ETV Bharat / state

ಪರಿಷತ್ ಚುನಾವಣಾ ಫೈಟ್‌.. ಬೀದರ್​ ಅಖಾಡದಲ್ಲಿ ಬೀಗರ ಮಧ್ಯೆ ಜಂಗೀ ಕುಸ್ತಿ..

author img

By

Published : Dec 4, 2021, 7:04 AM IST

ಇತ್ತೀಚಿಗೆ ಮತ್ತೆ ಬಿಜೆಪಿ‌ಗೆ ವಾಪಸ್ಸಾದ ಪ್ರಕಾಶ್‌ ಖಂಡ್ರೆ ಅವರಿಗೆ ಈಗ ಬಿಜೆಪಿ ಪರಿಷತ್ ಚುನಾವಣೆಗೆ ಅವಕಾಶ ನೀಡುವ ಮೂಲಕ‌ ರಾಜಕೀಯ ಮರುಜನ್ಮ ನೀಡಿದೆ. ಆದರೆ, ಇವರ ಎದುರಾಳಿ‌ಯಾಗಿ ಬೀಗರೆ ಆಗಿರುವ ಭೀಮರಾವ್ ಪಾಟೀಲ್ ಕಣಕ್ಕಿಳಿಯುವ ಮೂಲಕ ಜಂಗೀ ಕುಸ್ತಿಗೆ ರೆಡಿಯಾಗಿದ್ದಾರೆ..

Council election
ಬೀದರ್​ನಲ್ಲಿ ರಂಗೇರಿದ ಪರಿಷತ್ ಚುನಾವಣೆ ಪ್ರಚಾರ

ಬೀದರ್ : ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳು ಅಲ್ಲ, ಮಿತ್ರರೂ ಅಲ್ಲ ಎಂಬ ಮಾತು ಅಕ್ಷರಶಃ ಸತ್ಯ ಎನ್ನುವಂತಾಗಿದೆ. ಬೀದರ್​ನಲ್ಲಿ ಪರಿಷತ್ ಚುನಾವಣೆ ಕಾವು ರಂಗೇರಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ವಿಶೇಷ ಅಂದ್ರೆ ಇಲ್ಲಿನ ಇಬ್ಬರು ಅಭ್ಯರ್ಥಿಗಳು ಬೀಗರು (ಸಂಬಂಧಿಕರು) ಆಗಿದ್ದಾರೆ.

ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಖಂಡ್ರೆಗೆ ಇದು ಅಸ್ತಿತ್ವದ ಚುನಾವಣೆಯಾದ್ರೆ, ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ್​ಗೆ ರಾಜಕೀಯ ಕ್ಷೇತ್ರದಲ್ಲಿ ಮೊದಲ ಚುನಾವಣೆಯಾಗಿದೆ. ಪರಿಷತ್ ಚುನಾವಣೆ ಗೆಲ್ಲಲೇಬೇಕೆಂದು ಇಬ್ಬರು ಅಭ್ಯರ್ಥಿಗಳು ಪಣ ತೊಟ್ಟಿದ್ದಾರೆ. ಬೀದರ್ ಮತ ಕ್ಷೇತ್ರದಲ್ಲಿ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರಿದೆ.

ಬೀದರ್​ನಲ್ಲಿ ರಂಗೇರಿದ ಪರಿಷತ್ ಚುನಾವಣಾ ಪ್ರಚಾರ..

ಪ್ರಕಾಶ್ ಖಂಡ್ರೆ ಬೀದರ್ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಹಿರಿಯ ಮುಖಂಡ ಹಾಗೂ ಭಾಲ್ಕಿ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ, ಎರಡು ಬಾರಿ ಸೋಲಿನ ಕಹಿ ಕಂಡಿದ್ದಾರೆ. ಮೂರನೇ ಬಾರಿ ಅಂದ್ರೆ 2018ರ ವಿಧಾನಸಭೆ ಚುನಾವಣೆ ವೇಳೆ ಕೊನೆ ಕ್ಷಣದಲ್ಲಿ ಟಿಕೆಟ್ ಕೈತಪ್ಪಿದ್ದಕ್ಕೆ ಕಮಲ ತೊರೆದು ಜೆಡಿಎಸ್‌ನಿಂದ ಸೋಲಿನ ಕಹಿ‌ ಕಂಡಿದ್ರು.

ಇದರಿಂದ ಅನಾರೋಗ್ಯಕ್ಕೂ ತುತ್ತಾಗಿ ಸಾವಿನ ದವಡೆಯಿಂದ ಪಾರಾಗಿ ಇತ್ತೀಚಿಗೆ ಮತ್ತೆ ಬಿಜೆಪಿ‌ ಪಕ್ಷಕ್ಕೆ ವಾಪಸ್ಸಾದ ಇವರಿಗೆ ಈಗ ಬಿಜೆಪಿ ಪರಿಷತ್ ಚುನಾವಣೆಗೆ ಅವಕಾಶ ನೀಡುವ ಮೂಲಕ‌ ರಾಜಕೀಯ ಮರುಜನ್ಮ ನೀಡಿದೆ. ಆದರೆ, ಇವರ ಎದುರಾಳಿ‌ಯಾಗಿ ಬೀಗರೆ ಆಗಿರುವ ಭೀಮರಾವ್ ಪಾಟೀಲ್ ಕಣಕ್ಕಿಳಿಯುವ ಮೂಲಕ ಜಂಗೀ ಕುಸ್ತಿಗೆ ರೆಡಿಯಾಗಿದ್ದಾರೆ.

ಜಿಲ್ಲೆಯಾದ್ಯಂತ ಎರಡು ಪಕ್ಷದ ನಾಯಕರು ಕಾಲಿಗೆ ಗೆಜ್ಜೆ ಕಟ್ಟಿಕೊಂಡವರಂತೆ ಸಾಲು ಸಾಲು ಸಮಾವೇಶಗಳು, ಸಾಕಾಗಾದಷ್ಟು ಭಾಷಣಗಳು, ಆರೋಪ- ಪ್ರತ್ಯಾರೋಪ, ತಂತ್ರ-ಪ್ರತಿತಂತ್ರ ಹೀಗೆ ಜೋರಾಗಿ ನಡೆಸುತ್ತಿದ್ದಾರೆ.

ಬಿಜೆಪಿಗೆ ಈ ಚುನಾವಣೆ ಪ್ರತಿಷ್ಠೆಯಾಗಿದೆ. ಕೇಂದ್ರ ಸಚಿವ ಭಗವಂತ ಖೂಬಾ, ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆ ಪರ ಪ್ರಚಾರ ಮಾಡ್ತಿದ್ದಾರೆ. ಬಿಜೆಪಿ ಗೆದ್ದರೆ ಸರ್ಕಾರದ ಮುಂದೆ ಜಿಲ್ಲೆಯ ಬಿಜೆಪಿಯ ವರ್ಚಸ್ಸು ಹೆಚ್ಚಿಸಬಹುದು ಎಂಬ ಲೆಕ್ಕಾಚಾರವಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕರಾದ ರಹೀಂಖಾನ್, ರಾಜಶೇಖರ್ ಪಾಟೀಲ್, ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲರ ಗೆಲುವಿಗೆ ಶ್ರಮಿಸುತ್ತಿದ್ದಾರೆ.

ಇದು ಪ್ರಕಾಶ್ ಖಂಡ್ರೆಗೆ ರಾಜಕೀಯ ಅಸ್ತಿತ್ವದ ಚುನಾವಣೆ ಎನಿಸಿಕೊಂಡರೆ, ಮಾಜಿ ಸಚಿವ ರಾಜಶೇಖರ್ ಅವರ ಸಹೋದರ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ್‌ಗೆ ಇದು ಪ್ರತಿಷ್ಠೆಯ ಚುನಾವಣೆಯಾಗಿದೆ. ಹೀಗಾಗಿ, ಇವರು ಗೆಲ್ಲಲು ಶತ ಪ್ರಯತ್ನ ನಡೆಸುತ್ತಿದ್ದಾರೆ. ಸಂಬಂಧಿಕರಾದರೇನು? ಯಾರಾದರೇನು? ಪಕ್ಷ ಒಂದು ಜವಾಬ್ದಾರಿ ಕೊಟ್ಟ ಮೇಲೆ ಎದುರಾಳಿ ಯಾರು ಅಂತಾ ಲೆಕ್ಕಕ್ಕೆ ಬರೋಲ್ಲ ಎಂದು ರಾಜಶೇಖರ್ ಪಾಟೀಲ್ ಹೇಳುತ್ತಿದ್ದಾರೆ.

ಬೀದರ್ ಪರಿಷತ್ ಚುನಾವಣೆ ಕಣದಲ್ಲಿನ ಬೀಗರ್ ಮಧ್ಯೆದ ಬಿಗ್ ಫೈಟ್ ಸಾಕಷ್ಟು ಕುತೂಹಲಕ್ಕಂತೂ ಕಾರಣವಾಗಿದೆ. ಮತದಾರ ಪ್ರಭುಗಳು ಯಾರ ಪರ ನಿಲ್ಲುತ್ತಾರೆ ಕಾದು ನೋಡಬೇಕು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.