ETV Bharat / state

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಹೈಕಮಾಂಡ್ ನನಗೆ ಹೇಳಿಲ್ಲ: ಸಚಿವ ಸತೀಶ ಜಾರಕಿಹೊಳಿ

author img

By

Published : Aug 5, 2023, 7:01 PM IST

''ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಅತೀ ಹೆಚ್ಚು ಸ್ಥಾನ ಗೆಲ್ಲಿಸಬೇಕಿದೆ. ಹಾಗಾಗಿ ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕೆಂದು ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಎಲ್ಲರಿಗೂ ಹೈಕಮಾಂಡ್ ಸೂಚನೆ ನೀಡಿದೆ. ಆದರೆ, ನನಗೆ ಸ್ಪರ್ಧಿಸುಂತೆ ಹೇಳಿಲ್ಲ'' ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

Lok Sabha elections
ಸಚಿವ ಸತೀಶ ಜಾರಕಿಹೊಳಿ

ಸಚಿವ ಸತೀಶ ಜಾರಕಿಹೊಳಿ ಮಾತನಾಡಿದರು.

ಬೆಳಗಾವಿ: ''ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಹೈಕಮಾಂಡ್ ನನಗೆ ಹೇಳಿಲ್ಲ. ಆದರೆ, ಈ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಿಸುವ ನಿಟ್ಟಿನಲ್ಲಿ ಈಗಿನಿಂದಲೇ ತಯಾರಿ ನಡೆಸುವಂತೆ ಸೂಚನೆ ನೀಡಿದೆ'' ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.

ಶನಿವಾರ ನಗರದ ಕುಮಾರ ಗಂಧರ್ವ ರಂಗ ಮಂದಿರದ ಆವರಣದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ದೆಹಲಿ ಪ್ರವಾಸದ ವೇಳೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ''ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಅತೀ ಹೆಚ್ಚು ಸ್ಥಾನ ಗೆಲ್ಲಿಸಬೇಕಿದೆ. ಹಾಗಾಗಿ ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕೆಂದು ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಎಲ್ಲರಿಗೂ ಹೈಕಮಾಂಡ್ ಸೂಚನೆ ನೀಡಿದೆ. ಆದರೆ, ನನಗೆ ಸ್ಪರ್ಧಿಸುಂತೆ ಹೇಳಿಲ್ಲ. ನಮ್ಮ‌ ಜಿಲ್ಲೆಯಲ್ಲಿ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸುವುದು ನಮ್ಮ ಜವಾಬ್ದಾರಿ, ಅದನ್ನು ಮಾಡುತ್ತೇವೆ. ಈಗಾಗಲೇ ಬೆಂಗಳೂರಿನಲ್ಲಿ ಒಂದು ಬಾರಿ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆಯಾಗಿದೆ. ಎರಡನೇ ಬಾರಿ ಆದಷ್ಟು ಬೇಗ ಬೆಳಗಾವಿಯಲ್ಲಿ ಸಭೆ ಮಾಡಿ ಚರ್ಚಿಸುತ್ತೇವೆ'' ಎಂದರು.

''2028ರಲ್ಲಿ ಸಿಎಂ ಸ್ಥಾನದ ಆಕಾಂಕ್ಷಿ ಎಂದು ನೀವೇ ಹಲವು ಸಲ ಹೇಳಿದ್ದೀರಿ, ಈಗ ನಿಮ್ಮನ್ನು ಲೋಕಸಭೆಗೆ ಕಳಿಸುವ ಯತ್ನ ನಡೆದಿದೆಯೇ ಎಂಬ ವಿಚಾರಕ್ಕೆ, ನಾನು ಸ್ಪರ್ಧಿಸುವ ಬಗ್ಗೆ ಇನ್ನೂ ಹೇಳಿಯೇ ಇಲ್ಲ, ಹಾಗಾಗಿ ನನ್ನ ಡೈವರ್ಟ್ ಮಾಡುವ ಪ್ರಶ್ನೆಯೇ ಉದ್ಭವಿಸಲ್ಲ.‌ ನಾನು ಈಗ ಸಚಿವನಾಗಿದ್ದೇನೆ. ಲೋಕಸಭೆ ‌ಚುನಾವಣೆ ಇನ್ನು 10 ತಿಂಗಳು ಇದೆ. ನನಗೆ ಲೋಕಸಭೆಗೆ ಸ್ಪರ್ಧಿಸುವಂತೆ ಯಾರೂ ಹೇಳಿಯೇ ಇಲ್ಲ. ಒತ್ತಡ ಹಾಕಿಲ್ಲ ಪಕ್ಷ ಸರಿಯಾದ‌ ನಿರ್ಣಯ ತೆಗೆದುಕೊಳ್ಳಲಿದೆ. ಆಕಾಂಕ್ಷಿತ ಅಭ್ಯರ್ಥಿಗಳ ಹುಡುಕಾಟ ನಡೆಸಬೇಕಿದೆ. ಹಾಲಿ ಹಾಗೂ ಮಾಜಿ ಸಚಿವರಿಗೆ ಸ್ಪರ್ಧಿಸುವಂತೆ ಹೈಕಮಾಂಡ್ ಎಲ್ಲಿಯೂ ಹೇಳಿಲ್ಲ. ಗೆಲ್ಲುವ ಅಭ್ಯರ್ಥಿಗೆ ಅವಕಾಶ ಕೊಡುತ್ತೇವೆ. ವಿಧಾನಸಭಾ ‌ಚುನಾವಣೆ ಮಾದರಿಯಲ್ಲಿ ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್ ಎದುರಿಸಲಿದೆ. ಈ ಚುನಾವಣೆಯಲ್ಲಿ ಹೆಚ್ಚಿನ ಜವಾಬ್ದಾರಿ ಇದೆ ಎಂದು ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಡಿಡಿಪಿಐ ವರ್ಗಾವಣೆ ನಮಗೆ ಸಂಬಂಧಿಸಿಲ್ಲ: ಬೆಳಗಾವಿ ಜಿಲ್ಲೆಯಲ್ಲಿ ವರ್ಗಾವಣೆ ವಿಚಾರವಾಗಿ ನಿಮ್ಮ ಹಾಗೂ ಸಚಿವೆ ಹೆಬ್ಬಾಳ್ಕರ್ ಮಧ್ಯೆ ಗುದ್ದಾಟ ನಡೆದಿದೆಯೇ? ಬೆಳಗಾವಿಯ ಡಿಡಿಪಿಐ ವರ್ಗಾವಣೆ ನಾಲ್ಕು ಸಲ ಆಗಿದ್ದು ಅಪಹಾಸ್ಯ ಅಲ್ಲವೇ? ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ''ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಡುವ ವಿಷಯ ಇದು, ಸರಿ ಮಾಡಲು ಹೇಳುತ್ತೇನೆ. ಡಿಡಿಪಿಐ ವರ್ಗಾವಣೆ ಸ್ಥಳೀಯ ಶಾಸಕ ರಾಜು ಸೇಠ್‌ಗೆ ಬಿಟ್ಟ ವಿಚಾರ. ಇದು ನನ್ನ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಸಂಬಂಧಪಟ್ಟದ್ದಲ್ಲ. ವರ್ಗಾವಣೆಯನ್ನು ಸ್ಥಳೀಯ ಶಾಸಕರಿಗೆ ಬಿಟ್ಟಿದ್ದೇವೆ, ಅವರು ಮಾಡಬೇಕು. ಅವರೇ ಎರಡು- ಮೂರು ಸಲ ಲೆಟರ್ ಕೊಟ್ಟಿರುತ್ತಾರೆ. ಹಾಗಾಗಿ ಗೊಂದಲ ಆಗುತ್ತದೆ. ಶಾಸಕರು ಹೇಳಿದ ಮೇಲೆಯೇ ನಾವು ಲೆಟರ್ ಕೊಡುತ್ತೇವೆ'' ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಣ್ಣದ ಬಗ್ಗೆ ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ವಿಚಾರವಾಗಿ ಮಾತನಾಡಿದ ಸಚಿವರು, ''ಬಿಜೆಪಿಯವರು ಈ ರೀತಿ ಹೇಳಿಕೆ ನೀಡುವುದು ಹೊಸದೇನಲ್ಲ. ಆ ಹೇಳಿಕೆಗೆ ಬಿಜೆಪಿಯವರು ಕ್ಷಮೆ ಕೇಳಿ, ವಾಪಸ್ ಕೂಡ ಪಡೆದಿದ್ದಾರೆ. ಇದು ಮುಗಿದು ಹೋದ ಅಧ್ಯಾಯವಾಗಿದ್ದು, ಅದನ್ನು ಮುಂದುವರೆಸುವ ಅಗತ್ಯ ಇಲ್ಲ'' ಎಂದರು.

ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ''ಎಚ್‌ಡಿಕೆ ಆರೋಪ ಹೊಸದೇನಲ್ಲ, ಅವರು ಪದೇ ಪದೇ ಈ ರೀತಿ ಹೇಳಿಕೆ ನೀಡುತ್ತಾರೆ'' ಎಂದು ತಿರುಗೇಟು ನೀಡಿದರು. ಬೆಳಗಾವಿಯ ಉದ್ಯಮಭಾಗ ಠಾಣೆಯ ಪೊಲೀಸರಿಂದ ವಿಕಲಾಂಗನ ಮೇಲೆ ಹಲ್ಲೆ ವಿಚಾರ ನಾನೂ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ, ಆ ಬಗ್ಗೆ ಇಂದು ಚರ್ಚಿಸುತ್ತೇನೆ. ಈ ಸಂಬಂಧ ತನಿಖೆ ನಡೆಸುವಂತೆ ಹೇಳಿದ್ದೆ, ವರದಿ ನೀಡುವಂತೆ ಇಂದು ಕೇಳುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

''ಕರ್ನಾಟಕದಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಂಬಂಧ ಬೇಡಿಕೆ ಇದೆ. ಈ ಸಂಬಂಧ ಕೇಂದ್ರ ‌ಸಚಿವರ ಜೊತೆಗೆ ಚರ್ಚೆ ಮಾಡಿದ್ದೇನೆ. ಆದಷ್ಟು ಬೇಗ ನಮ್ಮ ರಾಜ್ಯಕ್ಕೆ ಅನುದಾನ ಬರಲಿದೆ'' ಎಂದ ಅವರು, ''ಬೆಳಗಾವಿ- ಖಾನಾಪುರ ಮಾರ್ಗ ಮಧ್ಯೆ ರಸ್ತೆ ಅಪೂರ್ಣವಾಗಿದ್ದರೂ ಟೋಲ್ ಸಂಗ್ರಹಿಸುತ್ತಿರುವ ವಿಚಾರಕ್ಕೆ ಟೋಲ್ ಜಾಸ್ತಿ ಆಗಿದೆ. ರಸ್ತೆಯೂ ಅಪೂರ್ಣ ಆಗಿದೆ ಎಂಬ ಆರೋಪವಿದೆ. ಜಿಲ್ಲಾಧಿಕಾರಿ ಈ ಬಗ್ಗೆ ಚರ್ಚೆ ಮಾಡಿ, ಕ್ರಮ ಜರುಗಿಸುತ್ತಾರೆ, ಪರಿಹಾರ ಕೊಡದಿದ್ದರೆ, ನಾವು ಕೊಡುತ್ತೇವೆ'' ಎಂದು ಅವರು ಹೇಳಿದರು.

ಇದನ್ನೂ ಓದಿ: 'ನಾನು ಹಿಟ್ ಅಂಡ್​ ರನ್ ವ್ಯಕ್ತಿಯಲ್ಲ', ದೆಹಲಿಯಲ್ಲೇ ದಾಖಲೆ ಬಿಡುಗಡೆ ಮಾಡ್ತೇನಿ: ಮಾಜಿ ಸಿಎಂ ಹೆಚ್​ಡಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.