ETV Bharat / state

ಬಳ್ಳಾರಿಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಸಚಿವ ಬಿ.ನಾಗೇಂದ್ರ ಚಾಲನೆ

author img

By ETV Bharat Karnataka Team

Published : Aug 30, 2023, 6:35 PM IST

ಬಳ್ಳಾರಿ ನಗರದ ಮುನ್ಸಿಪಲ್​ ಮೈದಾನದಲ್ಲಿ ಏರ್ಪಡಿಸಿದ್ದ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಉದ್ಘಾಟಿಸಿದರು.

ಗೃಹಲಕ್ಷ್ಮಿ ಯೋಜನೆಯ ಉದ್ಘಾಟನೆ
ಗೃಹಲಕ್ಷ್ಮಿ ಯೋಜನೆಯ ಉದ್ಘಾಟನೆ

ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಮಾತನಾಡಿದರು.

ಬಳ್ಳಾರಿ : ಕಾಂಗ್ರೆಸ್ ಪಕ್ಷ ಚುನಾವಣಾಪೂರ್ವ 5 ಗ್ಯಾರಂಟಿ ಭರವಸೆಗಳನ್ನು ಘೋಷಣೆ ಮಾಡಿದಾಗ ಇತರ ಪಕ್ಷಗಳ ಮುಖಂಡರು ಲೇವಡಿ ಮಾಡಿದ್ದರು. ಆದರೆ ಇಂದು ನಮ್ಮ ಪಕ್ಷದ ಮುಖಂಡರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಹೇಳಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಜಿ.ಪಂ, ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯ ವತಿಯಿಂದ ನಗರದ ಮುನ್ಸಿಪಲ್ ಮೈದಾನದಲ್ಲಿ ಏರ್ಪಡಿಸಿದ್ದ ಗೃಹಲಕ್ಷ್ಮಿ ಯೋಜನೆಯ ಚಾಲನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಅವರು ಜನರಿಗಾಗಿ ಈ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮಹಿಳೆಯರಿಗಾಗಿ ಯೋಜನೆ ರೂಪಿಸುವಂತೆ ಪ್ರಿಯಾಂಕಾ ಗಾಂಧಿ ಸೂಚನೆ ನೀಡಿದ್ದರು. ಅವರ ಆಶಯದಂತೆ ಯೋಜನೆ ಜಾರಿಗೆ ತರಲಾಯಿತು ಎಂದರು.

ಈ ಯೋಜನೆ ದೇಶದಲ್ಲಿಯೇ ಐತಿಹಾಸಿಕವಾದುದು. ಪ್ರತಿ ಮನೆಯ ಯಜಮಾನಿಗೆ ಮಾಸಿಕ 2 ಸಾವಿರ ರೂ. ನೀಡುವ ಯೋಜನೆ ದೇಶದಲ್ಲೆಲ್ಲೂ ಇಲ್ಲ. ರಾಜ್ಯದಲ್ಲಿ 1 ಕೋಟಿ 28 ಲಕ್ಷ ಮಹಿಳೆಯರಿಗೆ ಇದರ ಫಲ ಸಿಗಲಿದೆ. ಬಳ್ಳಾರಿ ಜಿಲ್ಲೆಯಲ್ಲಿ 2 ಲಕ್ಷ 67 ಸಾವಿರ ಮಹಿಳೆಯರು ನೋಂದಣಿ ಮಾಡಿಕೊಂಡಿದ್ದಾರೆ. ಇಡೀ ರಾಜ್ಯದಲ್ಲೇ ನಮ್ಮ ಜಿಲ್ಲೆ ಫಲಾನುಭವಿಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ ಎಂದು ಸಚಿವರು ತಿಳಿಸಿದರು.

ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರು ತಮ್ಮ ತವರು ಮನೆಗೆ ಹೋಗಲು ಆಸೆಪಡುತ್ತಾರೆ. ಪ್ರವಾಸ ಹೋಗಲು ಆಸೆ ಪಡುತ್ತಾರೆ. ಆದರೆ ಪ್ರವಾಸಕ್ಕೆ ಹೋಗಿ ಬರಲು ವರ್ಷಪೂರ್ತಿ ಹಣ ಉಳಿತಾಯ ಮಾಡಿ ಯೋಜನೆ ಮಾಡಬೇಕಿತ್ತು. ಆದರೀಗ ಬಸ್ ಫ್ರೀ ಆಗಿರುವುದರಿಂದ ಮಹಿಳೆಯರಿಗೆ ಅನುಕೂಲವಾಗಿದೆ ಎಂದರು.

ಅನ್ನಭಾಗ್ಯ ಯೋಜನೆಯ ಮೂಲಕ ಬಡವರ ಹಸಿವು ಇಂಗಿಸುವ ಕೆಲಸವನ್ನು ಸರ್ಕಾರ ಮಾಡಿದೆ. ಬಿಪಿಎಲ್ ಕಾರ್ಡಿರುವ ಕುಟುಂಬದ ಪ್ರತಿ ವ್ಯಕ್ತಿಗೆ 5 ಕೆ.ಜಿ ಅಕ್ಕಿ, ಉಳಿದ 5 ಕೆಜಿ.ಗೆ ಹಣವನ್ನು ಫಲಾನುವಿಗಳ ಬ್ಯಾಂಕ್ ಖಾತೆಗೆ ಹಾಕಲಾಗುತ್ತಿದೆ. ಇನ್ನೂ ಕೆಲವರಿಗೆ ಹಣ ಜಮೆ ಆಗಿಲ್ಲ. ಹಂತ-ಹಂತವಾಗಿ ಆಗುತ್ತದೆ ಎಂದು ತಿಳಿಸಿದರು.

ಹಣಕಾಸಿನ ವಿಚಾರಕ್ಕೆ ಹೆಣ್ಣು ಮಕ್ಕಳು ಗಂಡಸರ ಮೇಲೆ ಅವಲಂಬಿತವಾಗಬೇಕಿತ್ತು. ಆದರೆ ಈಗ ಆ ಸ್ಥಿತಿ ಇಲ್ಲ. ಇಂದು ರಾಖಿ ಹಬ್ಬ, ಅಣ್ಣ ತಮ್ಮಂದಿರಿಗೆ ನಿಮ್ಮದೇ ಹಣದಲ್ಲಿ ರಾಖಿ ಕಟ್ಟಬಹುದು. ಮೊದಲು ರಾಖಿ ಕೊಳ್ಳಲು ಕೂಡ ಗಂಡಸರ ಬಳಿಯೇ ಹಣ ಕೇಳುವ ಸ್ಥಿತಿ ಇತ್ತು ಎಂದು ಉಪಮೇಯರ್ ಜಾನಕಮ್ಮ ಹೇಳಿದರು.

ಮೇಯರ್ ಡಿ. ತ್ರಿವೇಣಿ, ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಾಗರಾಜ್, ಎಸ್ಪಿ ರಂಜಿತ್​ಕುಮಾರ್ ಬಂಡಾರು, ಜಿ.ಪಂ ಸಿಇಒ, ಪಾಲಿಕೆ ಸದಸ್ಯರು ಹಾಗು ಕಾಂಗ್ರೆಸ್ಸಿನ ಮುಖಂಡರು ಹಾಜರಿದ್ದರು. ವರ್ಚುವಲ್ ಪರದೆಯ ಮೂಲಕ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಕ್ರಮವನ್ನು ಅತಿಥಿಗಳಾದಿಯಾಗಿ ಫಲಾನುಭವಿಗಳು ವೀಕ್ಷಿಸಿದರು.

ಇದನ್ನೂ ಓದಿ: Gruha lakshmi scheme: ಗೃಹಲಕ್ಷ್ಮಿ ಯೋಜನೆಗೆ ಚಾಲನೆ.. ಸಿಎಂಗೆ ಬೆಳಗಾವಿ ಮಹಿಳೆಯರಿಂದ ಬಹುಪರಾಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.