ಬಳ್ಳಾರಿ: ರಸ್ತೆ ಗುಂಡಿ ಮುಚ್ಚುವಂತೆ ಪ್ರತಿಭಟನೆ

author img

By

Published : Nov 6, 2022, 5:59 PM IST

Updated : Nov 6, 2022, 6:11 PM IST

ಬಳ್ಳಾರಿಯಲ್ಲಿ ರಸ್ತೆಗುಂಡಿ ಮುಚ್ಚುವಂತೆ ಪ್ರತಿಭಟನೆ

ಬಳ್ಳಾರಿಯಲ್ಲಿ ವಾಹನ ಸವಾರರು ಪ್ರಾಣ ಕೈಯಲ್ಲಿ ಹಿಡಿದು ರಸ್ತೆಯಲ್ಲಿ ಸಂಚರಿಸುವ ಪರಿಸ್ಥಿತಿ ಎದುರಾಗಿದೆ.

ಬಳ್ಳಾರಿ: ಕುಡಿಯುವ ನೀರಿನ ಪೈಪ್ ಜೋಡಣೆ ಸೇರಿದಂತೆ ಮಳೆ ಮತ್ತಿತರ ಕಾರಣಗಳಿಂದ ರಸ್ತೆ ಗುಂಡಿಗಳು ಉಂಟಾಗಿದ್ದು ಅದನ್ನು ತಕ್ಷಣ ಮುಚ್ಚುವಂತೆ ಆಗ್ರಹಿಸಿ ಬಳ್ಳಾರಿಯಲ್ಲಿಂದು ವೈದ್ಯರು, ಚಾರ್ಟೆಡ್ ಅಕೌಂಟೆಂಟ್ಸ್‌, ವಕೀಲರು, ಉದ್ಯಮಿ, ವ್ಯಾಪಾರಿಗಳು, ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರು ಬೀದಿಗಿಳಿದರು.

ಬೆಂಗಳೂರು ಅಷ್ಟೇ ಅಲ್ಲದೆ ಬಳ್ಳಾರಿಯಲ್ಲಿಯೂ ರಸ್ತೆ ಗುಂಡಿಗಳಿಗೆ ಜನರು ಬೇಸತ್ತು ಹೋಗಿದ್ದಾರೆ. ಪಾಲಿಕೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಕಾರ್ಯವೈಖರಿಗೆ ಆಕ್ರೋಶಗೊಂಡಿರುವ ನಾಗರಿಕರು ವಾಯ್ಸ್ ಆಫ್ ಬಳ್ಳಾರಿ ಎಂಬ ಹೆಸರಲ್ಲಿ ಒಟ್ಟಾಗಿ ಸೇರಿ ಟ್ರ್ಯಾಕ್ಟರ್ ಮೂಲಕ ಎಂ ಸ್ಯಾಂಡ್, ಜಲ್ಲಿಕಲ್ಲನ್ನು ತರಿಸಿ ತಾವೇ ಗುಂಡಿಗಳನ್ನು ಮುಚ್ಚಿದರು.

ಬಳ್ಳಾರಿಯಲ್ಲಿ ರಸ್ತೆಗುಂಡಿ ಮುಚ್ಚುವಂತೆ ಪ್ರತಿಭಟನೆ

ಬಳ್ಳಾರಿಯ ಯಾವ ರಸ್ತೆಯೂ ಸುಸ್ಥಿತಿಯಲ್ಲಿಲ್ಲ. ಹೀಗಾಗಿ ರಸ್ತೆ ಗುಂಡಿ ಮುಚ್ಚಲು ಟ್ರಾಕ್ಟರ್‌ನಲ್ಲಿ ಮಣ್ಣು ಕಲ್ಲು ತಂದು‌ ಮುಚ್ಚುವ ಮೂಲಕ ವಿನೂತನ ಪ್ರತಿಭಟನೆ ನಡೆಸಲಾಯಿತು. ಕೆಲ ರಸ್ತೆ ಅಭಿವೃದ್ಧಿ ಹೆಸರಲ್ಲಿ ಒಡೆದರೆ ಮತ್ತೆ ಕೆಲವು ರಸ್ತೆಗಳು ನಿರ್ವಹಣೆ ಇಲ್ಲದೇ ಸೊರಗಿವೆ. ವಾಹನ ಸವಾರರು ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದು ರಸ್ತೆಯಲ್ಲಿ ಸಂಚರಿಸುವ ಪರಿಸ್ಥಿತಿ ಎದುರಾಗಿದೆ. ಜನರಿಗೆ ಅಸ್ತಮಾ, ಡೆಂಗ್ಯೂ ಸೇರಿದಂತೆ ಹಲವು ಖಾಯಿಲೆ ಬರುತ್ತಿದೆ. ಜನರು ಸಾರ್ವಜನಿಕರ ಸಮಸ್ಯೆಗಳಿಗೆ ಪಾಲಿಕೆ ಸ್ಪಂದಿಸುತ್ತಿಲ್ಲ ಎಂದು ಟೀಕಿಸಿದ್ದಾರೆ.

ತೀವ್ರ ಪ್ರತಿಭಟನೆಯ ಎಚ್ಚರಿಕೆ: ಸಾರ್ವಜನಿಕರು ತಾವು ಮಾತ್ರ ಬರದೇ ಮಕ್ಕಳನ್ನೂ ಕೂಡ ಕರೆದುಕೊಂಡು ಬಂದು ಪ್ರತಿಭಟನೆ ನಡೆಸಿದರು. ಇನ್ನಾದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತು ನಗರದ ಪ್ರಮುಖ ರಸ್ತೆಗಳಲ್ಲಿನ ಗುಂಡಿಗಳನ್ನು ಸಂಪೂರ್ಣ ಮುಚ್ಚದಿದ್ದಲ್ಲಿ ತೀವ್ರ ಪ್ರತಿಭಟನೆ ನಡೆಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ನವೆಂಬರ್ 15ರೊಳಗೆ ರಸ್ತೆ ಗುಂಡಿ ಮುಚ್ಚದಿದ್ದರೆ ಅಮಾನತು: ಬಿಬಿಎಂಪಿ ಎಚ್ಚರಿಕೆ

Last Updated :Nov 6, 2022, 6:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.