದಲ್ಲೂ ಹೆಸರು ಮಾಡಿದ್ದು, ಧೂಪದ ಮಕ್ಕಳು ಎಂಬ ಇವರ ಕೃತಿಗೆ 2020ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. 'ಸಾವೊಂದನ್ನು ಬಿಟ್ಟು'.. ಎಂಬ ಕವನ ಸಂಕಲನವೂ ಪ್ರಕಟಣೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.