ETV Bharat / state

ಕೆಲ ಉಕ್ಕಿನ ಕಾರ್ಖಾನೆಗಳ ಮೇಲೆ ಐಟಿ ದಾಳಿ.. ದಾಖಲೆಗಳ ಪರಿಶೀಲನೆ.. ಪಾಲುದಾರಿಕೆ ಬಗ್ಗೆ ಶ್ರೀರಾಮುಲು ಸ್ಪಷ್ಟನೆ

author img

By

Published : Jan 14, 2023, 9:45 PM IST

ಸ್ಪಾಂಜ್‌ ಉಕ್ಕಿನ ಕಾರ್ಖಾನೆ ಮೇಲೆ ಐಟಿ ದಾಳಿ - ಬೆಂಗಳೂರು, ಬಳ್ಳಾರಿ ಹಾಗೂ ಕೊಪ್ಪಳ ಸೇರಿದಂತೆ ಹಲವು ಸ್ಥಳಗಳಲ್ಲಿ ಐಟಿ ದಾಳಿ - ದಾಖಲೆಗಳ ಪರಿಶೀಲನೆ.

it-raid-on-sponge-steel-factory
ಸ್ಪಾಂಜ್‌ ಉಕ್ಕಿನ ಕಾರ್ಖಾನೆ ಮೇಲೆ ಐಟಿ ದಾಳಿ

ಪಾಲುದಾರಿಕೆ ಬಗ್ಗೆ ಶ್ರೀರಾಮುಲು ಸ್ಪಷ್ಟನೆ

ಬಳ್ಳಾರಿ: ಪ್ರಭಾವಿ ರಾಜಕಾರಣಿಗಳ ಜತೆ ನಿಕಟ ಸಂಬಂಧ ಹೊಂದಿದ್ದಾರೆ ಎನ್ನಲಾದ ಕೆಲ ಗಣಿ ಉದ್ಯಮಿಗಳ ಮನೆ ಹಾಗೂ ಅವರ ಉಕ್ಕಿನ ಕಾರ್ಖಾನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರು, ಬಳ್ಳಾರಿ ಹಾಗೂ ಕೊಪ್ಪಳ ಸೇರಿದಂತೆ ಹಲವು ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಉಕ್ಕಿನ ಕಾರ್ಖಾನೆ ನಡೆಸುತ್ತಿರುವ ಗಣಿ ಉದ್ಯಮಿ ಯೊಬ್ಬರು ಜಿಲ್ಲೆ ಪ್ರಭಾವಿ ರಾಜಕಾರಣಿಗಳು ಹಾಗೂ ಅವರ ಹತ್ತಿರದ ಸಂಬಂಧಿ ಜೊತೆ ಪಾಲುದಾರಿಕೆ ಹೊಂದಿದ್ದಾರೆ ಎನ್ನಲಾಗಿದೆ. ಬೆಂಗಳೂರು, ಚೆನ್ನೈ‌ನ ಹದಿನೈದು ಅಧಿಕಾರಿಗಳು ಬಳ್ಳಾರಿಯ ವಿದ್ಯಾನಗರದ ರಾಗಾಸ್ ಪೋರ್ಟ್ ಅಪಾರ್ಟ್ಮೆಂಟ್ ಫ್ಲಾಟ್ ಒಂದರಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ನೂರಾರು ಕೋಟಿ ಬೆಲೆ ಬಾಳುವ ಫ್ಯಾಕ್ಟರಿ ಮೇಲೆ ದಾಳಿ: ಪ್ರಭಾವಿ ರಾಜಕಾರಣಿಗಳು ಹಾಗೂ ಕೈಗಾರಿಕಾ ಉದ್ಯಮಿ ಸೇರಿ ಖರೀದಿಸಿರುವ ಎನ್ನಲಾದ ನೂರಾರು ಕೋಟಿ ಬೆಲೆ ಬಾಳುವ ಫ್ಯಾಕ್ಟರಿಯ ಖರೀದಿಯ ಹಣದ ಮೂಲದ ಬಗ್ಗೆ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ದಾಖಲೆ ಪರಿಶೀಲನೆ ವೇಳೆ ಐಟಿ ಅಧಿಕಾರಿಗಳ ಕೈಗೆ ಮಹತ್ವದ ದಾಖಲೆಗಳು ಲಭ್ಯವಾಗಿದ್ದು, ಫ್ಯಾಕ್ಟರಿ ಖರೀದಿಯ ಹಣದ ಮೂಲವನ್ನು ಅಧಿಕಾರಿಗಳು ಕೆದಕುತ್ತಿದ್ದಾರೆ ಎನ್ನಲಾಗಿದೆ. ನೂರಾರು ಕೋಟಿ ಬೆಲೆ ಬಾಳುವ ಫ್ಯಾಕ್ಟರಿಯಾಗಿದ್ದರಿಂದ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೊಪ್ಪಳದ ಸಿಮ್ಲಾ ಡಾಬ ಬಳಿಯ ವಾಷಿಂಗ್ ಪ್ಲಾಂಟ್, ಬಳ್ಳಾರಿಯ ವೆಂಕಟೇಶ್ವರ, ಶ್ರೀಹರಿ ಮತ್ತು ಪಿಜಿಎಂ ಪ್ಲಾಂಟ್‌ಗೆ ಸೇರಿದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಈ ಕೈಗಾರಿಕೆಗಳು ತೆರಿಗೆ ವಂಚನೆ ಮಾಡಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂದು ಹೇಳಲಾಗಿದೆ.

ಸಚಿವ ಶ್ರೀರಾಮುಲು ಸ್ಪಷ್ಟನೆ: ಇನ್ನು ಆಪ್ತನ ಕಚೇರಿ, ನಿವಾಸದ ಮೇಲೆ ಐಟಿ ದಾಳಿ ವಿಚಾರದ ಬಗ್ಗೆ ಬಳ್ಳಾರಿಯಲ್ಲಿ ಸಚಿವ ಬಿ.ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದು, ತಮ್ಮ ಪಾಲುದಾರಿಕೆಗೆ ಸೇರಿದೆ ಎನ್ನಲಾದ ಸ್ಪಾಂಜ್‌ ಉಕ್ಕಿನ ಕಾರ್ಖಾನೆ ಮೇಲೆ ಐಟಿ ದಾಳಿ ನಡೆದಿದೆ ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ. ’’ನಾನು ಯಾವುದೇ ಕಾರ್ಖಾನೆಯಲ್ಲಿ ಪಾಲುದಾರಿಕೆ ಹೊಂದಿಲ್ಲ. ಈ ಹಿಂದೆಯೂ ಯಾವುದೇ ಕಾರ್ಖಾನೆಗಳೊಂದಿಗೆ ಪಾಲುದಾರಿಕೆ ಹೊಂದಿರಲಿಲ್ಲ. ಐಟಿ ದಾಳಿಗಳು ನಡೆಯುವುದು ಸಾಮಾನ್ಯ ಐಟಿ ದಾಳಿಯ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಯಾರ ಮೇಲೆ ದಾಳಿ ನಡೆದರೂ ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳಲಿದೆ‘‘ ಎಂದು ಶ್ರೀರಾಮುಲು ತಿಳಿಸಿದ್ದಾರೆ.

ಇದನ್ನೂ ಓದಿ: ತೆರಿಗೆ ವಂಚನೆ ಆರೋಪ: ಬೆಂಗಳೂರು ಸೇರಿ ವಿವಿಧೆಡೆ ಆದಾಯ ತೆರಿಗೆ ಅಧಿಕಾರಿಗಳಿಂದ ದಾಳಿ

ಕಳೆದ ತಿಂಗಳು ಬೆಂಗಳೂರಿನಲ್ಲೂ ಐಟಿ ದಾಳಿ: ತೆರಿಗೆ ವಂಚನೆ ಆರೋಪ ಹಿನ್ನೆಲೆ ಕಾರ್ಪೊರೇಟ್​ ಕಂಪನಿಗಳ ವ್ಯವಸ್ಥಾಪಕರು, ನಿರ್ದೇಶಕರುಗಳು ಹಾಗೂ ಉದ್ಯಮಿಗಳ ಮನೆ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಬೆಂಗಳೂರು ಸೇರಿ ವಿವಿಧೆಡೆ ಆದಾಯ ತೆರಿಗೆ ಅಧಿಕಾರಿಗಳಿಂದ ದಾಳಿ ನಡೆಸಲಾಗಿತ್ತು. ಬೆಂಗಳೂರಿನ ಸಂಜಯನಗರದ ರಾಜ್ ವಿಲಾಸ್ ಪ್ಯಾಲೇಸ್, ಕೊಡಿಗೇಹಳ್ಳಿ ಬ್ರಿಗೇಡ್ ಹೋಪ್ ಅಪಾರ್ಟ್ಮೆಂಟ್, ಹೆಬ್ಬಾಳ, ಚಿಕ್ಕಬಳ್ಳಾಪುರ, ರಾಮನಗರದ ಬಿಡದಿಯ ವಿವಿಧ ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ‌ ನಡೆಸಲಾಗಿತ್ತು. ದೀರ್ಘಕಾಲದಿಂದ ಸರ್ಕಾರಕ್ಕೆ ತೆರಿಗೆ ಪಾವತಿಸದೇ ವಂಚನೆ ಹಾಗೂ ಸಾಕಷ್ಟು ಅವ್ಯವಹಾರಗಳು ನಡೆದಿರುವ ಶಂಕೆಯ ಹಿನ್ನೆಲೆ ದಾಳಿ ಮಾಡಲಾಗಿತ್ತು.

ಇದನ್ನೂ ಓದಿ: ₹158 ಕೋಟಿ ಭ್ರಷ್ಟಾಚಾರ ಆರೋಪ: ಮಾಜಿ ಸಚಿವನಿಗೆ ಇಡಿ, ಐಟಿ ಡಬಲ್​ ಶಾಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.