ETV Bharat / state

ಚಾಮರಾಜನಗರ:  ಕರೆಂಟಿಲ್ಲ, ರಸ್ತೆಯಿಲ್ಲ.. ಅದಕ್ಕೇ ನಾವು ವೋಟು ಹಾಕಲ್ಲ;  ಗ್ರಾಮಸ್ಥರ ಖಡಕ್​ ಸಂದೇಶ!

author img

By

Published : Apr 17, 2023, 7:06 PM IST

Villagers boycotted voting
ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು

ನಮ್ಮ ಬೇಡಿಕೆ ಈಡೇರಿಸಿದರಷ್ಟೆ ಈ ಬಾರಿ ಮತದಾನ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು

ಚಾಮರಾಜನಗರ: ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ನಮ್ಮ ಊರಿಗೆ ರಸ್ತೆ ಇಲ್ಲ, ವಿದ್ಯುತ್ ಸಂಪರ್ಕವಿಲ್ಲ, ಆಸ್ಪತ್ರೆಯೂ ಇಲ್ಲ. ಆದ್ದರಿಂದ ಈ ಬಾರಿ ಮತವನ್ನೇ ಹಾಕಲ್ಲ ಎಂದು ಚುನಾವಣಾ ಬಹಿಷ್ಕಾರ ಮಾಡಿದ್ದಾರೆ ಈ ಗ್ರಾಮಸ್ಥರು.

ಹೌದು.. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ಚರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡಿಸಲನತ್ತ ಮತ್ತು ತೇಕಾಣೆ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸದೇ ಇರುವುದಕ್ಕೆ ಈ ಬಾರಿಯ ವಿಧಾನಸಭಾ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ರಸ್ತೆ ಇಲ್ಲದೇ ನಡೆದು ಹೋಗಬೇಕಿರುವ ಹಿನ್ನೆಲೆಯಲ್ಲಿ ಈ ಊರಿಗೆ ಇನ್ನೂ ‌ಮತ ಕೇಳಲೂ ಯಾರು ಬಂದಿಲ್ಲ ಎಂದು ತಿಳಿದು ಬಂದಿದೆ.

ರಸ್ತೆ ನಿರ್ಮಾಣಕ್ಕೆ ಅರಣ್ಯ ಕಾಯ್ದೆಗಳು ಅಡ್ಡಿ: ಮಲೆಮಹದೇಶ್ವರ ಬೆಟ್ಟ ವನ್ಯಜೀವಿ ಧಾಮದ ವ್ಯಾಪ್ತಿಗೆ ಈ ಎರಡು ಗ್ರಾಮಗಳು ಒಳಪಡಲಿದ್ದು, ರಸ್ತೆ ನಿರ್ಮಾಣಕ್ಕೆ ಅರಣ್ಯ ಕಾಯ್ದೆಗಳು ಅಡ್ಡಿಯಾಗಿದೆ.‌ ಆದ್ದರಿಂದ, ಈಗಲೂ ಅನಾರೋಗ್ಯಕ್ಕೀಡಾದವರನ್ನು ಡೋಲಿ ಮೂಲಕ 10 ರಿಂದ 14 ಕಿ. ಮೀ ಹೊತ್ತು ನಡೆಯಬೇಕು. ವಿದ್ಯುತ್ ಸಂಪರ್ಕ ಇಲ್ಲ, ಇಷ್ಟೊಂದು ಅನ್ಯಾಯಕ್ಕೆ ಒಳಗಾಗಿರುವ ನಾವು ಮತದಾನ ಮಾಡಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ತೇಕಾಣೆ ಗ್ರಾಮದಲ್ಲಿ 50 ಮನೆ, ಪಡಿಸಲನತ್ತ ಗ್ರಾಮದಲ್ಲಿ 80 ಮನೆಗಳಿದ್ದು, ಒಟ್ಟು 270 ಮತಗಳಿವೆ. ರಸ್ತೆ ನಿರ್ಮಾಣ ಮಾಡಿಕೊಟ್ಟರಷ್ಟೇ ನಾವು ಮತ ಹಾಕುತ್ತೇವೆ ಎಂದು ಇಲ್ಲಿನ ಜನರು ಸದ್ಯ ಪಟ್ಟು ಹಿಡಿದಿದ್ದಾರೆ. ಸರ್ಕಾರ ಯಾವುದೇ ಮೂಲ ಸೌಕರ್ಯಗಳು ಕಲ್ಪಿಸದಿದ್ದರಿಂದ ಜನರು ತುಂಬಾ ಕಷ್ಟದಲ್ಲಿ ಬದುಕುತ್ತಿದ್ದಾರೆ. ನಮ್ಮ ಊರುಗಳಿಗೆ ಸರಿಯಾದ ರಸ್ತೆ ಇಲ್ಲದೇ ಜನರು ಪರದಾಡುವಂತಾಗಿದೆ. ಈ ಬಗ್ಗೆ ಹಲವು ಬಾರಿ ಜನಪ್ರತಿನಿಧಿಗಳಿಗೆ ಇಲ್ಲಿನ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಆದರೂ ಯಾವುದೇ ಪ್ರಯೋಜನ ಮಾತ್ರ ಆಗಿಲ್ಲ.

ಅನಾರೋಗ್ಯ ಉಂಟಾದರೆ ಡೋಲಿಯೇ ಗತಿ: ಈ ಗ್ರಾಮದಲ್ಲಿ 5ನೇ ತರಗತಿಯವರೆಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಿದ್ದು, ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಮಲೆ ಮಹದೇಶ್ವರ ಬೆಟ್ಟಕ್ಕೆ ದಟ್ಟಾರಣ್ಯ ಕಾಡಿನ ದಾರಿಯಲ್ಲಿ ಆನೆ ಚಿರತೆ ಸೇರಿ ಇತರ ಒನ್ಯ ಜೀವಿಗಳ ಭಯದಲ್ಲಿ ನಡೆದುಕೊಂಡೇ ತೆರಳಬೇಕು. ಅನಾರೋಗ್ಯಕ್ಕೆ ತುತ್ತಾದರೆ ಡೋಲಿ ಮೂಲಕ ರೋಗಿಯನ್ನು ಹೊತ್ತು ತೆಗೆದುಕೊಂಡು ಹೋಗಬೇಕಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಕನಿಷ್ಠ ಕಚ್ಚಾ ರಸ್ತೆ, ವಿದ್ಯುತ್, 108 ಆ್ಯಂಬುಲೆನ್ಸ್ ಸೇವೆ, ಶಾಲಾ ವಾಹನ ಕಲ್ಪಿಸಬೇಕು.‌ ಈ ಬೇಡಿಕೆ ಈಡೇರಿದರೆ ಮಾತ್ರ ಮತದಾನ‌ ಮಾಡುತ್ತೇವೆ. ಇಲ್ಲದಿದ್ದರೆ ಚುನಾವಣಾ ಬಹಿಷ್ಕಾರ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.

ಈ ಸಂಬಂಧ ಜಿಲ್ಲಾಧಿಕಾರಿಗಳು ಹಾಗೂ ಆಡಳಿತ ಈ ಜನರ ಮನವೊಲಿಕೆ ಮಾಡ್ತಾರಾ ಅಥವಾ ಕೆಲಸ ಮಾಡಿಕೊಡುವ ಭರವಸೆಯನ್ನಾದರೂ ನೀಡುತ್ತಾರಾ. ಒಂದೊಮ್ಮೆ ಅಧಿಕಾರಿಗಳ ಮತದಾನ ಮಾಡುವಂತೆ ಅಧಿಕಾರಿಗಳು ಮನವೊಲಿಸುತ್ತಾರಾ ಅನ್ನೋದನ್ನು ಕಾದು ನೋಡಬೇಕಾಗಿದೆ.

ಇದನ್ನೂ ಓದಿ: ಬಗೆಹರಿಯದ ಮೂಲಭೂತ ಸಮಸ್ಯೆ: ಶಿರಸಿ ಲಿಡ್ಕರ್ ಕಾಲೊನಿಯಲ್ಲಿ ಮತದಾನ ಬಹಿಷ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.