ETV Bharat / state

ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಬಂದರೆ ಬಿಜೆಪಿಯಿಂದ ಟಿಕೆಟ್ ನೀಡುತ್ತೇವೆ - ಕಟೀಲ್ ವ್ಯಂಗ್ಯ

author img

By

Published : Feb 13, 2023, 10:18 PM IST

ಬಿಜೆಪಿ ಜಾತಿ ಹಾಗೂ ಮತದ ಆಧಾರದ ಮೇಲೆ ಚುನಾವಣೆ ಎದುರಿಸುವುದಿಲ್ಲ. ಅಭಿವೃದ್ಧಿ ಕೆಲಸದ ಮೇಲೆ ನಾವು ಚುನಾವಣೆ ಮಾಡುತ್ತೇವೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಚುನಾವಣೆ ಕಾರ್ಯದ ದಾರಿ ತಪ್ಪಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್​ ಕಟೀಲ್ ಹೇಳಿದರು.

BJP State President Nalin Kumar Kateel
ವಿಜಯನಗರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್​ ಕಟೀಲ್ ಮಾತನಾಡಿದರು.

ವಿಜಯನಗರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್​ ಕಟೀಲ್ ಮಾತನಾಡಿದರು.

ವಿಜಯನಗರ: ''ಬಿಜೆಪಿ ಜಾತಿ, ಮತದ ಆಧಾರದ ಮೇಲೆ ಚುನಾವಣೆಗೆ ಹೋಗುವುದಿಲ್ಲ. ಅಭಿವೃದ್ಧಿ ಕಾರ್ಯದ ಮೇಲೆ ನಾವು ಚುನಾವಣೆಗೆ ಹೋಗುತ್ತೇವೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಚುನಾವಣೆ ಕಾರ್ಯವನ್ನು ದಿಕ್ಕು ತಪ್ಪಿಸುತ್ತಿದ್ದಾರೆ'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್​ ಕಟೀಲ್ ಹೇಳಿದರು.

ನಗರದ ಮೂರನೇ ವಾರ್ಡ್ ಪಟೇಲ್‍ನಗರದಲ್ಲಿ ವಿಜಯ ಸಂಕಲ್ಪಯಾತ್ರೆ ನಿಮಿತ್ತ ಸೋಮವಾರ ಮನೆ ಮನೆಗೆ ಕರಪತ್ರ ಹಂಚಿಕೆ ಮಾಡಿ ಮಾತನಾಡಿದ ಅವರು, ''ಅಭಿವೃದ್ಧಿ ವಿಷಯದ ಮೇಲೆ ಪ್ರತಿಪಕ್ಷಗಳು ನಮಗೆ ಸವಾಲು ಹಾಕಲಿ. ಈ ಚುನಾವಣೆಯಲ್ಲಿ ಅಭಿವೃದ್ಧಿ ಕಾರ್ಯವೇ ಮಂತ್ರವಾಗಲಿ'' ಎಂದರು.

ಬಿಜೆಪಿಯದ್ದು ಅಭಿವೃದ್ಧಿಯೇ ಘೋಷವಾಕ್ಯ: ''ಬಿಜೆಪಿಯದ್ದು ಅಭಿವೃದ್ಧಿಯೇ ಘೋಷವಾಕ್ಯವಾಗಿದೆ. ನಾವು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿಯವರಂತೇ ಜಾತಿ ಆಧಾರ ಮೇಲೆ ಮಾತನಾಡುವುದಿಲ್ಲ. ಕಾಂಗ್ರೆಸ್ ನಾಯಕರು ಕೂಡ ಹಾದಿ ತಪ್ಪಿಸುತ್ತಿದ್ದಾರೆ. ಅಭಿವೃದ್ಧಿ ಕಾರ್ಯ ಹಾಗೂ ಸಾಮಾಜಿಕ ನ್ಯಾಯದ ಮೇಲೆ ನಾವು ಚುನಾವಣೆಗೆ ಹೋಗುತ್ತೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆಗಳ ಮೇಲೆ ನಾವು ಚುನಾವಣೆಗೆ ಎದುರಿಸುತ್ತೇವೆ. ಈ ಬಗ್ಗೆ ಅವರು ಪ್ರಶ್ನಿಸಲಿ, ಸವಾಲು ಹಾಕಲಿ, ಬದಲಿಗೆ ಜಾತಿ, ಮತೀಯ ವಿಷಯವನ್ನು ಚುನಾವಣೆಗೆ ಎಳೆದು ತರುತ್ತಿರುವುದು ಸರಿಯಲ್ಲ'' ಎಂದು ಗರಂ ಆದರು.

ಎಚ್​ಡಿಕೆ ಹಾಗೂ ಸಿದ್ದರಾಮಯ್ಯ ವಿರುದ್ಧ ಕಿಡಿ: ''ಪ್ರತಿಪಕ್ಷಗಳು ಅಭಿವೃದ್ಧಿ ವಿಚಾರವಾಗಿ ಚರ್ಚೆಗೆ ಬರಲಿ, ಕುಮಾರಸ್ವಾಮಿ ಅವರು ಒಂದು ಸಮುದಾಯಕ್ಕೆ ಬಯ್ಯೋದು, ಸಿದ್ದರಾಮಯ್ಯ ಅವರು ನಾವು ಟಿಪ್ಪು ವಂಶಸ್ಥರು ಅಂತ ಹೇಳೋ ಪರಿಸ್ಥಿತಿ ಬಿಜೆಪಿಗೆ ಇಲ್ಲ'' ಎಂದು ಕಿಡಿಕಾರಿದರು. ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್‍ಗೆ ಬಿಜೆಪಿ ಟಿಕೆಟ್ ಕೊಡ್ತಿರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಟೀಲ್ ಅವರು, ''ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಂದ್ರೂ ನಾವು ಬಿಜೆಪಿಯಿಂದ ಟಿಕೆಟ್ ಕೊಡ್ತಿವಿ'' ಎಂದು ಹಾಸ್ಯ ಚಟಾಕಿ ಹಾರಿಸುವ ಮೂಲಕ ವ್ಯಂಗ್ಯವಾಡಿದರು.

''ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗಲೇ ಪೇಜ್ ಪ್ರಮುಖರನ್ನು ನೇಮಿಸಿದ್ದರು. ನಾವು ಪಕ್ಷದ ಕಾರ್ಯಕರ್ತರನ್ನು ಸೈನಿಕರು ಎಂದು ಭಾವಿಸುತ್ತೇವೆ. ಕಾಂಗ್ರೆಸ್‍ನವರಂತೇ ಬರೀ ಚುನಾವಣೆ ಬಂದಾಗ ಮಾತ್ರ ಎಚ್ಚೆತ್ತುಕೊಳ್ಳುವುದಿಲ್ಲ. ನಿರಂತರ ಕಾರ್ಯಕರ್ತರ ಜೊತೆಗೆ ಸಂಪರ್ಕ ಮತ್ತು ತರಬೇತಿ ಕೂಡಾ ಕೊಡುತ್ತೇವೆ'' ಎಂದು ತಿಳಿಸಿದರು.

ಟಿಕೆಟ್ ವಿಚಾರದಲ್ಲಿ ಹೈಕಮಾಂಡೇ ಸುಪ್ರೀಂ: ''ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ನಾನು ಕೂಡ ಒಬ್ಬ ಮಂಗಳೂರು ಸಂಸದ, ನಾನು ಕೂಡ ಆಕಾಂಕ್ಷಿಯೇ? ಸಹಜವಾಗಿ ವಿಜಯನಗರ ಕ್ಷೇತ್ರದಲ್ಲೂ ಆಕಾಂಕ್ಷಿಗಳಿದ್ದಾರೆ. ಹೈಕಮಾಂಡ್ ಒಬ್ಬರಿಗೆ ಟಿಕೆಟ್ ಅನೌನ್ಸ್ ಮಾಡಿದ ಬಳಿಕ ಆಕಾಂಕ್ಷಿಗಳು ಗೊಂದಲ ಮಾಡದೇ, ಅವರ ಪರವಾಗಿಯೇ ಕೆಲಸ ಮಾಡುತ್ತಾರೆ. ನಮ್ಮಲ್ಲಿ ಟಿಕೆಟ್ ವಿಷಯದಲ್ಲಿ ಹೈಕಮಾಂಡೇ ಸುಪ್ರೀಂ'' ಎಂದು ಖಡಕ್ ಆಗಿ ಹೇಳಿದರು.

ಪ್ರವಾಸೋದ್ಯಮ ಸಚಿವ ಆನಂದ ಸಿಂಗ್, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಮಂಡಳ ಅಧ್ಯಕ್ಷ ಕಾಸಟ್ಟಿ ಉಮಾಪತಿ ಇದ್ದರು.

ಇದನ್ನೂ ಓದಿ: ಬಿಜೆಪಿ ಪರವಾಗಿ ಸಿದ್ದರಾಮಯ್ಯ ಸುಪಾರಿ ತೆಗೆದುಕೊಂಡಿದ್ದಾರೆ: ಹೆಚ್ ​ಡಿ ಕುಮಾರಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.